ಶೂನ್ಯ ಪೀಠಾಧಿಪತಿ ಅಲ್ಲಮಪ್ರಭುದೇವರ ವಚನಡಾ.ಶಶಿಕಾಂತ.ಪಟ್ಟಣ -ಪೂನಾ

ನಾನೆಂಬುದು ಪ್ರಮಾಣ, ನೀನೆಂಬುದು ಪ್ರಮಾಣ.
ಸ್ವಯವೆಂಬುದು ಪ್ರಮಾಣ, ಪರವೆಂಬುದು ಪ್ರಮಾಣ.
ಪ್ರಮಾಣವೆಂಬುದು ಪ್ರಮಾಣ,
ಗುಹೇಶ್ವರನೆಂಬುದು ಅಪ್ರಮಾಣ !”
ಅಲ್ಲಮ ಪ್ರಭು
ಸಮಗ್ರ ವಚನ ಸಂಪುಟ: 2   ವಚನದ ಸಂಖ್ಯೆ: 1292

ಇದು ಶೂನ್ಯ ಸಿಂಹಾಸನದ ಅಧಿಪತಿ ಗುರು ಅಲ್ಲಮರ ನಿಷ್ಪತ್ತಿಯ ವಚನ. ಶರಣರಲ್ಲಿ ಅತ್ಯಂತ ವಿಭಿನ್ನ ರೀತಿಯ ಆಧ್ಯಾತ್ಮಿಕ ಚಿಂತನೆ ನಡೆಸಿದ ಶ್ರೇಷ್ಠ ವಚನಕಾರ ದಾರ್ಶನಿಕ ಅಲ್ಲಮ.ಇವರ ವಚನಗಳಲ್ಲಿ ಬಯಲು ಶೂನ್ಯ ಮಹಾ ಬೆಳಗು
ನಿಷ್ಪತ್ತಿ ಎನ್ನುವ ಅನೇಕ ಪದಗಳನ್ನು ತಮ್ಮ ವಚನಗಳಲ್ಲಿ ಬಳಸಿದ್ದಾರೆ. ಆಧ್ಯಾತ್ಮ ಮುಕ್ತಿ ಅಲ್ಲಮರ ದೃಷ್ಟಿಯಲ್ಲಿ ಸರಳ ಸ್ವಾಭಾವಿಕ ಸಹಜ ಅರ್ಥ .

ನಾನೆಂಬುದು ಪ್ರಮಾಣ,

ನಾನು ಎನ್ನುವುದು ಒಬ್ಬ ವ್ಯಕ್ತಿಯ ಪ್ರತೀಕ ಅಹಂ ಅನ್ನು ಪಾರಿಭಾಷಿಕ ಪದ . ನಾನು ಎಲ್ಲಿ ಇದ್ದೆ ಹೇಗೆ ಇದ್ದೆ ಹೇಗೆ ಭೂಮಿಗೆ ಬಂದೆ ಮುಂದೆ ಎಲ್ಲಿಗೆ ಹೋಗುವೆ ಎನ್ನುವ ಸಹಜ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನ ಸತ್ಯದ ಮೀಮಾಂಸೆ ಅರಿವು ಮೂಡಿಸುವ ಜ್ಞಾನ ಮಾರ್ಗದ ಶೋಧನೆ ಎಂದರ್ಥ. ಇಂತಹ ಜ್ಞಾನದ ಅರಿವನ್ನು ಕೆಲವು ಮಾನದಂಡಗಳಿಗೆ ಒಳಪಡಿಸಿ ಪ್ರಮಾಣಿಕರಿಸುವ ಶರಣ ಚಿಂತನೆ ನಾನು ನನ್ನ ಅಸ್ತಿತ್ವ ನನ್ನ ಅಸ್ಮಿತೆ ಎನ್ನುವುದು ಪ್ರಮಾಣ (Validation,) ಇದೊಂದು ಜೀವನದಲ್ಲಿ ಮಹತ್ವದ ಪ್ರಮಾಣಿಕರಿಸುವ ಸಾಧನ ಎನ್ನುತ್ತಾರೆ ಅಲ್ಲಮರು.

ನೀನೆಂಬುದು ಪ್ರಮಾಣ.

