ಡಿಸೆಂಬರ್ 10: ವಿಶ್ವ ಮಾನವ ಹಕ್ಕುಗಳ ದಿನದ ವಿಶೇಷ ಲೇಖನ-ಕೆ. ಎನ್. ಚಿದಾನಂದ

ಡಿಸೆಂಬರ್ 10:

ವಿಶ್ವ ಮಾನವ ಹಕ್ಕುಗಳ ದಿನದ ವಿಶೇಷ ಲೇಖನ-

ಕೆ. ಎನ್. ಚಿದಾನಂದ

ಕಾಲಚಕ್ರ ನಿರಂತರ ಬದಲಾವಣೆಗಳಿಂದ ಕೂಡಿದೆ. ಅನಾದಿ ಕಾಲದಿಂದಲೂ ಮಾನವನ ಚಿಂತನಾ ಲಹರಿ ನಿರಂತರವಾಗಿ ಬದಲಾವಣೆಗೊಳಪಟ್ಟಿದೆ. ಕಾಲವು ಮನಷ್ಯನನ್ನು ಅನಾಗರೀಕತೆಯಿಂದ ನಾಗರೀಕತೆಯೆಡೆಗೆ ಸಾಗಿಸುತ್ತಾ ಬಂದಿದೆ. ಒಂದೊಮ್ಮೆ ಪ್ರೀತಿ , ದಯಾ ಗುಣಗಳಿಂದ ದೂರವಿದ್ದ ಬರ್ಬರ ಜನಾಂಗಗಳು ಮೃದು ಸ್ವಭಾವದ ಜನಾಂಗದವರನ್ನು ಹಿಂಸಿಸುತ್ತಿದ್ದುದು, ಮಾರಾಟ ಮಾಡುತ್ತಿದ್ದುದು, ಗುಲಾಮರಂತೆ ನಡೆಸಿಕೊಳ್ಳುತ್ತಿದ್ದುದು, ರಾಕ್ಷಸೀ ಪ್ರವೃತ್ತಿಯಿಂದ ಮೆರೆಯುತ್ತಿದ್ದುದು ಇತಿಹಾಸದ ಕಾಲಗರ್ಭದಲ್ಲಿ ಬೆಂಕಿಯ ಬಿಸಿಕೆಂಡವಾಗಿದೆ. ಆದರೆ ಬೆಳವಣಿಗೆ ಮತ್ತು ವಿಕಾಸಗಳ ವಿವಿಧ ಹಂತಗಳಲ್ಲಿ ಮಾನವನ ಗುಣ ಸ್ವಭಾವಗಳು ಪರಿವರ್ತನೆ ಹೊಂದಿವೆ.

ಮಾನವ ಹೇಗೆ ಸಮಾಜ ಜೀವಿಯಾಗಿದ್ದಾನೋ ಹಾಗೆಯೇ ರಾಜಕೀಯ ಜೀವಿಯೂ ಆಗಿದ್ದಾನೆ ಎಂಬುದು ಗ್ರೀಕ್ ದೇಶದ ಪ್ರಸಿದ್ಧ ರಾಜ್ಯಶಾಸ್ತ್ರಜ್ಞ ಅರಿಸ್ಟಾಟಲ್ ರವರ ಹೇಳಿಕೆಯಾಗಿದೆ. ಮುಂದುವರಿದಂತೆ ಮನುಷ್ಯನು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳೊಂದಿಗೆ ಆರ್ಥಿಕ , ಸಾಂಸ್ಕೃತಿಕ, ವೈಜ್ಞಾನಿಕ, ವೈಚಾರಿಕ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗಳನ್ನು ಮಾಡುತ್ತಾ ಬಂದಿದ್ದಾನೆ. ಈ ಎಲ್ಲಾ ಕ್ಷೇತ್ರಗಳ ಮೂಲ ಕರ್ತೃ
ಮನುಷ್ಯನೇ ಆಗಿದ್ದಾನೆ ಎಂಬುದನ್ನು ನಾವ್ಯಾರೂ  ಮರೆಯುವಂತಿಲ್ಲ.

