ಪುಸ್ತಕ ಸಂಗಾತಿ
ಕಂಸ (ಕಂಚುಗಾರನಹಳ್ಳಿ ಸತೀಶ್)
:ಚಿಂಟು-ಪಿಂಟು ಮತ್ತು ಮಿಂಚುವಿನ ಸಂಚಲನ”
ಚೈತ್ರಾ ವಿ ಮಾಲವಿ
ಚಿಂಟು-ಪಿಂಟು ಮತ್ತು ಮಿಂಚುವಿನ ಸಂಚಲನ
ಒಂದು ಅಭಿಪ್ರಾಯ
– ಚಿಕ್ಕಮಂಗಳೂರು ಜಿಲ್ಲೆಯ, ಕಡೂರು ತಾಲೂಕಿನವರಾದ ‘ಕಂಸ’ ಎಂದೇ ಹೆಸರುವಾಸಿಯಾಗಿರುವ ಕಂಚುಗಾರನಹಳ್ಳಿ ಸತೀಶ್ ಅವರು ಬರೆದಿರುವ ‘ಚಿಂಟು, ಪಿಂಟು ಮತ್ತು ಮಿಂಚುವಿನ ಸಂಚಲನ’ ಪುಸ್ತಕ ಸರಳವಾದ ವಾಕ್ಯಗಳನ್ನೊಳಗೊಂಡ, ಸುಂದರವಾದ ಮಕ್ಕಳ ಕಾದಂಬರಿಯಾಗಿದೆ.
ಚಿಂಟು ಮತ್ತು ಪಿಂಟು ಅಣ್ಣ ತಮ್ಮಂದಿರಾಗಿ ತಮ್ಮದೇ ಆದ ಬುದ್ಧಿ, ಚಾಣಾಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಓದುಗರನ್ನು ಸೆಳೆಯುತ್ತಾರೆ. ಈ ಕಾದಂಬರಿಯಲ್ಲಿ ಇವರ ತಂದೆ ಕಾಡಿಗೆ ಹೋಗಿ ಕಟ್ಟಿಗೆಗಳನ್ನು ಕಡಿದು ತಂದು ಮಾರಿ ಜೀವನ ಸಾಗಿಸುತ್ತಿರುತ್ತಾನೆ.
ಒಂದು ದಿನ ಮಕ್ಕಳಾದ ಚಿಂಟು, ಪಿಂಟು ಇಬ್ಬರೂ ತಂದೆಯ ಜೊತೆ ಕಾಡಿಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಒಂದು ಮೊಲವು ಸಿಗುತ್ತದೆ. ಅದು ನೀರಿಲ್ಲದೇ, ಊಟವಿಲ್ಲದೇ ಅಲೆದಾಡುತ್ತಿರುತ್ತದೆ. ಅದನ್ನು ಕಂಡು ಮರುಗಿದ ಚಿಂಟು,ಪಿಂಟು ಮೊಲವನ್ನು ಮನೆಗೆ ತಂದು ಸಾಕುತ್ತಾರೆ. ಮೊಲವು ‘ಕಾಡಿನ ಎಲ್ಲಾ ಪ್ರಾಣಿಗಳು ನೀರಿಲ್ಲದೇ, ಊಟವಿಲ್ಲದೇ ಕೊರಗುತ್ತಿವೆ, ಅದಕ್ಕೆನಾದ್ರೂ ಸಹಾಯ ಮಾಡಬಹುದಾ..’ ಎಂದು ಕೇಳಿಕೊಳ್ಳುತ್ತದೆ. ಅಲ್ಲಿಂದ ಚಿಂಟು,ಪಿಂಟು ಮತ್ತು ಮಿಂಚುವಿನ ಸಂಚಲನವೇ ಶುರುವಾಗುತ್ತದೆ. ಈ ಕಾದಂಬರಿಯ ಆಶಯವೇನೆಂದರೆ ಕಾಡನ್ನು ಉಳಿಸಿ ಬೆಳೆಸುವುದು, ಪ್ರಾಣಿಗಳ ಮೇಲಿನ ಪ್ರೀತಿ ಖಾಳಜಿ ತೋರಿಸುವ ಪರಿ ತಿಳಿಸುತ್ತದೆ.
