ಕಾವ್ಯ ಸಂಗಾತಿ
ಕಳೆದ ಹಾಡಿಗದೆಷ್ಟೊ ಅಹವಾಲು..
ಡಾ.ಯಾ.ಮ.ಯಾಕೊಳ್ಳಿ
ಎದೆಯ ನೋವುಗಳಷ್ಟೇ ಭಾರವಾಗಿವೆ,ತೆರೆದ
ಮನವಿದ್ದರೂ ಅದಕೋ ಸ್ಪಂದಿಸುತ್ತಿಲ್ಲ
ಹಾಡುವ ಹಾಡುಗಳೆಲ್ಕ ರಾಗ ಕಳೆದುಕೊಂಡಿವೆ
ನುಡಿಯುವ ವೀಣೆಯ ತಂತಿ ತಾನಗಳೆಲ್ಲ ಬೇಸೂರು
ಒಂಟಿ ಆತ್ಮವೇಕೋ ಕುಳಿತು ಅಳುತ್ತಿದೆ
ಸಾಂತ್ವನ ಹೇಳಬೇಕಾದ ಎದೆಯ ದನಿ ಕಳೆದಿದೆ
ಗಿಡ ಗಿಡದ ಕೊಂಬೆಯಲಿ ಕುಳಿತ ಹಕ್ಕಿಗಳ
ದನಿಯಲೂ ಈಗ ಅಗಲಿಕೆಯ ಹಾಡು
ಸದಾ ಜೀವಜಲ ಜಿನುಗುತ್ತಿದ್ದ ಒರತೆಯೇಕೋ
ಬರುಡು ಬರುಡು,ನೆಚ್ಚಿದ ಹಕ್ಕಿಪಕ್ಕಿಗಳೆಲ್ಲ ಮೌನ
ನೀರವದ ಬಿಸಿಗಾಳಿ ಎತ್ತಲಿಂದಲೋ ಬಂದು
ಮನೆಯ ಮುಂದೆಲ್ಲ ರಣಬಿಸಿಲಿನ ದಾಳಿ
ಸತ್ತ ಆತ್ಮದ ಸುತ್ತ ಎಷ್ಟು ದಿನ ಕೂತು ಅಳುವಿ
ಕಿತ್ತೆದ್ದು ಬಾ ಇನ್ನು ಸಾಕು ಸಾಕು,
ಮನದ ಗವಿಯಲ್ಲೆಲ್ಲೋ ನಿತ್ತ ನಾದ, ಎತ್ತ ನೋಡಿದರೂ
ಕಾಡುವ ಹಳವಂಡಗಳ ನಡುವೆ ಜೀವ ಹನನ
ಏಕೆ ಜೊತೆಯಾಗಿತ್ತೋ ಜೀವ ಹಿಂಡುವ ಆ ಸಾಂಗತ್ಯ
ಯಾರಿಗುತ್ತರವದು ಗೊತ್ತು ತಿಳಿಯದಯೊಮಯ
ಹೋದುದೇಕೋ ಗೊತ್ತಿಲ್ಲ ಹೋದುದಷ್ಟೇ ಸತ್ಯ
ಮತ್ತೆ ಮತ್ತೆ ಬಂದು ಕಾಡುವ ನೆನಪಿಗೆ ನಾ ಅಸ್ತವ್ಯಸ್ತ
ವಿಷಾದ ಮಡುವುಗಟ್ಟಿರುವ ಆಪ್ತ ಕವಿತೆ