ಅಂಕಣ ಸಂಗಾತಿ

ಹೊತ್ತಿಗೆಯೊಂದಿಗೆ ಒಂದಿಷ್ಟು ಹೊತ್ತು

ಸುಜಾತಾ ರವೀಶ್

ಕಾವ್ಯ ಸಿಂಚನ ಕವನ ಸಂಕಲನ

ಕಾವ್ಯ ಸಿಂಚನ ಕವನ ಸಂಕಲನ
ಲೇಖಕರು ಮಂಜುಳಾ ಮೂರ್ತಿ
ಪ್ರಕಾಶಕರು ಹೆಚ್ ಎಸ್ ಆರ್ ಎ ಪ್ರಕಾಶನ ಬೆಂಗಳೂರು
ಪ್ರಥಮ ಮುದ್ರಣ 2023

ಶ್ರೇಷ್ಠ ಕವಿ ದಾರ್ಶನಿಕ ಪು ತಿ ನರಸಿಂಹಾಚಾರ್ ಅವರು ಹೇಳುತ್ತಾರೆ

ಆದಿಯಿರದ ಕೊನೆಯಿರದಾವುದೋ
ಹಾದು ಹೋದುದೀ ಜೀವದೊಳು
ಓದುಗ ನೋನೋಡೆನ್ನುವ ಪರಿ ಕವಿ ನಾಧಿಸುವನೊಳಗೆ ಬೆರಗಿನೊಳು

ಕವಿ ಮನದ ಕವಿ ಅಭಿವ್ಯಕ್ತಿ ಕಾವ್ಯ ಅದನ್ನು ಓದುವ ಓದುಗನಿಂದಲೇ ಅದಕ್ಕೆ ಪೂರ್ಣತೆ. ಈ ಕವಿ ಕಾವ್ಯ ರಸಾಸ್ವಾದನೆಯಲ್ಲಿ ಸೃಜನಶಕ್ತಿಯ ಎರಡು ಪ್ರತಿಭಾ ಪ್ರಕಾರಗಳು ವರ್ತಿಸುತ್ತವೆ. ಕವಿಯಲ್ಲಿ ಕಾರಯಿತ್ರಿಯಾಗಿ ಸಹೃದಯನಲ್ಲಿ ಭಾವಯಿತ್ರಿಯಾಗಿ .ಒಂದು ಇನ್ನೊಂದರ ಕೈಗನ್ನಡಿ ಎನ್ನಬಹುದು.

