ಮಾಲಾ ಚೆಲುವನಹಳ್ಳಿಯವರ ‘ಕನಸು ನೆನಪಾಗುವ ಮುನ್ನ’ ಅವಲೋಕನ ಗೊರೂರುಅನಂತರಾಜು

ಪುಸ್ತಕ ಸಂಗಾತಿ

ಮಾಲಾ ಚೆಲುವನಹಳ್ಳಿಯವರ

‘ಕನಸು ನೆನಪಾಗುವ ಮುನ್ನ’

ಅವಲೋಕನ ಗೊರೂರುಅನಂತರಾಜು

ಕವಯತ್ರಿಯಾಗಿ ಕಾವ್ಯಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂಬ ಮಾಲಾ ಚೆಲುವನಹಳ್ಳಿಯವರ ಕನಸು  ನೆನ
ಪಾಗುವ ಮುನ್ನ ಕೃತಿಯಿಂದ ಈಡೇರಿಸಿದೆ. ‘ಪಟ್ಟಣದಲ್ಲಿ ಹುಟ್ಟಿ ಬೆಳೆದ  ನನಗೆ ಹಳ್ಳಿಯಲ್ಲಿ ರೈತ ಮನೆತನದ ಸೊಸೆಯಾದಾಗ ರೈತಾಪಿ ಕೆಲಸ ಕಾರ್ಯಗಳ ಜೊತೆ ಲಾಭ ನಷ್ಟ ಏರು ಪೇರುಗಳ ಬದುಕಿಗೆ ಹೊಂದಿಕೊಳ್ಳುವುದು ತುಸು ಕಷ್ಟವೆನಿಸಿ ದಿನ ಕಳೆದಂತೆ ಅದನ್ನೇ ಒಪ್ಪಿಅಪ್ಪಿಕೊಂಡು ಬದುಕುವ ಅನಿವಾರ್ಯತೆ ಹೊರತಾಗಿ ಮತ್ತೇನನ್ನೋ  ಸಾಧಿಸಬೇಕೆಂಬ ತುಡಿತ ತವಕ ಅಹರ್ನಿಶಿ ಕಾಡಿ ಸಾಹಿತ್ಯ ಇನ್ನಿಲ್ಲದಂತೆ ಆವರಿಸಿ ನೇವರಿಸಿ ತಹತಹಿಸುತ್ತಿದ್ದ ಬೇಗುದಿಯನ್ನು ಸಾಂತ್ವನಿಸಿದೆ.. ಎಂದು ಭಾವಾಭಿಕ್ತಿಸುವ ಕವಯಿತ್ರಿ ತಮ್ಮ ಕೃಷಿ ಕೆಲಸಗಳ ನಡುವೆ ಕಾವ್ಯ ಕೃಷಿಯಲ್ಲಿ ಕೃತಿಯ ಮುಖೇನ ಮೊದಲ ಫಲ ಪಡೆದಿದ್ದಾರೆ.

ಉದಿಸಿ ಮನದಿ ಎನಿತು ಭಾವವು
ನೀ ಜನ್ಮ ತಳೆದ ಮಧುರ ಕ್ಷಣದಲಿ
ಎನ್ನ ಕಂಗಳಲಿ ತುಂಬಿ ಕಾಂತಿಯು
ಹರಿದು ಹೃದಯದಿ ಒಲವ ಧಾರೆಯು

ವಿದ್ಯಾರ್ಥಿ ದಿನಗಳಿಂದಲೇ ಕವಿತೆ ಬರೆಯುವ ಹವ್ಯಾಸ ಇತ್ತಾಗಿ ಹಳ್ಳಿ  ಬದುಕಿಗೆ ಹೊಂದಿಕೊಂಡು ಗೃಹಿಣಿಯಾಗಿ ಕವಿತೆ ಮೂಲಕ ಸಹೃದಯರ ಮನ ಗೆಲ್ಲುವ ತವಕವಿದೆ.

