ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೆ ಒಂದಿಷ್ಟು ಹೊತ್ತು
ನೆನಪ ಸರಕಿಗೆ ಕಣ್ಣೀರ ಸುಂಕ
(ಎ ಎಸ್ ಮಕಾನ್ದಾರ್ ರವರ “ಪ್ಯಾರಿ ಪದ್ಯ” ಕವನ ಸಂಕಲನದಲ್ಲಿನ ವಿರಹ ಭಾವದ ಅನಾವರಣ)
ವೃತ್ತಿಯಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿಪ್ರಥಮ ದರ್ಜೆ ಸಹಾಯಕರಾಗಿರುವ ಶ್ರೀ ಎ ಎಸ್ ಮಕಾನ್ ದಾರ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿಕರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹತ್ತು ಸ್ವತಂತ್ರ ಕೃತಿಗಳನ್ನು ಹದಿನಾರು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ . ತಮ್ಮ ಸಾಹಿತ್ಯ ಸೇವೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರ ಮುಡಿಗೇರಿವೆ . ಇವರ ಕೆಲವು ಕವಿತೆಗಳು ಹಿಂದಿ ಇಂಗ್ಲಿಷ್ ಮಲಯಾಳ ಮತ್ತು ತಮಿಳು ಭಾಷೆಗಳಿಗೆ ಅನುವಾದವಾಗಿವೆ. “ಪ್ಯಾರೀ ಪದ್ಯ” ಸಖಿ ಚೆಲ್ಲಿದ ಕಾವ್ಯಗಂಧ ವಿಶಿಷ್ಟ ರೀತಿಯ ಹನಿಗವನಗಳ ಸಂಗ್ರಹ . ಪ್ರೀತಿ ಪ್ರೇಮ ವಿರಹ ಗಳಿಗೆ ಹೆಚ್ಚು ಒತ್ತುಕೊಟ್ಟು ಕೋದ ಕವನ ಕುಸುಮಗಳ ವರ್ಣಮಯ ಹಾರ. ಇದಕ್ಕೆ ಸಖಿ ಚೆಲ್ಲಿದ ಗಂಧದ ಕಂಪೂ ಸೇರಿ ಮನೋಲ್ಲಾಸ ಉಂಟುಮಾಡುತ್ತದೆ. ಪ್ಯಾರಿ ಪದ್ಯಗಳ ಘಮಲು ಶೀರ್ಷಿಕೆಯ ಮುನ್ನುಡಿಯಲ್ಲಿ ಖ್ಯಾತ ಕವಿ ಬಿ ಆರ್ ಲಕ್ಷ್ಮಣ್ ರಾವ್ ಅವರೇ ಹೇಳಿದಂತೆ “ಇದು ಪ್ರಮುಖವಾಗಿ ಉರ್ದು ಶಾಯರಿ ಫರ್ಜ್ ದ್ವಿಪದಿ ಮತ್ತು ಗಜಲ್ ಗಳಿಂದ ಪ್ರಭಾವಿತವಾಗಿ ಮೂಡಿಬಂದಿದೆ . “
“ಜಾಗೃತ ಸಾಕ್ಷಿಪ್ರಜ್ಞೆಯ ಪ್ರತಿಬಿಂಬ” ಎಂಬ ತಮ್ಮ ಬರಹದಲ್ಲಿ ಪ್ಯಾರಿ ಪದ್ಯಗಳ ಬಗ್ಗೆ ಡಾಕ್ಟರ್ ಎಚ್ ಎಸ್ ಸತ್ಯನಾರಾಯಣ ಹೀಗೆ ಹೇಳುತ್ತಾರೆ “ಪ್ರೀತಿ, ವಿರಹ, ಮೌನ,ಧ್ಯಾನ, ಚಂದಿರ, ಚೈತನ್ಯ, ಮಣ್ಣು, ಆಕಾಶ, ನಕ್ಷತ್ರ, ಹೊಳಪು, ಕತ್ತಲೆ, ಬೆಳಕು ಮುಂತಾದವುಗಳೆಲ್ಲ ಪ್ಯಾರೀ ಪದ್ಯದಲ್ಲಿ ಮತ್ತೆ ಮತ್ತೆ ಕಾಣಿಸುವ ಪ್ರತಿಮೆಗಳು.” ನಿಜಾ… ಪ್ರಕೃತಿಯ ಅಂಶವೇ ಆಗಿರುವ ಮಾನವನ ಭಾವನೆಗಳು ಸಮೀಕರಿಸಿ ಸಾಂದ್ರತೆ ಕಾಣುವುದು ಪ್ರಕೃತಿಯ ಅಂಶಗಳ ಪ್ರತಿಮೆಗಳಲ್ಲಿ ಎಂಬುದು ನಿರ್ವಿವಾದ. ಹಾಗಾಗಿಯೇ ಪದ್ಯಗಳು ಹೆಚ್ಚು ಆತ್ಮೀಯವೆನಿಸುವ ತೊಡಗುತ್ತವೆ.
