ಕಾವ್ಯ ಸಂಗಾತಿ
ನನ್ನ ಪ್ರೀತಿಯ
ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ
ಎಷ್ಟೋ ರಾತ್ರಿ ಕಳೆದಿರುವೆ
ನಿನ್ನಲಿ ಮುಖ ಹುದುಗಿಸಿ
ನೀನು ಮಾತ್ರ ಸಂತೈಸುತ್ತಿದ್ದೆ
ನನ್ನ ಅಳುವ ಮರೆಯಿಸಿ
ಕಣ್ಣೀರಧಾರೆ ನಿನ್ನ ಮಡಿಲಲಿ
ನಗು ನೋವು ಎಲ್ಲ ನಿನ್ನಲಿ
ವರುಷ ವರುಷವೂ ನಾನು
ಹಾಕಿದ ಹೆಣಿಕೆಯ ಕವ್ಹರ
ನನ್ನಂಗಿಯ ಬಣ್ಣದ ಅರಿವೆ
ನಿನಗೂ ಹಾಕಿ ಆನಂದಿಸುತಿದ್ದೆ
ನಾವು ಏಳು ಮಕ್ಕಳು ಅವ್ವನಿಗೆ
ಎಲ್ಲರಿಗೂ ನಂಬರಿನ ಸಂಖ್ಯೆ
ಆರನೇ ನಂಬರಿನಿಂದ ಅಲಂಕರಿಸಿ
ಮುದ್ದಾಡಿದ್ದೆ ನಿನ್ನ ಅಪ್ಪಿದ್ದೆ ನಾನು
ಕೂತಾಗ ಬೇಜಾರಾದಾಗ ಆಸರೆ
ಬರೆಯಲು ತೊಡೆಯಮೇಲೆ ನೀ
ನಿನ್ನ ಮೃದುವಾದ ಮೈ ಶುಭ್ರತೆಗೆ
ಮರುಳಾಗಿ ಮಗುವಾಗುತ್ತಿದ್ದೆ ನಾ
ಲಗ್ನದ ಬಳಿಕ ಎಲ್ಲ ತೊರೆದು
ಬರುವಾಗ ನಿನ್ನನೂ ತೊರೆದಿದ್ದೆ
ಅನೂ ಎನ್ನುವ ನಿನ್ನ ಪ್ರೀತಿಯ
ಕರೆ ಮನದ ಮೂಲೆಯಲ್ಲಿದೆ
ನನ್ನ ಪ್ರೀತಿಯ ತಲೆದಿಂಬು ನೀ
ತಲೆಯನು ಶಾಂತವಾಗಿಡುವೆ
ಎಲ್ಲ ಮರೆತು ನಿದ್ದೆಗೆ ಜಾರಿಸುವ
ಜಾಣೆ ತಲೆದಿಂಬ ಹೇಗೆ ಮರೆಯಲಿ