“ಕೊರಳಲಿಹ ಲಿಂಗ….ಆತ್ಮ ಸಖ”ಸಣ್ಣ ಕಥೆ-ವೀಣಾ ಹೇಮಂತ್ ಗೌಡ ಪಾಟೀಲ್

ಸುಮಾರು 200 ವರ್ಷಗಳ ಹಿಂದೆ ನಡೆದ ಕಥೆ. ಅದೊಂದು ಹಳ್ಳಿಯ ಗೌಡರ ಮನೆತನ. ಅತ್ಯಂತ ಶ್ರೀಮಂತಿಕೆಯನ್ನು ಹೊಂದಿರುವ ನೂರಾರು ಎಕರೆ ಜಮೀನಿರುವ, ಹಲವಾರು ಬಾವಿ ಪುಟ್ಟದಾದ ಕೆರೆಯನ್ನು ಹೊಂದಿರುವ ನೀರಾವರಿ ಸೌಲಭ್ಯ, ತೆಂಗು, ಮಾವು ನಿಂಬೆಯ ತೋಟಗಳು ಊರ ಹೊರ ಭಾಗದಲ್ಲಿ ಇದ್ದರೆ ಊರ ಮುಂದಣ ಎತ್ತರದ ಪ್ರದೇಶದಲ್ಲಿ ಅರಮನೆಯಂತಹ ಭವನ, ಕೆತ್ತನೆಯ ಕಂಬವುಳ್ಳ ಮಜಬೂತಾದ ಈ ಮನೆಯಲ್ಲಿ ಹಲವಾರು ಕೋಣೆಗಳು, ವಿಸ್ತಾರವಾದ ಅಡುಗೆ ಮನೆ, ಹಲವಾರು ಐಷಾರಾಮಿ ಪೀಠೋಪಕರಣಗಳು, ಪ್ರತಿ ಕೋಣೆಯಲ್ಲೂ ಚಂದದ ಕೆತ್ತನೆಯ ಮಂಚ, ನಿಲುವುಗನ್ನಡಿ, ಮಜಬೂತಾದ ಕಟ್ಟಿಗೆಯ‌ ಕಪಾಟುಗಳು ಮನೆಯ ಮುಖ್ಯ ಹಜಾರದಲ್ಲಿ ಬೃಹತ್ ಗಾತ್ರದ ಸುಖಾಸೀನಗಳು ಒಂದೇ ಎರಡೇ ಆ ಮನೆಯ ವೈಭೋಗವ ವರ್ಣಿಸಲು. ಗೌಡರ ಹೆಂಡತಿಯ
ಕೊರಳಲ್ಲಿ, ಕೈಗಳಲ್ಲಿ ಚಿನ್ನದ ತರಹೇವಾರಿ ಆಭರಣಗಳು. ಕಾಲಲ್ಲಿ ಪಿಲ್ಲಿ ಕಾಲುಂಗುರ ಗೆಜ್ಜೆ ಮೆಂಟಿಗೆ ಕಡಗಗಳು… ಇದೆಲ್ಲಕ್ಕೂ ಮೇರು ಕಳಶವಿತ್ತಂತೆ ಚಿನ್ನದಂತಹ ಮೂರು ಗಂಡು ಮಕ್ಕಳು. ಮನೆ ತುಂಬಾ ಆಳುಕಾಳುಗಳು, ಹಟ್ಟಿಯ ತುಂಬಾ ದನ ಕರುಗಳು…. ಅಡುಗೆ ಮನೆಯಲ್ಲಿ ಹಾಲು ಮೊಸರು ಬೆಣ್ಣೆಗಳ ಸಮೃದ್ಧಿ, ಹಿತ್ತಲಲ್ಲಿ ಬೆಳೆದ ತಾಜಾ ತರಕಾರಿ ಅಬ್ಬಬ್ಬಾ ಆ ವೈಭವ ವರ್ಣನಾತೀತವಾದುದು.