ಪ್ರಸಿದ್ಧ ಸೋಮೇಶ್ವರ ಶತಕದಲ್ಲಿ ಒಂದು ಸಾಲು “ಸವಿವಂಣಲ್ಲಿನಿ ಮಾವು ಸರ್ವ ರಸದೊಳ್ ಶೃಂಗಾರ” ಅಂದರೆ ಮಾವು ಹೇಗೆ ಹಣ್ಣುಗಳಲ್ಲಿ ರಾಜನೋ ನವರಸಗಳಲ್ಲಿ ಶೃಂಗಾರ ರಸಕ್ಕೆ ಹೆಚ್ಚಿನ ಮಹತ್ವ ಎಂದು . ಶೃಂಗಾರ ರಸಗಳಲ್ಲಿ 2 ಪ್ರಕಾರಗಳು ಸಂಭೋಗ ಶೃಂಗಾರ ಮತ್ತು ವಿಪ್ರಲಂಭ ಶೃಂಗಾರ . ಮೊದಲನೆಯದು ಮಿಲನದ ಬಗ್ಗೆಯಾದರೆ ಎರಡನೆಯದು ವಿರಹದ ಬಗ್ಗೆ.
ವಿರಹಾ ನೂರು ನೂರು ತರಹ ವಿರಹಾ ಪ್ರೇಮ ಕಾವ್ಯದಾ ಕಹಿ ಬರಹ
ಪ್ರೀತಿ ಮತ್ತು ವಿರಹಗಳು ಒಂದೇ ನಾಣ್ಯದ ಎರಡು ಮುಖಗಳು . “ಪ್ಯಾರೀ ಪದ್ಯ” ಈ ವಿರಹದ ಭಾವೋತ್ಕಟತೆಯ ಅನಾವರಣ, ಅಭಿವ್ಯಕ್ತಿ ಮನಸ್ಸಿಗೆ ತುಂಬಾ ತಟ್ಟಿತು ಮುಟ್ಟಿತು. ಹಾಗಾಗಿ ಈ ಸಂಕಲನದಲ್ಲಿನ ವಿರಹದ ಬಗೆಗಿನ ಹನಿಗಳ ಬಗ್ಗೆ ಈ ಬರಹ.
*ಅದೃಷ್ಟೇ ದರ್ಶನೋತ್ಕಂಠಾ ದೃಷ್ಟೇ ವಿಚ್ಛೇದ ಭೀರುತಾ
ನಾ ದೃಷ್ಟೇನ ದೃಷ್ಟೇನ ಭವತಾ ಲಭ್ಯತೆ ಸುಖಂ
_ಸುಭಾಷಿತಾವಲೀ
ಮಿಲನದಲ್ಲಿ ಅಗಲಿಕೆಯ ಶಂಕೆ ಅಗಲಿಕೆಯಲ್ಲೂ ಮುಂದೆ ಸೇರುವ ಪ್ರತ್ಯಾಶೆ ಅಧಿಕವಾಗಿಯೋ ಅಲ್ಪವಾಗಿಯೋ ಇದ್ದೇ ಇರುತ್ತದೆ. ಈ ವಿರಹದ ಮೂಲ ಸ್ಥಾಯಿಭಾವ “ಮೂಕಂ ಕರೋತಿ ವಾಚಾಲಂ” ಎನ್ನುವ ಹಾಗೆ. ಪ್ರೀತಿ ಪ್ರತಿಯೊಬ್ಬರನ್ನೂ ಕವಿಯನ್ನಾಗಿಸುತ್ತದೆ, ವಿರಹ ಕಣ್ಣೀರ ಬರಹವನ್ನು ಬರೆಸುತ್ತದೆ . ಹಾಗೆ ನೋಡಿದರೆ ಪ್ರೀತಿಗಿಂತ ವಿರಹವೇ ಕವಿಭಾವಕ್ಕೆ ಹೆಚ್ಚು ಹೆಚ್ಚು ಸ್ಫೂರ್ತಿ ನೀಡಿರುವುದು ಸುಳ್ಳಲ್ಲ . ಯಕ್ಷ ಯಕ್ಷಿಯರ ವಿರಹ “ಮೇಘದೂತ”ದ ಜನ್ಮಕ್ಕೆ ಕಾರಣಿಭೂತವಾದಂತೆ.
