ಹೊಸ ವರ್ಷದ ವಿಶೇಷ-2023
ಸತ್ತಂತಿಹರನು ಬಡಿದೆಚ್ಚರಿಸಿ.
ಸ್ಮಿತಾ ರಾಘವೇಂದ್ರ
ಹೌದು, ನಮ್ಮ ರಾಷ್ಟ್ರಕವಿ ಕುವೆಂಪು ಅವರು
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು.
ಅಂತೇನೋ ಹೇಳಿಬಿಟ್ಟರು. ಆದರೆ ಬಡಿದು ಎಚ್ಚರಿಸುವ ಕೆಲಸ ಮಾಡೋದು ತುಂಬಾನೇ ಕಷ್ಟ ಬಿಡಿ, ಅಯ್ಯೋ ಯಾರಿಗೆ ಬೇಕು ಬಡಿದು ಎಚ್ಚರಿಸೋದು,ಹಾಗೇನಾದರೂ ಬಡಿದು ಎಚ್ಚರಿಸಿದರೆ ನಮಗೇ ಬಡಿತ ಗ್ಯಾರಂಟಿ, ಏನಾದರೂ ಮಾಡಿಕೊಳ್ಳಲಿ ಎಂದು, ಕಂಡೂ ಕಾಣದಂತೆ ಜಾಣ ಕುರುಡಿನಲಿ ಸಾಗುವ ಅನಿವಾರ್ಯ ಕಾಲ ಇದು.
ಕೂಡಿಸಿ ಒಲಿಸೋದಂತೂ ಅಸಾಧ್ಯದ ಮಾತು.
ಬಿಟ್ಟು ನಡೆಯೋದು ವಾಸಿ. ಎಂದು ನಿರ್ಧಾರ ಮಾಡಿ ದಶಕಗಳೇ ಕಳೆದವು. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಾಲ ನಿರಂತರ ಸಾಗುತ್ತಲೇ ಇದೆ. ಪ್ರತೀ ಬೆಳಗನ್ನೂ ಬಡಿದು ಎಬ್ಬಿಸುತ್ತ.
ಆದರೆ ನಾವು ಹಾಗೇ ಬಡಿದು ಎಬ್ಬಿಸುವ ಸಮಯದ ಘಂಟೆಯನ್ನು ವರುಷಕ್ಕೆ ಒಮ್ಮೆ ಮಾತ್ರ ನೆನಪಿಸಿಕೊಂಡು ಗಡಬಡಿಸಿ ಸುಮ್ಮನಾಗುತ್ತೇವೆ.
ಉರುಳಿತ್ತಿರುವ ಕಾಲ ಚಕ್ರದ ಧಾವಂತದ ಬದುಕಿನಲಿ ಸಿಕ್ಕಿದ್ದೆಷ್ಟೋ, ದಕ್ಕಿದ್ದೇಷ್ಟೋ,
ಹಳೆಯ ಹೆಜ್ಜಯ ಜಾಡುಗಳ ಹೆಕ್ಕಿ ಹೆಕ್ಕಿ ಆರಿಸಿಕೊಂಡರೂ ಯಾವುದೋ ಸಂದಿಯಲಿ ಜಾರಿ ಬೀಳುತ್ತಲೇ ಇರುತ್ತದೆ.
ಹೊಸತು ಬೆಳಗು ಹೊಸತು ಸೊಬಗು
ನವನವೀನ ಜೀವನ
ಪ್ರತಿ ಬೆಳಗೂ ಹೊಸತೇ.
ಆದರೆ ನಾವು ನೋಡುವ ಪರಿ ಮಾತ್ರ ವಿಭಿನ್ನ.
ಇದು ವರುಷದ ಆರಂಭ ಎಂದು ಕುಣಿದಾಡುವಷ್ಟು, ಇದು ದಿನದ ಆರಂಭ ಎಂದು ಕುಣಿಯುವುದಿಲ್ಲ.
ಕೇವಲ ಆರಂಭವನ್ನು ಮಾತ್ರ ಹೊಸದಾಗಿ ನೋಡುವ ನಾವು, ಅಂತ್ಯಕ್ಕೆ ಮತ್ತೊಂದು ಆರಂಭಕ್ಕೆ ಸಜ್ಜಾಗುವ ತರಾತುರಿಯಲ್ಲಿ ಇರುತ್ತೇವೆ. ಹಾಗಿದ್ದರೆ ಮಧ್ಯದ ದಿನಗಳೆಲ್ಲ ಮಾಯವಾಗಿದ್ದೆಲ್ಲಿ!
ಪ್ರತೀ ಬೆಳಗನ್ನೂ ಹೊಸತಾಗಿ ನೋಡುವ, ಅಂತರಂಗದ ಕಣ್ಣು ತರೆದ ದಿನ ನಾವು ಗೆಲುವಿನತ್ತ ಸಾಗುತ್ತೇವೆ.
ಕಳೆದದಿನಗಳಂತೂ ಮತ್ತೆ ಸಿಗಲಾರದು ಒಲ್ಡ್ ಇಸ್ ಗೋಲ್ಡ್ ಅಂತ ಮೆಲುಕು ಹಾಕುವದರ ಜೊತೆ ಜೊತೆಗೇ ಉಳಿದ ದಿನಗಳೂ ನಮ್ಮದಾಗಿಸಿಕೊಳ್ಳುವತ್ತ ಸಾಗಬೇಕಿದೆ.
ಈ ವೇಗದ ಬದುಕಲ್ಲಿ ಕಾಲ ಕೂಡ ವೇಗ ಹೆಚ್ಚಿಸಿಕೊಂಡಿದೆಯೇನೋ ಅನ್ನಿಸುತ್ತದೆ. ಊಟ, ತಿಂಡಿ, ಕೆಲಸ,ಎನ್ನುತ್ತ ರಾತ್ರಿ ಕಳೆದು ಬೆಳಗು ಹರಿದೇ ಬಿಡುತ್ತದೆ. ಬೆಳಿಗ್ಗೆ ಏಳುವಾಗ ಸಂಕಲ್ಪಿಸಿದ ವಿಚಾರಕ್ಕಾಗಲೀ ಕೆಲಸಕ್ಕಾಗಲೀ ತಲುಪಲಾಗದೇ ದಿನಗಳು ಉರುಳುತ್ತಲೇ ಇರುತ್ತದೆ. ಇನ್ನು ವರ್ಷದ ಆರಂಭಕ್ಕೆ ಪಟ್ಟಿ ಮಾಡಿಕೊಂಡ ಕೆಲಸ ಕಾರ್ಯಗಳು ನಮ್ಮ ತಲುಪುವುದು ತೀರಾ ವಿರಳ.
ಮೊನ್ನೆ ತಾನೇ ಸಂಡೆ ಆಗಿದೆ ಮತ್ತೆ ಸಂಡೆ ಬಂದೇ ಬಿಡ್ತಾ.
ಸ್ಕೂಲ್ ಅಡ್ಮಿಶನ್ ಮಾಡಿ ನಿರಾಳವಾಗುತ್ತಿದ್ದಂತೆ ಮಕ್ಕಳ ಪರೀಕ್ಷೆಯ ಸಿದ್ಧತೆ.
ಕೆಲವೊಮ್ಮೆಯಂತೂ ಕ್ಯಾಲೆಂಡರ್ ನಲ್ಲಿ ತಿಂಗಳು ಬದಲಿಸುವ ಮೊದಲೇ ಮುಂದಿನ ತಿಂಗಳಿಗೆ ಜಂಪ್ ಆಗಿರುತ್ತದೆ.
ಒನ್ ಇಯರ್ ಮೆಮೊರೀ. ಟು ಇಯರ್ ಮೆಮೊರೀ, ಅಂತ ಪೇಸ್ಬುಕ್ ಮೇಲೆತ್ತಿ ಕೊಡುವಾಗ ಅರೇ ಇದು ಇತ್ತೀಚಿಗೆ ಬರೆದಿದ್ದು, ಇದು ಇತ್ತೀಚಿಗೆ ತೆಗೆದ ಫೋಟೋ ಅಲ್ವಾ? ಇಷ್ಟು ಬೇಗ ವರ್ಷ ಕಳೆಯಿತಾ ಅಂತನಿಸದೇ ಇರದು.
ಇರಲಿ, ಭಾವಗಳು ಹಾಗೇ ಇದೆಯಲ್ಲ ಅಂತ ರಿ ಪೋಷ್ಟ್ ಕೂಡಾ ಮಾಡ್ತೀವಿ.
ಹಾಗಿದ್ದರೆ ಭಾವಗಳು ಬದಲಾಗಿಲ್ಲ ಅಂತಲ್ಲ. ನಡೆದ ಘಟನೆಯ ನೆನಪು ಮಾತ್ರ ಹಾಗೇ ಇದೆ ಅಷ್ಟು ಬೇಗ ಕಾಲ ಕಳೆದಿದೆ ಅನ್ನಬಹುದು.
ಅದೇನೇ ಇದ್ದರೂ ಕಾಲ ಕೂಡಾ ಧಾವಂತದಲಿ ಓಡುತ್ತುರುವದಂತೂ ಸ್ಪಷ್ಟ.
ಎಷ್ಟೆಲ್ಲಾ ವರ್ಷಗಳು ಕಳೆದವು. ಈಗ್ಯಾವುದೂ ಹೊಸತಾಗಿ ಉಳಿದಿಲ್ಲ. ಇಂದಿನ ಹೊಸತು ನಾಳೆಯ ಹಳತು ನಿತ್ಯ ಸತ್ಯ.
ಕಾಲದ ಜೊತೆಗೆ ಹೆಜ್ಜೆ ಹಾಕುವುದು ಬಹಳ ಮುಖ್ಯ. ಕಳೆದ ಕಾಲವನ್ನು ಮೆಲುಕು ಹಾಕಬೇಕೆ ಹೊರತೂ ಹಳಹಳಿಸುತ್ತ ಕೂರುವುದಲ್ಲ.
ಕಾಲ ಎಲ್ಲವನ್ನೂ ಮರೆಸುತ್ತದೆ, ಎಲ್ಲವನ್ನೂ ಅಳಿಸುತ್ತದೆ, ಮತ್ತೊಂದು ಹೊಸ ಚೆಲುವು ಸಂಭ್ರಮ, ಬದುಕು ಎಲ್ಲವೂ ಎದ್ದು ನಿಲ್ಲುವಂತೆ ಮಾಡುತ್ತದೆ. ನಾವು ಅದರ ಜೊತೆಗೆ ಸಾಗುವ ಜಾಣ್ಮೆಯೊಂದನ್ನು ಕಲಿಯಬೇಕು ಅಷ್ಟೇ
“ಯುಗ ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ” ಎಂದು ಹಾಡಿದಷ್ಟು ಸುಲಭವಲ್ಲ
ಯಾವುದನ್ನೇ ಆದರೂ ಉಳಿಸಿಕೊಳ್ಳುವುದು.
ಇನ್ನೊಂದು ವರ್ಷಕ್ಕೆ ಅಡಿಯಿಡುವ ಈ ಸುಸಂದರ್ಭದಲ್ಲಿ
ಹೊಸದಾದ ಒಂದು ಕನಸ ಹೆಣೆಯೋಣ
ತೊಟ್ಟುಕೊಳ್ಳಲು ಬೇಕಲ್ಲ ಮತ್ತೆ ಬರಬಹುದಾದ ಈ ದಿನದ ವರೆಗೆ.
ತುಂಬಾ ಚೆನ್ನಾಗಿ ಬರೆದಿದ್ದೀರಿ
Nice writeup smitha
Sooper Kanasu on New year
Abhinandhanegalu!