ಹಿರಿಯ ಮಗ ಪ್ರಾಪ್ತ ವಯಸ್ಕನಾಗಲು ಸೂಕ್ತ ಸಮಯದಲ್ಲಿ ಮದುವೆ ಮಾಡಬೇಕೆಂಬುದು ಗೌಡ ದಂಪತಿಗಳ ಹೆಬ್ಬಯಕೆ, ಅಂತೆಯೇ ತಮ್ಮ ಮನೆಗೆ ಎಲ್ಲ ರೀತಿಯಿಂದಲೂ ಸೂಕ್ತವಾದ ಅನುರೂಪ ಕನ್ಯೆಯನ್ನು ಹುಡುಕಿ ಮಗನ ಮದುವೆ ಮಾಡಿದರು. ಮನೆಗೆ ಬಂದ ಮಹಾಲಕ್ಷ್ಮಿಯಂತೆ ಸೊಸೆಯು ಮನೆಯನ್ನು ನಂದಗೋಕುಲವಾಗಿಸಿದಳು. ಅತ್ತೆ ಮಾವರಿಗೆ ನೆಚ್ಚಿನ ಸೊಸೆಯಾಗಿ, ಮೈದುನರಿಗೆ ಮಮತೆಯ ಮಾತೃ ಸ್ವರೂಪವಾಗಿ ಆಳು ಕಾಳುಗಳಿಗೆ ನೆಚ್ಚಿನ ಒಡತಿಯಾಗಿ, ಮನೆಗೆ ಬಂದು ಹೋಗುವ ಅತಿಥಿ ಅಭ್ಯಾಗತರ ಸತ್ಕರಿಸುತ್ತಾ ಮನೆಯ ಎಲ್ಲಾ ಆಗು ಹೋಗುಗಳನ್ನು  ನೋಡಿಕೊಳ್ಳತೊಡಗಿದಳು. ಎಲ್ಲರ ಬಾಯಲ್ಲಿಯೂ ಆಕೆಯದೇ ಹೆಸರು ನಲಿದಾಡತೊಡಗಿತ್ತು. ಊರಿನಲ್ಲಿ ನಡೆಯುವ ಇಲ್ಲ ಕಾರ್ಯಕ್ರಮಗಳಲ್ಲಿಯೂ ಆಕೆಯೇ ಕಳಶ ಹಿಡಿಯಲಿ, ಆಕೆಯ ಕಾಲ್ಗುಣ ಒಳ್ಳೆಯದು ಎಂದು ಎಲ್ಲರೂ ಮಾತನಾಡತೊಡಗಿದರು.

ಹೀಗೆಯೇ ನಾಲ್ಕಾರು ವರ್ಷಗಳು ಕಳೆಯಲು ಆಕೆಯ ಬೆನ್ನ ಮೇಲೆ ಚರ್ಮದ ಗುಳ್ಳೆಯೊಂದು ಮೂಡಿತು. ಆ ಗುಳ್ಳೆ ಒಡೆದು ಅದರ ಸುತ್ತ ಹತ್ತಾರು ಗುಳ್ಳೆಗಳು ಕೆಲವೇ ದಿನಗಳಲ್ಲಿ ಆಕೆಯ ಇಡೀ ಮೈತುಂಬ ಗುಳ್ಳೆಗಳು. ಆ ಗುಳ್ಳೆ ಮತ್ತೆ ಮತ್ತೆ ಹೊಸ ಗಾಯಗಳನ್ನು ಕೆದರುತ್ತಾ ತೀವ್ರ ಚರ್ಮರೋಗದಿಂದ ಆಕೆ ಬಳಲತೊಡಗಿದಳು. ಮನೆಯಿಂದ ಹೊರಗೆ ಬರದಂತೆ ಆಕೆ ಮನೆಯ ಒಂದು ಮೂಲೆಯ ಭಾಗದಲ್ಲಿರುವ ಕೋಣೆಯಲ್ಲಿ ವಾಸಿಸತೊಡಗಿದಳು. ಪ್ರತಿದಿನ ಊಟವನ್ನು ಆಕೆಯ ಕೋಣೆಗೆ ತಲುಪಿಸಲಾರಂಭಿಸಿದರು. ಎಲ್ಲಾದರೂ ಅಕಸ್ಮಾತ್ ಆಕೆ ಕಂಡರೆ ದೂರ ಸರಿಯಲಾರಂಭಿಸಿದರು ಮನೆಯ ಜನ. ಆಕೆಯ ಚರ್ಮರೋಗದಿಂದ ಬೇಸತ್ತು ಸತ್ತಾದರೂ ಹೋಗಬಾರದೇ ಎಂದು ಶಪಿಸಲು ಆರಂಭಿಸಿದರು. ಕೋಣೆಯಿಂದ ಹೊರಗೆ ಬರದೇ ಇದ್ದ ಆ ಹೆಣ್ಣು ಮಗಳು ಸತ್ತು ಹೋಗಲಿ ಎಂಬ ಮಾತನ್ನು ಕೇಳಿದ ನಂತರ ತುಂಬಾ ನೊಂದುಕೊಂಡು  ಸಾಯುವ ತೀರ್ಮಾನ ಮಾಡಿದಳು. ಆದರೆ ಧೈರ್ಯ ಸಾಲದೇ ನಡುರಾತ್ರಿಯಲ್ಲಿ ಮನೆಯಿಂದ ಹೊರ ಬಿದ್ದು ಹತ್ತಿರದ ಊರಿನಲ್ಲಿದ್ದ ಮಠವೊಂದಕ್ಕೆ ಹೋಗಿ ಮಠದ ದ್ವಾರ ಬಾಗಿಲಿನಲ್ಲಿ ಕುಳಿತಳು.

