ವಚನ ವಿಹಾರ ( ಆಧುನಿಕ ವಚನಗಳು)

ವಚನಸಂಗಾತಿ

ವಚನ ವಿಹಾರ ( ಆಧುನಿಕ ವಚನಗಳು)

ಪುಸ್ತಕದ ಹೆಸರು ……………..ವಚನ ವಿಹಾರ ( ಆಧುನಿಕ ವಚನಗಳು)

ಲೇಖಕರ ಹೆಸರು……………..ಇಂದುಮತಿ ಲಮಾಣಿ(ಅಂಕಿತ ನಾಮ…ಇಂದುಪ್ರಿಯಶಂಕರ)

ಪ್ರಕಾಶಕರು…………………..*ವಾಗ್ಝಾಯಿ ಪ್ರಕಾಶನ,ವಿಜಯಪುರ

ಪ್ರಥಮ ಮುದ್ರಣ……………..೨೦೨೨    

ಪುಸ್ತಕ ಸಿಗುವ ವಿಳಾಸ……..ವಾಗ್ಘಾಯಿ ಪ್ರಕಾಶನ

ಹನ್ನೆರಡನೆಯ ಶತಮಾನದ ಬಸವಾದಿ ಶರಣರು ಕನ್ನಡದಲ್ಲಿ  ವಚನಗಳನ್ನು ರಚಿಸಿದರು.ಈ ವಚನ ಸಾಹಿತ್ಯ ಒಂದು ವಿಶಿಷ್ಟ ವಾದ ಸ್ಥಾನಪಡೆದಿದೆ. ಕನ್ನಡ ಸಾಹಿತ್ಯ ದಲ್ಲಿ ವಚನ ಸಾಹಿತ್ಯ ವನ್ನು ಕ್ರಾಂತಿಯ  ಸಾಹಿತ್ಯ ವೆಂದು ಕರೆಯಲಾಗುತ್ತದೆ. ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯವು ಕೊಡುಗೆ ಕೊಡುವಷ್ಟು ಸತ್ವಯುತಾದ ಸಾಹಿತ್ಯವಾಗಿದೆ.ಶರಣರು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ವಚನಗಳನ್ನು ರಚಿಸಿದರು. ಅವರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ.

 ಇಪ್ಪತ್ತನೆಯ ಶತಮಾನದಲ್ಲಿ ಆಧುನಿಕ ವಚನಕಾರರ ಸಂಖ್ಯೆ ವಿಪಲವಾಗಿ ಬೆಳೆಯಿತು.ಸ್ತ್ರೀ ಪುರುಷ ಎಂಬ ಬೇಧವಿಲ್ಲದೆ     ಅನೇಕರು ವಚನಗಳ ಮೂಲಕ ತಮ್ಮ ವಿಚಾರಗಳನ್ನು ವ್ಯಕ್ತ ಪಡಿಸಿದ್ದಾರೆ ಅವರಲ್ಲಿ ರಂಗನಾಥ ದಿವಾಕರ ,ಎಸ್.ವಿ.ರಂಗಣ್ಣ,ಪರಮೇಶ್ವರ ಭಟ್,ಕುಂವೆಂಪು,ದ.ರಾ.ಬೇಂದ್ರೆ, ಸಿದ್ದಯ್ಯ ಪುರಾಣಿಕ,ಅನ್ನದಾನಯ್ಯ ಪುರಾಣಿಕ,ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗಳು,ಡಾ ಕಮಲಾ ಹಂಪನಾ,ಶ್ರೀ ಮತಿ ಲೀಲಾ ಕಲಕೋಟಿ,ಡಾ.ಶೈಲಜಾ ಉಡಚಣ,ಶಿವಲಿಂಗಮ್ಮ ಕಟ್ಟಿ,ಶಾಂತಾದೇವಿ ಶಾಬಾದಿ,ಡಾ.ಸರಸ್ವತಿ ಚಿಮ್ಮಲಗಿ,ಪ್ರಭಾವತಿ ಎಸ್ ದೇಸಾಯಿ ,ಡಾ.ವಿಜಯಾದೇವಿ ಹೀಗೆ ಅನೇಕ ಕವಿ ಕವಯತ್ರಿಯರು ಆಧುನಿಕ ವಚನಗಳನ್ನು ಬರೆದಿದ್ದಾರೆ.

