ಯೋಗೇಂದ್ರಾಚಾರ್ ಎ ಎನ್-ಗಜಲ್

ಕಾವ್ಯ ಸಂಗಾತಿ

ಯೋಗೇಂದ್ರಾಚಾರ್ ಎ ಎನ್-ಗಜಲ್

ನಿನ್ನ ಕೋಳಿ ಕರೆ ಕೊಟ್ಟರಷ್ಟೇ ನಾಡು ಬೆಳಕಾಗುವುದೆ ಷಡ್ಡು
ನೀನು ಚಾವಿ ಕೊಟ್ಟರಷ್ಟೇ ಜಗದ ಕಾಲ ನಡೆಯುವುದೆ ಷಡ್ಡು

ಮಂಡಿಯೂರಿಯಂತೂ ಕೂತಿಲ್ಲ ಅಂಬೆಗಾಲಿಡುತ್ತಿದ್ದೇವಷ್ಟೆ
ಗಾಂಪರ ಶಿಷ್ಯರಂತೆ ಮಡ್ಡನಂತೆ ಜನರ ಎಣಿಸುವುದೆ ಷಡ್ಡು

ನಮ್ಮ ಗುರಿ ನಿಲುವು ಖಚಿತವಿದೆ ಕೈ ಹಿಡಿದರಷ್ಟೇ ನೀ ರಾಜ
ಅಧಿಕಾರದ ತೆವಲಿಗೆ ನೀ ಹಣದ ಬೂಟು ನೆಕ್ಕುವುದೆ ಷಡ್ಡು

ಬೆಳಕಿನ ಚಿಲುಮೆ ಚಿಮ್ಮಿದೆ ಕತ್ತಲು ಹರಿಯುವುದಷ್ಟೇ ಬಾಕಿ
ಆ ಹೆಣ್ಣು ಹಸುಗೂಸುಗಳ ಕಂಡಾಗಲು ಮನ ಕರಗದೆ ಷಡ್ಡು

ಪ್ರೀತಿಯಿಂದ ಅಣ್ಣ ನಮ್ಮಣ ಎಂದೇ ಸಂಭೋದಿಸುತ್ತೆದ್ದೆವು
ಹೊನ್ನ ಕಳಶಕ್ಕಾಗಿ ಹೃದಯದರಮನೆ ತ್ಯಜಿಸುವುದೆ ಷಡ್ಡು

ಪಲ್ಲಕ್ಕಿ ಹೊರಲಷ್ಟೇ ಅಲ್ಲ ಶವಯಾತ್ರೆಗೂ ಸಿದ್ಧರಿದ್ದೇವೆ ಅಣ್ಣ
ನೀನು ಕಣ್ಮುಚ್ಚಿ ಹಾಲು ಕುಡಿದು ಕುಹಕದಿ ನಗುವುದೆ ಷಡ್ಡು

ಮೌನಯೋಗಿಯ ನೆನೆದು ಬಂದುಬಿಡು ನರಿ ಬುದ್ಧಿ ಬಿಟ್ಟುಬಿಡು
ಯಾರು ಬಾರದಿದ್ದರೂ ಹೇಳು ಹಚ್ಚಿದ ಕಿಚ್ಚು ಆರುವುದೆ ಷಡ್ಡು


One thought on “ಯೋಗೇಂದ್ರಾಚಾರ್ ಎ ಎನ್-ಗಜಲ್

Leave a Reply

Back To Top