ವೃತ್ತಿಯಲ್ಲಿ ಶಿಕ್ಷಕಿಯಾಗಿ 35 ವರ್ಷ ದೀರ್ಘಕಾಲ ಸೇವೆ ಸಲ್ಲಿಸಿರುವ ಶ್ರೀಮತಿ ಮಂಜುಳಾ ಮೂರ್ತಿಯವರು ಈ ಕಾವ್ಯ ಸಿಂಚನ ಸಂಕಲನದಲ್ಲಿ ತಮ್ಮ 60 ಭಾವ ದೆಳೆಗಳನ್ನು ಬಿಡಿಸಿ ಇಟ್ಟಿದ್ದಾರೆ. ತಮ್ಮ ಇಷ್ಟದೈವ ಕೃಷ್ಣನ ಕುರಿತಾದ ಕವನಗಳು ಭಗವದ್ಭಕ್ತಿಯ ವಿಚಾರಗಳು ಪ್ರಕೃತಿ ದೇಶಭಕ್ತಿ ಕನ್ನಡ ನುಡಿಯ ಬಗೆಗಿನ ಪ್ರೀತಿ ಈ ಎಲ್ಲಾ ಆಯಾಮಗಳು ಇಲ್ಲಿ ಅವರ ಕವನಗಳಾಗಿ ಹೊರಹೊಮ್ಮಿವೆ.  ಈ ಕವನಕ್ಕೆ ಮುನ್ನುಡಿ ಬರೆದಿರುವ ಸೋದರ ಚೆನ್ನಕೇಶವ ಅವರು “ಕೆಲವು ಕವಿತೆಗಳಲ್ಲಿ ಬಹಳಷ್ಟು ಗೂಡಾರ್ಥ ಇರುವುದರಿಂದ ಏಕಾಗ್ರತೆ ವಹಿಸಿ ಓದಿದಾಗ ಕವಿಯತ್ರಿಯ ಮನದಾಳದ ಮಾತುಗಳು ಅರ್ಥವಾಗುತ್ತವೆ” ಎನ್ನುತ್ತಾರೆ. ಲೇಖಕಿ ಮಂಜುಳಾ ಮೂರ್ತಿಯವರು ತಮ್ಮ ಮನದಾಳದ ಮಾತುಗಳಲ್ಲಿ ಗುರು ಹಿರಿಯರಿಗೆ ದೇವರಿಗೆ ಹಾಗೂ ಪ್ರೋತ್ಸಾಹಿಸಿದ ಎಲ್ಲರಿಗೂ ತಮ್ಮ ವಂದನೆಗಳನ್ನು ತಿಳಿಸುತ್ತಾ ಸಾಮಾಜಿಕ ಜಾಲತಾಣದ ಬಳಗಗಳು ಅದರಲ್ಲೂ ಕನ್ನಡಮ್ಮನ ತೇರು ಅವರ ಕಾವ್ಯ ರಚನೆಗೆ ಸ್ಪೂರ್ತಿ ಪ್ರೋತ್ಸಾಹ ಕೊಟ್ಟಿದ್ದನ್ನು ಸ್ಮರಿಸಿಕೊಳ್ಳುತ್ತಾರೆ . ಆಶಯ ನುಡಿ ಗಳನ್ನಾಡಿದ ಶ್ರೀಮತಿ ಬಿಟ್ಟೀರ ಚೋಂದಮ್ಮ ಅವರು “ರಚನಕಾರರ ಮನೋಭಿಲಾಷೆ ಓದುಗರ ಮನಸ್ಸಿಗೆ ಮುದ ನೀಡುವಂತೆ ಪದಚಮತ್ಕಾರದಿಂದ ಕೂಡಿದ ಬರವಣಿಗೆಯಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಒಟ್ಟು 60 ಕವನಗಳಿರುವ ಈ ಸಂಕಲನದಲ್ಲಿ ಅವರು ತಮ್ಮ ಪ್ರಿಯ ಆರಾಧ್ಯ ದೈವ ಕೃಷ್ಣನ ಬಗ್ಗೆ ಬರೆದ ಕವನಗಳು ಬಹಳಷ್ಟು ಎಂದರೆ ಸುಮಾರು  12 ಇದೆ

ರಾಧೆಯ ಮೋಹನ ಮಾಧವ ಮುರಳಿಯೆ ಪಾದದ ಸೇವೆಗೆ ನಾನಿರುವೆ
ಕಾದಿಹೆ ತವಕದಿ ಸಾಧಿಸೆ ಪ್ರೇಮವ
ಯಾದವ ಕುಲಪತಿ ಮಾಧವನೇ

ಆದಿಪ್ರಾಸದಿಂದ ಕೂಡಿದ್ದು ರಾಧೆಯ ಮುಗ್ಧ ಪ್ರೀತಿ ಆರಾಧನೆಯನ್ನು ಇಲ್ಲಿ ಬಹಳ ಉತ್ಕೃಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅನಾದಿ ಕಾಲದಿಂದಲೂ  ಪ್ರೇಮಕ್ಕೆ ಉಪಾಸನೆಗೆ ಕೃಷ್ಣ ಎಲ್ಲರಿಗೂ ಇಷ್ಟ ದೈವ ಹಾಗಾಗಿ ಅವನ ಬಗ್ಗೆ ಅಷ್ಟೊಂದು ಕವನಗಳನ್ನು ರಚಿಸಿರುವುದು ಇವರ ಕೃಷ್ಣ ಪ್ರೀತಿಯ ದ್ಯೋತಕವೇ ಸರಿ.