ಇತಿಹಾಸದ ಇಣುಕು ನೋಟದಲ್ಲಿ ಒಮ್ಮೆ ಒಳಹೊಕ್ಕಿ ನೋಡಿದಾಗ ಅನಾದಿ ಕಾಲದ ಬರ್ಬರ ಜನಾಂಗಗಳು ಮಾನವನ ಯಾವುದೇ ಹಕ್ಕುಗಳನ್ನು ಚಿಂತಿಸಿಯೇ ಇರಲಿಲ್ಲ. ಕಾಲ ಸರಿದಂತೆ ಚಿಂತನೆಗಳು ಬೆಳಕಿಗೆ ಬಂದವು. ಮಾನವನು ಇತರೆಲ್ಲಾ ಪ್ರಾಣಿಗಳಿಗಿಂತ ವಿಭಿನ್ನ ಮತ್ತು ವಿಶಿಷ್ಠನಾಗಿರುವುದರಿಂದ ಆತನ ಬದುಕಿನ ಶೈಲಿಯೂ ವೈವಿಧ್ಯಮಯವಾಗಿದೆ. ಮಾನವ ಸ್ವತಂತ್ರ ಜೀವಿಯಾಗಿರಬೇಕು ಎಂಬುದನ್ನು ಚಿಂತಿಸಿದ ಮನುಷ್ಯ ಆತನ ಹಕ್ಕುಗಳ ಮೇಲೆ ದಿನೇ ದಿನೇ ಗಮನಹರಿಸುತ್ತಾ ಬಂದನು. ಮಾನವನ ಯಾವುದೇ ಹಕ್ಕುಗಳು ಯಾವುದೇ ದೃಷ್ಠಿಯಿಂದಲೂ ಹರಣವಾಗಬಾರದು ಎಂಬ ಸರ್ವಶ್ರೇಷ್ಠ ಚಿಂತನೆಯನ್ನು ಜಾಗತಿಕ ಮಟ್ಟದಲ್ಲಿ ಯೋಚಿಸಿದ ಮನುಷ್ಯನು ಮಾನವ ಹಕ್ಕುಗಳು ವಿಶ್ವದ ಪ್ರತೀ ಮನುಷ್ಯನಿಗೂ ಅಗತ್ಯವಾಗಿವೆ. ಅವುಗಳ ರಕ್ಷಣೆಯೂ ಅಷ್ಟೇ ಮಹತ್ವದ್ದೆನಿಸಿದೆ. ಅವುಗಳನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಆಚರಣೆ ಮಾಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಹಿನ್ನಲೆಯಲ್ಲಿ ಮತ್ತು
ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ವಿಶ್ವಸಂಸ್ಥೆಯು 1948 ರ ಡಿಸೆಂಬರ್ 10 ರಂದು ” ಯೂನಿವರ್ಸಲ್ ಡಿಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್ ” ಎಂದು ಪ್ರಕಟಿಸಿ ಘೋಷಿಸಿ, ಅಂಗೀಕರಿಸಿತು. ಅಂದಿನಿಂದ ಇಂದಿನವರೆಗೂ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಡಿಸೆಂಬರ್ 10ನೇ ತಾರೀಖಿನಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ.

