ಲೇಖನ
ಅವರೇ ಕಾಯಿ
ಅರುಣಾ ರಾವ್
ನವೆಂಬರ್ ಕಳೆದು ಡಿಸೆಂಬರ್ ತಿಂಗಳಿಗೆ ಕಾಲಿಡುತ್ತಿದ್ದಂತೆ ತರಕಾರಿ ಅಂಗಡಿಗಳಲ್ಲಿ,ತಳ್ಳೋ ಗಾಡಿಗಳಲ್ಲಿ, ರಸ್ತೆ ಬದಿಗಳಲ್ಲಿ ರಾಶಿ ಹಾಕಿದ ಅವರೇಕಾಯಿ ಘಮ ನಮ್ಮ ಮೂಗಿಗೆ ಬಡಿಯದೆ ಇರದು. ನಾವೆಲ್ಲಾ ಹಬ್ಬದ ದಿನಗಳಲ್ಲಿ ಮೈಗೆಲ್ಲಾ ಎಣ್ಣೆ ಸವರಿಕೊಂಡು, ಒಂದಷ್ಟು ಗಂಟೆ ನೆನೆದು ಅಭ್ಯಂಜನ ಸ್ನಾನ ಮಾಡುತ್ತೇವಲ್ಲವೇ! ಆದರೆ ನಮ್ಮಅವರೇಕಾಯೋ, ಮೊದಲು ಮುಂಜಾನೆಯ ಮಂಜಿನಲ್ಲಿ ಮಿಂದು ನಂತರ ಮೈಗೆಲ್ಲಾ ಎಣ್ಣೆ ಸವರಿಕೊಂಡು ಮಿರಮಿರನೆ ಮಿಂಚುತ್ತಿರುತ್ತದೆ. ಇಂಥಹ ಅವರೇಕಾಯೇನಾದರೂ ಕಣ್ಣಿಗೆ ಬಿದ್ದರೆ ಕನಿಷ್ಟ ಪಕ್ಷ ಒಂದೆರಡು ಕೆಜಿಗಳನ್ನಾದರೂ ಕೊಳ್ಳದೆ ಇರಲಾದೀತೇ!
ಇತ್ತೀಚಿನ ದಿನಗಳಲ್ಲಿ ಕೇವಲ ಡಿಸೆಂಬರ್, ಜನವರಿ ತಿಂಗಳುಗಳಲ್ಲಿ ಮಾತ್ರವಲ್ಲದೆ, ವರ್ಷದ ಎಲ್ಲಾ ತಿಂಗಳುಗಳಲ್ಲಿಯೂ ಅವರೆಕಾಳು, ಅವರೆಕಾಯಿ ಕಾಣಸಿಗುತ್ತದೆಯಾದರೂ ಅವು ಅಷ್ಟು ಸೊಗಡಾಗಲಿ, ರುಚಿಯಾಗಲಿ ಇರುವುದಿಲ್ಲ. ಬರೀ ಬಾಯಿಚಪಲಕ್ಕೆ ಇದನ್ನು ತಿನ್ನಬೇಕೆ ಹೊರತು, ಅವರೆಕಾಯಿಯ ನಿಜವಾದ ಸ್ವಾದ ಅರಿವಿಗೆ ಬರುವುದು ಈ ತಿಂಗಳುಗಳಲ್ಲಿಯೇ. ಏಕೆಂದರೆ ಹಿಮ ಬಿದ್ದ ಅವರೆಕಾಯಿ ಹೆಚ್ಚು ಸೊಗಡಿಯಿಂದ ಕೂಡಿರುತ್ತದೆ. ಹೊಲಗಳಲ್ಲಿ ಮೈ ಚಾಚಿ ಮಲಗಿರುವ ಈ ಬಳ್ಳಿಗಳು ತಮ್ಮ ಮೈತುಂಬ ಕಾಯಿಗಳನ್ನು ತಳೆದು ನಳನಳಿಸುತ್ತಿರುತ್ತವೆ. ಕೆಲವೊಮ್ಮೆ ಅವರೆಯ ಸೊಗಡು ಎಷ್ಟಿರುತ್ತದೆಯೆಂದರೆ ಅದನ್ನು ಗಿಡಗಳಿಂದ ಬಿಡಿಸುವಾಗ, ಸುಲಿಯುವಾಗ ಮೈ ಕೈಯೆಲ್ಲವೂ ನವೆಯಾಗತೊಡಗುತ್ತವೆ. ಈ ಗಿಡಗಳಲ್ಲಿ ಕಾಯಿ ಕೊರೆಯುವ ಹುಳು ಅಂದರೆ ಆಡು ಭಾಷೆಯಲ್ಲಿ ಅವರೇ ಕಾಯಿ ಹುಳುಗಳಿದ್ದು , ಕಾಳುಗಳನ್ನು ಸೋಸುವಾಗ ಎಚ್ಚರಿಕೆಯಿಂದಿರುವುದು ಅಗತ್ಯ.