ನಂತರದಲ್ಲಿ ಭಕ್ತಿ ಗೀತೆಗಳು ಸಹ ಈ ಸಂಕಲನದಲ್ಲಿ ಹೆಚ್ಚಿನ ಭಾಗ ಆಕ್ರಮಿಸಿವೆ. ಶಂಭೋ ಶಂಕರ ನಿಂದ ಹಿಡಿದು ಬಾಲ ಗಣಪ ಮುದ್ದು ಗಣಪ ದೈವ ಬಂಧು ಬಾಗುವುದು ನನ್ನ ಕಾಯ ಆತ್ಮರಾಮ ಸಂತಸ ಸಿರಿದೇವಿ ಈ ಎಲ್ಲಾ ಕವನಗಳಲ್ಲೂ ವಿವಿಧ ದೇವರುಗಳ ವರ್ಣನೆ ಮತ್ತು ಪ್ರಾರ್ಥನೆಗಳು ಕಂಡುಬರುತ್ತವೆ. ಗೇಯ ಗುಣವನ್ನು ಹೊಂದಿರುವ. ಹದವಾದ ಪದ ಪ್ರಯೋಗಗಳಿರುವ ಈ ಸಾಲುಗಳನ್ನು ಗಮನಿಸಿ

ಸಿರಿಯ ಸೋದರ ಹರಿಯ ಜಪಕರ
ವರದ ಗೌರಿಯ ರಮಣನೆ
ಶರಣು ಬಂದೆನು ಶರಣನಾದೆನು
ಹರಿಸು ದುರಿತವ ಕರುಣನೆ

ಕವಿಯತ್ರಿ ಯವರು ಗುರುಗಳ ಬಗ್ಗೆ ಸಾಕಷ್ಟು ಕವನಗಳನ್ನು ರಚಿಸಿದ್ದಾರೆ ಎಂಬುದು ಗುರುವೇ ಸರ್ವವೂ ಹರಿಹರ ಬ್ರಹ್ಮ ನಿಜಗುರು ಗುರು ಮುಂತಾದ ಕವನಗಳಿಂದ ತಿಳಿದು ಬರುತ್ತದೆ.  ತಂದೆ ತಾಯಿಗಳ ಜೊತೆಗೆ ಈ ಕವನ ಸಂಕಲನವನ್ನು ಗುರುಗಳಿಗೆ ಸಮರ್ಪಿಸಿರುವುದು ಅವರ ಗುರು ಭಕ್ತಿಯ ಪ್ರತೀಕ. ಅವರ ಗುರುಭಕ್ತಿಯ ಝಲಕ್ ಈ ಸಾಲುಗಳಲ್ಲಿ ನೋಡಿ

ಮನದಿ ಆಸೆಯ ತುಂಬುತ ಭವಿಷ್ಯವಿರಿಸುವ ಗುರು
ನನ್ನೊಳ್ಗೆ ತಾನೆ ಅರಿವಾತ್ಮ ಭರವಸೆಯೆ ಗುರು
ತನುವ ಕಷ್ಟದಲ್ಲಿರಿಸಿ ಉಳಿಯ ಪೆಟ್ಟವನೆ ಗುರು
ಜನನಿ ಜನಕನೆನಿಸುತ ಮೂರ್ತಿ ಎನಿಸಿದವ ಗುರು

ಇವರ ಕನ್ನಡ ಹಕ್ಕಿಮರಿ ಕನ್ನಡಾಂಬೆ ಕವಿತೆಗಳು ಕನ್ನಡದ ಬಗೆಗಿನ ಅದಮ್ಯ ಪ್ರೇಮವನ್ನು ಸಾರುತ್ತವೆ. ಕನ್ನಡಾಂಬೆಗೆ ನಮನ ಸಲ್ಲಿಸುವುದು ಹೀಗೆ

ನಿನ್ನ ಪಾದಕ್ಕೆ ನನ್ನ ಶಿರವಾಗಲಿ
ನಿನ್ನ ಮಹಿಮೆಯ ಕೊರಳು ಹಾಡಲಿ
ನಿನ್ನ ಹಿರಿಮೆಯ ಹಾಡಿ ಹಾಡಿ ಹೊಗಳಲಿ ಕರಗಳು
ನಿನ್ನ ಗರಿಮೆಯ ಬರೆಯಲಿ
ತನು ಸೇವೆಯಲಿ ನಿನ್ನ ಕೀರ್ತಿ ಬೆಳಗಲಿ