ಅಂತೆಯೇ ಇಲ್ಲಿ ಮೇಘದೂತ ದ ಬಗ್ಗೆ ಹೇಳುವ ಮಾತುಗಳಲ್ಲಿ ಬೇಂದ್ರೆಯವರ ಈ ನುಡಿಗಳನ್ನು ಸ್ಮರಿಸಿಕೊಳ್ಳಬೇಕಾಗುತ್ತದೆ.
“ವಿರಹವೆಂಬುದು ಕಾಮದ ಹುಚ್ಚಾಟವಲ್ಲ ವಿರಹಾವಸ್ಥೆಯಲ್ಲಿ ತಾಳಿ ಬಾಳುವ ಕಾಮ_ ಧರ್ಮ.”
ಕುವೆಂಪು ಅವರು ತಮ್ಮ ಮಂತ್ರಾಕ್ಷತೆ ಹನಿಗವನ ಸಂಕಲನ ದಲ್ಲಿ ವಿರಹಿ ಕವಿಯ ಬಗ್ಗೆ ಹೀಗೆ ಹೇಳುತ್ತಾರೆ
ಎದೆಯಲೊಂದು ಮಸೆವ ಬಾಣ
ಕೊರಳಲೊಂದು ಕೊರೆವ ಗಾಣ
ಕುದಿಯುತಿಹುದು ಪಂಚಪ್ರಾಣ
ಹೊಮ್ಮಲಹುದೆ ಕವಿಯ ಗಾನ
_ಕುವೆಂಪು
ಹಾಗೆಯೇ ಇಲ್ಲಿ ಕವಿ ತನ್ನ ವಿರಹವ್ಯಥೆಯ ಮೂಲ ತಿಳಿಸುವುದು ಹೀಗೆ
ಕಣ್ಣಿಗೆ ಕಣ್ಣು ತಾಕಿಸಬೇಕಾದವಳು
ಬೆನ್ನಿಗೆ ಬೆನ್ನು ತಾಕಿಸಿದೆ ನೋಡು
ಹೃದಯದ ತುಂಬೆಲ್ಲ ಹುಣ್ಣು
ಹೃದಯದ ಹುಣ್ಣು ತರಿಸುವುದು ಬರೀ ಕಣ್ಣೀರನ್ನೇ ತಾನೇ? ಕವಿ ಕಾವ್ಯದಲ್ಲಿ ಅದು ಹರಿಯುವುದು ಹೀಗೆ…
ಪ್ರತಿ ನೆನಪಿಗೂ
ಕಣ್ಣೀರ ಸುಂಕ
ಕಟ್ಟಬೇಕು ನೀ ಮಂಕ
ಪ್ರೀತಿಗೆ ತೆರಬೇಕಾದ ಸುಂಕ ಕಣ್ಣೀರು ಎಂಬ ಅರಿವಿದ್ದರೂ ಅದರ ಮಾಯೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಹದಿಹರೆಯದ ಹುಚ್ಚು ಮಳೆಯಂತಹ ಪ್ರೀತಿಯ ಕ್ರಷ್ ಆಗಲಿ, ನಡುವಯಸ್ಸಿನ ಅಕಾಲಿಕ “ತಡವಾಗಿ ಬಿದ್ದ ಮಳೆ” ಯಂತಹ ಹೆಚ್ಚಿನಂಶ ಸಮಾನಾಂತರ ರೇಖೆಗಳಾಗಿಯೇ ಉಳಿಯಬೇಕಾದ ಪ್ರೇಮವಾಗಲಿ, ಬೇಸಿಗೆ ಬಿರುಮಧ್ಯಾಹ್ನದಲಿ ತಂಪುಹನಿ ಚೆಲ್ಲಿ ಮಾಯವಾಗುವ ಮುಸ್ಸಂಜೆಯ ಒಲವಾಗಲಿ ಯಾವಾಗಲಾದರೂ ಎಲ್ಲರ ಹೃದಯದಲ್ಲೂ ನಾಟಿದ ಅನುರಾಗದ ಬೀಜಗಳೇ ಅವುಗಳ ಅಂಕುರ ನಮ್ಮ ಕೈಲಿಲ್ಲ ಆದರೆ ಚಿಗುರಿಸುವುದು ಚಿವುಟಿಸುವುದು ಅವರವರ ವಿಧಿಲಿಖಿತ ಕೆಲವೊಮ್ಮೆ ವಿಫಲ ಪ್ರೀತಿಗಳೇ ಬಾಳಿನ ಏಳಿಗೆಯ ದಾರಿ ಸೂಚಿಗಳು ಆಗಿರಬಹುದು. ಏನಾದರಾಗಲಿ ಅವು ಮೂಡಿಸುವ ಆ “ದರ್ದ್” ಹೃದಯದಲ್ಲಿ ಶಾಶ್ವತ ಮಾಯದ ಗಾಯದ ನವೆಯಾಗಿ ಉಳಿದು ಬಿಡುತ್ತವೆ. ಹೀಗೆ ಕವಿತೆಗಳನ್ನು ಬರೆದು ಪರಪರ ಕೆರೆದುಕೊಳ್ಳುವ ಹಿತವನ್ನು ಅನುಭವಿಸುವಂತಾಗುತ್ತದೆ.
ಕವಿ ತಮ್ಮ ಕಣ್ಣೀರ ಕಥಾನಕ ಹೀಗೆ ಮುಂದುವರೆಸುತ್ತಾರೆ
ಕಣ್ಣೀರು ಎಷ್ಟು ತೋಡಿದರೂ ಖಾಲಿಯಾಗುತ್ತಿಲ್ಲ
ಪ್ರೀತಿಯ ಸೆಲೆ ಉಕ್ಕುವುದು ಇನ್ನೂ ನಿಂತಿಲ್ಲ
ತಮ್ಮ ನೊಂದ ಮನವನ್ನು ಹೀಗೆ ಸಾಂತ್ವನಿಸಿಕೊಂಡರೂ
ಮನ ಹೇಳಿತು ಅತ್ತು ಹಗುರಾಗು
ಕಣ್ಣೀರು ಹೇಳಿತು ಬಾರದೇ ಗಟ್ಟಿಯಾಗು
ಬದುಕ ಸಂತೆಯಲ್ಲಿ ಪ್ರೀತಿ ವಿರಹಗಳು ಸರಕಾಗುತ್ತಿವೆ ಎಂಬ ಅರಿವು ಕವಿಗಿದೆ. ಅದಕ್ಕೆ ಹೀಗೆನ್ನುತ್ತಾರೆ
ಈ ಬದುಕ ಸಂತೆಯಲ್ಲಿ
ಪ್ರೀತಿ
ವಿರಹವೂ ಒಂದು ಸರಕು.
ಕನಸುಗಳನೆಲ್ಲ ಸಾಯಿಸಿದ್ದರೂ ನೆನಪಿನ ಚದ್ದರ್ ಹೊದಿಸಿದ ಮಾತ್ರಕ್ಕೆ ಮತ್ತೆ ಚಲನಶೀಲವಾಗುವ ಭಾವಗಳ ಬಿತ್ತರ ಹೀಗೆ
ಸತ್ತ ಕನಸುಗಳಿಗೆ ಕಫನ್ ಸುತ್ತಿದ್ದೆ
ಪ್ಯಾರೀ
ನೀ ಹೊದಿಸಿದ ಚದ್ದರ್ ನಿಂದ
ಕನಸುಗಳು ಮಿಸುಕಾಡಿವೆ
ಆದರೂ ಸಮಾಧಿಯಾದ ಪ್ರೇಮದ ಬಗ್ಗೆ ದುಃಖಿಸುತ್ತಾ
ಖಬರ್ ಮೇಲೆ ಬೆಳೆದ ಗರಿಕೆಗೂ
ಗೊರಕೆ ಹೊಡೆಯುವ ತವಕ
ಮಂಜಿನ ಹನಿ ಹನಿಯಲ್ಲೂ
ನಿನ್ನ ನೆನಪುಗಳ ಅಶ್ರುತರ್ಪಣ
ಎನ್ನುತ್ತಾರೆ.
