ಆಯ್ದಕ್ಕಿ ಲಕ್ಕಮ್ಮನ ವಚನ-ಪ್ರೊ. ಜಿ ಎ. ತಿಗಡಿ

ವಚನ ಸಂಗಾತಿ

ಆಯ್ದಕ್ಕಿ ಲಕ್ಕಮ್ಮನ ವಚನ

ಪ್ರೊ. ಜಿ ಎ. ತಿಗಡಿ

ಚಿತ್ರಕೃಪೆ- ಗೂಗಲ್

ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ?
ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ
ಬಡತನವಿದ್ದಡೆ ಒಡೆಯದೆ?
ಘನಶಿವಭಕ್ತರಿಗೆ ಬಡತನವಿಲ್ಲ
ಸತ್ಯರಿಗೆ ದುಷ್ಕರ್ಮವಿಲ್ಲ.
ಎನಗೆ ಮಾರಯ್ಯಪ್ರಿಯ
ಅಮರೇಶ್ವರಲಿಂಗವುಳ್ಳನ್ನಕ್ಕ
ಆರ ಹಂಗಿಲ್ಲ ಮಾರಯ್ಯಾ.

   ಶರೀರಕ್ಕೆ  ಬಡತನ ಬರಬಹುದು, ಆದರೆ ಮನಸ್ಸಿಗೆ ಎಂದೂ ಬರಲಾರದು.   ಉಳಿಯ ಮೊನೆಯು ಹರಿತವಾಗಿದ್ದರೆ  ಎಂತಹ ಬೃಹದಾಕಾರದ ಬೆಟ್ಟವನ್ನೂ ಸಹ ಸುಲಭವಾಗಿ ಒಡೆದು ಹಾಕಬಹುದು.  ಹಾಗೆಯೇ ಅರಿವಿನ ಮಹಾಘನವನ್ನು ಸಾಧಿಸಿಕೊಂಡ ಶಿವಭಕ್ತರಿಗೆ ಯಾವುದೇ ರೀತಿಯ ಬಡತನ ಎಂದಿಗೂ ಬರಲಾರದು.  ಸತ್ಯ ಮಾರ್ಗದಲ್ಲಿ ನಡೆಯುವವರು ಎಂದಿಗೂ ಕೆಟ್ಟ ಕೆಲಸಗಳನ್ನು ಮಾಡಲಾರರು ಅಂತಹ ಕುಕರ್ಮಗಳೆಂದಿಗೂ ಅವರಿಗೆ ಸೋoಕಲಾರವು.  ಎನ್ನ ಆರಾಧ್ಯ ದೈವ ಮಾರಯ್ಯಪ್ರಿಯ ಅಮರೇಶ್ವರಲಿಂಗದ ಕೃಪೆ ಇರುವವರೆಗೆ  ನನಗೆ ಯಾರ ಹಂಗೂ  ಇಲ್ಲವೆಂದು ಆಯ್ದಕ್ಕಿ ಲಕ್ಕಮ್ಮ ಹೇಳುತ್ತಾಳೆ.

        ತನ್ನಿಚ್ಚೆಯಂತೆ ನಡೆಯುವ ದೇಹ ಲೌಕಿಕ ಭೋಗ ಭಾಗ್ಯಗಳನ್ನು ಪಡೆಯುತ್ತ, ಇಂದಿಂಗೆ – ನಾಳಿoಗೆ  ಎಂದು ಸಂಗ್ರಹಿಸುತ್ತಾ ತುಂಬಾ ಶ್ರೀಮಂತವಾಗುತ್ತಾ ಹೋಗುತ್ತದೆ.  ಪಂಚೇಂದ್ರಿಯಗಳು  ಲೌಕಿಕದ ಭೋಗ ಜೀವನದ ನೂರೆಂಟು ಆಕರ್ಷಕ ಮಜಲುಗಳನ್ನು ತೋರುತ್ತ ;   ಸುಖವಿರುವುದು ಸಂಪತ್ತಿನಲ್ಲಿ  ಹಾಗೂ ವಸ್ತುವಿನಲ್ಲಿ ಎಂಬ ಭ್ರಾಂತಿಗೊಳಗಾದ ದೇಹ ಅವುಗಳನ್ನು ಪಡೆಯುವ ಹೋರಾಟದಲ್ಲಿ ಜೀವನವನ್ನೇ ಕಳೆದುಬಿಡುತ್ತದೆ.     ಅದಕ್ಕೆ ಇತಿಮಿತಿಯೇ ಇಲ್ಲ.  ಇದನ್ನೇ ಅಂಬಿಗರ ಚೌಡಯ್ಯ,

ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,
ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು.
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ [ನಿಜ]ಶರಣನು.