ಉಷ್ಣವಲಯದಲ್ಲಿ ಬೆಳೆಯವ ಈ ದ್ವಿದಳ ಧಾನ್ಯದ ಮೂಲ ಆಫ್ರಿಕಾ ಖಂಡ. ಆದಾಗ್ಯೂ ಇದು ಆಫ್ರಿಕಾ ಮತ್ತು ಏಷ್ಯಾ ಖಂಡಗಳೆರಡರಲ್ಲೂ ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಇದು ಜನಪ್ರಿಯತೆಯ ಶಿಖರವನ್ನೇರಿದೆ. ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಇದನ್ನು ಬಿಟ್ಟು ಇತರೇ ತರಕಾರಿಗಳು ರುಚಿಸವು. ಗಂಟೆಗಟ್ಟಲೆ ಕುಳಿತು ಸೊಂಟ ನೋಯಿಸಿಕೊಂಡು ಅವರೆಕಾಯಿಯನ್ನು ಸುಲಿಯುವ ಮತ್ತು ಹಿತಕುವ ಪ್ರಕ್ರಿಯೆ ಸ್ವಲ್ಪಮಟ್ಟಿಗೆ ಪ್ರಯಾಸದಾಯಕವಾಗಿದ್ದರೂ, ಅದನ್ನು ತಿನ್ನುವಾಗ ಸಿಗುವ ತೃಪ್ತಿಯ ಮುಂದೆ ಈ ಪ್ರಯಾಸವೂ ಹಿತಕರವೇ. ಬೇರೆ ತರಕಾರಿಗಳ ಅಡುಗೆ ಮಾಡುವಾಗ ಅಡುಗೆ ಮನೆಯತ್ತ ತಿರುಗಿಯೂ ನೋಡದ ಮನೆಯ ಇತರ ಸದಸ್ಯರು ಅವರೇಕಾಯಿ ಸುಲಿಯುವ, ಹಿತಕುವ ಕೆಲಸದಲ್ಲಿ ಮಾತ್ರ ಸಕ್ರಿಯವಾಗಿ ಭಾಗವಹಿಸುತ್ತಾರೆ. ಆ ಮೂಲಕ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಮಾತುಕತೆಯಾಡಲು ಇದೊಂದು ಸುಸಂದರ್ಭವನ್ನು ಒದಗಿಸಿ ಕೊಡುತ್ತದೆ. ಕೆಲವೊಮ್ಮೆ ಅಕ್ಕಪಕ್ಕದ ಮನೆಗಳ ಮಹಿಳಾ ಮಣಿಗಳು ಈ ಅವರೆಕಾಯಿ ಸುಲಿಯುವ ನೆಪದಲ್ಲಿ ಗುಂಪುಗೂಡಿ, ಕಷ್ಟ ಸುಖಗಳನ್ನು ಹಂಚಿಕೊಳ್ಳುವುದರಿಂದ ಸ್ನೇಹ ಸೌಹಾರ್ದತೆಗೆ ಇದು ದಾರಿ ಮಾಡಿಕೊಡುತ್ತದೆ. ಇದನ್ನು
ಕಾಮಧೇನು, ಕಲ್ಪವೃಕ್ಷಕ್ಕೂ ಸಹ ಹೋಲಿಸಬಹುದಾಗಿದೆ. ಏಕೆಂದರೆ ಇದರ ಸೊಪ್ಪು, ಹೂವು, ಕಾಳುಗಳಷ್ಟೇ ಅಲ್ಲದೆ ಸಿಪ್ಪೆಗಳೂ ಸಹ ವ್ಯರ್ಥವಾಗುವುದಿಲ್ಲ. ಅವರೇಕಾಯಿಯ ಸಿಪ್ಪೆಯು ಜಾನುವಾರುಗಳಿಗೆ ಉತ್ತಮ ಮೇವಾಗಿ ಉಪಯೋಗಿಸಲ್ಪಡುವ ಇದರಲ್ಲಿ ಮಣಿ ಅವರೇ, ತಟ್ಟೆ ಅವರೇ, ಚಪ್ಪರದವರೇ ಹೀಗೆ ನಾನಾ ವಿಧಗಳಿವೆ.
