ಕಾವ್ಯ ಸಂಗಾತಿ
ತರಹಿ ಗಜಲ್
ಇಂದಿರಾ ಮೋಟೆಬೆನ್ನೂರ
ತರಹಿ ಗಜಲ್( ಶಮಾ ಮೇಡಂ ಅವರ ಸಾನಿ ಮಿಸ್ರಾ ಬಳಸಿ)
ಎದೆಯ ಭೂಮಿ ಒತ್ತುವರಿಯಾಗಿದೆ ಯಾರಿಗೆ ದೂರು ಕೊಡಲಿ
ಒಲವ ಚಿಗುರಿನ ಕೆತ್ತನೆಯಾಗಿದೆ ಯಾರಿಗೆ ದೂರು ಕೊಡಲಿ
ದೂರದ ಮುಗಿಲೂರಿನ ಚಂದಿರನಂತೆ ಕತ್ತಲಲ್ಲಿ ಕರಗಿದೆಯಲ್ಲ
ವಿರಹ ವೇದನೆ ಹೊತ್ತಿಗೆಯಾಗಿದೆ ಯಾರಿಗೆ ದೂರುಕೊಡಲಿ
ನಡೆದೆಯಲ್ಲ ದೂರ ಅಂಡಲೆದ ಅಂಬುಧಿಯ ಅರುಣನಂತೆ
ರಾಗದಿ ನೆಂದು ಮುತ್ತೆದೆಯಾಗಿದೆ ಯಾರಿಗೆ ದೂರು ಕೊಡಲಿ
ಹಗಲ ಕೊರಳಲಿ ಜೋತುಬಿದ್ದ ಇರುಳ ಜಡೆಯಂತೆ ನಾವು
ಮಳೆಬಿಲ್ಲ ಬಣ್ಣದ ಮುತ್ತಿಗೆಯಾಗಿದೆ ಯಾರಿಗೆ ದೂರುಕೊಡಲಿ
ಮನದ ತಾರಸಿಯ ತುಂಬ ತಾರಕೆಗಳ ರಂಗೋಲಿಯ ಗುಂಗು
ಇಂದು ಪ್ರೀತಿ ಬೆಳಕ ಬಿತ್ತನೆಯಾಗಿದೆ ಯಾರಿಗೆ ದೂರು ಕೊಡಲಿ