ಅದು ಅತ್ಯಂತ ಪ್ರಸಿದ್ಧವಾದ ಮಠವಾಗಿತ್ತು. ಆ ಮಠದ ಪೂಜ್ಯರು ಭಕ್ತರನ್ನು ಮಕ್ಕಳಂತೆ ನೋಡುತ್ತಿದ್ದರು. ಪ್ರತಿದಿನ ಮಠಕ್ಕೆ ಭಕ್ತಾದಿಗಳ ದಂಡು ಬಂದು ದೇವರ ದರ್ಶನದ ನಂತರ ಮಠದ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಮಠದ ದಾಸೋಹದಲ್ಲಿ ಊಟವನ್ನು ಮಾಡಿ ಸಂತೃಪ್ತರಾಗುತ್ತಿದ್ದರು. ಮಠದ ದ್ವಾರಬಾಗಿಲಿನ ಕಂಬದ ಬಳಿ ಮರೆಯಾಗಿ ಮೂಲೆಯಲ್ಲಿ ಕುಳಿತ ಈ ಹೆಣ್ಣು ಮಗಳನ್ನು ನಿಕೃಷ್ಟವಾಗಿ ಕಾಣುತ್ತಾ ಭಕ್ತರು ದೂರಸರಿ ಇಲ್ಲೇಕೆ ಕುಳಿತಿರುವೆ ಎಂದು ಮೂದಲಿಸುವುದು ಭಕ್ತರನ್ನು ಮಾತನಾಡಿಸುತ್ತಾ ಇದ್ದ ಪೂಜ್ಯರಿಗೆ ಕೇಳಿಸಿತು. ಕಂಬ ಮರೆಯಾಗಿದ್ದರಿಂದ ಆಕೆ ಕಾಣಿಸುತ್ತಿರಲಿಲ್ಲ. ಅದ್ಯಾಕೆ ಹೀಗೆ ಎಂದು ತಮ್ಮ ಪೀಠದಿಂದ ಎದ್ದು ಬಂದು ನೋಡಿದ ಮಠಾಧೀಶರಿಗೆ ಕಂಡದ್ದು ಸಂಕೋಚವೇ ಮುದ್ದೆಯಾಗಿ ಕುಳಿತಂತ ಈ ಹೆಣ್ಣು ಮಗಳು.ಭಕ್ತರನ್ನು ಮಾತನಾಡಿಸಿ ಕಳುಹಿಸಿದ ನಂತರ ಆ ಹೆಣ್ಣು ಮಗಳನ್ನು ಮಾತನಾಡಿಸಿದ ಸ್ವಾಮೀಜಿಯವರು ಆಕೆಗೆ ಮಠದ ಒಂದು ಕೋಣೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟರು. ಜೊತೆಗೆ ತಮಗೆ ಗೊತ್ತಿದ್ದ ಆಯುರ್ವೇದದ ಔಷಧಿಯನ್ನು ಕೂಡ ನೀಡಿದರು.