ಅವರೇಕಾಳಿನಲ್ಲಿ ತರಾವರಿ ತಿಂಡಿ ತಿನಿಸುಗಳನ್ನು ತಯಾರಿಸಬಹುದು. ಇದರ ಪ್ರಾಮುಖ್ಯತೆ ಎಷ್ಟೆಂದರೆ ಈ ಕಾಲದ ಎಲ್ಲ ಅಡುಗೆಯೂ ಅವರೇಮಯ. ಅವರೇ ಕಾಳಿನ ಸಾರು,ಅವರೇ ಕಾಳಿನ ಉಸಲಿ, ಅವರೇ ಕಾಳಿನ ರೊಟ್ಟಿ, ಅವರೇ ಕಾಳಿನ ಉಪ್ಪಿಟ್ಟು, ಅವರೇ ಕಾಳಿನ ಬಸ್ಸಾರು,ಅವರೇ ಕಾಳಿನ ಉಪ್ಸಾರು, ಅವರೇ ಕಾಳಿನ ಪಲ್ಯ,ಅವರೇ ಕಾಳಿನ ತೊವ್ವೆ, ಅವರೇ ಕಾಳಿನ ಬಿಸಿಬೇಳೆ ಬಾತ್,ಅವರೇ ಕಾಳಿನ ಪೊಂಗಲ್, ಅವರೇ ಕಾಳಿನ ಇಡ್ಲಿ, ದೋಸೆಗಳಲ್ಲದೆ, ತರಕಾರಿ ಸಾಂಬರ್, ಪುಲಾವ್, ಸಾಗೂ ಮುಂತಾದ ಹಲವಾರು ಅಡುಗೆಗಳಲ್ಲಿ ಇತರ ತರಕಾರಿಗಳೊಂದಿಗೆ ಬಳಸಲ್ಪಡುವ ಈ ಕಾಳುಗಳು ಭೋಜನ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಅವರೇಕಾಳುಗಳನ್ನು ನೆನೆ ಹಾಕಿ, ಹಿತಕವರೇ ಕಾಳಿನ ಹುಳಿಯಲ್ಲದೆ, ಇದನ್ನು ಕರಿದು ಗರಿಗರಿಯಾದ ಸ್ವಾದಿಷ್ಟ ಕುರುಕಲನ್ನೂ ತಯಾರಿಸಲಾಗುತ್ತದೆ. ಯಾವುದೇ ಬೇರೆ ತರಕಾರಿಗಳಂತೆ ಹಿತಕಿದ ಅವರೇಕಾಳಿನ ಖಾದ್ಯಗಳನ್ನು ದಿಢೀರ್ ಎಂದು ಮಾಡಲಾಗದು. ಅದಕ್ಕೆ ಪೂರ್ವ ತಯಾರಿ ಅತ್ಯಗತ್ಯ. ಹಿಂದಿನ ಸಂಜೆಗೆ ಅವರೇಕಾಳುಗಳನ್ನು ಬಿಡಿಸಿ, ಅದರಲ್ಲಿ ಬಲಿತಿರುವ ಕಾಳುಗಳನ್ನು ಆರಿಸಿ, ಅವುಗಳನ್ನು ನೀರಿನಲ್ಲಿ ನೆನೆಸಬೇಕು. ಸುಮಾರು ನಾಲ್ಕರಿಂದ ಆರು ಗಂಟೆಗಳ ಕಾಲ ನೆನೆದ ಮೇಲೆ ಈ ಕಾಳುಗಳು ಹಿತಕಲು ಸಿದ್ಧವಾಗಿರುತ್ತವೆ. ಕಾಳುಗಳನ್ನು ಹಿತಕುವುದು ಕೂಡ ಒಂದು ಕಲೆ. ಒಂದು ಕೈಯಲ್ಲಿ ಹಿತಕುವುದು ಸಲೀಸು. ಆದರೆ ಎರಡೂ ಕೈಗಳನ್ನು ಬಳಸಿ ಹಿತಕಲು ಸಾಕಷ್ಟು ತರಬೇತಿ ಹಾಗೂ ಅಭ್ಯಾಸ ಬೇಕಾಗುತ್ತದೆ. ಒಂದು ಕೈಯಿಂದ ಅವರೇ ಕಾಳನ್ನು ಹಿತಕುವಾಗ, ಇನ್ನೊಂದು ಕೈಯಲ್ಲಿ ಬೇರೆ ಕಾಳನ್ನು ಚಾಕಚಕ್ಯತೆಯಿಂದ ಆರಿಸಬೇಕು.ಎರಡೂ ಕೈಗಳೂ ಒಂದಾದ ಮೇಲೆ ಒಂದರಂತೆ ಯಂತ್ರದೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು. ಕೆಲವೊಮ್ಮೆ ತೀರಾ ಬಲಿತ ಕಾಳುಗಳು ಹಿತಕಲು ಸಿಗದಂತೆ ಜಾರಿ ಜಾರಿ ಹೋಗಿ ಆಟವಾಡಿಸುವುದೂ ಉಂಟು. ಇಂಥಹ ಕಾಳುಗಳು ಕೆಲವು ಬಾರಿ ಹಿತಕಿದ ರಭಸಕ್ಕೆ ಚಂಗನೇ ಹಾರಿ ಹೋಗಿ ನಮ್ಮೊಡನೆ ಜೂಟಾಟ ಆಡುವುದೂ ಉಂಟು. ಕಾಳುಗಳನ್ನೆಲ್ಲಾ ಹಿತಕಿದ ನಂತರ ಉಳಿಯುವ ಸಿಪ್ಪೆಗಳನ್ನು ರಸ್ತೆಗೆರೆಚುವ ಪರಿಪಾಠವೂ ಇದೆ. ಈ ಸಿಪ್ಪೆಗಳನ್ನು ಜನ ತುಳಿದರೆ ಸಾರು ಮತ್ತಷ್ಟು ರುಚಿಕರವಾಗುತ್ತದೆಂಬ ನಂಬಿಕೆಯೇ ಇದಕ್ಕೆ ಕಾರಣವಿರಬಹುದೇ?
ಬೆಂಗಳೂರು ಮತ್ತಿತರ ನಗರ ಪ್ರದೇಶಗಳಲ್ಲಿ ಪ್ರತೀ ವರ್ಷ ‘ಅವರೇ ಮೇಳ’ ನಡೆದು ಸಹಸ್ರಾರು ಸಂಖ್ಯೆಯಲ್ಲಿ ರಸಿಕರನ್ನು ತನ್ನೆಡೆಗೆ ಬರಸೆಳೆಯುತ್ತದೆ. ಈ ಮೇಳಗಳಲ್ಲಂತೂ ನಾವು ಕಂಡು ಕೇಳರಿಯದ ವೈವೀಧ್ಯಮಯ ಅವರೇ ಕಾಳಿನ ಖಾದ್ಯಗಳನ್ನು ಕಾಣಬಹುದು.ಅವರೇ ಕಾಳಿನ ಹೋಳಿಗೆ, ಅವರೇ ಕಾಳಿನ ವಡೆ, ಅವರೇ ಕಾಳು ಪಾಯಸ, ಅವರೇ ಕಾಳಿನ ಬರ್ಫಿ, ಅವರೇ ಕಾಳಿನ ಕುರ್ಮಾ, ಅವರೇ ಕಾಳಿನ ಚಟ್ನಿ,ಅವರೇ ಕಾಳಿನ ಕಜ್ಜಾಯ, ಅವರೇ ಕಾಳಿನ ಮಂಚೂರಿ ಹೀಗೆ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ, ಭೋಜನ ಪ್ರಿಯರ ನಾಲಿಗೆ ತಣಿಯುವಂತೆ ಮಾಡುತ್ತಾರೆ.