ಹಂಗು ಭಂಗಗಳಲ್ಲೂ ಬಂಗಾರದ
ಬದುಕ ರೂಪಿಸಿಕೊಳ್ಳುವ ಜಾಣ್ಮೆಯವಳು
ಕುಂದು ಕೊರತೆಗಳ
 ಕಂಡೂ ಕಾಣದಂತೆ
ನಿವಾರಿಸಿಕೊಳ್ಳುವ ಚತುರೆಯವಳು
ಕಾವ್ಯ ಚತುರೆ ಮಾಲಾ ಮೂಡಿಗೆರೆಯವರು. ಬಿ.ಎ.ಪದವೀಧರೆ. ವಿದ್ಯಾರ್ಥಿ ದಿನಗಳಲ್ಲೇ ಸಾಹಿತ್ಯ ಪತ್ರಿಕೆ ಓದುವ ಹವ್ಯಾಸವಿತ್ತಾಗಿ ಕಾವ್ಯ ಕ್ಷೇತ್ರದತ್ತ ಆಸಕ್ತರಾಗಿ ಕಾವ್ಯ ಕನ್ನಿಕೆಯಾಗಲು ಹೊರಟಿಹರು.

ಭಾವಗಳ ಪರವಾಗಿಸಿದ ವೀಣಾಪಾಣಿ
ಎದೆಯೊಳಗಣ ತಲ್ಲಣಗಳ ತಂಪಾಗಿಸಿ
ನಕಾರ ನಶಿಸಿದ ಆತ್ಮವಿಶ್ವಾಸದ ಗಣಿ
ಕಾವ್ಯ ಕನ್ನಿಕೆಯಾದಳು
ನನ್ನಲ್ಲೇ ಆವಿರ್ಭವಿಸಿ

ಇವರ ಪ್ರತಿಭೆಯನ್ನು ಶಾಲಾ ದಿನಗಳಲ್ಲೇ ಕಂಡವರು ಕನ್ನಡ ಉಪನ್ಯಾಸಕ ಉಮೇಶ್ ಹೊಸಹಳ್ಳಿ ‘ಕವಿತೆ ನೋವಿನ ಸೋದರಿ, ನರಳುವ ಅಳುವ ಪ್ರತಿಯೊಬ್ಬನೂ ಕವಿಯೇ, ಅವನ ಪ್ರತಿಯೊಂದು ಕಣ್ಣೀರೂ ಕವನವೆ, ಮಾನವನ ಭಾವನೆಯ ಎಲ್ಲಾ ಹಂತಗಳಲ್ಲಿ ಅಭಿವ್ಯಕ್ತಿಯ ಕೈಯನ್ನೂ ಹಿಡಿವವನೂ ಕವಿಯೇ.. ಎಂದು ಪ್ರಸಿದ್ಧ ಬರಹಗಾರ ಆಂಡ್ರಿ ಮಾತನ್ನು ಉಲ್ಲೇಖಿಸಿದ್ದಾರೆ.
ಪ್ರಾಯದಲ್ಲಿ ಕವಿತೆ ಬರೆಯುವಾಗ ಪ್ರೀತಿ ಒಲಿಸಿಕೊಳ್ಳುವ ತವಕ.



ನೀ ಮಾಡಿದ ಮೋಡಿಗೆ
ಆಗಸದಿ ಕವಿದ ಮೋಡ
ಕರಗಿ ನೀರಾಯಿತು
ನೀ ತೋರಿದ ಪ್ರೀತಿಗೆ
ಚುಕ್ಕಿ ತಾರೆಗಳೆಲ್ಲಾ
ಕಿಲ ಕಿಲ ನಕ್ಕವು

ಕಾವ್ಯ ಪ್ರಕಾರದ ಹಾಯ್ಕು, ಚುಟುಕು, ಟಂಕಾ, ರುಬಾಯಿ, ಅಬಾಬಿ, ಹನಿಗವನ,ಗಜಲ್, ಷಟ್ಪದಿ, ಮುಕ್ತಕಗಳ ನೇಯ್ಗೆ ಇದೆ.

ಕಮರಿ ಹೋದ ಕನಸುಗಳ
ಆಗರವಾಗಿರಲು ಮನಸು
ಒಣಗಿದೆಲೆಯಂತೆ ಉದುರಿ
ಮಣ್ಣ ಸೇರಲು
ಬಯಸಿದೆ ಬದುಕು

ತಮ್ಮ ಸಾಂಸರಿಕ ಬದುಕಿನೊಂದಿಗೆ ಸಿರಿಗನ್ನಡ  ಮಹಿಳಾ ವೇದಿಕೆಯಿಂದ ಆನ್ ಲೈನ್‌ನಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಸಿಕೊಂಡು ಬಂದು ತಾವು ಗುರುತಿಸಿಕೊಂಡು ತಮ್ಮೊಂದಿಗೆ ಹಲವು ಉದಯೋನ್ಮುಖರಿಗೆ ಅವಕಾಶ ಒದಗಿಸಿದ್ದಾರೆ.