ಈ ವಿಶ್ವದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೆ ಬದುಕಲು ಅನ್ನ, ಅರಿವೆ ಮತ್ತು ಆಶ್ರಯ ಅಗತ್ಯಾಂಶಗಳಾಗಿವೆ. ಇವುಗಳನ್ನು ಹೊಂದುವುದು ಮನುಷ್ಯನ ಮೂಲಭೂತ ಹಕ್ಕುಗಳಾಗಿವೆ. ಇವುಗಳಿಲ್ಲದೆ ಮನುಷ್ಯನ ಜೀವನ ಸಾಧ್ಯವಿಲ್ಲ. ಈ ಮೂಲಭೂತ ಸೌಲಭ್ಯಗಳನ್ನು ಪಡೆದು ಕೊಳ್ಳುವುದು ಪ್ರತಿಯೊಬ್ಬ ವಿಶ್ವ ನಾಗರೀಕನ ಜನ್ಮಸಿದ್ಧ ಹಕ್ಕಾಗಿದೆ. ಪ್ರತಿಯೊಬ್ಬ ಮನುಷ್ಯನ ಈ ಹಕ್ಕುಗಳನ್ನು ಯಾರೂ ಕಿತ್ತು ಕೊಳ್ಳುವಂತಿಲ್ಲ. ಅವುಗಳು ಯಾರಿಂದಲೂ ದಮನಕ್ಕೊಳಗಾಗ ಬಾರದು. ಎಲ್ಲಾ ಮೂಲಭೂತ ಹಕ್ಕುಗಳು ಸಂರಕ್ಷಿಸಲ್ಪಡಬೇಕು. ಮನುಷ್ಯನಿಗೆ ಕನಿಷ್ಠ ಅವಶ್ಯಕತೆಗಳು ಸಿಗಬೇಕು. ಅವರ ಹಕ್ಕುಗಳಿಗೆ ಗೌರವ ಮರ್ಯಾದೆಗಳು ಸಿಗಬೇಕು ಎಂಬ ಅರಿವನ್ನು ಎಲ್ಲರಲ್ಲೂ ಮೂಡಿಸುವ ಉದ್ದೇಶದಿಂದಲೂ ಪ್ರತಿವರ್ಷ ಡಿಸೆಂಬರ್ 10 ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ.

ಪ್ರಪಂಚದಲ್ಲಿ ಪ್ರತಿಯೊಂದು ಜೀವಿಗೂ ಬದಕುವ ಹಕ್ಕಿದೆ. ಸ್ವತಂತ್ರವಾಗಿ ತಮಗೆ ಬೇಕಾದ ಹಾಗೆ ಬದುಕುವ, ಬೇಕಾದದ್ದನ್ನು ತಿನ್ನುವ, ತನ್ನಿಷ್ಟದ ಸ್ಥಳದಲ್ಲಿ ವಾಸಿಸುವ, ಎಲ್ಲೆಂದರಲ್ಲಿ ಓಡಾಡುವ ಹಕ್ಕಿದೆ. ಇದನ್ನೇ ಮಾನವ ಹಕ್ಕುಗಳು ಎಂದು ಕರೆಯಲಾಗುತ್ತದೆ. ಯಾವುದೇ ಜಾತಿ, ಧರ್ಮ, ಲಿಂಗ, ಜನಾಂಗ, ಭಾಷೆ, ಬಣ್ಣ, ಆರ್ಥಿಕ ಮತ್ತು ರಾಜಕೀಯ ಅಥವಾ ಇತರೆ ಅಭಿಪ್ರಾಯಗಳು, ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲಾ ಮಾನವರು ಸಮಾನರು. ಎಲ್ಲರೂ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುವುದು ಮಾನವ ಹಕ್ಕುಗಳ ಮೂಲ ಉದ್ದೇಶವಾಗಿದೆ.

ಚರಿತ್ರೆಯ ಬಹುತೇಕ ಸಂದರ್ಭಗಳಲ್ಲಿ ಮಾನವನ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನಗಳೇ ನಡೆದಿವೆ. ಈ ಎಲ್ಲಾ ಪ್ರಯತ್ನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಮತ್ತೊಬ್ಬರ ಬದುಕಿನ ಹಕ್ಕನ್ನು ಕಸಿಯುವುದು, ಅವರಿಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುವುದು ಮುಂತಾದ ಅಮಾನವೀಯ ಕೃತ್ಯಗಳು ಇದರ ವ್ಯಾಪ್ತಿಯೊಳಗೆ ಬರುತ್ತವೆ.

