ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

[8:35 am, 16/12/2023] SUJATHA RAVEESH: ಮೊನ್ನೆ ಹೀಗೆ ಆನ್ಲೈನ್ ಶಾಪಿಂಗ್ ಆಪ್ ಒಂದರಲ್ಲಿ ನೋಡುತ್ತಿದ್ದೆ .ಚಪ್ಪಲಿ ಜೋಡಿಸಿಡುವ ಶೂ ರಾಕ್ ಗಳ ಬಗೆ ಬಗೆ ನೋಡಿ ಆಶ್ಚರ್ಯವಾಯಿತು. ಮನೆಯಲ್ಲಿ ಇರುವ ಇಬ್ಬರು ಮೂವರು ಸದಸ್ಯರಿಗೆ ಒಂದು 50 ಬಗೆಯ ಚಪ್ಪಲಿ ಹಾಗೂ ಬೂಡ್ಸುಗಳು. ಅವುಗಳನ್ನು ಜೋಡಿಸಿಡಲು ಅಂದ ಚೆಂದದ ಬೀರುಗಳು.  “ಚಪ್ಪಲಿಯ ಸ್ಥಾನ ಮನೆಯ ಹೊರಗೆ” ಎಂಬುದು ಅಂದಿನ ದಿನದ ಮಾತುಗಳಾದರೆ ಇಂದು ಬಟ್ಟೆಗಳನ್ನು ಇಡುವ ವಾರ್ಡ್ರೋಬಿನಲ್ಲಿಯೂ ಚಪ್ಪಲಿಗಳು ಸ್ಥಾನ ಆಕ್ರಮಿಸಿಕೊಂಡಿವೆ. ಈ ಹಿಂದೆ ಜಯಲಲಿತ ಅವರ ಮನೆಯ ರೇಡ್  ಆದಾಗ ಬಗೆಬಗೆಯ ಸೀರೆಗಳು ವ್ಯಾನಿಟಿ ಚೀಲಗಳು ಜೊತೆಗೆ ಅವರ ಚಪ್ಪಲಿಗಳ ಸಂಗ್ರಹವೂ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು. ಇಂದಿನ ಶ್ರೀಮಂತ ಸ್ತ್ರೀಯರಾಗಲಿ ಪುರುಷರಾಗಲಿ ಬಟ್ಟೆಗೆ ಹೊಂದುವಂತಹ ಚಪ್ಪಲಿಗಳನ್ನು ಹೊಂದಿರುತ್ತಾರೆ ಎಂದರೆ ಅದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ.‌ ಅವುಗಳ ಬೆಲೆಗಳೂ ಅಷ್ಟೇ! ಒಂದು ಬಡ ಸಂಸಾರ ಇಡೀ ತಿಂಗಳು ಸಂಸಾರ ಸಾಗಿಸಬಹುದಾದಕ್ಕಿಂತ ಹೆಚ್ಚು.

ಮನ ಇದ್ದಕ್ಕಿದ್ದಂತೆ ಬಾಲ್ಯದ ದಿನಗಳತ್ತ ಹೊರಟಿತು.  ಅಂದಿನ ದಿನಗಳಲ್ಲಿ ಬರಿಗಾಲಲ್ಲಿ ನಡೆಯುವವರೇ ಹೆಚ್ಚಿದ್ದರು. ನಮಗೆ ಆಗ ಹವಾಯಿ ಅಥವಾ ಸ್ಯಾಂಡೆಕ್ಸ್ ಚಪ್ಪಲಿಗಳು .ಬೆಲ್ಟ್ ಹಾಕಿಕೊಳ್ಳುವುದು ಇದ್ದರಂತೂ ಅದೇ ಒಂದು ದೊಡ್ಡ ಲಗ್ಜುರಿ, ಬಾಟಾ ಕಂಪನಿಯ ಚಪ್ಪಲಿಗಳು ತುಂಬಾ ಜನಪ್ರಿಯವಿದ್ದ ಕಾಲ.‌ ಇಂದಿನ ಕಾಲದ ಚಪ್ಪಲಿ ಕಂಪನಿಗಳ ಹೆಸರುಗಳು‌,  ಅವುಗಳ ಬೆಲೆ ನಿಜಕ್ಕೂ ತಲೆ ತಿರುಗಿಸುತ್ತದೆ. ಎಲ್ಲದಕ್ಕೂ ಬಂದಿರುವ ಬ್ರ್ಯಾಂಡ್ ವ್ಯಾಮೋಹ ಚಪ್ಪಲಿ ಷೂಗಳನ್ನೂ ಬಿಟ್ಟಿಲ್ಲ.  ಸೌಕರ್ಯಕ್ಕಿಂತ ಹೆಸರಿನ ಬಗ್ಗೆ ಕಾಳಜಿ ಹೆಚ್ಚಾಗಿ ಬಿಟ್ಟಿದೆ.

ಶಾಲಾ ಸಮವಸ್ತ್ರಕ್ಕೆ ಕಪ್ಪು ಬಣ್ಣದ ಶೂಗಳು ಹಾಗೂ ಶನಿವಾರದ ಬಿಳಿ ಸಮವಸ್ತ್ರಕ್ಕೆ ಕ್ಯಾನ್ವಾಸ್ ಶೂಗಳು. ಬುಧವಾರ ಕಲರ್ ಡ್ರೆಸ್ ಅಂದರೆ ನನ್ನಿಷ್ಟದ ಬಟ್ಟೆ ಹಾಕಿಕೊಳ್ಳುವ ದಿನ ಮಾತ್ರ ಚಪ್ಪಲಿಗಳನ್ನು ಹಾಕಿಕೊಳ್ಳಬಹುದು ಅದು ಆಗ ಮೇಲ್ವರ್ಗದ ಮಧ್ಯಮ ವರ್ಗಗಳ ಸ್ಥಿತಿ . ಒಂದಕ್ಕಿಂತ ಹೆಚ್ಚು ಚಪ್ಪಲಿ ಇದ್ದವರನ್ನೇ ನೋಡಿಲ್ಲ.  ಶಾಲೆಯ ಶಿಸ್ತಿಗಾಗಿ ಶೂ ಗಳನ್ನು ಪಾಲಿಶ್ ಮಾಡುವುದು ಒಂದು ದೊಡ್ಡ ತಲೆನೋವಿನ ಕೆಲಸ. ಸಮವಸ್ತ್ರದ ಷೂಗಳ ವಿಷಯ ಬಂದಾಗ ಕಾಲುಚೀಲದ ನೆನಪು ಖಂಡಿತ ಆಗುತ್ತದೆ .ಆಗ ಮಂಡಿ ತನಕ ಬರುವ ಉದ್ದದ ಬಿಳಿ ಕಾಲುಚೀಲಗಳು ಫ್ಯಾಷನ್ . ಆದರೆ ಅವುಗಳ ಬೆಲೆ ತುಂಬಾ ಹೆಚ್ಚಾಗುವುದರಿಂದ ಮಾಮೂಲಿ ಚಿಕ್ಕ ಕಾಲುಚೀಲಗಳನ್ನು ಕೊಂಡುಕೊಡುತ್ತಿದ್ದರು. ಸ್ವಲ್ಪ ದಿನಗಳ ನಂತರ ಅವುಗಳ ಎಲಾಸ್ಟಿಸಿಟಿ ಕಡಿಮೆಯಾಗಿ ಜಾರಿ ಬೀಳುತ್ತಿದ್ದವು. ಹಾಗಾಗಿ ಅವುಗಳನ್ನು ಹಿಡಿದು ಭದ್ರವಾಗಿ ನಿಲ್ಲಿಸಲು ರಬ್ಬರ್ ಬ್ಯಾಂಡ್ ಗಳನ್ನು ಹಾಕಿ ಅವು ಕಾಲುಗಳನ್ನು ಕೊರೆದು ಏನೆಲ್ಲಾ ಅವಾಂತರ ಆಗುತ್ತಿತ್ತು. ಈಗ ಅದನ್ನು ನೆನೆಸಿಕೊಂಡು ನಗು ಬರುತ್ತದೆ.  ಕಥೆಯೋ ಅಥವಾ ನಿಜವಾಗಿ ನಡೆದ ಪ್ರಸಂಗವೋ ತಿಳಿದಿಲ್ಲ.  ಶಾಲೆಯ ಅತಿಶಿಸ್ತಿನ ಪ್ರಭಾವದಿಂದ  ಷೂ ಬಿಚ್ಚಲಾಗದೆ ಷೂನಲ್ಲಿ ಸೇರಿಕೊಂಡಿದ್ದ ಚೇಳು ಕುಟುಕಿ ಕುಟುಕಿ ಶಾಲಾ ಬಾಲಕಿಯೊಬ್ಬಳು ಸಾವಿಗೀಡಾಗಿದ್ದಳು ಎಂಬುದು ತಿಳಿದು ಅಂದಿನಿಂದ ಇಂದಿನವರೆಗೂ ಧರಿಸುವ ಮುನ್ನ ಷೂವನ್ನು ಚೆನ್ನಾಗಿ ಕೊಡವುವುದು ಅಂಟಿಕೊಂಡ ಅಭ್ಯಾಸವಾಗಿ ಬಿಟ್ಟಿದೆ.