ಮುಂದೆ ಪ್ರತಿದಿನ ಗುರುಗಳು ಬೆಳಗಿನ ಅನುಷ್ಠಾನಕ್ಕೆ ಕೂರುವ ಮುನ್ನ ಸ್ನಾನ ಮಾಡುವಾಗ ಅವರ ಮೈ ಮೇಲೆ ಸುರಿದುಕೊಂಡ ನೀರನ್ನು ಬಚ್ಚಲ ಮೋರಿಯ ಬಳಿ ನಿಂತು ತೆಂಗಿನ ಕಾಯಿಯ ಗೆರಟೆಯಲ್ಲಿ ಹಿಡಿದುಕೊಂಡು ದೊಡ್ಡ ಪಾತ್ರೆಯಲ್ಲಿ ತುಂಬಿಸಿಕೊಂಡ ಆ ಹೆಣ್ಣು ಮಗಳು ಪ್ರತಿದಿನವೂ ಆ ನೀರನ್ನು ಸ್ನಾನಕ್ಕೆ ಬಳಸಲಾರಂಭಿಸಿದಳು. ಕೆಲವೇ ದಿನಗಳಲ್ಲಿ ಆಕೆಯ ಮೈ ಮೇಲಿನ ವ್ರಣಗಳೆಲ್ಲ ಒಣಗಿ ಹಕ್ಕಳೆಗಳಾಗಿ ಉದುರಿ ಹೋದವು. ಆಕೆಯ ಚರ್ಮ ಮೊದಲಿನಂತೆ ಆರೋಗ್ಯಕರವಾಗಿ ನಳನಳಿಸಲಾರಂಭಿಸಿತು. ಗುರುಗಳ ಬಚ್ಚಲ ಮೋರಿಯ ನೀರು, ಅವರು ಕೊಟ್ಟ ಔಷಧಿಯ ಲೇಪನ, ಮಠದ ದಾಸೋಹದ ಸಾತ್ವಿಕ ಅಡುಗೆ, ಸಂಜೆಯ ಸಮಯದಲ್ಲಿ ಗುರುಗಳ ವಿಚಾರವಾಣಿಯನ್ನು ಆಲಿಸುವ ಸೌಭಾಗ್ಯ ಎಲ್ಲವೂ ಕೂಡಿ ಆಕೆಯನ್ನು ಹೊಸ ಮನುಷ್ಯಳನ್ನಾಗಿಸಿತು. ಆ ದಿನ ಮುಂಜಾನೆಯ ಪೂಜಾದಿಗಳನ್ನು ಪೂರೈಸಿ ಭಕ್ತರನ್ನು ಭೇಟಿಯಾಗಲು ಬಂದು ಕುಳಿತ ಪೂಜ್ಯರನ್ನು ಎಲ್ಲ ಭಕ್ತ ಜನರು ಹೋದ ನಂತರ ಆಕೆ ಭೇಟಿಯಾದಳು. ಇನ್ನೇನು ನಿನ್ನ ಆರೋಗ್ಯ ಸುಧಾರಿಸಿದೆ,ಮನೆಗೆ ತಿರುಗಿ ಹೋಗು ಎಂದು ಪೂಜ್ಯರು ಆಕೆಗೆ ಅಪ್ಪಣೆ ಮಾಡಲು ಆಕೆ ತಾನು  ಮಠದಲ್ಲಿಯೇ ಇರುವುದಾಗಿ ತೀರ್ಮಾನಿಸಿರುವುದಾಗಿಯೂ ಅಡುಗೆ ಮನೆಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಕೇಳಿಕೊಂಡಳು. ಪೂಜ್ಯರು ಆಕೆಯ ಮಾತಿಗೆ ಸಮ್ಮತಿಯನ್ನಿತ್ತರು.

ಮುಂದೆ ಮಠದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಆಕೆಯದ್ದೇ ಅಡುಗೆ. ಹದವಾದ ಆಕೆಯ ಕೈ ರುಚಿ ಸವಿದವರು ಸಾವಿರಾರು ಜನ. ತಮ್ಮ ಸೊಸೆ ಚರ್ಮರೋಗದ ಬಾಧೆಯಿಂದ ಸತ್ತು ಹೋಗಿರಬಹುದು ಎಂದು ಭಾವಿಸಿ, ಪೀಡೆ ತೊಲಗಿತು ಎಂದು ಆಕೆಯನ್ನು ಮರೆತೆ ಬಿಟ್ಟಿದ್ದ ಅವರಿಗೆ ತಮ್ಮ ಸೊಸೆ ಕಾಯಿಲೆಯಿಂದ ಮುಕ್ತಳಾಗಿ ಮಠದಲ್ಲಿ ದಾಸೋಹ ಸೇವೆ ಸಲ್ಲಿಸುತ್ತಿದ್ದಾಳೆ ಎಂಬ ವಿಷಯ ಗೌಡರ ಕಿವಿಗೆ ಬಿತ್ತು. ಹಲವಾರು ಜನ ಗೌಡರಿಗೆ ಸೊಸೆಯನ್ನು ಮನೆಗೆ ಕರೆ ತರಬಾರದೇ ಎಂದು ಆಗ್ರಹಿಸಿದರು. ಆಕೆಯ ಕಷ್ಟದಲ್ಲಿ ಆಕೆಯನ್ನು ನಿಕೃಷ್ಟವಾಗಿ ಕಂಡ ತಮ್ಮ ಕುಟುಂಬದ ಮಾತಿಗೆ ಆಕೆ ಒಡಂಬಡುವಳೆ ಎಂಬ ಅನುಮಾನ ಗೌಡರಿಗೆ