ಎಂಬುದಾಗಿ ವಿಡoಬಿಸಿದ್ದಾನೆ.

       ಹೀಗೆ ಆಸೆ, ಮೋಹ, ಮಮಕಾರ ಮಾಯೆಗಳ  ಶ್ರೀಮಂತಿಕೆಯಿಂದ ಕೊಬ್ಬಿದ ಶರೀರಕ್ಕೆ  ಬಡತನ ಬರಬೇಕು.   ‘ನಾನು ‘ ಎಂಬ ಈ ದೇಹವನ್ನು ಮುತ್ತಿದ ಅರಿಷಡ್ವರ್ಗಗಳು, ಸಪ್ತ ವ್ಯಸನಗಳು, ಸಪ್ತ ಮದಗಳು, ಒಂದೊಂದಾಗಿ ಕಳಚುತ್ತ ಹೋಗಬೇಕು.   ಕೊನೆಗೆ ಏನೂ ಇಲ್ಲವಾಗಿ, ‘ ನಾನು ‘ ಎಂಬುದೂ ಕೂಡ ಇದ್ದೂ ಇಲ್ಲದಂತಾಗುತ್ತದೆ.   ಆಗ ಅಂಗಕ್ಕೆ ಬಡತನ ಉಂಟಾಗಿ ಮನ ತನ್ನಿಂದ ತಾನೇ ಶ್ರೀಮಂತಗೊಳ್ಳುತ್ತದೆ.   ಇದನ್ನೇ  ಲಕ್ಕಮ್ಮ,  ಬೃಹತ್ ಬೆಟ್ಟದ ಬಂಡೆಗಳನ್ನು ಒಡೆಯಲು ಕಬ್ಬಿನದ ಉಳಿಯು ತನ್ನ ಮೊನೆಯನ್ನು  ಸಾಣೆಕಲ್ಲಿಗೆ ತಿಕ್ಕಿ ತಿಕ್ಕಿ, ತೆಳುವಾಗುತ್ತಾ (ಬಡವಾಗುತ್ತಾ) ಹೋದಂತೆ ಉಳಿ ಹರಿತವಾಗುತ್ತದೆ.   ಇದರಿಂದ  ಎಂತಹ ಬೆಟ್ಟವನ್ನಾದರೂ ಕತ್ತರಿಸಬಹುದು ಎಂಬ ಲೌಕಿಕದ ಉದಾಹರಣೆ ನೀಡಿ ಸ್ಪಷ್ಟಪಡಿಸುತ್ತಾಳೆ.   ಅದರಂತೆ ಅರಿವೆಂಬ ಗುರುದೇವನ  ಮಾರ್ಗದರ್ಶನದಿಂದ ಸಾಧನಾಮಾರ್ಗದಲ್ಲಿ ನಡೆದು ಮಹಾಘನ ಮನವನ್ನು ಸಾಧಿಸಿದ ಶಿವಶರಣರಿಗೆ ಯಾವುದೇ ರೀತಿಯ(ಅಂತರಂಗ – ಬಹಿರಂಗ) ಬಡತನ ಬರಲಾರದು.   ಹಾಗೆಯೇ ಸತ್ಯ ಶುದ್ಧ ಮಾರ್ಗದಲ್ಲಿ ನಡೆಯುವವರು ಎಂದಿಗೂ ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲ.   ಹೀಗಾಗಿ ಕುಕರ್ಮಗಳೆಂದಿಗೂ ಅವರನ್ನು  ಸೋಂಕಲಾರವು.    ಕಾರಣ ಎನ್ನ ಆರಾಧ್ಯದೈವ ಮಾರಯ್ಯಪ್ರಿಯ ಅಮರೇಶ್ವರಲಿಂಗ ಇರುವವರೆಗೆ ನನಗೆ ಯಾರ ಹಂಗೂ ಇಲ್ಲವೆಂದು ಲಕ್ಕಮ್ಮ ಹೇಳುತ್ತಾಳೆ .


  ಪ್ರೊ. ಜಿ ಎ. ತಿಗಡಿ ಸವದತ್ತಿ.

Leave a Reply

Back To Top