ಮನೆಯ ಸದಸ್ಯರುಗಳುಒಬ್ಬರ ಚಪ್ಪಲಿಗಳನ್ನು ಇನ್ನೊಬ್ಬರು ಬಳಸುತ್ತಿದ್ದುದು ಸರ್ವೇಸಾಮಾನ್ಯವಾದ ವಿಷಯ. ದಿನ ಹೊರಗೆ ಹೋಗುವ ಪ್ರಮೇಯ ಇಲ್ಲದಿದ್ದಾಗ ಮನೆಯ ಸದಸ್ಯರುಗಳಿಗೆಲ್ಲಾ ಕಾಮನ್ ಆಗಿ ಒಂದು ಚಪ್ಪಲಿ ಇರುತ್ತಿದ್ದುದೂ ವಾಡಿಕೆ. ಕಸಿನ್ಗಳ ಸೋದರಿಯರ ಹಾಗೂ ಸ್ನೇಹಿತೆಯರ ಚಪ್ಪಲಿಗಳನ್ನು ವಿನಿಮಯ ಮಾಡಿಕೊಂಡು ಹಾಕಿಕೊಳ್ಳುತ್ತಿದ್ದು ಅಂದಿನ ಅಭ್ಯಾಸ.  ನಡಿಗೆ ಕಲಿಯುತ್ತಿರುವ ಮಕ್ಕಳು ಮನೆಯ ಹಿರಿಯ ಸದಸ್ಯರುಗಳ ಚಪ್ಪಲಿಗಳನ್ನು ಬಯಸಿ ಬಯಸಿ ಹಾಕಿಕೊಂಡು ನಡೆದಾಡುವ ಸಂದರ್ಭ ಕಂಡಾಗ ಅಂದಿನ ದಿನಗಳ ನೆನಪು..

ಬರಿಯ ಕಾಲುಗಳ ರಕ್ಷಣೆಗಾಗಿ ಮಾತ್ರವಲ್ಲದೆ ಬೀದಿ ಕಾಮಣ್ಣರುಗಳ ವಿರುದ್ಧ ಅಸ್ತ್ರಗಳಾಗಿಯೂ ಚಪ್ಪಲಿಗಳು ಉಪಯೋಗವಾಗುತ್ತಿದ್ದವು. ಸದ್ಯ ನನಗಂತೂ ಆ ಸಂದರ್ಭ ಬಂದಿಲ್ಲ ಬಚಾವ್!
ಬಂದಿದ್ದರೂ ಹಾಗೆ ಮಾಡುವಷ್ಟು ಧೈರ್ಯ ಈ ಪುಕ್ಕಲಿಗೆ ಇರಲಿಲ್ಲ ಅದು ಬೇರೆ ಮಾತು ಬಿಡಿ.