 ಅಂತಿಮವಾಗಿ ತನ್ನ ಬಂಧು ಬಳಗವನ್ನು ಒಳಗೊಂಡು ಮಠಕ್ಕೆ ಆಗಮಿಸಿದ ಗೌಡರು ದೇವರ ದರ್ಶನದ ನಂತರ ಪೂಜ್ಯರ ಸಂದರ್ಶನಕ್ಕೆ ಅತ್ಯಂತ ಸಂಕೋಚದಿಂದಲೇ ಬಂದು ಕುಳಿತರು. ಇವರನ್ನು ನೋಡುತ್ತಲೇ ಪೂಜ್ಯರು ಕ್ಷೇಮ-ಸಮಾಚಾರ, ಮಳೆ-ಬೆಳೆ ಮುಂತಾದ ವಿಷಯಗಳನ್ನು ಕುರಿತು ಚರ್ಚಿಸಿದ ನಂತರ ಕೊನೆಯದಾಗಿ ಗೌಡರು ತಾವು ಬಂದ ವಿಷಯವನ್ನು ಪೂಜ್ಯರ ಗಮನಕ್ಕೆ ತಂದರು. ಆಗ ಪೂಜ್ಯರು ನಿಮ್ಮ ಸೊಸೆ ನಮ್ಮ ಮಠದಲ್ಲಿ ಇರುವುದು ನಿಜ ಎಂದು ಆಕೆಯನ್ನು ಕರೆಯಲು ಕಳುಹಿಸಿದರು. ಮಠದ ಅಡುಗೆ ಕೋಣೆಯಲ್ಲಿ ಕಾರ್ಯನಿರತಳಾಗಿದ್ದ ಗೌಡರ ಸೊಸೆ ತಲೆಯ ಮೇಲೆ ಸೆರಗು ಹೊದ್ದು ಪೂಜ್ಯರ ಕಾಲಿಗೆ ನಮಸ್ಕರಿಸಿ,ತನ್ನನ್ನು ಕರೆಸಿದ ಕಾರಣವನ್ನು ಕೇಳಿದಾಗ, ಮಠದ ಪೂಜ್ಯರು ಆಕೆಯ ಮಾವ,ಪತಿ ಮತ್ತಿತರ ಜನ ಆಕೆಯನ್ನು ಕರೆದುಕೊಂಡು ಹೋಗಲು ಬಂದಿರುವುದಾಗಿಯೂ  ಅವರೊಂದಿಗೆ ನಿನ್ನೂರಿಗೆ ಮರಳಿ ಹೋಗು ಎಂದು ಸೂಚಿಸಿದರು. ಕೂಡಲೇ ಉತ್ತರಿಸಿದ ಗೌಡರ ಸೊಸೆ ತಾನು ತನ್ನ ಜೀವಿತದ ಕೊನೆಯವರೆಗೂ ಮಠದಲ್ಲಿಯೇ ಸೇವೆ ಸಲ್ಲಿಸುತ್ತಾ ಇರುವೆನೆಂದು ತನಗೆ ಯಾವ ಬಂಧು ಬಾಂಧವರಿಲ್ಲ ಎಂದು ಹೇಳಿದಳು. ನಿನ್ನನ್ನು ಕರೆಯಲು ನಿನ್ನ ಗಂಡ ಬಂದಾನವ್ವ ಎಂದು ಗುರುಗಳು ಹೇಳಿದಾಗ ಆಕೆ ಆತ ನನ್ನ ಚರ್ಮದ ಗಂಡನೆಂದೂ…. ನನ್ನ ದೇಹದ ಆರೋಗ್ಯ ಸರಿಯಾಗಿದ್ದಾಗ ಮಾತ್ರ ತನ್ನ ಗಂಡನಾಗಿದ್ದನೆಂದೂ ಇದೀಗ ತನ್ನ ಕೊರಳಲ್ಲಿರುವ ಶಿವಲಿಂಗ ಮಾತ್ರ ತನ್ನ ನಿಜದ ಗಂಡನೆಂದೂ, ಆತ್ಮಸಖನೆಂದೂ ಹೇಳಿ ತನ್ನ ಕೊರಳಲ್ಲಿ ಕಟ್ಟಿಕೊಂಡ ಶಿವಲಿಂಗವು ತನ್ನನ್ನು ತನ್ನ ಜೀವಿತದ ಕೊನೆಯವರೆಗೂ ರಕ್ಷಿಸುವುದಾಗಿ ಹೇಳಿದಳು. ತನ್ನ ಜೀವಿತದ ಕೊನೆಯವರೆಗೂ ಮಠದಲ್ಲಿ ಇದ್ದು ಸೇವೆ ಸಲ್ಲಿಸುವುದಾಗಿ ಹೇಳಿ ಎಲ್ಲರಿಗೂ ಮತ್ತೊಮ್ಮೆ ನಮಸ್ಕರಿಸಿ ಹೊರಟು ಹೋದಳು. ಆಕೆಯ ಮಾತನ್ನು ಕೇಳಿದ ಗೌಡರು ಮತ್ತು ಅವರ ಮಗ ತಲೆತಗ್ಗಿಸಿದರು. ಗುರುಗಳಿಗೆ ನಮಸ್ಕರಿಸಿದ ಅವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಮ್ಮೂರಿಗೆ ಮರಳಿದರು.