ಇಲ್ಲಿ ನೀನು ಎನ್ನುವುದು ವ್ಯಕ್ತಿಯ ತನ್ನ ಇರುವಿನ ಬಿಟ್ಟು ಇನ್ನೊಬ್ಬ ವ್ಯಕ್ತಿ ವಿಷಯ ಅಸ್ತಿತ್ವ ಎನ್ನುವುದು . ನೀನು ಎಂಬುದು ಅನ್ಯ ಬೇರೆ ಎನ್ನುವುದು ಕೂಡ
ನೀನೆಂಬುದು ಪ್ರಮಾಣಿಕರಿಸಕ್ಕೆ ಒಳಪಡುವ ಕ್ರಮ. ಬರುವಿಕೆ ಇರುವಿಕೆ ಸಲ್ಲುವಿಕೆ ಇವೆಲ್ಲ ಆಗಾಗ ಪ್ರಮಾಣಿಕರಿಸುವ ಸಾಧನಕ್ಕೆ ಒಳ ಪಡಬೇಕು  ನಾನು ಹೇಗೆ ಪ್ರಮಾಣಿಕರಿಸುವ ಪ್ರಕ್ರಿಯೆಗೆ ಒಳಗಾಗುವೇನೋ ನೀನು ಅದೇ ರೀತಿಯಲ್ಲಿ ಪ್ರಮಾಣಿಕರಿಸುವ ಕಾರ್ಯಕ್ಕೆ ಒಳಗಾಗಬೇಕು. ಪ್ರಮಾಣ ಒಂದು ನಿರ್ದಿಷ್ಟ ಮಾನ ದಂಡ
ಮೌಲ್ಯಗಳ ಅಳತೆಗೋಲು .ಅವಗುಣವ ಕಳೆದು ಸದ್ಬುದ್ಧಿ ಬೆಳೆಯ ಬೆಳೆಯಲು ಪ್ರಮಾಣಿಕರಿಸುವ ಪ್ರಕ್ರಿಯೆ ಮುಖ್ಯ ಎಂದೆನ್ನುತ್ತಾರೆ ಅಲ್ಲಮರು.

ಸ್ವಯವೆಂಬುದು ಪ್ರಮಾಣ,

ನಾನು ನನ್ನದು ನನ್ನ ಸುತ್ತಲಿನ ಜಗತ್ತನ್ನು ಸ್ವಯ ಎನ್ನುತ್ತೇವೆ . ತಾನು ತನಗಾಗಿ ತನಗೋಸ್ಕರ ಎನ್ನುವುದು ಸ್ವಯ. ಸ್ವಂತ ಬದುಕಿನ ಸಾಧನೆ ಯಶ ವೈಫಲ್ಯ ಸೋಲು ಗೆಲವು ಎಲ್ಲವೂ  ಪ್ರಮಾಣಿಕರಿಸುವ ಮೂಲಕ  ದಾಖಲಿಸಬೇಕೆನ್ನುತ್ತಾರೆ ಅಲ್ಲಮರು. ವ್ಯಕ್ತಿಯ ಬದುಕು
ಪ್ರಮಾಣಿಕರಿಸುವ ಅಗತ್ಯವನ್ನು ಹೊಂದಿದೆ. ಜೀವನ ಪಾರದರ್ಶಕ ಗೋಚರ ನಮ್ಮ ನಡವಳಿಕೆ ಆಚಾರ ವಿಚಾರಗಳನ್ನು ಪ್ರಮಾಣಿಕರಿಸುವ ಪ್ರಯತ್ನ .ನಮ್ಮ ಬದುಕಿನ ಸಾರ್ಥಕತೆ ಪಡೆಯುವುದು ಪ್ರಮಾಣಿಕರಿಸುವ ಮಾನದಂಡದ ಮೂಲಕ ಎನ್ನುವುದು ಅಲ್ಲಮರು ಸ್ಪಷ್ಟ ಅಭಿಮತ. ವ್ಯಕ್ತಿ ತನ್ನ ಜ್ಞಾನ ಜ್ಞಾನ ಸಾಧನೆ ಮುಂತಾದ ಪ್ರಕ್ರಿಯೆಗಳನ್ನು ಮಾನದಂಡದ ಅಳತೆಗೋಲು ಸಿದ್ಧಪಡಿಸಿ ಅದಕ್ಕೆ ಒಳಪಡಬೇಕು.

ಪರವೆಂಬುದು ಪ್ರಮಾಣ.