ಇನ್ನು ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳ ಭಾಷಣ ಕೇಳಲು ಸಾಧ್ಯವಾಗದೆ ಅವರ ವಿರುದ್ಧ ತಮ್ಮ ಪ್ರಶಸ್ತ ಅಭಿಪ್ರಾಯ ಸೂಚಿಸಲು ಹಳೆಯ ಚಪ್ಪಲಿಗಳೇ ಸೂಕ್ತ ಸಾಧನಗಳಾಗಿರುತ್ತಿದ್ದು ಎಲ್ಲರಿಗೂ ಜಗಜ್ಜಾಹೀರಾದ ವಿಷಯ. ತಮ್ಮ ತೀವ್ರ ಅಸಮಾಧಾನ ಸೂಚಿಸಿ ಗೌರವ ತೋರಲು ಚಪ್ಪಲಿಗಳ ಹಾರ ತೊಡಿಸುವುದಂತು ಇದ್ದೇ ಇತ್ತು  ಈಗಲೂ ಇದೆ ಕೂಡ.

ಹೊಸ ಚಪ್ಪಲಿಗಳೇನು ವಿಧೇಯ ವಿದ್ಯಾರ್ಥಿಗಳಂತೆ ನಮ್ಮ ಮಾತು ಕೇಳುತ್ತಿರಲಿಲ್ಲ.  ಅವುಗಳಿಗೆ ಬೆಣ್ಣೆ ಕೊಬ್ಬರಿ ಎಣ್ಣೆ ಮಾಲೀಷ್ ಮಾಡಿ ಸೂಕ್ತ ಗೌರವ ಆತಿಥ್ಯ ಸಲ್ಲಿಸಿದ ಮೇಲೆಯೇ ಅವು ನಮ್ಮ ಹಿತಾನುವರ್ತಿಗಳಾಗಿ ವರ್ತಿಸುತ್ತಿದ್ದುದು. ಇಲ್ಲದಿದ್ದಲ್ಲಿ ಪಾದಗಳಿಗೆ ಅವುಗಳ ಕೋಪದ ಕಡಿತ ಇದ್ದೆ ಇರುತ್ತಿತ್ತು. ಧರಿಸಲು ಬಿಡದೆ ಅಸಹಕಾರ ಚಳುವಳಿ ಹೂಡಿ ಬಿಡುತ್ತಿದ್ದವು. ಅದಕ್ಕೆ ಚಪ್ಪಲಿ ಕಚ್ಚುವುದು ಬೇಡ ಎಂದು ನಾವು ಅವುಗಳಿಗೆ ಪ್ರಥಮ ಪೂಜೆ ಸಲ್ಲಿಸಿ ಬಿಡುತ್ತಿದ್ದೆವು.

ಚಪ್ಪಲಿ ಎಂದಾಗ ಚಪ್ಪಲಿ ಕಳ್ಳರ ಸ್ಮರಣೆ ಮಾಡದಿರಲು ಸಾಧ್ಯವೇ? ಚಪ್ಪಲಿ ಕಳ್ಳತನ ಎಂಬುದು ಬಲು ದೊಡ್ಡಪಿಡುಗು ಅಂದಿನ ದಿನಗಳಲ್ಲಿ. ದೇವಸ್ಥಾನಗಳಲ್ಲಿ ಸಭೆ ಸಮಾರಂಭಗಳಲ್ಲಿ ಮದುವೆ ಮನೆಗಳಲ್ಲಿ ಹೊಸದಾಗಿರುವ ಅಂದದ ಚಪ್ಪಲಿಗಳು ಕಳುವಾಗಿ ಬಿಡುತ್ತಿದ್ದವು. ಅಂತಹ ಕಡೆಗಳಿಗೆ ಸಾಧ್ಯವಾದಷ್ಟು ಹಳೆಯ ಇನ್ನೇನು ಬಿಸಾಡಬೇಕಾದ ಚಪ್ಪಲಿಗಳನ್ನು ಹಾಕಿಕೊಂಡು ಹೋಗಿ ಕಳ್ಳರನ್ನು ಯಾಮಾರಿಸುತ್ತಿದ್ದ ಬುದ್ಧಿವಂತರು ನಾವು. ಅಕಸ್ಮಾತ್ ಹೊಸದೇನಾದರೂ ಹಾಕಿಕೊಂಡು ಹೋದರೆ ಒಂದೊಂದು ಚಪ್ಪಲಿ ಒಂದೊಂದು ಕಡೆ ಬಿಟ್ಟು ನಮ್ಮ ಚಾಲಾಕೀತನ ಮೆರೆಸುತಿದ್ದೆವು. ಇಷ್ಟೆಲ್ಲಾ ಮಾಡಿದರೂ ಎರಡು ಮೂರು ಬಾರಿ ಚಪ್ಪಲಿ ಕಳೆದುಕೊಂಡ ನತದೃಷ್ಟಳು ನಾನು. ಆದರೆ ಚಪ್ಪಲಿ ಕಳುವಾದರೆ ಗ್ರಹಚಾರ ಕಳೆಯಿತು ಇಂದು ಹೇಳುತ್ತಿದ್ದ ಮಾತುಗಳು ಆ ದುಃಖವನ್ನು ಸ್ವಲ್ಪ ಮಟ್ಟಿಗೆ ಮರೆಸುತ್ತಿದ್ದು ದಂತು ನಿಜ.