ತೀವ್ರ ವಿಷಾದದ ಭಾವವನ್ನು ಹುಟ್ಟಿಸುವ ಕವಿಯ ಈ ನೆನಹಿನ ಸಾಲುಗಳು ಸೋತ ಪ್ರೇಮದ ಬಿಸಿಯುಸಿರ ಕಾವನ್ನು ಹೊರಹಾಕುತ್ತದೆ .
ಅಮರ ಪ್ರೇಮದ ಉದಾಹರಣೆಯಾಗುವ “ಪ್ರಭಾ ಅಶ್ವಘೋಷ” ಪ್ರಸಂಗದಲ್ಲಿ ಒಂದು ದಿನದ ವಿರಹಕ್ಕೆ ಉತ್ಕಟ ಭಾವಾವೇಗದಲ್ಲಿ ಕಾವ್ಯ ಸೃಷ್ಟಿಸುವಾಗ ಚಿರವಿರಹಿಯಾಗಿ ತನ್ನ ಪ್ರಿಯ ಮಹೋನ್ನತ ಕವಿಯಾಗಲೆಂದು ಪ್ರೇಯಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಪ್ರಪಂಚದಲ್ಲಿ ದುಃಖಾಂತ ಪ್ರೇಮಗಳಾದ ಲೈಲಾ_ ಮಜ್ನೂ ,ರೋಮಿಯೋ_ಜ್ಯೂಲಿಯಟ್, ಹೀರಾ_ ರಾಂಜಾ ಗಳ ಚರಿತ್ರೆ ಜನಮಾನಸದಲ್ಲಿ ನಿಂತಂತೆ ಸಫಲ ಪ್ರೇಮದಲ್ಲಿ ಒಂದಾದವರ ಹೆಸರು ಚಿರಸ್ಥಾಯಿಯಾಗಿಲ್ಲ. ದುರಂತ ಕಥೆಗಳು ದುರಂತ ಸಿನೆಮಾಗಳು ನೆನಪಿನಲ್ಲುಳಿಯುವಂತೆ ಸುಖಾಂತಗಳು ಉಳಿಯುವುದಿಲ್ಲ. ಹಾಗಾಗಿ ವಿರಹ ಕಾವ್ಯ ಜನನದ ಕಾರಣ ಎಂಬುದರಲ್ಲಿ 2 ಮಾತಿಲ್ಲ . ಮುಂದೆಂದಾದರೂ ಒಂದಾಗುವ ಪ್ರಬಲೇಚ್ಛೆ ಕವಿತೆಗಳಲ್ಲಿ ಇಣುಕುತ್ತದೆ . ಬದುಕಿಗೆ ಹೊಸ ಅರ್ಥ ಸ್ಪುರಿಸುವುದಕ್ಕೆ ನೆರವಾಗುತ್ತದೆ . ಈ ಸಾಲುಗಳನ್ನು ನೋಡಿ
ಸನಮ್
ನಾವು ಸಂಧಿಸುವುದು ನೆನಪಿನ ಆಳದೊಳಗೋ
ಹೃದಯದ ಆಳದೊಳಗೋ
ಎಂದು ಪ್ರಶ್ನಿಸುವಾಗ ಆರ್ದ್ರತೆಯ ತೇವ ತಾಕಿಯೇ ತಾಕುತ್ತದೆ .
ಮುಂದೆ
ರಂಧ್ರ ಬಿದ್ದ ಹೃದಯಕ್ಕೀಗ ಸೂಜಿ ದಾರದ ಸಾಂಗತ್ಯ
ಕೊಚ್ಚಿಹೋದ ಕಣ್ಣೀರಿಗೀಗ ಒಡ್ಡು ಕಟ್ಟುವ ಅಗತ್ಯ
ಎನ್ನುವಾಗ ಹರಿದ ಬದುಕಿನ ಬಟ್ಟೆಗೆ ತೇಪೆ ಹಾಕುವ ಔಚಿತ್ಯ ಅನಿವಾರ್ಯಗಳನ್ನು ಕಂಡುಕೊಳ್ಳುತ್ತಾರೆ. ಆದರೆ ಸುಳಿವು ಸಿಗದಂತೆ ಮರೆಯಾಗಿ ಮರೀಚಿಕೆಯಾದ ಪ್ರೀತಿಗೆ ಹಪಹಪಿಸಿ ಕರೆಗೊಡುವ ಈ ರೀತಿ ಮನದಲ್ಲಿ ವಿಷಾದದ ಸ್ಥಾಯೀ ಭಾವ ಮೂಡಿಸುತ್ತದೆ
ಎಲ್ಲಿರುವೆ ಸಖಿ ಸುಳಿವಾದರೂ
ನೀಡು
ಹೊರಡಲು ಸಿದ್ಧನಾಗಿರುವೆ ದಾರಿಯಾದರೂ ತೋರು .