ಅವರೇ ಕಾಳಿನ ಸಾರು ಬಿಸಿ ಬಿಸಿ ರಾಗಿ ಮುದ್ದೆ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು.ರಟ್ಟೆ ಮುರಿಯುವಂತೆ ದುಡಿದು ಬಂದ ಕೃಷಿಕನಿಗೆ ಮುದ್ದೆ ಜೊತೆಗೆ ಅವರೆಕಾಳಿನ ಬಸ್ಸಾರೋ, ಉಪ್ಪು ಸಾರೋ ಇದ್ದರಂತೂ ಮುಗಿದೇ ಹೋಯಿತು ಮತ್ತೇನೂ ಬೇಕೆಂಬ ಆಸೆ ಮೂಡದ ರೀತಿಯಲ್ಲಿ ತೃಪ್ತಿ ಪಡಿಸುತ್ತದೆ. ಮುದ್ದೆ, ಅನ್ನ, ಚಪಾತಿ ಪೂರಿ, ರೊಟ್ಟಿ ಹೀಗೆ ಎಲ್ಲದರ ಜೊತೆ ಬೆರೆಯುವ, ಹೊಂದಿಕೊಳ್ಳುವ ಕಲೆಗಾರಿಕೆ, ನಯಗಾರಿಕೆಯಿರುವ ಈ ಕಾಳುಗಳು ಸ್ನೇಹ ಜೀವಿಗಳೆಂದರೆ ತಪ್ಪಾಗಲಾರದು. ಯಾರೊಡನೆಯೂ ಬಿಗಮಾನವಿಲ್ಲದೆ, ಕಲಹವಿಲ್ಲದೆ, ಮನಸ್ತಾಪಗಳಿಗೆ ಎಡೆ ಮಾಡಿಕೊಡದೆ ಹೊಂದಿಕೊಳ್ಳುವ ಸ್ವಭಾವ ಇದಕ್ಕಿದೆ.
ಬೆಂಗಳೂರಿನಂತಹ ಮಹಾನಗರಗಳಲ್ಲಿ ಉದ್ಯೋಗಸ್ಥ ಮಹಿಳೆಯರೇ ಹೆಚ್ಚು. ಅವರಿಗೆ ಅವರೇಕಾಯನ್ನು ಅಂಗಡಿಯಿಂದ ತಂದು, ಸುಲಿಯಲು ಸಮಯವಾಗಲಿ ಹಿತಕಲು ವ್ಯವಧಾನವಾಗಲಿ ಇರುವುದಿಲ್ಲ. ಹಾಗೆಂದು ಅವರು ಅವರೇಕಾಳನ್ನು ತಿನ್ನದೆ ಇರಲಾದೀತೇ! ಇಂತಹವರಿಗಾಗಿಯೇ ತರಕಾರಿ ಅಂಗಡಿಗಳಲ್ಲಿ ಸುಲಿದ ಅವರೆಕಾಳುಗಳನ್ನು, ಹಿತಕಿದ ಅವರೆಯನ್ನು ಸೇರು, ಪಾವು, ಚಟಾಕಿನ ಲೆಕ್ಕದಲ್ಲಿ ಮಾರಲಾಗುತ್ತದೆ. ಅವರೆಕಾಯಿಯ ಬೆಲೆಗೆ ಹೋಲಿಸಿದರೆ ಇದು ಅತ್ಯಂತ ದುಬಾರಿಯೆಂದೆನಿಸಿದರೂ “ಅವರೆಕಾಯಿಯನ್ನು ತಿನ್ನಲಾಗಲಿಲ್ಲವಲ್ಲ!” ಎಂಬ ಚಿಂತೆಯನ್ನು ನೀಗಿಸುವಲ್ಲಿ ಯಶಸ್ವಿಯಾಗಿದೆ.