ಬಾನ ಮೋಡ ಬಿದಿಗೆ ಚಂದ್ರಮ ಮುಂಜಾವು ಸ್ಪೂರ್ತಿ ಚಿಗುರು ಇವೆಲ್ಲ ಕವನಗಳು ಇವರ ಪ್ರಕೃತಿ ಪ್ರೀತಿಯ ಸಂಕೇತಗಳು. ಬಾನಿನ ಪಯಣದ ರೀತಿಯನ್ನು ಬಣ್ಣಿಸುವ ಸೊಗಸು ನೋಡಿ

ಸಾಗಿದೆ ಮೋಡವು ದೂರದ ಊರಿಗೆ ಬಾಗಿದ ಬಿಲ್ಲು ಮಿಂಚಿನ ದನಿಯಲಿ
ಮಾಗಿದ ಪಯಣ ಹರುಷದಲಿ

ಪ್ರಕೃತಿಯ ವರ್ಣನೆ ಯೊಂದಿಗೆ ಅದನ್ನು ರಕ್ಷಿಸಬೇಕೆಂಬ ಸಾಕ್ಷೀಪ್ರಜ್ಞೆ ಇವರಲ್ಲಿ ಸದಾ ಕಾಲ ಚಿರಂತನ ಎಂಬುದಕ್ಕೆ ಪರಿಸರ ರಕ್ಷಣೆಯ ಈ ಪರಿಸರ ಕವನದ ಸಾಲುಗಳೆ ಉದಾಹರಣೆ

ನಮ್ಮದೇ ಮಣ್ಣೆಂಬ ಭಾವ ಚಿರವಿರಲಿ ಹೆಮ್ಮೆಯ ನದಿ ಕಲರವ ಮಾತಾಗಿರಲಿ ಸಮಾನದಿ ಸುಳಿವ ಗಾಳಿ ಉಸಿರಾಗಿರಲಿ ಹೆಮ್ಮರದ ಹಸಿರೆಲ್ಲ ನಮ್ಮ ರಕ್ಷಕರಾಗಿರಲಿ ಪರಿಸರವ ರಕ್ಷಿಸುವ ಮಾನವರು ನಾವಾಗಲಿ

ಕವಿ ತನ್ನ ಅಂತರಂಗದ ಒಳಗೆ ಲೀನನಾಗುವನಾದರೂ ಸದಾ ಕಾಲ ಹಾಗೆ ಇರಲು ಸಾಧ್ಯವಿಲ್ಲ. ತಾನು ಇರುವ ಸಮಾಜದ ಬಗ್ಗೆ ಅವನ ಕಾಳಜಿ ಅವನ ರಚನೆಗಳಲ್ಲಿ ವ್ಯಕ್ತವಾಗಬೇಕು ಆದಾಗ ಮಾತ್ರ ಸಾಹಿತ್ಯ ಸಮಾಜಕ್ಕೆ ಒಳಿತು ಮಾಡುತ್ತದೆ.  ಅದನ್ನು ಇಲ್ಲಿ ಕವಿಯತ್ರಿ ಮರೆತಿಲ್ಲ.  ದೇಶಭಕ್ತಿಯನ್ನು ಸಾರುವಂತಹ ಮೌಲ್ಯದ ಬಾವುಟ ದೇಶಭಕ್ತಿ ಬಲೇ ವಿಕ್ರಮ ಈ ಕವನಗಳಲ್ಲಿ ಪ್ರಸಕ್ತ ವರ್ತಮಾನ ಪರಿಸ್ಥಿತಿ ಹಾಗೂ ದೇಶದ ಬಗೆಗಿನ ಪ್ರೇಮ ತುಂಬಾ ಸೊಗಸಾಗಿ ವ್ಯಕ್ತವಾಗುತ್ತದೆ. ನೊಂದ ಮನಸ್ಸುಗಳಿಗೆ ಭರವಸೆ ತುಂಬುವ ಸ್ಪೂರ್ತಿ ಉಕ್ಕಿಸುವಂತಹುವು  ಈ ಸಾಲುಗಳು