ಪ್ರತಿಯೊಬ್ಬ ಮನುಷ್ಯನೂ ತನ್ನ ಹಕ್ಕುಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು ಮತ್ತು ಅವುಗಳ ಹರಣವಾದಾಗ ರಕ್ಷಣೆ ಪಡೆಯ ಬೇಕು ಎಂಬ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವಿಶ್ವಮಟ್ಟದಲ್ಲಿ ಮಹತ್ವವನ್ನು ಪಡೆದಿದೆ. ವಿಶ್ವದ ಪ್ರತೀ ವ್ಯಕ್ತಿಗೂ ಬದುಕುವ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು, ಶೋಷಣೆಯ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸುವ ಹಕ್ಕು , ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು, ಅಗತ್ಯವೆನಿಸಿದಾಗ ಕಾನೂನು ಪರಿಹಾರಗಳನ್ನು ಪಡೆಯುವ ಹಕ್ಕುಗಳು, ವಾಕ್ ಸ್ವಾತಂತ್ರ್ಯ, ಸಾಮಾಜಿಕ ಭದ್ರತೆ, ಸಂಘಟನೆ, ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ ಹೊಂದುವ ಹಕ್ಕುಗಳು ಮಾನವನ ಪ್ರಮುಖ ಮೂಲಭೂತ ಹಕ್ಕುಗಳಾಗಿವೆ.

ಪ್ರತೀ ವರ್ಷವೂ ವಿಶ್ವಸಂಸ್ಥೆಯ ಒಂದೊಂದು ವಿಶೇಷವಾದ ವಿಷಯಗಳಡಿಯಲ್ಲಿ ಥೀಮ್ ಅನ್ನು ಇಟ್ಟುಕೊಂಡು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಣೆ ಮಾಡುತ್ತದೆ. ಈ ವರ್ಷ ಅಂದರೆ 2023 ರ ಥೀಮ್ ಹೀಗಿದೆ : “ಮಾನವ ಹಕ್ಕುಗಳ ಸಂಸ್ಕೃತಿಯನ್ನು ಭವಿಷ್ಯದಲ್ಲಿ ಏಕೀಕರಿಸುವುದು ಮತ್ತು ಉಳಿಸಿಕೊಳ್ಳುವುದು” ಎಂದು ಘೋಷಿಸಿದೆ. 2022ರ ಮಾನವ ಹಕ್ಕುಗಳ ದಿನದ ಥೀಮ್ ಹೀಗಿತ್ತು : ” ಘನತೆ, ಸ್ವಾತಂತ್ರ್ಯ ಮತ್ತು ಎಲ್ಲರಿಗೂ ನ್ಯಾಯ ” [ DIGNITY, FREEDOM, AND JUSTICE FOR ALL ]   ಎಂದು ಘೋಷಿಸಿತ್ತು.

ಇತಿಹಾಸದ ಕಾಲಘಟ್ಟದಲ್ಲಿ ನಡೆದಂತಹ ಮಾನವ ಹಕ್ಕುಗಳನ್ನು ದಮನ ಮಾಡಿದ ಅನೇಕ ಯುದ್ಧಗಳು, ಅಮೇರಿಕಾದ ಜನತೆ ನಾಗರೀಕ ಹಕ್ಕುಗಳಿಗಾಗಿ ಮಾಡಿದ ಹೋರಾಟ,
1789 ರ ಫ್ರಾನ್ಸ್ ನ ಮಹಾಕ್ರಾಂತಿ , 1917 ರ ರಷ್ಯಾ ಕ್ರಾಂತಿ, ಭಾರತದ ಸ್ವಾತಂತ್ರ್ಯ ಚಳವಳಿ ಮುಂತಾದ ಚಾರಿತ್ರಿಕ ಘಟನೆಗಳು ಮಾನವ ಹಕ್ಕುಗಳ ಶೋಷಣೆಯ ವಿರುದ್ಧವಾಗಿದ್ದವು ಎಂಬುದನ್ನು ಸ್ಪಷ್ಟಪಡಿಸುತ್ತವೆ. ವಿಶ್ವದ ಮೊದಲನೇ ಮಹಾ ಸಮರ (1914 – 1918) ಹಾಗೂ ಎರಡನೇ ಮಹಾ ಸಮರ (1939 – 1945 ) ಗಳು ಮಾನವ ಹಕ್ಕುಗಳನ್ನು ನೇರವಾಗಿ ಹತ್ತಿಕ್ಕಿದವು. ಎರಡನೇ ಮಹಾಯುದ್ಧದ ನಂತರ ವಿಶ್ವದಲ್ಲಿ ಶಾಂತಿ ಮತ್ತು ಸುಭದ್ರತೆಯನ್ನು ಸ್ಥಾಪಿಸುವ ಸಲುವಾಗಿ 1945ರ ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಸ್ಥಾಪನೆಯಾಯಿತು. ಮಾನವ ಹಕ್ಕುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟ ವಿಶ್ವಸಂಸ್ಥೆಯು ಮಾನವ ಹಕ್ಕುಗಳ ದಿನಾಚರಣೆಗಾಗಿ ಡಿಸೆಂಬರ್ 10ನ್ನು ಗುರ್ತಿಸಿತು. ಅದರಂತೆ ವಿಶ್ವದ ಎಲ್ಲಾ ರಾಷ್ಟಗಳಲ್ಲೂ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಸಂರಕ್ಷಣಾಗಿ ಮಾನವ ಹಕ್ಕುಗಳ ಆಯೋಗವನ್ನು ರಚಿಸಲಾಗಿದೆ.