ತಾನು ತನ್ನ ಪ್ರಪಂಚ ತನ್ನ ಜಗತ್ತನ್ನು ಸ್ವಯ ಎನ್ನುತ್ತೇವೆ.
ಆದರೆ ಭಕ್ತನಿಗೆ ತನ್ನ ಹೊರತು ಪಡಿಸಿ ಪರತತ್ವ ಚಿಂತನೆಗೆ ತನ್ನನ್ನು ಒಳಪಡಿಸುವುದು ನಿಜವಾದ ಶಿವತತ್ವ ಎನ್ನುವುದು ಅಲ್ಲಮರ ವಾದ.
 ಪರ ತತ್ವ ಸಿದ್ಧಾಂತಗಳನ್ನು ಚಿಂತಿಸುವ ಭಕ್ತ ಸತ್ಯ ಶುದ್ಧ ಸರಳ ಬದುಕಿನ ಸೂಕ್ಷ್ಮತೆ ಭಾವ ಹೊಂದಿರಬೇಕು. ಬಾಹ್ಯ ಆಡಂಬರದ ತೋರಿಕೆ ಪ್ರದರ್ಶನವಲ್ಲದ ಸುಂದರ ಪರಿಕಲ್ಪನೆ .ಸ್ವಯವು ಭಕ್ತನಿಗೆ ಹೇಗೆ ಮುಖ್ಯವೋ ಹಾಗೆ ಪರವೂ ಕೂಡ . ಪರ ಬ್ರಹ್ಮ ಪರಶಿವ ಯೋಗ ಸಾಧನೆ ಪರಮ ಸುಖ. ಇಂತಹ ಅತ್ಯುನ್ನತ ಆಧ್ಯಾತ್ಮಿಕ ಚಿಂತನೆ ಕೂಡ ಪ್ರಮಾಣಕ್ಕೆ ಒಳಪಡಬೇಕು . ಪರ ತತ್ವ ಸಿದ್ಧಾಂತಗಳನ್ನು ಚಿಂತನೆಗಳನ್ನು ಅರಿಯುವ ತಿಳಿಯುವುದು ಮುಖ್ಯ ಅದಕ್ಕಾಗಿ ಪರವು ಒಂದು ಪ್ರಮಾಣ ಎನ್ನುತ್ತಾರೆ ಅಲ್ಲಮರು.

ಪ್ರಮಾಣವೆಂಬುದು ಪ್ರಮಾಣ,

ಪ್ರಮಾಣ ಎನ್ನುವುದು ಸಾಧನೆಯ ಅಳತೆಗೋಲು ಮೌಲ್ಯಗಳ ಮಾನದಂಡ . ಒಂದು ನಿರ್ದಿಷ್ಟ ಮೌಲ್ಯ ಪ್ರಜ್ಞೆಯನ್ನು ಆಕರವನ್ನಾಗಿ ( Reference) ಇಟ್ಟುಕೊಂಡು
ನಿರಂತರವಾಗಿ ಅಂತಹ ನಿದರ್ಶನ ಹೊಂದಿದ ತತ್ವ ಸಿದ್ಧಾಂತಗಳ ಮೌಲ್ಯಗಳಿಗೆ ಸಮ ಅಥವಾ ಸಮೀಪಕ್ಕೆ ಬರಬಹುದಾದ ಎಲ್ಲಾ ಪ್ರಕಾರದ ಪ್ರಯತ್ನವೇ ಪ್ರಮಾಣಕರಿಸುವ ಕಾರ್ಯ. ಇದು ಅಂತರಂಗ ಬಹಿರಂಗದ ಮುಖ್ಯ ದ್ವಾರ .
ನಡೆ ನುಡಿಗಳ ನಡುವಿನ ಸಂಬಂಧದ ಸ್ಪಷ್ಟ ಚಿತ್ರಣ . ಇಂತಹ ಅಪರೂಪದ ಸಾಧನವೇ ಶಿವಯೋಗ .
ತನ್ನಲ್ಲಿ ಸಾತ್ವಿಕ ಸ್ವಭಾವದ ತ್ಯಾಗಮಯ ಪರೋಪಕಾರ ದಾಸೋಹದ ತತ್ವಗಳನ್ನು ಅಳವಡಿಸಿಕೊಳ್ಳುವುದು ಶರಣರ ಪರಮೋಚ್ಚ ಗುರಿ.
ಅಂತಹ ಪ್ರಮಾಣಿಕರಿಸುವ ಕಾರ್ಯವು ಒಂದು ನಿರ್ದಿಷ್ಟ ಮಾನ ದಂಡ ಅಳತೆಗೋಲು ಹೊಂದಿರುತ್ತದೆ. ಅಂತೆಯೇ ಅಲ್ಲಮರು ಪ್ರಮಾಣವೂ ಒಂದು ಪ್ರಮಾಣ ಎಂದಿದ್ದಾರೆ.
ಸ್ವಯಂ ಮೌಲಿಕರಣ (self assessment self evaluation ) ಒಬ್ಬ ವ್ಯಕ್ತಿ ತಾನು ತನ್ನ ಸುತ್ತಲಿನ ಜಗತ್ತನ್ನು ನೋಡುವ ದೃಷ್ಟಿಕೋನ ಶಿವಮಯವಾಗಿರಲು ಪ್ರಮಾಣವು ಒಂದು ಪ್ರಮಾಣ ಎನ್ನುತ್ತಾರೆ ಅಲ್ಲಮರು.