ಚಪ್ಪಲಿಗಳು ಕಿತ್ತು ಹೋಗಿ ಫಜೀತಿಗೀಡು ಮಾಡುತ್ತಿದ್ದನ್ನು ಖಂಡಿತ ನೆನಪಿನ ಪುಟಗಳಿಂದ ಅಳಿಸಲು ಸಾಧ್ಯವೇ ಇಲ್ಲ. .ಉಂಗುಷ್ಟ ಕಿತ್ತಾಗ ದೊಡ್ಡ ದೊಡ್ಡ ಪಿನ್ಗಳನ್ನು ಹಾಕಿ ಸ್ಥಳದಲ್ಲೇ ಸರಿ ಮಾಡಿಕೊಂಡು ಚಪ್ಪಲಿ ರಿಪೇರಿಯವರ ತನಕ  ಅಕ್ಷರಶಃ ಕಾಲು ಎಳೆದುಕೊಂಡು ನಡೆಯುತ್ತಿದ್ದುದು.  ಸದ್ಯ ಆಗೆಲ್ಲ ಪ್ರತಿ ಬೀದಿಯಲ್ಲೂ ಚಪ್ಪಲಿ ರಿಪೇರಿಯವರು ಇರುತ್ತಿದ್ದು ಹೆಚ್ಚಿನ ಕಷ್ಟ ಆಗುತ್ತಿರಲಿಲ್ಲ.  ಬಿಚ್ಚಿ ಹೋದ ಉಂಗುಷ್ಟಕ್ಕೆ ಇನ್ನಷ್ಟು ಭಾಗ ಸೇರಿಸಿ ಅದನ್ನು ಸಂದಿಯಲ್ಲಿ ತೂರಿಸಿ ಹೊಲೆದು ಕೊಡುತ್ತಿದ್ದ ಆತ ಆಪದ್ಬಾಂಧವನೇ ಸರಿ .ಕೆಲವೊಮ್ಮೆ ಆ ರೀತಿಯ ಚಪ್ಪಲಿಗಳು ಬಹಳವಿದ್ದು ಒಮ್ಮೊಮ್ಮೆ ಭಾನುವಾರ ಮನೆಯ ಮುಂದೆ ಚಪ್ಪಲಿ ರಿಪೇರಿ ಎಂದು ಬಂದವನ ಬಳಿ ಹೋಲ್ಸೇಲ್  ರಿಪೇರಿ ಸಹ ನಡೆಯುತ್ತಿತ್ತು. ಬೀದಿಯಲ್ಲಿ ಚಪ್ಪಲಿ ಕಿತ್ತು ಹೋದಾಗ ಹೊಲಿಸಲು ನಾವು ಮಾಡುತ್ತಿದ್ದ ಚೌಕಾಸಿಗೆ ಬಗ್ಗದಿದ್ದ ಅವರುಗಳು ಮನೆಯ ಮುಂದೆ ಬಂದು ರಿಪೇರಿ ಮಾಡುವಾಗ ಮಾತ್ರ ಸ್ವಲದಪ ಧಾರಾಳವಾಗಿ ಬಿಡುತ್ತಿದ್ದರು.  ಹಳೆಯ ಚಪ್ಪಲಿಗಳನ್ನು ಕೊಂಡುಕೊಳ್ಳುತ್ತಿದ್ದರು .ಸವೆದು ಹೋಗಿದ್ದ ಚಪ್ಪಲಿಗಳಿಗೆ ಬೇರೆ ಚಪ್ಪಲಿಯ ಭಾಗಗಳನ್ನು ಸೇರಿಸಿ ಮಜಬೂತು ಮಾಡಿ ಕೊಡುತ್ತಿದ್ದು ಉಂಟು.  