ಮಾನವ ಹಕ್ಕುಗಳ ಸಂರಕ್ಷಣೆಗೆ ಪೂರಕವಾಗಿ ನಮ್ಮ ದೇಶ ಭಾರತದಲ್ಲಿಯೂ ರಾಷ್ಟೀಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗ,  ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವರ್ಗದ ರಾಷ್ಟ್ರೀಯ ಆಯೋಗಗಳನ್ನು ರಚಿಸಲಾಗಿದೆ. ಇದೇ ರೀತಿಯಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿಯೂ ಆಯೋಗಗಳು ಕಾರ್ಯಪ್ರವೃತ್ತವಾಗಿವೆ. ಭಾರತ ಸ್ವಾತಂತ್ರ್ಯಾ ನಂತರ ರಚನೆಯಾದ ನಮ್ಮ ಸಂವಿಧಾನದಲ್ಲಿಯೂ ಪ್ರತಿಯೋರ್ವ ಭಾರತವಾಸಿಯ ಮೂಲಭೂತ ಹಕ್ಕುಗಳನ್ನು ನಮೂದಿಸಲಾಗಿದೆ. ವಿಶ್ವಸಂಸ್ಥೆಯ  ಸಾಮಾನ್ಯ ಸಭೆಯಲ್ಲಿಯೂ ವಿಶ್ವದಾದ್ಯಂತ ಮಾನವ ಹಕ್ಕುಗಳು ಸುರಕ್ಷಿತವಾಗಿರಬೇಕು ಎಂಬುದನ್ನು ಭಾರತ ಸಮರ್ಥಿಸುತ್ತಾ ಬಂದಿದೆ. ಜನಾಂಗ ಹತ್ಯೆ ಎಲ್ಲಾ ವಿಧದ ಶೋಷಣೆ ಹಾಗೂ ದಬ್ಬಾಳಿಕೆಗೆ ಭಾರತ ವಿರೋಧ ವ್ಯಕ್ತಪಡಿಸುತ್ತದೆ. ವಿಶ್ವಸಂಸ್ಥೆ ಹಾಗೂ ಇನ್ನಿತರ ಜಾಗತಿಕ ವೇದಿಕೆಯ ಮೂಲಕ ಭಾರತ ಮಾನವ ಹಕ್ಕುಗಳ ಸಂರಕ್ಷಣೆಗೆ ಯತ್ನಿಸುತ್ತಿದೆ. ಭಾರತವು ವಸುದೈವ ಕುಟುಂಬಕಂ ಎಂದು ವಿಶ್ವಕ್ಕೆ ಸಂದೇಶ ನೀಡಿದೆ. ಜಗತ್ತಿನ ಜನರೆಲ್ಲರೂ ಸಮಾನರು. ಯಾರೂ ಮೇಲಲ್ಲ, ಕೀಳಲ್ಲ ಎಂದು ಸಾರಿದೆ. ನಾವೆಲ್ಲರೂ ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವ ಮತ್ತು ಅವುಗಳನ್ನು ಸಂರಕ್ಷಿಸುವ ಪಣ ತೊಡೋಣ. ವಿಶ್ವದ ಎಲ್ಲ ನಾಗರೀಕರಿಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಶುಭಾಷಯಗಳು.  


Leave a Reply

Back To Top