ಗುಹೇಶ್ವರನೆಂಬುದು ಅಪ್ರಮಾಣ

ಗುಹೇಶ್ವರ ಎನ್ನುವುದು ಪರಿಪೂರ್ಣ ಸತ್ಯ ದರ್ಶನ.  ಭಕ್ತ ತನ್ನನ್ನು ದೈವನಲ್ಲಿ ಮತ್ತು ದೈವವನ್ನು ತನ್ನಲ್ಲಿ ಕಾಣುವ ಶಿವಯೋಗ ಪ್ರಜ್ಞೆ ಜ್ಞಾನ .ಭಕ್ತ  ನಾನು ಎಂಬ ಅಹಂ ಸ್ಥಿತಿಯಲ್ಲಿ ಕೆಲವು ಮಾನದಂಡಗಳಿಗೆ ಒಳ ಪಡುತ್ತಾನೆ ಹೀಗಾಗಿ ನಾನೆಂಬುದು ಪ್ರಮಾಣ. ತನ್ನ ಹೊರತು ಪಡಿಸಿ ಇನ್ನೊಬ್ಬರ ಜೀವನ ಕ್ರಮದ ಬಗ್ಗೆ ಇಲ್ಲಿ ವ್ಯಕ್ತಿ ಪ್ರಾಣಿ ಪಶು ಪಕ್ಷಿ ಸಂಕುಲ ಎಂದು ಕೊಳ್ಳೋಣ ತನ್ನ ಬಿಟ್ಟು ಬೇರೆ ಪ್ರಪಂಚ ಇವುಗಳ ಚಿಂತನೆಯೂ ಕೂಡ ಪ್ರಮಾಣ. ಇದನ್ನು ಅಲ್ಲಮರು ನೀನೆಂಬುದು ಪ್ರಮಾಣ ಎನ್ನುತ್ತಾರೆ. ಸ್ವಯವೆಂಬುದು ಅಂದರೆ ವ್ಯಕ್ತಿ ತನ್ನ ಇರುವಿಕೆ ಬದುಕು ಸಾಧನೆ ಜ್ಞಾನ ಮಾರ್ಗದ ಅರಿವು ಒಂದು ನಿರ್ದಿಷ್ಟ ಪ್ರಮಾಣ ಎನ್ನುತ್ತಾರೆ ಅಲ್ಲಮರು. ಅಂತೆಯೇ ಸ್ವಯವೂ ಪ್ರಮಾಣ ಎಂದಿದ್ದಾರೆ. ಇನ್ನೂ ಪರ ಎನ್ನುವುದು ತನ್ನ ಬಿಟ್ಟು ಪರ ತತ್ವ ಚಿಂತನೆ ಜಂಗಮ ಪ್ರಜ್ಞೆ ಇವುಗಳ ಚಿಂತನೆಗೆ ತೊಡಗಿಸಿಕೊಳ್ಳುವ ಸಾಧನಾ ಮಾರ್ಗ ಜ್ಞಾನ ಕ್ರಿಯೆಗಳ ಸುಂದರ ಚಿಂತನೆ ಒಂದು ಗೊತ್ತುಪಡಿಸಿದ ಪ್ರಮಾಣಕ್ಕೆ ಒಳಪಡಬೇಕು ಎನ್ನುವ ಅತ್ಯಂತ ಉದಾತ್ತ ಧ್ಯೇಯ ಅಲ್ಲಮರದ್ದು. ಆದರೆ ಭಕ್ತ ಈ ಎಲ್ಲಾ ಪರೀಕ್ಷೆ ಮಾನ ದಂಡ  ಎದುರಿಸಿ ಪ್ರಮಾಣಕ್ಕೆ ಒಳಗಾಗಿ ಸತ್ಯ ಶುದ್ಧ ಕಾಯಕ ದಾಸೋಹ ಮಾಡಿ ಇಹಪರ ಚಿಂತನೆ ಮಾಡುವ ಸಾಧನೆ ಮಾಡಿದಲ್ಲಿ ತಾನೇ ದೇವನಾಗುತ್ತಾನೆ. ಅದುವೇ ಆರೂಢ ಸ್ಥಿತಿ .
ತಾನು ದೇವನಾಗುವ ಪರಿ. ಅದು ಗುಹೇಶ್ವರ ಲಿಂಗದಲ್ಲಿ ತನ್ನ ತಾನು ಕಾಣುವ ತಾನೇ ಗುಹೇಶ್ವರ ಲಿಂಗವಾಗುವ ಶ್ರೇಷ್ಠ ಸಾಧನ. ಅಂತಹ ಗುಹೇಶ್ವರನೆಂಬುದು ಅಪ್ರಮಾಣ. ಗುಹೇಶ್ವರ ಎಂಬುದು ಪರಿಪೂರ್ಣ ಜ್ಞಾನ
ಪರಮ ಸತ್ಯ Absolute reality ಸತ್ ಚಿತ್ ಆನಂದ. ಹೀಗಾಗಿ ಗುಹೇಶ್ವರವೆಂಬುದು  ಯಾವುದೇ ಪ್ರಮಾಣಕ್ಕೆ ಒಳ ಪಡುವ ಅಗತ್ಯವಿಲ್ಲ. ಅದು ಅಪ್ರಮಾಣ ಎಂದಿದ್ದಾರೆ ಅಲ್ಲಮರು.
ಇಂತಹ ಉದಾತ್ತಿಕರಣದ ಪರಿಶುದ್ಧ ಚಿಂತನೆಗಳ ನಿರಂತರ ಅಧ್ಯಯನ ಮನನ ಮತ್ತು ನಿಜ ಅನುಷ್ಠಾನ ದೈವನ ಸಾಕಾರ ಸ್ವರೂಪ ಅದು ಸೃಷ್ಟಿ ಅದುವೇ ಬಯಲು ಅದುವೇ ಗುಹೇಶ್ವರ ಲಿಂಗದಲ್ಲಿ ಕಾಣುವ ಪರಮ ಸತ್ಯದ ನಿಲುವು ಎಂದಿದ್ದಾರೆ ಅಲ್ಲಮರು.

