ಹೊಸ ವರ್ಷದ ವಿಶೇಷ-2023

ಡಿಸೆಂಬರ್ 31ರ ಮಧ್ಯರಾತ್ರಿ

ಅರುಣಾ ಶ್ರೀನಿವಾಸ

ಡಿಸೆಂಬರ್ 31ರ ಮಧ್ಯರಾತ್ರಿ
ಭೂಗೋಳವೇ ಎದ್ದು
ಸಂಭ್ರಮಿಸುತ್ತದೆ….

ಸಂಭ್ರಮಿಸುವುದೊಂದು ಹುಚ್ಚು
ಜನಮನದ ಎದೆಯಲ್ಲಿ
ಹೊಸ ಹರುಷವೊಂದು ಕಾರಣ…
ಒಟ್ಟು ಮೈ ಮರೆಯಬೇಕು
ಹುಚ್ಚೆದ್ದು ಕುಣಿಯಬೇಕು

ನೋಡಬೇಕು ಅಲ್ಲಲ್ಲಿ..
ಪಟಾಕಿಗಳ ಸದ್ದು
ಕಿವಿ ನಿಮಿರಿಸುವ ಬ್ಯಾಂಡುಗಳ ಮರ್ಜು
ಪಾರ್ಟಿಗಳಲಿ ಕುಣಿದು ಮೈಮರೆವ
ಗಂಡು ಹೆಣ್ಣುಗಳ ದರಬಾರು
ಅಮಲೇರಿಸುವ ಬ್ರಾಂಡಿ, ವ್ಹಿಸ್ಕಿಗಳ ಕಾರುಬಾರು

ಅಬ್ಬರದ ಉಬ್ಬರಕೆ
ಆ ಕ್ಷಣಕೆ ಸದ್ದಡಗುವ
ಅಫ್ಘನ್ನಿನ ಹೆಂಗಳೆಯರ ಕೂಗು
ರಷ್ಯಾ ಯುಕ್ರೇನ್ಗಳ ಬೆಂಕಿಯ ಸೋಗು,
ಸೋರಿದ ಧರ್ಮದ ಅಮಲು
ಜಾತಿ, ಮತ ದ್ವೇಷಗಳಿಗೆ ಬಲಿಯಾದ ಬಣ್ಣದ ತೊಗಲು,
ನಿರುದ್ಯೋಗಿಯ ಸತ್ವವಿಲ್ಲದ ಹಾಸ
ಲಂಚ , ಭ್ರಷ್ಟಾಚಾರಗಳ ಅಟ್ಟಹಾಸ..
ಹೀಗೆ ಇನ್ನೂ ಹಲವು…

ಹಾಗೆ ನೋಡಿದರೆ,
ಬದಲಾಗುವುದಿಲ್ಲ ಇನ್ನೇನೂ…
ಗೋಡೆಯ ಮೇಲಿನ ಹಳೆಯ
ಕ್ಯಾಲೆಂಡರೊಂದನ್ನು ಬಿಟ್ಟು…

ಡಿಸೆಂಬರ್ 31ರ ಮಧ್ಯರಾತ್ರಿಯ ಆವೇಶಕೆ
ತೊಳೆದು ಹೋಗಿಲ್ಲ ಬಿಡಿ
ಕೊಚ್ಚೆ ಕೊಳೆಯೊಂದೂ….

ಆ ಕ್ಷಣದ ಮೈಮರೆವ
ಅಮಲಿಗಷ್ಟೇ ವಾಸ್ತವದ
ನೋವ ನೆನಪುಗಳು ನುಜ್ಜುಗುಜ್ಜು…
ಮರುದಿನಕೆ…
ಮತ್ತದೇ ನೋವುಗಳೆದ್ದು ಸಜ್ಜು


ಮೌನಜೀವಿ

Leave a Reply

Back To Top