ಕಾವ್ಯ ಸಂಗಾತಿ
ವಿಜಯಶ್ರೀ ಎಂ.ಹಾಲಾಡಿ ಕವಿತೆ-ಆತ್ಮದ ಮಾತು
ನುಜ್ಜುಗುಜ್ಜಾಗಿದೆ ಆತ್ಮ
ನಿನ್ನ ಸ್ಪರ್ಶವಿಲ್ಲದೆ
ನೋಡು
ಬೇಕಾದರೆ ನನ್ನನ್ನು ನಿಂದಿಸು
ದೂರಮಾಡು, ಮರೆತುಬಿಡು
ಆದರೆ ಆತ್ಮವನ್ನು ನೋಯಿಸಬೇಡ
ಅದಕ್ಕೇನೂ ತಿಳಿಯುವುದಿಲ್ಲ
ಪುಟ್ಟ ಮಗುವಿನಂತೆ
ಸದಾ ನಿನ್ನ ದಾರಿ ಕಾಯುತ್ತಿರುತ್ತದೆ
ನೀನು ದೂರಾಗುವೆ ಎಂದು
ಮುನಿಸಿಕೊಂಡಿರಬಹುದೆಂದು
ನಾನೆಂದೂ ಅದಕ್ಕೆ ಗೊತ್ತುಪಡಿಸುವುದಿಲ್ಲ
ನಿನ್ನ ಕತೆಗಳನ್ನೇ ಹೇಳುತ್ತ
ಪ್ರತಿ ರಾತ್ರಿಯೂ ತಟ್ಟಿ ಮಲಗಿಸುತ್ತೇನೆ
ನಿನ್ನ ಕನಸು ಕಾಣಲು
ಪ್ರೇರೇಪಿಸುತ್ತೇನೆ
ಇದೆಲ್ಲ ನನ್ನ ಕೈ ಮೀರಿದ್ದು
ಬೇಡವೆಂದರೂ ಮತ್ತೆ
ನಿನ್ನೆಡೆಗೇ ತಲುಪುತ್ತೇನೆ
ಅಲೆ ಮರಳುತ್ತದೆ ತೀರಕ್ಕೆ
ನೈದಿಲೆ ಕಾಯುತ್ತದೆ ಚಂದ್ರನಿಗಾಗಿ
…..
ಆತ್ಮ ತಲ್ಲಣಿಸಿದೆ!
***********