ಪ್ರೊ ರಾಜನಂದಾ ಘಾರ್ಗಿ-ಬತ್ತದಿರಲಿ ಸ್ಪೂರ್ತಿ

ಕಾವ್ಯ ಸಂಗಾತಿ

ಬತ್ತದಿರಲಿ ಸ್ಪೂರ್ತಿ

ಪ್ರೊ ರಾಜನಂದಾ ಘಾರ್ಗಿ

ಭ್ರೂಣವಾಗಿದ್ದಾಗಲೇ ಹೊಸಕಿ ಹಾಕುವ
ಸಂಚುಗಳು ನಡೆದಿದ್ದವು ಗರ್ಭದಲ್ಲಿಯೇ
ಬೇಡವಾಗಿ ಹುಟ್ಟಿದರೂ ಬತ್ತದಿರಲಿ ಸ್ಪೂರ್ತಿ

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ
ನುಡಿಗಟ್ಟು ಹುಟ್ಟಿಸಿದ ಅನಾಥಪ್ರಜ್ಞೆಯಲ್ಲಿ
ಜೀವ ಸೊರಗಿದರೂ ಭತ್ತದಿರಲಿ ಸ್ಪೂರ್ತಿ

ಹೆಣ್ಣಿನ ಬುದ್ಧಿ ಮೊಳ ಕಾಲ ಕೆಳಗೆ
ಎಂಬ ಹೇಳಿಕೆಯಲ್ಲಿ ಆತ್ಮವಿಶ್ವಾಸ
ಸುಟ್ಟು ಕರಕಲಾದರೂ ಬತ್ತದಿರಲಿ ಸ್ಪೂರ್ತಿ

ಹೆಣ್ಣು ಹೆಣ್ಣೆಂದು ಜರಿದವರ ಮೀರಿ
ಬೆಳೆಯುವ ಶಕ್ತಿ ಸಂಚಯಿಸುತ
ಯುಗ ಕಳೆದರೂ ಭತ್ತದಿರಲಿ ಸ್ಪೂರ್ತಿ

ಹೆಣ್ಣು ಗಂಡು ದೇಹ ಮಾತ್ರ
ನಡುವೆ ಸುಳಿವ ಆತ್ಮ ಒಂದೇ
ಎಂಬ ಅರಿವು ನೀಡುತ್ತಿರಲಿ ಸ್ಪೂರ್ತಿ


Leave a Reply

Back To Top