————————————————————-

10 thoughts on “ಶೂನ್ಯ ಪೀಠಾಧಿಪತಿ ಅಲ್ಲಮಪ್ರಭುದೇವರ ವಚನಡಾ.ಶಶಿಕಾಂತ.ಪಟ್ಟಣ -ಪೂನಾ

  1. ಅರ್ಥಪೂರ್ಣ ಚಿಂತನೆ ಸರ್ ಸರಳ ಸುಂದರ ಅಭಿವ್ಯಕ್ತಿ

  2. ಏಷ್ಟು ಆಳ ಗಂಭೀರ ಸ್ವರೂಪದ ಚಿಂತನೆ ಸರ್ ಅಲ್ಲಮರ ವಚನ ತುಂಬಾ ಕಠಿಣ ನೀವು ಏಷ್ಟು ಲೀಲಾ ಜಾಲವಾಗೀ ವಿಶ್ಲೇಷಿಸುತ್ತಾ ಬರೆದ ಲೇಖನ

  3. ಗುಹೇಶ್ವರನೆ0ಬುದು ಅಪ್ರಮಾಣ ಎನ್ನುವ ಅಲ್ಲಮಪ್ರಭುದೇವರ ವಚನವನ್ನು ಇಷ್ಟು ಸರಳ ರೀತಿಯಲ್ಲಿ ಅರ್ಥೈಸಿದ್ದಕ್ಕೆ ಧನ್ಯವಾದಗಳು ಸರ್

    ಸುಶಿ

  4. ಅರ್ಥಪೂರ್ಣವಾದ ವಿಶ್ಲೇಷಣೆ ಸರ್

Leave a Reply

Back To Top