   ಅಪ್ಪಟ ಗೃಹಿಣಿ ಯಾಗಿ ಬದುಕು,ಸಾಹಿತ್ಯ ಮತ್ತು ಸಮಾಜವನ್ನು ಪ್ರೀತಿಸುವ  ಶ್ರೀಮತಿ ಇಂದುಮತಿ ಲಮಾಣಿ ಯವರು ಈಗಾಗಲೇ ಇಪ್ಪತ್ತು  ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾಗಿದ್ದಾರೆ.

 ಈ ನಿಟ್ಟಿನಲ್ಲಿ ಆಧುನಿಕ ವಚನಕಾರರ ಹೆಸರುಗಳಲ್ಲಿ ಸೇರುವಂತಹ ಮತ್ತೊಂದು ಹೆಸರು ಇಂದುಮತಿ  ಲಮಾಣಿ ಸಾಹಿತಿ ವಿಜಯಪುರ, ಇವರು ಈಗಾಗಲೇ  ರಾಜ್ಯಮಟ್ಟ ರಾಷ್ಟಮಟ್ಟದ ಸಾಹಿತಿ ಎಂದು  ಗುರುತಿಸಿಕೊಂಡಿದ್ದಾರೆ.ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸದ್ಯ ಕನಾ೯ಟಕ ಸರಕಾರ ರಾಜ್ಯ ಬಂಜಾರ ಅಕಾಡೆಮಿಯ ಸದಸ್ಯರಾಗಿದ್ದಾರೆ.

ಈಗ ಇವರು ” ವಚನ ವಿಹಾರ” ಎಂಬ ಆಧುನಿಕ ವಚನ ಸಂಕಲನವನ್ನು ಲೋಕಾರ್ಪಣೆ ಮಾಡಿದ್ದಾರೆ.ಇವರೂ ಕೂಡ ಶರಣರ ವಿಚಾರದಂತೆ ಸಾಮಾಜಿಕ ಸಮಸ್ಯೆ ,ಮಹಿಳಾ ಸಂವೇದನೆ,ಲೈಂಗಿಕ ದೌರ್ಜನ್ಯದ ಬಗ್ಗೆ,ಲಿಂಗ ಬೇಧ ,ಧರ್ಮಬೇಧ, ಮುಂತಾದ ಸಮಸ್ಯೆ ಗಳ ಬಗ್ಗೆ ವಚನಗಳನ್ನು ಅರ್ಥಪೂರ್ಣ ವಾಗಿ ರಚಿಸಿದ್ದಾರೆ.ಈ ಸಂಕಲನದಲ್ಲಿ ಒಟ್ಟು ೨೭೮ ವಚನಗಳಿವೆ.ಅವುಗಳಲ್ಲಿ ಕೆಲವು ಹಾಕಿರುವೆ.

                 ವಚನ  ೫

 ಹೃದಯ ಮಾರಾಟಕ್ಕಲ್ಲ

 ಮನವು ಮತ್ಸರಕ್ಕಲ್ಲ

 ವಿಶ್ವಾಸವು ಮೋಸಕ್ಕಲ್ಲ

  ನೀ ನನಗಿದ್ದರೆ ನಾ ನಿನಗೆ

  ಇದೇ ಪರಮಾತ್ಮನೊಲಿವ

   ಮಾರ್ಗ ಕೇಳೆಂದ ಇಂದುಪ್ರಿಯ ಶಂಕರ

                ವಚನ  ೯

ಬಿಳಿ ಖಾದಿ ಅಂಗಿ ಕಾವಿ ಕಪಟಿ ಲುಂಗಿ

ನೆತ್ತಿ ಮೇಲೆ ಸರ್ಪದ ಸಿಂಬಿ

ಆ ಸಿಂಬಿಯ ಮೇಲಣ ವಿಷದ ಕುಂಭ ತುಳುಕಾಡಿ

ಅಬ್ಬರಿಸಿ ಗಹ ಗಹಿಸುತಿದೆ

ನೋಡಯ್ಯ ಇಂದುಪ್ರಿಯ ಶಂಕರ

                ವಚನ ೩೫

ಜನನ ಸಂಭ್ರಮ

ಮರಣ ಸಂಕಟ

ಇವೆರಡರ ನಡುವೆ ಮಾಯೆಯ ಆಟ

ಇದರಲ್ಲಿ ಗೆದ್ದವನೇ ಮಹಾ ಪುಣ್ಯವಂತ

ಕೇಳೆಂದ ಇಂದುಪ್ರಿಯ ಶಂಕರ

             ವಚನ ೫೪

ಅಗ್ನಿಯಿಂದ ಜನಿಸಿದ ಪಾಂಚಾಲಿ

ಮಹಾರಾಣಿ ಆಗಿದ್ದು ಅಲ್ಲದೆ,

ಐದು ಗಂಡರ ಪತ್ನಿ ಯಾಗಿದ್ದೂ

ವನವಾಸ ತಪ್ಪಲಿಲ್ಲ,

ಇನ್ನು ಸಾಮಾನ್ಯ ಸ್ತ್ರೀಯರ ಪಾಡು

ಯಾವ ಲೆಕ್ಕ ಹೇಳಯ್ಯ ಇಂದುಪ್ರಿಯಶಂಕರ.

              ವಚನ ೧೨೭

ನಮ್ಮ ಸ್ವಭಾವ ದೀಪದ ಹಾಗಿದ್ದಾಗ,

ಅದು ರಾಜ ಮಹಾರಾಜರ ಅರಮನೆಯಲ್ಲಿ

ಎಷ್ಟು ಬೆಳಕು ನೀಡುವುದೋ

ಅಷ್ಟೇ ಪ್ರಜ್ವಲತೆ ಬಡವರ ಜೋಪಡಿಯಲ್ಲೂ

ಪಸರಿಸುತ್ತದೆ ನೋಡಯ್ಯ ಇಂದುಪ್ರಿಯಶಂಕರ

            ವಚನ ೧೭೫

ತವರು ಹೆಣ್ಣಿನ ಕನಸಿನ ತೇರು

ಹುಟ್ಟಿದ ಮನೆಯಂಗಳ ತೊರೆದು

ಬಂದವಳ ಮನದಲ್ಲಿ ನೂರು ಕನಸು

ಮನೆ ತುಂಬಿಸಿಕೊಂಡವಳಲ್ಲೂ ಸಾವಿರ ಕನಸ

ಕನಸು ನನಸಾಗಲು ಹೃದಯ ಮಿಲನದ ದಿನಿಸು

ಇಲ್ಲವಾದಲ್ಲಿ ಬದುಕು ಒಡೆದ ಹಾಲು

ಕೇಳಯ್ಯ ಇಂದುಪ್ರಿಯಶಂಕರ

                ವಚನ ೨೭೧

ಶ್ರೀ ರಾಮಚಂದ್ರ

ಶಬರಿಯ ಎಂಜಲು ತಿಂದ ಅಂತಾರೆ

ಶಬರಿಗೇಕೆ ಮಂದಿರದೊಳು ಪ್ರವೇಶವಿಲ್ಲ

ಹೇಳಯ್ಯ ಇಂದುಪ್ರಿಯಶಂಕರ

 ಇಂದುಮತಿ ಲಮಾಣಿ ಯವರ ವಚನ ವಿಹಾರ ಸಂಕಲನದಲ್ಲಿ ಹೀಗೆ ಓದುಗರನ್ನು ಚಿಂತನೆಗೆ ಹಚ್ಚುವ ಎಷ್ಟೋ ವಚನಗಳು ಇವೆ. ಸರಳವಾಗಿ ಓದಿಸಿಕೊಂಡು ಹೋಗುತ್ತವೆ.

 ಸಂಕಲನದ ಮುಖ ಪುಟದಲ್ಲಿ ಅಕ್ಕಮಹಾದೇವಿ,ಬಸವಣ್ಣ,ಶ್ರೀ ಸಿದ್ದೇಶ್ವರ ಸ್ವಾಮಿ,ಅವರುಗಳ ಪೋಟೋ ಹಾಕಿದ್ದು ಕೃತಿಗೆ ಶೋಭೆ ತಂದಿದೆ,ಒಳಗೆ ಅನೇಕ ಸಾಹಿತಿಗಳು ಶುಭ ಹಾರೈಸಿದ್ದಾರೆ,ತಮ್ಮ ಮಗನಿಗೆ ಕೃತಿ ಅಪಿ೯ಸಿದ್ದಾರೆ.

ಇಂದುಮತಿ ಲಮಾಣಿ ಯವರು  “ಇಂದುಪ್ರಿಯಶಂಕರ” ಎಂಬ ಅಂಕಿತ ನಾಮ ದಿಂದ ವಚನಗಳನ್ನು ರಚಿಸಿದ್ದಾರೆ.ಇವರಿಂದ ಇನ್ನೂ ಉತ್ತಮವಾದ ವಚನಗಳು ಸೃಷ್ಟಿಯಾಗಲೆಂದು ಶುಭಹಾರೈಸುತ್ತೇನೆ.


ಪ್ರಭಾವತಿ ಎಸ್ ದೇಸಾಯಿ

Leave a Reply

Back To Top