ಹೊಸ ವರ್ಷದ ವಿಶೇಷ-2023
ಗಜ಼ಲ್
ಹಮೀದಾ ಬೇಗಂ ದೇಸಾಯಿ
ಅದೇಕೋ ಜನರ ಭಾವಗಳು ಬಿಕರಿ ಆಗುತ್ತಿವೆ ಈಗೀಗ
ಹತಾಶೆಯ ನೋವು ಮಡುಗಟ್ಟಿ ಮುಳ್ಳಂತೆ ಚುಚ್ಚುತ್ತಿವೆ ಈಗೀಗ
ಕನಸುಗಳು ಕರಗುತ್ತಿವೆ ಮಂಜುಗಡ್ಡೆ ತೆರದಿ ಏಕೋ ಏನೋ
ಬಿದ್ದ ತುಣುಕುಗಳು ಸಿಗದೆ ಜಾರಿ ಹೋಗುತ್ತಿವೆ ಈಗೀಗ
ಭರಾಟೆಯಲಿ ನಡೆದಿದೆ ಅರ್ಧಂಬರ್ಧ ಬೆಂದ ಶಬ್ದಗಳ ವ್ಯಾಪಾರ
ಗರಿಯಾದ ನೋಟುಗಳ ಹಿಂದೆ ಪ್ರತಿಭೆಗಳು ಓಡುತ್ತಿವೆ ಈಗೀಗ
ಅರ್ಥವಿಲ್ಲದ ಮೋಜಿಗಾಗಿ ತನ್ನತನದ ನಿರ್ಲಜ್ಜ ಮಾರಾಟ
ಹಳದಿ ಚಷ್ಮಾದ ರಂಗಿನಲ್ಲಿ ನಿಯತ್ತುಗಳು ಮುಗ್ಗರಿಸಿ ಬೀಳುತ್ತಿವೆ ಈಗೀಗ
ಅಂತರಂಗದ ಬೆಳಕು ಕಾಣದೆ ತಡಕಾಡುವುದು ತರವಲ್ಲ ಬೇಗಂ
ಒಳಗಣ್ಣು ತೆರೆದಾಗ ಭರವಸೆಯ ಕಿರಣಗಳು ಕಾಣುತ್ತಿವೆ ಈಗೀಗ
ಬಹಳ ಚೆಂದದ ಗಝಲ್ ಹಮೀದಾ ಮೇಡಂ….
ವಾಸ್ತವದ ವಿಷಾದಭಾವ….
ಅದ್ಭುತವಾಗಿ ವಾಸ್ತವದ ಅನಾವರಣ ಮಾಡಿದ್ದೀರಿ
ಮೆಚ್ಚುಗೆಗೆ ಧನ್ಯವಾದಗಳು ತಮಗೆ.