ಪೂರಕ ಚಿತ್ರಗಳು ಕವನಗಳಿಗೆ ದೃಶ್ಯ ಸಂದೇಶವಾಗಿ ಅರ್ಥಪೂರ್ಣವಾಗಿದೆ. ಪುಸ್ತಕದ ರಾಗಕ್ಕೆ ಚಿತ್ರಗಳ ಶ್ರುತಿ ಒಳ್ಳೆಯ ಸಾಥ್ ನೀಡಿದೆ. ಹಾಗಾಗಿ ಪ್ರೇಯಸಿ ಇಲ್ಲದೆ ಕವಿಯ ಮನದ ಗೀತೆ ಬೇಸೂರ್ ಆದರೂ ಸಂಕಲನದ ಭಾವಗೀತೆ ಬೇಸೂರ್ ಆಗಿಲ್ಲ. ಕವನಗಳ ಹನಿ ಮಿನಿಯಾದರೂ ಪ್ರಭಾವ ಮಹತ್ತಾಗಿಯೇ ಇದೆ.
ಮಧ್ಯೆ ಮಧ್ಯೆ ಹಿಂದಿ ಉರ್ದು ಪದಗಳು ಅರ್ಥ ತಿಳಿಯದೆ ಶಬ್ದಕೋಶ ನೋಡಿ ಅರ್ಥಮಾಡಿಕೊಳ್ಳುವಾಗ ಕಾವ್ಯರಸಾಸ್ವಾದದ ಓಘಕ್ಕೆ ಎಲ್ಲೋ ಅಡ್ಡಿಯಾದಂತೆ ಒಮ್ಮೊಮ್ಮೆ ಅನ್ನಿಸಿತು. ಅಥವಾ ಇದು ನನಗೆ ಮಾತ್ರ ಹೀಗಾದದ್ದೋ ತಿಳಿಯದು. ಬೇಸರವೆನಿಸಿದರೆ ಕ್ಷಮೆಯಿರಲಿ .
ಉಳಿದೆಲ್ಲ ಕರ್ಮಫಲಗಳನು ಮನಬಂದಂತೆ ಕಳುಹು: ಸಹಿಸುವೆನಯ್ಯಾ ನಾನವನು ವಿಧಿಯೆ ಅರಸಿಕರ ಮುಂದೆ ಕವಿತೆಯನ್ನೊಪ್ಪಿಸುವದೊಂದ
ಬರೆಯದಿರು ಬರೆಯದಿರು ಬರೆಯದಿರು ಶಿರದಿ
ಸುಭಾಷಿತ ಅನುವಾದ
ಎಲ್ಲಾ ಕವಿಗಳ ಇಚ್ಛೆಯು ಧ್ಯೇಯವು ಅದೇ. ತಮ್ಮ ಕವನದ ಕೂಸನ್ನು ಬೇರೆಯವರು ಮೆಚ್ಚುವಂತಾಗಬೇಕು ಎತ್ತಿ ಮುದ್ದಾಡಬೇಕು ಮಡಿಲಿಗೆ ತೆಗೆದುಕೊಳ್ಳಬೇಕು ಎಂಬುದು. ಶ್ರೀಯುತ ಮಕಾನ್ ದಾರರವರ ಈ ಕವನ ಸಂಗ್ರಹ ಸಮಾನ ಹೃದಯಿಗಳ ಮನದೊಳಗೆ ಜಾಗ ಪಡೆದು ಹೃನ್ಮನ ತಣಿಸುವಂತಾಗಲಿ .”ಪ್ಯಾರೀ ಪದ್ಯ” ಕನ್ನಡ ಓದುಗರೆಲ್ಲರಿಗೂ ಪ್ಯಾರೀ ಆಗಲಿ ಎಂಬ ಹಾರೈಕೆ .
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು