ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೆ ಒಂದಿಷ್ಟು ಹೊತ್ತು
ದಾಂಪತ್ಯ ಗೀತೆಗಳು : ಕವನ ಸಂಕಲನ
ದಾಂಪತ್ಯ ಗೀತೆಗಳು : ಕವನ ಸಂಕಲನ
ಕವಿಗಳು : ಜೀವರಾಜ ಹ .ಛತ್ರದ
ಪ್ರಥಮ ಮುದ್ರಣ : ೨೦೨೦
ಪ್ರಕಾಶಕರು : ಖುಷಿ ಪ್ರಕಾಶನ ತುಮಕೂರು
ಶ್ರೀ ಜೀವರಾಜ ಹನುಮಂತಪ್ಪ ಛತ್ರದ ಅವರು ಪ್ರಸ್ತುತ ಬ್ಯಾಡಗಿಯ ಸರಕಾರಿ ಎಸ್ ಜೆ ಜೆ ಎಂ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ರಚನೆ ಇವರ ಅಚ್ಚುಮೆಚ್ಚಿನ ಪ್ರವೃತ್ತಿ . “ಉದಯರಶ್ಮಿ” ಪ್ರಥಮ ಕವನ ಸಂಕಲನದಿಂದ ಭರವಸೆಯ ಬರಹಗಾರರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಕಾಲಿಟ್ಟ ಇವರು ಇದುವರೆಗೆ ೧೩ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ರಮ್ಯಗಾನ, ಹನಿ ಹನಿ ಕಾವ್ಯಧಾರೆ, ಜೀವಣ್ನನ ಆಧುನಿಕ ತ್ರಿಪದಿಗಳು, ಅನುವಿನ, ಮಂಜೂರ್ಕಿ, ಅಸಲಿ ಮಳೆ, ದಾಂಪತ್ಯ ಗೀತೆಗಳು, ಉದಯ ರಶ್ಮಿ, ಸೂರುಗುಡ್ಡ ಕವನ ಸಂಕಲನಗಳಾದರೆ, ಅಕ್ಕಡಿಕಾಳು ವೈಚಾರಿಕ ಲೇಖನಗಳ, ಖುಷಿ ತರಲಿ ಕೃಷಿ, ಸಾವಯವ ಕೃಷಿ, ಕೃಷಿ ಸಂಬಂಧಿತ ಲೇಖನಗಳ ಸಂಗ್ರಹ .ಪ್ರಸ್ತುತ ಸೀತಾ ರಾಮಾಯಣಂ ಸುಮಾರು 7ನೂರು ಪುಟಗಳ ಕೃತಿ ಅಚ್ಚಿನಲ್ಲಿದೆ. ಪತ್ನಿ ಅನ್ನಪೂರ್ಣ ಇವರ ಈ ಕವನಗಳ ಸ್ಫೂರ್ತಿಧಾತೆ. ಅವರೂ ಸಹ ಶಿಕ್ಷಕಿ. ಮಕ್ಕಳು ರಶ್ಮಿ ರಮ್ಯಾ ಮತ್ತು ವಿನಾಯಕ ರೊಡಗೂಡಿದಾ ಸುಂದರ ಸಂಸಾರ. ಸಮಸಮಾಜಕ್ಕಾಗಿ ಹಾತೊರೆಯುವ ಭಾವೋನ್ಮೇಷಣೆಯ ಸುಂದರ ಪದಗಳ ಸರದಾರರಿವರು. ನವರಸಗಳನ್ನು ಕವಿತೆಯ ರಚನೆಯ ಮೂಲಕ ಚಿಮ್ಮಿಸುವ ಸದಾ ಚೈತನ್ಯದ ಚಿಲುಮೆ. ಜನಪದ ಸಾಹಿತ್ಯವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಇವರ “ಜೀವಣ್ಣ ನ ಆಧುನಿಕ ತ್ರಿಪದಿಗಳು” ಕೃತಿಯೂ ಗಮನಾರ್ಹ . ಸೀತೆಯ ಮೂಲಕ ರಾಮಾಯಣವನ್ನು ಕಟ್ಟಿರುವ ಇವರ ಸೀತಾರಾಮಾಯಣಂ ಉತ್ಕೃಷ್ಟ ರಚನೆ .
ಪ್ರಸಕ್ತ ದಾಂಪತ್ಯ ಗೀತೆಗಳು ಜಾನಪದ ಶೈಲಿಯಲ್ಲಿ ನ ಪತಿಪತ್ನಿ ಸಂಭಾಷಣೆಯ ರೂಪದ ನೀಳ್ಗವನಗಳು .ಚೌಪದಿಯಲ್ಲಿ ರಚಿತವಾಗಿರುವ ಇವು
೫/೩/೫/೩
೫/೩/೩
೫/೩/೫/೩
೫/೩/೩
ಮಾತ್ರಾಗಣ ಗತಿ ಹೊಂದಿದ್ದು ಕೆಲವು ಕಡೆ ಅಂಶಗಣಗಳ ಪರಿಗಣನೆಯೂ ಇದೆ. ಕುಟುಂಬ ಜೀವನದ ರಸಮಯ ಸವಿಕ್ಷಣಗಳನ್ನು ಸೆರೆಹಿಡಿದ ಸಾಕ್ಷಿಭೂತ ಪ್ರಜ್ಞೆಗೆ ಪದಗಳ ಕುಸುರಿ ಕೆಲಸ ಮಾಡಿದ ಕಲಾತ್ಮಕ ಕೃತಿಗಳು ಇವು. ದಿನನಿತ್ಯದ ಸುಖ ದುಃಖ, ಪ್ರೀತಿ, ಮುನಿಸು, ಜವಾಬ್ದಾರಿಗಳು, ಭಿನ್ನಾಭಿಪ್ರಾಯ, ಜಗಳ ಹೀಗೆ ಗಂಡ ಹೆಂಡತಿಯರ ನಡುವೆ ಇರುವ ಹತ್ತು ಹಲವಾರು ವಿಷಯಗಳು ಕವಿ ಮನದ ಕ್ಯಾನ್ವಾಸ್ನ ಮೇಲೆ ಚಿತ್ರಿಸಲ್ಪಟ್ಟು ಕಲ್ಪನೆಯ ಹಾಲಿಗೆ ವಾಸ್ತವದ ಡಿಕಾಕ್ಷನ್ ಬೆರೆತ ಹದನಾದ ಫಿಲ್ಟರ್ ಕಾಫಿ ಯಂತೆ ಹೊಮ್ಮಿದೆ. “ಚಹಾದ ಜೋಡಿ ಚೂಡದ್ಹಾಂಗ” ಒದಗಿಬಂದಿದೆ .
ಹಾಗೆ ನೋಡಿದರೆ ಕನ್ನಡ ಕಾವ್ಯದಲ್ಲಿ ದಾಂಪತ್ಯದ ಕುರಿತು ಎಷ್ಟೋ ಆಪ್ತವೆನಿಸುವ ಕವಿತೆಗಳು ಬಂದಿವೆ. ಕೆ ಎಸ್ ನ ಅವರ “ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ” ಬೇಂದ್ರೆಯವರ “ನಾನು ಬಡವಿ ಆತ ಬಡವ” ಇವೆಲ್ಲ ಮಾಸ್ಟರ್ ಪೀಸ್ ಗಳು. ಇವುಗಳ ಹೆಜ್ಜೆಯನುಸರಣೆಯಂತೆ ದಾಂಪತ್ಯದ ಸಿಹಿಕಹಿ ಮೆಲುಕು ಸವಿ ರಸಾಯನದಂತೆ ಛತ್ರದರವರ “ದಾಂಪತ್ಯ ಗೀತೆಗಳು” ಹೊರಬಂದಿವೆ .
ಪ್ರೀತಿ ಇಲ್ಲದ ಮೇಲೆ
ಮಾತಿಗೆ ಮಾತು ಕೂಡಿತು ಹೇಗೆ
ಅರ್ಥ ಹುಟ್ಟೀತು ಹೇಗೆ?
ಬರೀ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?
ಜಿ ಎಸ್ ಶಿವರುದ್ರಪ್ಪ
ಹಾಗೆಯೇ ಸಂಸಾರ ಸಾಗರದ ಪಯಣಕ್ಕೆ ಪ್ರೀತಿ ನಾವೆ. ಕವಿತೆ ೯ ಮತ್ತ ೧೦ ರ ಸಂಸಾರದ ಚಿತ್ರಣದಲ್ಲಿ ಈ ಸಾಂಸಾರಿಕ ಪ್ರೀತಿಯನ್ನು ಮತ್ತು ವಿದ್ಯೆ ಕಲಿಸಿದ ಗುರುಗಳ ಸ್ಮರಣೆಯನ್ನು ಮಾಡುತ್ತಾರೆ . ತಮ್ಮ ಸುಖೀ ಸಂಸಾರದ ಚಿತ್ರಣ ಇಲ್ಲಿ ಹೀಗಿದೆ
ನಮ್ಮಿಬ್ಬರಲ್ಲಿ ಅನ್ಯೋನ್ಯ ಪ್ರೀತಿ
ಜಗಳಗಳ ಮಾತೇ ಇಲ್ಲ
ದುರ್ವಾಸ ನಾನು ತುದಿಮೂಗಸಿಟ್ಟು
ನೀನಂಥ ಉಳಿದಿ ಜೊತೆಗೆ
ಹಠ ಮುರಿಯಲಾರೆ ಸೋಲೊಪ್ಪಲಾರೆ ಅಭಿಮಾನ ಜನರ ಹರಿಗೆ
ಎನ್ನುವಲ್ಲಿ ಹೆಂಡತಿ ತಮ್ಮ ಹಠ ಸೈರಿಸಿ ಸಂಸಾರ ನಡೆಸುವ, ಜಗಳವಾಡದ ಆಕೆಯ ತಾಳ್ಮೆಯ ಬಗ್ಗೆ ಮೆಚ್ಚುಗೆ ನುಡಿಯುತ್ತಾರೆ .
ಸರಕಾರಿ ನೌಕರರು ಮತ್ತು ಅವರ ಮಕ್ಕಳು (ಕವನ ಸಂಖ್ಯೆ ೨೦) ನಲ್ಲಿ ಇಬ್ಬರೂ ಉದ್ಯೋಗಸ್ಥ ರಾದಾಗ ಪಡುವ ಪಡಿಪಾಟಲಿನ ಚಿತ್ರಣ ಇದೆ. ಕೆಲವೊಮ್ಮೆ ಪಟ್ಟಣ ಬಿಟ್ಟು ಹಳ್ಳಿಗೆ ಹೊರಟು ಹೋಗಿ ಬಿಡುವ ಮನಸ್ಸಾದರೂ ಕರ್ತವ್ಯದ ಕರೆಗೆ ಓಗೊಡುವ ಪತ್ನಿಯ ಮನದ ಮಾತುಗಳಿವು.
ಹೋಗೋಣ ಬನ್ನಿ ಸಮಯಾಯ್ತು ನೋಡಿ
ಪ್ರಾರ್ಥನೆಗೆ ನಿಲ್ಲಬೇಕು
ಬಡ ಮಕ್ಕಳೀಗೆ ಶಿಕ್ಷಣವ ನೀಡಿ
ಅವರನ್ನು ಎತ್ತಬೇಕು
ಕವನ ಸಂಖ್ಯೆ ೧೪ ನಲ್ಲಿ ಮಗ ಕಾಣಿಕೆ ನೀಡಿ ಹುಟ್ಟು ಹಬ್ಬ ಆಚರಿಸುವಾಗ ಈ ಸಂಪ್ರದಾಯ ನಮಗೆ ಹೊಸತು ಎಂದರೂ ಮಕ್ಕಳ ಸಂಭ್ರಮದಲ್ಲಿ ಭಾಗಿಯಾಗುವ ಪರಿ ಸಮರಸದ ಸಂಸಾರ ಹೇಗಿರಬೇಕೆಂಬ ಚಿತ್ರಣ ನೀಡುತ್ತದೆ.
ನಮ್ಮೂರೇ ನಮಗೆ ಮೇಲು (ಕವನ ಸಂಖ್ಯೆ೧೭) ರಲ್ಲಿ ಪತ್ನಿ ಪಟ್ಟಣದ ಪರ ಗಂಡ ಹಳ್ಳಿಯ ಪರ ವಹಿಸಿ ಚರ್ಚೆ ನಡೆಸಿದರೂ ಕಡೆಗೆ
ನಿಸರ್ಗವೇ ಸ್ವರ್ಗ ಹಳ್ಳಿಗಳ ಮಾರ್ಗ
ಮಣ್ಣಿರದೆ ಮಡಕೆಯಿಲ್ಲ
ಎಂಬ ನಿಲುವಿಗೆ ಬರುತ್ತಾರೆ .
ನಾನು ಹುಡುಗಿಯರು ಮತ್ತು ಹೆಂಡತಿ (ಕವನ ಸಂಖ್ಯೆ೨೩) ನಾನೊಂದು ತೀರ ನೀನೊಂದು ತೀರಾ ವಿರಹ (ಕವನ ಸಂಖ್ಯೆ೧೬) ಗಂಡಹೆಂಡಿರ ವಿರಹದ ಬೇಗೆಯನ್ನು ವರ್ಣಿಸಿದ್ದು ಕೆ ಎಸ್ ನ ಅವರ “ತವರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ” ಕವನದ ನೆನಪು ತರುತ್ತದೆ. ವೀಕೆಂಡ್ ಕುರಿತ ದಾಂಪತ್ಯ ಗೀತೆ (ಕವನ ಸಂಖ್ಯೆ೨೭) ಫಾಸ್ಟ್ ಫುಡ್ ಜಂಕ್ ಫುಡ್ ಮತ್ತು ಮನೆಯ ಆರೋಗ್ಯಕರ ಆಹಾರದ ನಡುವಣ ವ್ಯತ್ಯಾಸವನ್ನು ತಿಳಿಹೇಳುತ್ತವೆ.
ದೀಪಾವಳಿ ಹಬ್ಬದ ದಾಂಪತ್ಯ ಗೀತೆಯಂತೂ ಮನೆಮನೆಯ ಕಥೆ. ಅತ್ತೆಮನೆಗೆ ಹಳ್ಳಿಗೆ ಹೋಗಲು ದೀಪಾವಳಿ ಆಚರಿಸಲು ಒಪ್ಪದ ಪತ್ನಿಯ ಮನವೊಲಿಸಿ ಸಮ್ಮತಿ ಪಡೆವ ಗಂಡನ ವಾಕ್ಚತುರತೆಗೆ ಮೆಚ್ಚಲೇಬೇಕು.
ದಾಂಪತ್ಯ ಜೀವನದ ರಸಗಳಿಗೆಗಳೆಂದರೆ ಮುಚ್ಚಿದ ಬಾಗಿಲ ಹಿಂದಿನ ಮಂಚದ ಮೇಲೆ ಕಳೆವ ಸಮಯ ಮಾತ್ರವಲ್ಲ. ರಸಿಕ ದಂಪತಿಗಳಿಗೆ ಜೀವನದ ಪ್ರತಿಕ್ಷಣವೂ ಸವಿಯೂಟವೇ. ವೀಳೆಯದೆಲೆಯನ್ನು ಮಡಚಿ ತಾಂಬೂಲ ಬಾಯಿಗಿಡುವ ಮಲ್ಲಿಗೆ ಮುಡಿದ ಮಡದಿಯೊಡನಿನ ಚಕ್ಕಂದದ ಅನುಭವ.
ಹಾಗೆಂದು ಬರೀ ಪ್ರಣಯದ ಪ್ರಸಕ್ತಿ ಮಾತ್ರವಲ್ಲದೆ ವಾಸ್ತವತೆಯ, ಶಿಕ್ಷಕರ ಕೆಲಸದ ಬವಣೆ, ಅಂಕದ ಮಾಯಾಜಿಂಕೆಯ ಹಿಂದೆ ಬಿದ್ದಿರುವ ಶಿಕ್ಷಣ ವ್ಯವಸ್ಥೆ ಇವುಗಳ ಬಗ್ಗೆಯೂ ಮೊನಚು ಧ್ವನಿ ಇದೆ . ಇದನ್ನು ನೋಡಿ
ಆಟಗಳ ಆಡಿಸಿ ಕಾರಂಜಿ ಕುಣಿಸಿ
ಬಿಸಿಯೂಟ ಹಾಲು ಉಣಿಸಿ
ಬಟ್ಟೆಗಳ ತೊಡಿಸಿ ಬೂಟುಗಳ ಹಂಚಿ
ಮಾಹಿತಿಯ ಬರೆದು ಕಳಿಸಿ
ಇಷ್ಟರ ನಡುವೆ ಪಾಠ ಪ್ರವಚನಕ್ಕೆ ಸಮಯವೆಲ್ಲಿ? ” ಅಂಕಗಳು ಮಾನ್ಯ ಜೀವನವು ಶೂನ್ಯ ಮೌಲ್ಯಗಳು ಸುಟ್ಟ ಕರಕಿ” ಎಂಬ ಅದ್ಭುತ ರೂಪಕಗಳಿವೆ. ಒಟ್ಟಿನಲ್ಲಿ ಈ ಅತ್ಯಾಧುನಿಕ ಮುದ್ದಣ ಮನೋರಮೆಯರ ಸಂವಾದ ಹೊಸತನದ ನವಿರ ಹೊತ್ತು ಪುಳಕದ ಕಚಗುಳಿಯಿಡುತಾ ನಮ್ಮದೇ ಮನದ ಭಾವನೆಗಳ ದರ್ಪಣದಂತೆ ಕಂಗೊಳಿಸುತ್ತದೆ. ಧಾರವಾಡ ಶೈಲಿಯ ಕನ್ನಡದ ಸೊಗಸು ಮೇಳೈಸಿದ ಭಾಷೆ ಕವಿತೆಗಳಿಗೆ ಹೊಸತೊಂದು ಕಳೆಕೊಟ್ಟಿದೆ ಶೋಭೆ ನೀಡಿವೆ.
ನನ್ನ ಒಂದೇ 1 ದೂರು ಎಂದರೆ ಇಲ್ಲಿ ಸಂಭಾಷಣೆಗಳಲ್ಲಿ ಗಂಡ ಹೆಂಡತಿ ಎಂದು ಜನರಲೈಸ್ ಮಾಡುವ ಬದಲು ಅವರಿಗೊಂದು ಹೆಸರು ನೀಡಬೇಕಿತ್ತು ಎನ್ನುವುದು.
ಕುವೆಂಪು ಅವರು ಸಂಸಾರ ಸಂಹಿತೆ ಎಂಬ ಕವನದಲ್ಲಿ ಹೀಗೆ ಹೇಳುತ್ತಾರೆ
ಜನ ನೆರೆದು ಸಭೆಸೇರಿ ಕಯ್ಯ ಚಪ್ಪಳೆಯಿಕ್ಕಿ
ಕೊರಳಿಗುರುಳಿಪ ಹಾರ ನನಗೆ ನಿಸ್ಸಾರ
ತಳಿರು ಬೆರಳಿನ ಕೈಯ್ಯ ಕಂದನಾ ನಳಿದೋಳು
ಕೊರಳನಪ್ಪಿದರೆ ಸಗ್ಗಕ್ಕೆ ಸಾರ
ಸಾಮಾನ್ಯತಾ ಸುಖವೆ ಶಾಂತಿ ಜೀವಾಧಾರ
ಸಾಮಾನ್ಯತೆಯೇ ಜಗತ್ ಮಾನ್ಯತಾ ಸಂಸಾರ
ಹೀಗೆ ಸಂಸಾರದಲ್ಲಿ ಸರಿಗಮ ನುಡಿಸುತ್ತಾ ಕಾವ್ಯದಲ್ಲಿ ಅದರ ಆಲಾಪ ಹೊರಡಿಸುವ ಜೀವರಾಜ ಛತ್ರದ ಅವರ ಕೃತಿಗಳು ಮತ್ತಷ್ಟು ಮೌಲ್ಯಯುತವಾಗಿ ಮಗದಷ್ಟು ಹೊರಬರಲಿ. ಮುನ್ನುಡಿಯಲ್ಲಿ ಪ್ರೊಫೆಸರ್ ಎಚ್ ಎ ಭಿಕ್ಷಾವರ್ತಿ ಮಠ ಅವರು ನುಡಿದಂತೆ “ಜನಪದ ಶೈಲಿಯಲ್ಲಿ ಗ್ರಾಮೀಣ ಜನರಲ್ಲಿ ಕಂಡುಬರುವ ಮೂಢನಂಬಿಕೆ, ಅನಕ್ಷರತೆ, ಬಾಲ್ಯವಿವಾಹ, ಸ್ವಾರ್ಥ ರಾಜಕೀಯ ಕುರಿತ ಕವನಗಳು ಬರಲಿ. ತನ್ಮೂಲಕ ಗ್ರಾಮೀಣ ಜನರಲ್ಲಿ ಜನಜಾಗೃತಿ ಉಂಟು ಮಾಡಲಿ ಎಂದು ಹಾರೈಸುತ್ತೇನೆ.” ಎಂಬ ಹಾರೈಕೆಯೇ ನನ್ನದೂ ಕೂಡ.
ಭಾವಸಂಗಮದ ಭಾವ ಬಂಧುಗಳೆಲ್ಲರ ಮನದ ಧ್ವನಿಯಾಗಿ ಸೋದರ ಛತ್ರದ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಮನಃಪೂರ್ವಕ ಶುಭಕಾಮನೆಗಳು .
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು