ಮಣ್ಣು ದಿನಕ್ಕೆ ಒಂದು ಲೇಖನ ನಂದಿನಿ ಹೆದ್ದುರ್ಗ ಅವರ ಲೇಖನ-ಸಣ್ಣ ಸಂಗತಿ

ಕಾವ್ಯ ಸಂಗಾತಿ

ನಂದಿನಿ ಹೆದ್ದುರ್ಗ

ಮಣ್ಣು ದಿನಕ್ಕೆ ಒಂದು ಲೇಖನ

ಸಣ್ಣ ಸಂಗತಿ

ಆ ಬದಿಯಿಂದ ಅವರು  ‘ಈ ಹೂವು ನೋಡು ಎಷ್ಟು ಚಂದವಿದೆ,ದಳ ಬಣ್ಣ ಎರಡೂ ಸೊಗಸು.’
ಅಂತ ಅದನ್ನು ಕಿತ್ತು ಫೋಟೋ ಕ್ಲಿಕ್ಕಿಸಿ ಕಳಿಸಿದ್ರು.
ಅದು ಶಂಖಪುಷ್ಪದ ಹೂವು.ಗಾಢ ನೀಲಿ ಬಣ್ಣ.ಅದರ ಪರಾಗ ಮತ್ತು ರೇಣು ಅಷ್ಟಾಗಿ ಹೊರಗೆ ಗೋಚರಿಸುವುದಿಲ್ಲ.
ಹೂವಿನ ಗಾಢ ಬಣ್ಣ ಮತ್ತು ಒತ್ತೊತ್ತು ಪಕಳೆಗಳು ಬಲು ಸೊಗಸು.ಇದು ಪೂಜೆಗೂ ಶ್ರೇಷ್ಠ.
ದೇವರಿಗೂ ಹೊಸಿಲಿಗೂ ಹೂದಾನಿಗೂ ಇಟ್ಟು ಅಲಂಕರಿಸಿದರೆ‌ ನೋಡಲೂ ಚಂದ.
ವೈದ್ಯಕೀಯವಾಗಿ ಕೂಡ ಶಂಖಪುಷ್ಪ ಮಹತ್ವದ ಸಸ್ಯ.

ಇದಾವುದೂ ವಿಷಯ ಅಲ್ಲ.
ಶಂಖಪುಷ್ಪ ದ್ವಿದಳ ಧಾನ್ಯದ ಜಾತಿಗೆ ಸೇರಿದ ಸಸ್ಯ. Leguminous plants.
ಅವರು ‘ಹೂವ ಕಿತ್ತು’ ಅಂದ ಕೂಡಲೆ ನಂಗೆ ಕಿರಿಕಿರಿ.
ಆ ಹೂವಿಗೆ ಪರಾಗಸ್ಪರ್ಶವಾಗಿ ನಾಕಾರು ದಿನದಲ್ಲಿ ಕಾಯಿ ಕಟ್ಟುತ್ತಿತ್ತು.‌ಕಾಯಿಯ ಆ ಬೀಜಗಳು ಉದುರಿ ಮತ್ತೆಲ್ಲೋ ಮತ್ತೊಂದು ಶಂಖಪುಷ್ಪ ಸಸಿ ಬೆಳೆಯುತ್ತಿತ್ತು. ಈ‌ ದ್ವಿದಳ ಧಾನ್ಯದ ಜಾತಿಗೆ ಸೇರಿದ ಸಸಿಗಳು ವಾತಾವರಣದ ಸಾರಜನಕವನ್ನು ಸೆಳೆದುಕೊಂಡು, ಸ್ಥಿರೀಕರಿಸಿ ತಮ್ಮ ಗಂಟು ಬೇರುಗಳಲ್ಲಿ ಶೇಖರಿಸಿ ಇಡುತ್ತವೆ.
ಮಣ್ಣಿನ ಫಲವತ್ತತ್ತೆಗೆ ಬೇಕಾದ ಮೂರು  ಪ್ರಮುಖ ಪೋಷಕಾಂಶಗಳಲ್ಲಿ ಒಂದಾದ ಸಾರಜನಕ‌ ಮುಫತ್ತಾಗಿ ಮಣ್ಣಿಗೆ ಈ ಮೂಲಕ ಲಭಿಸುತ್ತದೆ.


ನೆಲದಾಯಿ ಎಷ್ಟು ಬುದ್ದಿವಂತೆ ನೋಡಿ. ತನಗೆ ಬೇಕಾಗಿದ್ದನ್ನು ತಾನೇ ಪಡೆದುಕೊಳ್ಳುವ ಕಲೆಗಾರಿಕೆ ತಂತ್ರ ಎರಡೂ ಈ ಮಣ್ಣುಮಾತೆಗೆ ಸಿದ್ದಿಸಿದೆ.
ಇಳುವರಿಯ ಮೋಹದಲ್ಲಿ ನಾವು ಹೊರಗಿಂದ ಸಾಕಷ್ಟು ಗೊಬ್ಬರ ಸ್ಪ್ರೇಗಳನ್ನು ತಂದು ಸುರಿಯುತ್ತೇವೆ.

ಸಾಮನ್ಯ ರೈತನೊಬ್ಬನ ಕೃಷಿ ಜ್ಞಾನವನ್ನೂ ನಾವಿಲ್ಲಿ ಗಮನಿಸಬಹುದು.
ಅವರು ಮುಖ್ಯ ಬೆಳೆ ಬೆಳೆಯುವ ಮುನ್ನ ಹುರುಳಿ ಅವರೆ ಗಳಂತಹ ದ್ವಿದಳ ಧಾನ್ಯಗಳನ್ನು ಉಳುಮೆ ಸಮಯದಲ್ಲಿ ಚೆಲ್ಲಿ ಅವು ಸಾಕಷ್ಟು ಬೆಳೆದು‌ ಹೂವೂ ,ಹೀಚುಗಟ್ಟುವ ತನಕ ಉಳಿಸಿಕೊಂಡು ಮತ್ತೊಮ್ಮೆ ಉಳುಮೆ ಮಾಡುತ್ತಾರೆ.
ಮಣ್ಣಿಗೆ ಬೇಕಾದ ಸಾರಜನಕದ ಜೊತೆಗೆ ಟನ್ನುಗಟ್ಟಲೆ ಹಸಿರೆಲೆ ಗೊಬ್ಬರವೂ  ಈ ಒಂದೇ ಪ್ರಯೋಗದಿಂದ ಲಭಿಸುತ್ತದೆ.
ಜೊತೆಗೆ ಅಲ್ಲಿ ಅರಳಿದ ಹೂವುಗಳಿಂದ ದುಂಬಿ ಜೇನು ಜಾತಿಯ ಕೀಟಗಳಿಗೆ ಉತ್ತಮ ಆಹಾರ ಲಭಿಸುತ್ತದೆ. ಹೀಚು ಮೊಗ್ಗುಗಳನ್ನು ಮತ್ತೊಂದು ಜಾತಿಯ ಕೀಟಗಳು, ಕೆಲವು ಹಕ್ಕಿಗಳೂ ತಿನ್ನುತ್ತವೆ. ಅಂದರೆ ಇದು ಒಂದು ಮುದ್ದಾದ ಆಹಾರ ಸರಪಳಿ.

ಇದನ್ನು ಎಲ್ಲೇ ತುಂಡರಿಸಬೇಕೆಂದರೂ ಮಣ್ಣಿನ ಮಮತೆ ಇರುವ ಯಾರಿಗೇ ಆದರೂ ಕಸಿವಿಸಿಯಾಗುತ್ತದೆ.

ಹಿತ್ತಿಲು ತೋಟ ಬೇಲಿ ಹೀಗೆ..ಎಲ್ಲೇ  ಕಳೆ ಗಿಡಗಳು ಹೂವು ತುಂಬಿ ನಿಂತಿದ್ರೆ ಅದನ್ನು ಕೀಳಲು ಮನಸ್ಸಾಗದೇ  ಹಾಗೇ ಬಿಡುವುದು ನನ್ನ ದುರಾಭ್ಯಾಸಗಳಲ್ಲಿ ಒಂದು.
ಕಾರಣ ಇಷ್ಟೇ. ಆ ಹೂವುಗಳು ಜೇನಿಗೆ ಆಹಾರ,ಅದರ ಕಾಯಿಗಳು ಕೀಟಕ್ಕೆ ಆಹಾರ…ಹೀಗೆ..
ಕೆಲವೊಮ್ಮೆ ನಾನು ಈ‌ ಮಣ್ಣಿನ ಕುರಿತು ,ಜೀವ ವ್ಯವಸ್ಥೆಯ ಕುರಿತು ಅತೀ ಭಾವುಕಳಾ ಅಂತ ನನಗೇ ಅನುಮಾನ ಆಗ್ತದೆ..
ಅದೇನಾದರೂ ಇರಲಿ.
ಎಲ್ಲಿಂದಲೋ ಬಂದ ಪುಟ್ಟ ಹಕ್ಕಿಯೊಂದು ಕಳೆ ಹೂವಿನ ಒಳಕ್ಕೆ ತನ್ನ ಪುಟಾಣಿ ಕೊಕ್ಕು ತೂರಿ ಮಕರಂದ ಹೀರುವುದನ್ನು ನೋಡುವಾಗ ಮನಸ್ಸು ವಿಸ್ಮಿತ. ನೆಲದಾಯಿಯ ಹೊಣೆ ನಮ್ಮೆಲ್ಲರದ್ದೂ ಹೌದಲ್ಲವೆ?.
ದಿನಚರಿಯ ಸಣ್ಣಸಣ್ಣ ಬದಲಾವಣೆಗಳು ಜೀವಸಂಕುಲದ ಉಳಿವಿಗೆ ಅಗಾಧವಾಗಿ ನೆರವಾಗಬಲ್ಲದು.

ಸುಮ್ಮ್ ಸುಮ್ಮನೆ ‌ಹೂವು‌ ಕೀಳಲ್ಲ ಅಲ್ವಾ ಇನ್‌ಮುಂದೆ..?

——————————————
ನಂದಿನಿ ಹೆದ್ದುರ್ಗ

2 thoughts on “ಮಣ್ಣು ದಿನಕ್ಕೆ ಒಂದು ಲೇಖನ ನಂದಿನಿ ಹೆದ್ದುರ್ಗ ಅವರ ಲೇಖನ-ಸಣ್ಣ ಸಂಗತಿ

  1. ನಿಮ್ಮ ಲೇಖನ ಚೆನ್ನಾಗಿದೆ
    ಪುಟ್ಟ ಲೇಖನದ ಭೂಮಿಯ, ಸಸ್ಯಗಳ, ಕೀಟಗಳ ಬಗ್ಗೆ informative
    congrats

Leave a Reply

Back To Top