ಕಾವ್ಯಯಾನ

ಸ್ವರ ಮಾಧುರ್ಯ

Woman Waving Her Both Hands

ಬಿ ಅರುಣ್ ಕುಮಾರ್

ಹೃದಯ ವೀಣೆ
ನಾದ ಅಲೆ ಅಲೆಯಾಗಿ
ಮನ ಕಡಲಿಗೆ ತಾಕುತಿದೆ
ನೋಡು ಒಳಗೆ ಒಮ್ಮೆ

ಕಡಲತೀರ ತೆರೆ ತಾಕಲಾಟ
ಭಾವಕೋಶ ಪತಂಗದಾಟ
ಬಾನುಲಿ ದಿಗಂತ ಮುಟ್ಟಲು
ಹಕ್ಕಿಗಳುಲಿಯುತ ಪುಟ ನೆಗೆತ

ಪಂಚ ಇಂದ್ರಿಯ ನಿಗ್ರಹಿಸಿ
ಒಂದೊಮ್ಮೆ ಕೇಳಿ ನೋಡು
ಕರ್ಣಾನಂದ ಉಕ್ಕಿ ಹರಿದು
ಆನಂದಬಾಷ್ಪ ಹೊಮ್ಮುವುದು

ಒಲವಿನಾಲಿಂಗನ ಮಿಲನ
ನಿಸರ್ಗ ಸ್ತನಪಾನ ಚೈತನ್ಯ
ಏಳು ಸಾಗರಗಳ ಎಲ್ಲೆ ಮೀರಿ
ಕೋಗಿಲೆ ಕಳಕಂಠ ಬೆರೆಸಿದೆ

ನಾಕು ತಂತಿಯಲಿ ಹುಟ್ಟಿದ
ಸಪ್ತ ಸ್ವರಗಳ ಮಾಧುರ್ಯ
ಮಧುರ ರಾಗ ಸಂಭವಿಸಿ
ಅಂತರಂಗ ಗಂಗೆ ಹರಿದಿದೆ

ಜಗದ ಜಂಜಾಟ ಜರಿದು
ಬಾಳಿನ ಸಂಕಟ ಹಿಸುಕಿ
ನೋಡು ಒಳಗೆ ಒಮ್ಮೆ
ನಾದಮಯ ದೇಹ ದೇಗುಲ.

********

Leave a Reply