ಅವರು ಉಪಯೋಗಿಸುತ್ತಿದ್ದ ಹಿಡಿ ಇದ್ದ ಚಾಕುಗಳು ಸೂಜಿ ದಪ್ಪ ದಾರ ಇವೆಲ್ಲ ಈಗಲೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಚಪ್ಪಲಿ ರಿಪೇರಿ ಮಾಡುವಲ್ಲಿ ಅವರ ಆ ನಾಜೂಕುತನ ನಿಜಕ್ಕೂ ಗ್ರೇಟ್.  ಈಗ ಯಾರು ಚಪ್ಪಲಿಗಳನ್ನು ರಿಪೇರಿ ಮಾಡಿಸುವುದೇ ಇಲ್ಲ . ಎಲ್ಲವೂ ಯೂಸ್ ಅಂಡ್ ಥ್ರೋ.  ಜತನಿಸುವ ಹಾಳಾದದ್ದನ್ನು ಸರಿಪಡಿಸಿ ಉಪಯೋಗಿಸುವ ಕಲೆ ನಮ್ಮ ತಲೆಮಾರಿಗೆ ಮುಗಿದು ಹೋಗುವುದೋ ಏನೋ ಎಂದು ಭಯವೂ ಆಗುತ್ತದೆ. ಹೆಚ್ಚಾಗುತ್ತಿರುವ ಶ್ರೀಮಂತಿಕೆಯ ಅಥವಾ ಬೇಜವಾಬ್ದಾರಿ ತನವೋ ಅಥವಾ ಕೊಳ್ಳುಬಾಕ ಸಂಸ್ಕೃತಿಯ ಫಲವೋ?  ವಸ್ತುಗಳಂತೆ ಸಂಬಂಧಗಳೂ ಆಗಿ ಹೋಗುತ್ತಿರುವಾಗ ಮುಂದೆ ಏನು ಗತಿ ಎಂದು ಭಯವೂ ಆಗುತ್ತದೆ…..
“ಕಾಲಾಯ ತಸ್ಮೈ ನಮಃ” ಅನ್ನಲೇ ಬೇಕಲ್ಲವೇ?


About The Author

2 thoughts on “”

  1. ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು.

    ಸುಜಾತಾ ರವೀಶ್

  2. ಹೌದು ಅಂದಿನ ದಿನಗಳ ಹವಾಯ್ ಚಪ್ಪಲಿ ಎಷ್ಟು ಬಾಳಿಕೆ ಬರುತ್ತಿತ್ತು ಅಲ್ಲವೇ ನಿಜ ಒಮ್ಮೆ ಬಾಲ್ಯದ ಕಡೆ ಹೋಗಿ ಬಂದೆ ಇಂದು ಚಪ್ಪಲಿ ಹೊಲೆಯುವ ಅಂಗಡಿ ಸಿಗುವುದೇ ಕಡಿಮೆ ಈಗಾ ಹೊಲೆಸಿ ಹಾಕಿ ಕೊಳ್ಳುವ ಪ್ರಮೇಯ ಎಲ್ಲರಿಗೂ ಕಡಿಮೆಯಾಗಿದೆ ಚಪ್ಪಲಿ ಸವೆದು ಹೋಗುವವರೆಗೂ ಹಾಕುವವರೇ ಇಲ್ಲ ಈಗಾ

Leave a Reply

You cannot copy content of this page

Scroll to Top