ನಯನ. ಜಿ. ಎಸ್.-ಗಜಲ್

ಕಾವ್ಯ ಸಂಗಾತಿ

ಗಜಲ್

ನಯನ. ಜಿ. ಎಸ್

ಅಂತರಂಗದ ಮೇಣೆಯನು ಶೋಭಿಸಿ ಬೆಳಗಿಸುವ ಭವ್ಯಭಾವವದು ಭಕುತಿ
ತನ್ಮಯತೆಯ ಪರಾಕಾಷ್ಠೆಯಲಿ ಅನಂತತೆಯನು ಸಾರುವ ತತ್ವವದು ಭಕುತಿ

ಅಂಕಿಗೆ ದಕ್ಕದ ಭವಭಾರಕೆ ನಾಳೆಗಳಲಿ ನಿಶ್ಚಿತತೆಯನು ಅರಸದಿರು ಮರುಳೆ
ಇತ್ತ ಯೋಗದಿ ಸ್ಮಿತೆಯ ಭಾಗ್ಯಯ ವರ್ಷಿಸುವ ನಿಸ್ವಾರ್ಥ ಹರ್ಷವದು ಭಕುತಿ

ತೊಳೆದು ಬಿಡಬೇಕು ಮನದ ಕಲ್ಮಶಗಳನು ಮತ್ತೆ ಟಿಸಿಲೊಡೆದು ಇಣುಕದಂತೆ
ಮನವ ಮಜ್ಜಿಸಿ ಸರಳತೆಯ ಮಹತಿಗೆ ಅಣಿಯಾಗುವ ದಿವ್ಯ ತೈಲವದು ಭಕುತಿ

ಎಲ್ಲೆಗಳ ದಾಟಿ ಮೇರೆಗಳ ಕಬಳಿಸಿ ನಗುತಲೇ ಮೆರೆವ ದೊಂಬರಾಟ ದಿಟವೇ
ಭಾವಗಳ ಬೆಸೆದು ವಿಷಮತೆಯ ಝಳಪಿಸುವ ಪ್ರೌಢತೆಯ ಎಸಕವದು ಭಕುತಿ

ಅನುಗಾಲ ಹೃದಯ ಮಂದಿರದಿ ಅಚಲವಾಗಿಹ ಸದ್ಭಾವಕೆ ಬದ್ಧಳು ‘ನಯನ’
ಚಿತ್ತ ವೃತ್ತಿಯ ಹಸುನು ಬಲುಮೆಗೆ ತ್ರಾಣವಾಗುತಿಹ ಸಜ್ಜನ ಶಕ್ತಿಯದು ಭಕುತಿ


Leave a Reply

Back To Top