ಮಮತಾ ಶಂಕರ್ ಕವಿತ-ಅಟ್ಟದಿಂದ ಕಾಂಕ್ರೀಟಿನ ಮಹಲಿಗೆ

ಕಾವ್ಯ ಸಂಗಾತಿ

ಅಟ್ಟದಿಂದ ಕಾಂಕ್ರೀಟಿನ ಮಹಲಿಗೆ

ಮಮತಾ ಶಂಕರ್

ಅಟ್ಟದ ಮೇಲೆ ಕಟ್ಟಿ ಎಸೆದಿದ್ದ ಬಾಲ್ಯದ ಗಂಟು
ಮೊನ್ನೆ ಹೀಗೇ ತೆರೆದುಕೊಂಡಿತು

ಮುರಿದ ಗಾಲಿಗಳ ಮೂರು ಚಕ್ರದ ಮರದ ಗಾಲಿಮಣೆಯಲಿ
ಹಿಡಿದು ತಳ್ಳುತಾ ನಡಿಗೆ ಕಲಿಸಿದ ಅಜ್ಜನ ಮುಸುಕು ನೆನಪು
ಮೂಲೆಯಲಿ ಮುಲುಕುತಿರುವ ಬಿದಿರ ತೊಟ್ಟಲು,
ಮಾಸಿದ ತಿಳಿ ಗುಲಾಬಿ,ಹಸಿರು ರಂಗಿನ ಹಿಡಿ ಮುರಿದ ಬೀಸಣಿಕೆ,
ಹರಿದ ಕಡ್ಡಿಹೊರಬಂದ ಚಾಪೆ
ಅರ್ಧ ಸೀಳಿ ಮುಖ ಮೂತಿ ಮಾಸಿದ
ಗುರುತು ಸಿಗದಂತಾದ ದೇವರ ಪಟಗಳು ,
ರಾಗಿ ಬೀಸಿನ ಎತ್ತಲಾಗದ ಗೂಟ ಮುರಿದ ಉರುಟು ಕಲ್ಲುಗಳು, ಒನಕೆ ಒಳಕಲ್ಲು…

ಅಮ್ಮ ಸುತ್ತಿಟ್ಟಿದ್ದ ಬಟ್ಟೆಯ ಗಂಟಿನಲ್ಲಿ
ಹಳೆ ಸೀರೆ ತುಂಡುಗಳು
ಪುಟ್ಟ ಕಾಲ್ಚೀಲ,ಹೆಣಿಗೆ ಟೊಪ್ಪಿಗೆ
ತೂತು ಡಬ್ಬಿಯಲಿ ತುಕ್ಕು ಹಿಡಿದ ಸೂಜಿಗಳು ಗುಂಡಿಗಳು,
ಬೆಸೆಯಲು ಬಾರದ ಸವಕಲು ದಾರದುಂಡೆಗಳು
ಕತ್ತರಿಸಲಾಗದ ಕತ್ತರಿಸಿದ ಕತ್ತರಿಗಳು

ಕಾಯಿಲೆ ಬಿದ್ದ ಗಂಡ ಮಕ್ಕಳ ಬದುಕಿಸಿಕೊಳ್ಳಲು
ಹನುಮಪ್ಪ ತಿಮ್ಮಪ್ಪನಿಗೆ ಮುಡಿಪು ಕಟ್ಟಿದ ಕಾಣಿಕೆ ಡಬ್ಬಿಗಳೊಳಗೆ
ಒಂಚೂರೂ ಸದ್ದು ಮಾಡದೆ ಅಮ್ಮನನ್ನು ನೆನೆದು ಸೊರಗಿದಂತಿದ್ದ ಉಸಿರುಗಟ್ಟಿ ಕುಳಿತು ಕಪ್ಪಾದ
ನಾಕಾಣೆ ಎಂಟಾಣೆ ನಾಣ್ಯಗಳು

ಅಂಗಳದ ತುಳಸಿಯ ಒಣಗಿದ ಕುಡಿಗಳು, ಮುಂದೆ ಬೇಕಾದರೆ ಸಿಗಲೆಂಬ ದೂರಾಲೋಚನೆಯಲಿ ಪುಟ್ಟ ಡಬ್ಬಿಯಲಿ ತುಂಬಿದ್ದ ಸೊಪ್ಪು ತರಕಾರಿಗಳ
ಸತ್ತ ಬೀಜಗಳು….

ತಾವು ಬದುಕಿದ್ದಕ್ಕೆ ಸಾಕ್ಷ್ಯ ಬಿಟ್ಟುಹೋಗಿದ್ದರು
ಅಜ್ಜ ಅಜ್ಜಿ ಅಪ್ಪ ಅಮ್ಮ…

ಹೊಸಮನೆಯ ಹೊಸ ಗಾಳಿ ಬೆಳಕುಗಳೊಂದಿಗೆ ಇಡಲಾರದೆ ಹೋದೆವು ಒಂದಿಷ್ಟು ಹಳೆಯ ಸಂಸ್ಕೃತಿಗೆ ಸಾಕ್ಷಿ ಯಾದ ಯಾವುದಕ್ಕೂ ಜಾಗ…

ಅಟ್ಟದಿಂದ ಕಾಂಕ್ರೀಟಿನ ಮಹಲಿಗೆ ಹೊರಳುವಾಗ ಇದೆಲ್ಲಾ ನಮಗೆ
ಸಾರಾಸಗಟಾಗಿ ಕಸವಾಗಿಬಿಟ್ಟಿದ್ದು ಎಂಥಾ ಚೋದ್ಯ ಎನ್ನಲೇ…..


16 thoughts on “ಮಮತಾ ಶಂಕರ್ ಕವಿತ-ಅಟ್ಟದಿಂದ ಕಾಂಕ್ರೀಟಿನ ಮಹಲಿಗೆ

 1. ಆಹಾ ..ಕವಿತೆಯೇ ಎಷ್ಟು ಚೆಂದ ಓದಿಸಿ ಕೊಂಡು ಹೋಗುತ್ತಪ ನಿಮ್ಮ ಕವಿತೆ .ನಾನಂತೂ ಪೀದಾ❤️

 2. ಹಳೆಯ ನೆನಪು ಗಳನ್ನು ತಾಜಾಗೊಳಿಸಿದಿರಿ ಮಮತಾ…
  ……ಹಮೀದಾ.

  1. ಧನ್ಯವಾದಗಳು ಮೇಡಂ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ❤

 3. ಅಟ್ಟದ ವಸ್ತು ಗಳನು ಚೆಂದವಾಗಿ ಒಪ್ಪುಓರಣಗೊಳಿಸಿರುವಿರಿ

   1. ಕವಿತೆ ಓದುತ್ತಾ ನಮ್ಮ ಅಟ್ಟದ ಜ್ಞಾಪಕಕ್ಕೆ ಬಂತು…. ಕವಿತೆ ಬಹಳ ಚೆನ್ನಾಗಿದೆ….

 4. ಕಾಲ ನುಂಗಿದ ವಸ್ತುಗಳು ಜೀವಂತ ಭಾವವಾಗಿ
  ಮತ್ತೆ ಜೀವ ಕಳೆದುಕೊಂಡು
  ಕಸ ವಾಗುವ ಚೋದ್ಯವನ್ನು ಚೆಂದ ಬರೆದಿದ್ದೀ ಮಮತ ಆಭಿನಂದನೆಗಳು

  1. ಧನ್ಯವಾದಗಳು ಮೇಡಂ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ

Leave a Reply

Back To Top