ಮುಡುಪಿರಲಿ ಜೀವನದಿ ಉತ್ಸಾಹದ ಹುರುಪಿರಲಿ
ಬಿಡುತಲಿರು ಬೆಳೆಯುತಲಿ ಚಿಂತೆಯನು ಬಿರಿಯುತಲಿ
ತೊಡಕುಗಳ ತೊಲಗಿಸುತ ಕುಂದುಗಳ ಸರಿಸುತಲಿ
ಕಡೆಗಣಿಸೆ ತಡೆ ಇರದೆ ಹಸಿರಸಿರಿ ಹರಡುತಲಿ.

ಶಿಕ್ಷಕಿಯಾಗಿ ಒಬ್ಬ ಒಳ್ಳೆಯ ಸತ್ಪ್ರಜೆಯಾಗಿ ಮಾನವತೆಯ ಪ್ರತಿನಿಧಿಯಾಗಿ ತಮ್ಮ ಈ ಎಲ್ಲಾ ಅನುಭವಗಳ ಸಾರವನ್ನು ಮೂಸೆಯಲ್ಲಿ ಎರಕಹೊಯ್ದಂತೆ ತಮ್ಮ ಈ ಕವನ ರಚನೆಗಳನ್ನು ಮಾಡಿರುವ ಕವಿಯತ್ರಿಯವರು ತಮ್ಮ ಮಾಗಿದ ಪರಿಪಕ್ವ ಮನಸ್ಥಿತಿಯ ಪ್ರತಿಬಿಂಬವನ್ನು ಇಲ್ಲಿ ಮೂಡಿಸಿದ್ದಾರೆ. ಸರ್ವೇ ಜನಾ ಸುಖಿನೋ ಭವಂತು ಎಂಬ ಸಂದೇಶವನ್ನು ಅಳವಡಿಸಿಕೊಂಡು ತಮ್ಮ ಈ ಪ್ರಥಮ ಸಂಕಲನವನ್ನು ಹೊರತಂದಿದ್ದಾರೆ  ಜೀವನದ ಇನ್ನೂ ಹಲವು ಮಗ್ಗಲುಗಳ ಪರಿಸ್ಥಿತಿಗಳ ಆಯಾಮಗಳನ್ನು ಕವಿ ದೃಷ್ಟಿಯಿಂದ ಕಂಡು ಸೃಷ್ಟಿ ಮಾಡಿ ಕನ್ನಡ ಸಾಹಿತ್ಯಕ್ಕೆ ಮತ್ತಷ್ಟು ಕೊಡುಗೆ ಕೊಡಲಿ ಎಂಬ ಹಾರೈಕೆ.

ನಮ್ಮ ಮೈಸೂರು ಮಲ್ಲಿಗೆ ಕವಿ ಕೆಎಸ್ ನರಸಿಂಹಸ್ವಾಮಿ ಅವರು ತಮ್ಮ ಎದೆ ತುಂಬಾ ನಕ್ಷತ್ರ ಕವನ ಸಂಕಲನದಲ್ಲಿ ಕಿರಿಯ ಕವಿಗೆ ಕೆಲವು ಹಿತ ನುಡಿಗಳ ನಾಡಿದ್ದಾರೆ ಅದರ ಕೆಲವು ಸಾಲುಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ

ಮಾತಿಗೂ ಮೌನಕೂ ಇರುವ ಅಂತರದಲ್ಲಿ
ಮೂಡುವುದು ಬಾನಾಡಿಯಂತೆ ಭಾವ
ನೊಂದ ಬದುಕಿಗೆ ಬೇಕು ಸಾವಿರ ಸಮಾಧಾನ
ಅದರ ಜೊತೆಗೆ ಬರಲಿ ನಿನ್ನ ಕವನ


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

One thought on “

Leave a Reply

Back To Top