ಅರುಣಾ ಶ್ರೀನಿವಾಸ ಕತೆ-ಕ್ರಾಂತಿ

ಕಥಾ ಸಂಗಾತಿ

ಕ್ರಾಂತಿ

ಅರುಣಾ ಶ್ರೀನಿವಾಸ

“ನಿನಗೇನು ಹುಚ್ಚಾ…? ಕಾಲೇಜು ,ಫೀಸು ಎಂದೆಲ್ಲಾ ಹಣ ವ್ಯಯಿಸಲಿಕ್ಕೆ…? ತಂದೆ ತಾಯಿ ಇಲ್ಲದ ತಬ್ಬಲಿ ಅಂತ ಮೂರು ಹೊತ್ತು ಅನ್ನ ಹಾಕೋದೇ ಹೆಚ್ಚು… ಮನೇಲೆ ಬಿದ್ದುಕೊಂಡಿದ್ರೆ ಒಂದಷ್ಟು ಕೆಲಸಗಳಿಗಾದರೂ ಸಹಾಯ ಆಗುತ್ತದೆ….” ಎಂದು ಎಲ್ಲಾದಕ್ಕೂ ಕೋಲೆ ಬಸವನಂತೆ ತಲೆಯಾಡಿಸುತ್ತಾ ಅಮ್ಮ ಹಾಕಿದ ಗೆರೆ ದಾಟುವ ಯಾವ ಯೋಚನೆಯನ್ನೂ ಮಾಡುವ ಸಾಹಸಕ್ಕೇ ಕೈ ಹಾಕದ ತನ್ನ ಗಂಡನೊಡನೆ ಅತ್ತೆಮ್ಮ ತನ್ನ ನಿರ್ಧಾರದ ಪುಂಗಿ ಊದಬೇಕಾದರೆ, ಇಷ್ಟಕ್ಕೆಲ್ಲ ಕಾರಣರಾದವರು ಪುಟ್ಟಕ್ಕನ ಶಾಲೆಯ ಟೀಚರು.
ಪುಟ್ಟಕ್ಕ ಆ ಮನೆಯಲ್ಲಿ ಬೆಳೆಯುತ್ತಿರುವ ತಬ್ಬಲಿ ಮಗು. ಮಾವಯ್ಯನ ಕುಟುಂಬದ ಒಂದು ಕುಡಿ. ತಂದೆ ತಾಯಿಗಳು ಆಕ್ಸಿಡೆಂಟ್ ನಲ್ಲಿ ತೀರಿಕೊಂಡಾಗ, ಮುಂದೆ ಯಾರೂ ಗತಿಯಿಲ್ಲದ ಆ ಮಗುವಿಗೆ ಆಸರೆಯಾಗಲೇ ಬೇಕಾಗಿದ್ದವರು ಮಾವಯ್ಯ. ಇಂದು ಮಾವಯ್ಯನಿಲ್ಲದಿದ್ದರೂ, ಪುಟ್ಟಕ್ಕನ ತಂದೆಯಿಂದ ಬಂದಿರುವ ಆಸ್ತಿಯೊಂದು ಅತ್ತೆಮ್ಮನ ನಿದ್ದೆ ಕೆಡಿಸಿದ್ದರ ಪರಿಣಾಮ ಆ ಮಗು ಇನ್ನೂ ಅನಾಥಾಶ್ರಮದ ಪಾಲಾಗದೇ ಆ ಮನೆಯಲ್ಲಿ ಇನ್ನೂ ಉಳಿದುಕೊಂಡಿದೆ ಎಂಬುದೇ ಯಾರೆದುರೂ ಬಾಯಿ ಬಿಟ್ಟು ಹೇಳಲಾಗದ ವಿಷಯ.
ಅದಿರಲಿ…ಅಷ್ಟಕ್ಕೂ ಪುಟ್ಟಕ್ಕನ ಟೀಚರು ಹೇಳಿರುವುದಾದರೂ ಏನು ಮಹಾ…”ಪುಟ್ಟಕ್ಕ ಈ ಸಲದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶಾಲೆಗೇ ಫಸ್ಟು ಬಂದಿದ್ದಾಳೆ. ಕಾಲೇಜಿಗೆ ಸೇರಿಸಿ…. ಅವಳಿಗೆ ಕಣ್ಣು ತುಂಬಾ ಕಲಿಯುವ ಕನಸುಗಳಿವೆ….” ಎಂದು.
“ದುಡ್ಡು ಬೇಕಷ್ಟು ಇದ್ದು ಸಾಹುಕಾರರೆನಿಸಿಕೊಂಡರೇನು….? ಎಲ್ಲವನ್ನೂ ದುಡ್ಡಿನಲ್ಲೇ ಅಳೆಯುವ ಮಂದಿಗೆ ಮಾನವೀಯತೆಯೇ ಒಂದು ಸಮಸ್ಯೆಯಾಗಿ ಕಾಡುವುದಲ್ಲವೇ…?”
ಸಾವಂತ್ರಿಗೆ ಯಾಕೋ ಮನಸ್ಸು ಕದಲಿಯೇ ಬಿಟ್ಟಿತು. ತಬ್ಬಲಿಯಾಗಿದ್ದ ತನಗೂ ಹೀಗೆಯೇ ಒಂದೊಮ್ಮೆ ಪುಟ್ಟಕ್ಕನಂತೆಯೇ ಕಣ್ತುಂಬಾ ಕಲಿಯುವ ಕನಸುಗಳಿದ್ದವಲ್ಲ…? ಆದರೇನು… ಯಾರದೋ ಹಂಗಿನಡಿ ಬೆಳೆದ ತನ್ನ ಕನಸುಗಳನ್ನು ಹೇಳಿಕೊಳ್ಳುವುದಾದರೂ ಯಾರಲ್ಲಿ…? ಮದುವೆಯೆಂಬ ಬಂಧನದಲ್ಲಿ ಸಿಲುಕಿದ ಮೇಲೂ ಪಕ್ಕದ ಮನೆಯ ಸೀತಮ್ಮನ ಸೊಸೆ ಕಲಿಯುವುದಕ್ಕೆಂದು ಹೊರ ಹೋಗುವಾಗ ತನಗೂ ತನ್ನೊಳಗಿನ ಕನಸುಗಳು ಕಾಟ ಕೊಡುತ್ತಿರಲಿಲ್ಲವೇ….?
ಗಂಡನಾದವನೂ ಅಷ್ಟೇ… ಅತ್ತೆಮ್ಮನ ಮಾತು ಮೀರದವನಿಗೆ ತನ್ನ ಭಾವನೆಗಳೆಲ್ಲಿ ಮುಖ್ಯವಾಗುತ್ತದೆ?
ಕೊರಳಿಗೆ ತಾಳಿ ಎಂದ ಮೇಲೆ ಮುಗಿಯದಷ್ಟೂ ಮನೆ ಕೆಲಸಗಳನ್ನು ಹರವಿಕೊಂಡು ಅತ್ತೆ ಗಂಡ ಮಕ್ಕಳ ಸೇವೆ ಮಾಡುತ್ತಿರ ಬೇಕು… ಅಷ್ಟೇ…. ಬೇರೆ ಯೋಚಿಸುವುದೂ ಮಹಾಪರಾಧ… ಹಾಗೆಂದು ತಾನಿಷ್ಟೆಲ್ಲಾ ಕರ್ತವ್ಯಗಳನ್ನು ನಿಭಾಯಿಸಿದರೂ ತಬ್ಬಲಿಯಾದ ನನ್ನ ಬಾಣಂತನಕ್ಕೆ ತಾಯಿಯಾಗಿ ನಿಲ್ಲುವ ಮನಸ್ಸಾದರೂ ಬಂತೇ ಅತ್ತೆಮ್ಮನಿಗೆ…. ಹೆಂಡತಿಯೆಂಬ ಪ್ರೀತಿಯಿದ್ದರೂ ಅತ್ತೆಮ್ಮನ ಕೆಂಡ ಕಣ್ಣಗಳೆದುರು ತೋರಿಸಿಕೊಳ್ಳುವ ಛಾತಿಯಾದರೂ ಇತ್ತೇ ಗಂಡನಿಗೆ…. ಎಳೆಯ ತಬ್ಬಲಿ ಪುಟ್ಟಕ್ಕನಲ್ಲದಿದ್ದರೆ ಆ ಸಮಯದಲ್ಲಿ ನನಗಾರು ಗತಿ ಇದ್ದರು…?
ನನ್ನ ಕನಸುಗಳಂತೂ ಸುಟ್ಟಾಯಿತು….. ತಬ್ಬಲಿಯೆಂಬ ಕಾರಣಕ್ಕೆ ಪುಟ್ಟಕ್ಕನ ಕನಸುಗಳೂ ಸುಡಬೇಕೇ…?
ಕಣ್ಣೊಳಗಿಂದ ಬಂದ ಕಣ್ಣೀರೆಂಬ ಒರತೆ ಕಣ್ಣುಗಳನ್ನು ಇನ್ನಿಲ್ಲದಂತೆ ತೇವಗೊಳಿಸಿ ಸಾವಂತ್ರಿಯ ಕೆನ್ನೆಗಳನ್ನೂ ಚುಂಬಿಸಿಬಿಟ್ಟವು.
ಪುಟ್ಟಕ್ಕನ ಕನಸುಗಳನ್ನು ಗೋರಿ ಕಟ್ಟಲು ಬಿಡಬಾರದು ಎಂಬೊಂದೇ ನಿರ್ಧಾರದ ಮುಂದೆ, ತನ್ನದೆಂದು ಕರೆಯಿಸಿಕೊಳ್ಳುವ ಚಿನ್ನದ ಒಡವೆಗಳೂ ಅವಳಿಗೆ ದೊಡ್ಡದೆನಿಸಲಿಲ್ಲ. ರಾಶಿ ದುಡ್ಡಿನ ನಡುವೆ, ಅಮಾನವೀಯತೆಯೆಂಬೋ ಅಂಧಕಾರಕ್ಕೆ ಸಿಲುಕಿರುವ ಅತ್ತೆಮ್ಮನಿಗಾಗಲಿ, ಗಂಡನಿಗಾಗಲಿ ಅಲ್ಲೊಂದು ಕ್ರಾಂತಿಯಾಗಬಹುದೆಂಬ ಊಹನೆಯೂ ಇರಲಿಲ್ಲ.


ಮೌನಜೀವಿ

Leave a Reply

Back To Top