ಕಾದಂಬರಿಯಲ್ಲಿ ಕಾಡಿನ ಚಿತ್ರಣ, ಪ್ರಾಣಿ-ಪಕ್ಷಿಗಳು. ಗಿಡ-ಮರಗಳು ಕಾಣಸಿಗುತ್ತವೆ. ‘ಮಳೆಯಿಲ್ಲದೇ ಕಾಡು ಬರಿದಾಗುತ್ತಿದೆ. ಪ್ರಾಣಿಗಳು ನೀರಿಲ್ಲದೇ, ಆಹಾರವಿಲ್ಲದೇ ಸಾಯುತ್ತಿವೆ’ ಈ ಎಲ್ಲಾ ನೋವನ್ನು ಮೊಲವು ಚಿಂಟು ಮತ್ತು ಪಿಂಟುವಿನ ಹತ್ತಿರ ಹೇಳಿಕೊಳ್ಳುತ್ತದೆ. ಇದಕ್ಕೆ ಪರಿಹಾರವಾಗಿ ಪ್ರಾಣಿಗಳ ತರಬೇತಿ ಕೇಂದ್ರವನ್ನು ಸ್ಥಾಪಿಸಿ. ಅವುಗಳಿಗೆ ತರಬೇತಿ ಕೊಟ್ಟು, ಅವುಗಳಿಗೆ ಸೂಕ್ತವಾದ ಕೆಲಸವನ್ನು ಕೊಟ್ಟರೆ ಅನುಕೂಲವಾಗುವುದೆಂದು’ ಚಿಂಟು,ಪಿಂಟು ಯೋಚಿಸಿ ಅವರ ತಂದೆಯನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಕರೆದುಕೊಂಡು ಹೋಗುತ್ತಾರೆ.
ಜಿಲ್ಲಾಧಿಕಾರಿಗಳಿಗೆ ‘ಪ್ರಾಣಿಗಳ ತರಬೇತಿ ಕೇಂದ್ರವನ್ನು ಸ್ಥಾಪಿಸಬೇಕೆಂದು ಪತ್ರದ ಮೂಲಕ ಮನವಿ ಮಾಡಿಕೊಳ್ಳುತ್ತಾರೆ. ಜಿಲ್ಲಾಧಿಕಾರಿಗಳು, ಮಂತ್ರಿಗಳು ಈ ಯೋಜನೆಗೆ ಒಪ್ಪಿಗೆ ಸೂಚಿಸಿ ಅದರಂತೆ ಕಾರ್ಯರೂಪಕ್ಕೆ ತರುತ್ತಾರೆ. ಎಲ್ಲಾ ಪ್ರಾಣಿಗಳಿಗೂ ನೀರು ಆಹಾರ ಸಿಕ್ಕು ಖುಷಿಯಾಗುತ್ತವೆ. ಈ ಯೋಜನೆಯಿಂದ ಪ್ರಾಣಿಗಳಿಗೆ ಒಳಿತಾಗಿ ಯಶಸ್ವಿಯಾಗುತ್ತದೆ. ಈ ಎಲ್ಲಾದಕ್ಕೂ ಕಾರಣಕರ್ತರಾದ ‘ಚಿಂಟು-ಪಿಂಟು ಮತ್ತು ಮಿಂಚುವನ್ನು ಸರ್ಕಾರವು ಸನ್ಮಾನ ಮಾಡುತ್ತದೆ.
ಒಟ್ಟಾರೆ ಈ ಮಕ್ಕಳ ಕಾದಂಬರಿಯು ಮಕ್ಕಳಿಗಾಗಿ ಅಲ್ಲದೇ ದೊಡ್ಡವರಿಗೂ ಒಂದು ಸಂದೇಶ ಕೊಡುತ್ತದೆ. ಶ್ರೀ ಸತೀಶ್ ಸರ್ ಕಾದಂಬರಿಯನ್ನು ಸರಳವಾದ ವಾಕ್ಯಗಳಲ್ಲಿ ಬರೆದುದರಿಂದ ಮಕ್ಕಳಿಗೆ ಓದಲು ಅನುಕೂಲವಾಗಿದೆ.
ಚೈತ್ರಾ ವಿ ಮಾಲವಿ