ಅವರೇಕಾಯಿ ಕೇವಲ ನಾಲಿಗೆ ರುಚಿಗೆ ಮಾತ್ರ, ಇದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನಗಳು ಇಲ್ಲವೆಂದು ತಿಳಿದಿದ್ದರೆ ಅದು ತಪ್ಪಾದೀತು. ಅವರೇಕಾಳುಗಳು ಪ್ರೋಟೀನ್, ಕಬ್ಬಿಣದ ಅಂಶ, ಮೆಗ್ನೀಷಿಯಂ ಮತ್ತು ಸತುವನ್ನು ಯಥೇಚ್ಛವಾಗಿ ಒಳಗೊಂಡಿದೆ. ಇದರಲ್ಲಿ ನಾರಿನ ಅಂಶವಿರುವುದರಿಂದ ಪಚನ ಕ್ರಿಯೆಯನ್ನು ಸುಲಭಗೊಳಿಸುತ್ತವೆ. ಅವರೇ ಕಾಳುಗಳು ಬಿ ಮತ್ತು ಸಿ ಅನ್ನಾಂಗಗಳನ್ನು ಒಳಗೊಂಡಿದ್ದು, ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಹೃದ್ರೋಗಿಗಳೂ ಕೂಡ ಇದರ ಸವಿಯನ್ನು ಆನಂದಿಸಬಹುದಾಗಿದೆ. ಶ್ವಾಸಕೋಶವನ್ನು ಆರೋಗ್ಯವಾಗಿಡುವಲ್ಲಿ, ಮೆದುಳಿನ ಕಾರ್ಯ ಕ್ಷಮತೆಯನ್ನು ಹೆಚ್ಚಿಸುವಲ್ಲಿ, ಕ್ಯಾನ್ಸರ್ ಕಾಯಿಲೆ ಬರದಂತೆ ತಡೆಗಟ್ಟುವಲ್ಲಿ, ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.ಅವರೇಕಾಯಿ ಚಳಿಗಾಲದಲ್ಲಿ ದೇಹದ ಉಷ್ಣಾಂಶವನ್ನು ಕಾಯ್ದಿಡುವುದರಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಯಾವುದೇ ವಯಸ್ಸಿನ ತಾರತಮ್ಯವಿಲ್ಲದೆ ಚಿಕ್ಕ ಮಕ್ಕಳಿಂದ ಮುದುಕರವರೆಗೂ ಇದನ್ನು ಸವಿಯಬಹುದಾಗಿದೆ. ಕೆಲವೊಂದು ಸಭೆ ಸಮಾರಂಭಗಳಲ್ಲಿ ಇದರ ಖಾದ್ಯಗಳನ್ನು ಮಾಡಿಸಿರುವುದೇ ದೊಡ್ಡ ಪ್ರತಿಷ್ಠೆಯಾಗಿ ಪ್ರತಿಷ್ಠೆಯ ವಿಷಯವಾಗುತ್ತದೆಯೆಂದರೆ ಅವರೆಕಾಯಿಯ ಪ್ರಾಮುಖ್ಯತೆ ಅರಿವಾಗದಿರದು.
‘ಮಕರ ಸಂಕ್ರಾಂತಿ’ ರೈತರಿಗೆ ಸುಗ್ಗಿಯ ಹಬ್ಬ. ಈ ದಿನ ಕೈಗೆ ಬಂದಿರುವ ಫಸಲನ್ನು, ಭೂತಾಯಿಯನ್ನು, ಉಳುಮೆಗೆ ಸಹಕರಿಸಿದ ಜಾನುವಾರುಗಳನ್ನು ಪೂಜಿಸುವುದು ವಿಶೇಷ. ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ಹಬ್ಬದಂದು ಹೊಸದಾಗಿ ಕೈಗೆ ಬಂದ ಫಸಲುಗಳಾದ ಅವರೇಕಾಯಿ, ಗೆಣಸು, ಕಡಲೆಕಾಯಿಗಳನ್ನು ಬೇಯಿಸಿ, ದೇವರಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ ಅಂದರೆ ದೇವರಿಗೂ ಪ್ರಿಯ ನಮ್ಮೀ ಅವರೆಕಾಯಿ ಎಂಬುದು ವೇದ್ಯವಾಗುತ್ತದೆ. ಇಷ್ಟೇ ಅಲ್ಲದೆ ಹಸು, ಎತ್ತುಗಳಿಗೆ ಅವರೇಕಾಯಿಯ ಹಾರವನ್ನು ಹಾಕಿ ಅವುಗಳನ್ನು ಸಿಂಗರಿ ಸಂಭ್ರಮಿಸುತ್ತಾರೆ.