ಹಲವು ಭಾಷೆ ಹಲವು ವೇಷ
ತಿಂಡಿ ತಿನಿಸು ತರಹೇವಾರಿ
ಕೂಡಿ ಬಾಳೋ ಜೀವನಾಡಿ
ಭಾರತವೇ ಸ್ವರ್ಗವೆಂದು ಹಾಡಿ

 ವರ್ಷದ ೩೬೫ ದಿನಗಳಿಗೂ ಒಂದೊಂದು ವಿಶೇಷ ಮಹತ್ವ ದಿನವಾಗಿ ಜನಜಾಗೃತಿಗಾಗಿ ವಿಶ್ವ ದಿನಾಚರಣೆ ಆಚರಿಸಲಾಗುತ್ತಿದೆ ಸರಿಯಷ್ಟೇ. ಅಂತೆಯೇ ಮದರ್
ಡೇಗೆ..

ಅಮ್ಮನೆಂಬುವಳು ಒಂದು ಅದ್ಭುತ
ಅಮ್ಮನೆಂಬುವಳು ಒಂದು ಅಚ್ಚರಿ
ಸಂಸಾರದ ಸಂಗಮಕೆ ಶ್ರುತಿಯಾದವಳು
ಭೂಮಿ ಆಗಸಗಳಿಗೂ ಮಿಗಿಲಾದವಳು

ಹಾಗೆಯೇ ಉಮೆನ್ಸ್  ಡೇಗೆ..

ತ್ಯಾಗದ ಪ್ರತಿರೂಪವೇ ಹೆಣ್ಣು
ಬಾಳ ಸಾಗರದ ಏರಿಳಿತಗಳ
ಹಾದಿಯಲ್ಲಿ ಎದೆಗುಂದದಂತೆ
ಮುನ್ನಡೆದು ಸಾಗಿ ಸಂಸಾರ ನೌಕೆಯ
ದಡ ಸೇರಿಸುವ ಭರವಸೆಯ ನಾವಿಕಳಿವಳು

ಇಲ್ಲಿಯ ಕವಿತೆಗಳಲ್ಲಿ ಕೆಲವು ಪ್ರಾತಿನಿಧಿಕ ಹಂತದಲ್ಲಿವೆ. ಜೊಳ್ಳು ಗಾಳಿಯಲ್ಲಿ ತೂರಿ ಗಟ್ಟಿ ಕಾಳು ಉಳಿಯಬೇಕಿದೆ.

ಬಾ ಮಳೆಯೇ ಬಾ
ಕಂಗಾಲಾದ ರೈತರ
ಬದುಕಿಗೆ ಬೆಂಗಾವಲಾಗಿ ಬಾ..

ಕಾವ್ಯ ಕೃಷಿಗೆ ಬೆಂಗಾವಲಾಗಿ ಇವರ ಓದು ಬಹಳ ಪ್ರಾಮುಖ್ಯವಾಗಿದೆ.

ಅರಿವ ಮುನ್ನ
ತೊರೆದು ಹೋದೆ
ಬರೆವ ಮುನ್ನ
ಕರಗಿ ಹೋದೆ..

 ನೆನಪಾಗುವ ಮುನ್ನ ಸಂಕಲನದ ಎಲ್ಲಾ ಕವಿತೆಗಳನ್ನು ಓದಿ ನನ್ನದೇ ವ್ಯಾಖ್ಯಾನ ವಿಸ್ತರಿಸದೆ ಇನ್ನೂ ಉತ್ತಮ ರೀತಿಯಲ್ಲಿ ಬರವಣಿಗೆಯಲ್ಲಿ ಹಿಡಿತ ಸಾಧಿಸಲೆಂದು ಹಾರೈಸಿ..

ಏಯ್‌ ಚಿಟ್ಟೆ ನೀನೆಷ್ಟು ಭಾಗ್ಯಶಾಲಿ
ಒಂದೇ ದಿನದ ಅಲ್ಪಾಯುಷ್ಯದಲ್ಲಿ
ಬಣ್ಣ ಬಣ್ಣದ ದಿರಿಸು ಧರಿಸಿ.
ಸಿಹಿ ಸಿಹಿ ಜೇನ ಸವಿದು
ನೋಡ ನೋಡುತ್ತಲೇ ನಿರ್ಗಮಿಸುವೆ..

—————————-

ಗೊರೂರು ಅನಂತರಾಜು,

Leave a Reply

Back To Top