ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ


ನನ್ನ ಕವಿತೆಗಳಲಿ ,
ನನ್ನನು ಹುಡುಕದಿರಿ
ನನ್ನ ಪದಗಳಲಿ ,
ನನ್ನನು ನೋಡದಿರಿ
ನಾ ಕವಿಯಲ್ಲವೇ ?
ರವಿ ಕಾಣದ್ದನ್ನು, ಕವಿ ಕಾಣಬಲ್ಲನಲ್ಲವೇ ??
ಕಾಲಿಡದ ಪ್ರಪಂಚದಲಿ ,
ನಡೆಯುವುದೆನಗೆ ಗೊತ್ತು
ಕೇಳದ ದನಿಗೆ,
ಹಾಡುಗುವುದೆನಗೆ ಗೊತ್ತು
ನನ್ನದಲ್ಲದ ಭಾವನೆಯನೂ ,
ಬಣ್ಣಿಸುವುದೆನಗೆ ಗೊತ್ತು
ನನ್ನದಲ್ಲದ ಅಳುವಿಗೂ
ಆಕ್ರಂದಿಸುವುದೆನಗೆ ಗೊತ್ತು
ಇಲ್ಲದ ಪ್ರೀತಿಯಲಿ
ವಿಹರಿಸುವುದೂ ಗೊತ್ತು
ಇಲ್ಲದ ವಿರಹದಲಿ
ಉರಿಯುವುದೂ ಗೊತ್ತು
ಕವಿಯನು ಬರೀ ,ಕವಿಯಂತಷ್ಟೇ ತಿಳಿ .
ಪದಗಳ ಅವನನುರಾಗವನಷ್ಟೇ ತಿಳಿ ..
ಕವಿತೆಗಳಲಿ ನಾನಿಲ್ಲ
ಪದಗಳಲಿ ನಾ ಸಿಗುವುದಿಲ್ಲ
ಓ ಓದುಗನೇ , ,
ಕವಿಮನದ ಸಾಗರದಿ ಭಾವನೆಗಳು ಹಲವು
ಕ್ಷಣ ಕ್ಷಣಕೂ ಅಪ್ಪಳಿಸುವ ಅಲೆಗಳು ಹಲವು
ಅದೆಷ್ಟೋ ಭಾವಗಳ ಸಂಗಮವದು
ಅದೆಷ್ಟೋ ಅಕ್ಷರಗಳ ಸರಿಗಮವದು
ಕವಿಯನು ಬರೀ ಕವಿಯಂತಷ್ಟೇ ತಿಳಿ..
ಕವಿಯಂತಷ್ಟೇ ತಿಳಿ….