ಸ್ನೇಹಿತರೆ ಇದು ಕಟ್ಟುಕಥೆ ಅಲ್ಲ, ನಡೆದದ್ದು. ಗೌಡರ ಸೊಸೆ ಹೇಳಿದ್ದು ಸಾರ್ವಕಾಲಿಕ ಸತ್ಯವಲ್ಲವೇ. ಮನುಷ್ಯ ಈ ಭೂಮಿಗೆ ಬರುವುದು ಒಬ್ಬನೇ ಹೋಗುವುದು ಕೂಡ ಒಬ್ಬನೇ ಬರುವಾಗ ಏನನ್ನು ತಂದಿರುವುದಿಲ್ಲ ಅಂತೆಯೇ ಹೋಗುವಾಗ ಏನನ್ನು ಒಯ್ಯುವುದಿಲ್ಲ ಕೂಡ. ಇರುವ ನಾಲ್ಕು ದಿನಗಳಲ್ಲಿ ಜಗ ಮೆಚ್ಚುವ ಹಾಗೆ ಬದುಕದಿದ್ದರೂ ನಮ್ಮ ಆತ್ಮಸಾಕ್ಷಿ ಒಪ್ಪುವ ಹಾಗೆ ಬದುಕಬೇಕು. ಅದುವೇ ನಿಜವಾದ ಜೀವನ.

ಅಂದಹಾಗೆ ಗೌಡರ ಸೊಸೆ ಮಠಾಧೀಶರ ಬಚ್ಚಲ ನೀರನ್ನು ಬಳಸಿ ತನ್ನ ಆರೋಗ್ಯ ಸುಧಾರಿಸಿಕೊಂಡ ಘಟನೆ ಕೂಡ ಆ ಕಾಲದಲ್ಲಿ ನಡೆದ ಪವಾಡ. ನಂಬಿಕೆಯ ಶಕ್ತಿ ಬಲು ದೊಡ್ಡದು. ಅಂತೆಯೇ ನಮ್ಮ ಶರಣರು ತಮ್ಮ ವಚನಗಳಲ್ಲಿ ಶರಣನ ಬಚ್ಚಲ ಮನೆಯ ಕಲ್ಲು, ಬಚ್ಚಲು ಮೋರಿಯ ನೀರು ಬೀಳುವ ಜಾಗ, ಕೊನೆಯಲ್ಲಿ ಮೋರಿಯಲ್ಲಿ ಬದುಕುವ ಒಂದು ಹುಳುವಾಗಿಯಾದರೂ ನನ್ನನ್ನು ಹುಟ್ಟಿಸು ಎಂದು ಹೇಳಿರುವ ಮಾತು ಪದೇಪದೇ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಶರಣರ ಜೀವನ ಆದಷ್ಟು ಪಾವನಮಯ ಎಂಬ ಅರಿವು ಮೂಡುತ್ತದೆ. ಅಂತಹ ಶರಣರು ಬಾಳಿ ಬದುಕಿದ ನೆಲದಲ್ಲಿ ಹುಟ್ಟಿರುವ ನಾವು ಅವರ ಹಾದಿಯಲ್ಲಿ ಸಾಗುವ ಎಂಬ ಆಶಯದೊಂದಿಗೆ


Leave a Reply

Back To Top