ಅವರೆಕಾಯಿ ಫಸಲಿನಲ್ಲಿ ಬಲಿತ ಕಾಳುಗಳನ್ನು ಬಿಡಿಸಿ, ಒಣಗಿಸಿ, ಒಣ ಅವರೇಕಾಳುಗಳನ್ನಾಗಿ ಮಾಡಲಾಗುತ್ತದೆ. ಈ ಕಾಳುಗಳನ್ನು ಒಡೆದು, ಅವರೇ ಬೇಳೆಯನ್ನಾಗಿಯೂ ಪರಿವರ್ತಿಸಲಾಗುತ್ತದೆ. ಕೆಲವೊಂದು ಮನೆಗಳಲ್ಲಿ ಹಿತಕಿದ ಕಾಳುಗಳನ್ನು ಬಿಸಿಲಲ್ಲಿ ಒಣಗಿಸಿ ಶೇಖರಿಸಿಡುವ ಪರಿಪಾಠವೂ ಇದೆ. ಏಕೆಂದರೆ ಅವರೇಕಾಯಿ ಎಲ್ಲ ಕಾಲಗಳಲ್ಲೂ ಅಲಭ್ಯ. ಅಕಸ್ಮಾತ್ ಅಕಾಲದಲ್ಲಿ ಅವರೆಯ ರುಚಿ ಸವಿಯಬೇಕೆನಿಸಿದರೆ ಈ ಒಣ ಹಿತಕವರೆ ಕಾಳುಗಳನ್ನು ನೀರಿನಲ್ಲಿ ಒಂದು ಗಂಟೆ ನೆನೆಸಿದರೆ ಸಾಕು, ತಾಜಾ ಕಾಳುಗಳು ಅಡುಗೆಗೆ ಸಿದ್ಧ. ಸೊನೆ ಇರದ ಈ ಕಾಳುಗಳು ಅಷ್ಟು ರುಚಿಸದಿದ್ದರೂ ಹಿತಕವರೇ ಸಾರು ತಿಂದೆವೆಂಬ ಸಂತೋಷವನ್ನು ನೀಡಬಲ್ಲದು.
ಈ ಅವರೇ ಕಾಳುಗಳಿಗೂ ಬೆಂಗಳೂರಿಗೂ ಒಂದು ಅವಿನಾಭಾವ ಸಂಬಂಧವಿದೆ.
ಒಮ್ಮೆ ಬೆಂಗಳೂರಿನ ನಿರ್ಮಾತೃ, ನಾಡಪ್ರಭುಗಳೂ ಆದ ಕೆಂಪೇಗೌಡರು ಕುದುರೆ ಏರಿ ಹೊರಟರು. ಕಾಡಿನಲ್ಲಿ ದಾರಿತಪ್ಪಿ, ಹಸಿವು ಬಾಯಾರಿಕೆಯಿಂದ ಬಳಲುತ್ತಾ ಸಾಗುತ್ತಿದ್ದಾಗ ದೂರದಲ್ಲಿ ಒಂದು ಗುಡಿಸಲು ಕಣ್ಣಿಗೆ ಬಿತ್ತು. ಅದರ ಬಳಿಸಾರಿದ ಪ್ರಭುಗಳು, ಕುದುರೆಯಿಂದಿಳಿದು, ಗುಡಿಸಲಿನ ಬಾಗಿಲಿಗೆ ಬಂದು, ” ಯಾರಿದ್ದೀರಿ ಒಳಗೆ? ನಮಗೆ ಬಹಳ ಹಸಿವಾಗುತ್ತಿದೆ. ತಿನ್ನಲು ಏನಾದರೂ ಇದ್ದಲ್ಲಿ ದಯಮಾಡಿ ನೀಡಿ” ಎಂದು ವಿನಯದಿಂದ ಕೇಳಿಕೊಂಡರು. ಒಳಗೆ ಅಡುಗೆ ಮಾಡುತ್ತಿದ್ದ ಮುದುಕಿಯೊಬ್ಬಳು, ಅಡುಗೆ ಇನ್ನು ಆಗಬೇಕೆಂದೂ, ಸಾರು ಮಾಡಲು ಕಾಳುಗಳನ್ನು ಬೇಯಿಸಿರುವುದಾಗಿಯೂ, ಕೆಲ ಕಾಲ ಕಾದರೆ ಅಡುಗೆ ಸಿದ್ಧವಾಗುವುದೆಂದೂ ತಿಳಿಸಿದಳು. ಪ್ರಭುಗಳಿಗೆ ಹಸಿವು ತಡೆಯದಾಗಿತ್ತು. ಅವರು ಈ ತತ್ತಕ್ಷಣದಲ್ಲಿ ಏನಾದರೂ ನೀಡಬೇಕೆಂದು,ಬಹಳ ಹಸಿವಾಗುತ್ತಿದೆಯೆಂದೂ ಮತ್ತೆ ಹೇಳಿದಾಗ, ಆ ಮುದುಕಿ ಒಂದು ಮಣ್ಣಿನ ಸಾವೆಯ ತುಂಬಾ ಉಪ್ಪು ಹಾಕಿ ಬೇಯಿಸಿದ ಅವರೆಕಾಳುಗಳನ್ನು ತಂದು ಪ್ರಭುಗಳಿಗೆ ನೀಡಿದಳು. ಹಸಿವಿನಿಂದ ಕಂಗೆಟ್ಟಿದ್ದ ಪ್ರಭುಗಳು ಆ ಕಾಳುಗಳನ್ನು ತಿಂದಾಗ ಅದು ಅಮೃತಕ್ಕಿಂತಲೂ ರುಚಿಯೆನಿಸಿತು. ಅಷ್ಟು ಚೆನ್ನಾಗಿ ಬೆಂದ ಕಾಳುಗಳ ಪ್ರದೇಶವನ್ನು ‘ಬೆಂದಕಾಳೂರು’ ಎಂದು ಕರೆದರು. ಈ ಸ್ಥಳವೇ ಮುಂದೆ ಬೆಂಗಳೂರಾಗಿ ಪ್ರಸಿದ್ಧಿಯನ್ನು ಪಡೆಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ಬ್ಯಾಂಗಲೋರ್ ಆಗಿದ್ದು, ಪ್ರಸ್ತುತ ‘ಬೆಂಗಳೂರು’ ಎಂದೆನಿಸಿಕೊಂಡಿದೆ. ಒಟ್ಟಿನಲ್ಲಿ ಈ ಅವರೆಕಾಳನ್ನು ರಾಜರಿಂದ ಹಿಡಿದು ಜನಸಾಮಾನ್ಯರವರೆಗೂ ಇಷ್ಟಪಡದವರೇ ಇಲ್ಲ ಎಂದರೆ ತಪ್ಪಾಗಲಾರದು.
ಅವರೆಕಾಯಿ ಕೆಲಮಟ್ಟಿಗೆ ವಾಯುವಿನ ಅಂಶವನ್ನು ಒಳಗೊಂಡಿದೆ. ಕೆಲವರ ದೇಹದಲ್ಲಿ ವಾತವನ್ನು ಹೆಚ್ಚಿಸುತ್ತದೆ. ಅಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಂತ ಇದನ್ನು ತಿನ್ನದೆ ಕೆಟ್ಟವರು ಉಂಟೇ! ಇದಕ್ಕೆಂದೇ ಅವರೆಕಾಯಿ ಅಡುಗೆಯನ್ನು ಮಾಡುವಾಗ ಇಂಗು, ಬೆಳ್ಳುಳ್ಳಿ ಹಾಗೂ ಶುಂಠಿಗಳನ್ನು ಖಡಾಖಂಡಿತವಾಗಿ ಬಳಸಲಾಗುತ್ತದೆ. ಈ ಒಂದು ದೋಷದ ಹೊರತಾಗಿ ಉಳಿದೆಲ್ಲಾ ಉತ್ತಮ ಅಂಶಗಳನ್ನು ಒಳಗೊಂಡಿರುವುದರಿಂದ ಇದು ಸರ್ವಕಾಲಿಕ, ಸರ್ವಮಾನ್ಯ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅರುಣಾ ರಾವ್