ಆಂಗ್ಲ ಮೂಲ : ಡಾ|| ಅಕ್ಚಯ ನಟರಾಜನ್-ಅಕಾಲಿಕ ಶಿಶುವಿನ ಆತ್ಮಕತೆ

ಅನುವಾದ ಸಂಗಾತಿ

ಅಕಾಲಿಕ ಶಿಶುವಿನ ಆತ್ಮಕತೆ

ಆಂಗ್ಲ ಮೂಲ : ಡಾ|| ಅಕ್ಚಯ ನಟರಾಜನ್

ತೆಲುಗು ಅನುವಾದ : ಡಾ|| ಕಾಸುಲ ಲಿಂಗಾರೆಡ್ಡಿ

ಕನ್ನಡಾನುವಾದ : ಧನಪಾಲ ನಾಗರಾಜಪ್ಪ

ಅಕಾಲಿಕ ಶಿಶುವಿನ ಆತ್ಮಕತೆ

ನಾನೇ
ಅದು ನಾನೇ
ನಮ್ಮ ಅಮ್ಮನ ಹೊಟ್ಟೆಯನ್ನು ಅಸಹ್ಯವಾಗಿ ಮುಂದಕ್ಕೆ ಉಬ್ಬಿಕೊಂಡು ಬರುವಂತೆ ಮಾಡಿದ್ದು
ನಗು ತರಿಸುವ ಸೊಟ್ಟ ನಡಿಗೆಯನ್ನು ರೂಢಿಸಿದ್ದು
ಅವಿಶ್ರಾಂತ ಮೂತ್ರ ವಿಸರ್ಜನೆಗೆ ಹುರಿಗೂಳಿಸಿದ್ದು
ತೀವ್ರವಾದ ಹೆರಿಗೆ ನೋವುಗಳ ಬಾಧೆ ನೀಡಿದ್ದು
ನಾನೇ
ಅದು ನಾನೇ

ಈ ಲೋಕವನ್ನು ನೋಡಬೇಕೆಂಬ ಆತುರ ನನಗೆ
ಗಾಢಾಂಧಕಾರ ಗರ್ಭಗವಿಯಿಂದ ಹೊರಬಿದ್ದು
ಬೆಳಗುಗಳ ಪ್ರಪಂಚವನ್ನು ನೋಡಬೇಕೆಂಬ ಆತುರ
ಅಮ್ಮನ ಹೊಟ್ಟೆಯನ್ನು ಒಮ್ಮೆ ಒದ್ದು ಹೊರಬಿದ್ದೆ
ಅನಂತ ಆನಂದದ ಪಲ್ಲಕ್ಕಿಯಲ್ಲಿ ಓಲಾಡಿದೆ

ಆದರೆ…
ನನಗೆ ಆಗಲೇ ತಿಳಿಯಿತು
ನಾನು ಸ್ವತಃ ಉಸಿರಾಡುತ್ತಿಲ್ಲವೆಂದು
ಅನೇಕ ರೋಗಕಾರಕ ಕ್ರಿಮಿಗಳೊಡನೆ ಹೋರಾಡಬೇಕೆಂದು
ನನ್ನ ದೇಹವೂ ಕೂಡಾ ನನಗೆ ಸಹಕರಿಸುತ್ತಿಲ್ಲವೆಂದು
ನನಗೆ ಆಗಲೇ ತಿಳಿಯಿತು

ಆಗಲೇ…
ನನಗೆ ಜ್ಞಾನೋದಯವಾಯಿತು
ಈ ಭ್ರಮೆಗಳ ಬೆಳಗುಗಳ ಪ್ರಪಂಚಕ್ಕಿಂತಲೂ
ಗಾಢಾಂಧಕಾರದ ತಾಯಿ ಗರ್ಭವೇ ಶ್ರೇಯಸ್ಕರವೆಂದು
ನನ್ನ ಅತ್ಯುತ್ಸಾಹವೇ ನನಗೆ ಪ್ರಾಣಾಂತಕವೆಂದು
ವ್ಯಥೆಯಾಯಿತು
ಅನಂತ ಶೋಕದಿಂದ ದುಃಖಿಸಿದೆ
ನಿರ್ವೇದದ ನಿರಾಸಕ್ತಿಯಿಂದ ನಿರ್ಜೀವಾಗಬೇಕಿತ್ತು
ಆದರೆ…
ಆ ದೇವರು
ತನ್ನ ದೂತರನ್ನು ನನಗಾಗಿ ಕಳುಹಿಸಿದ
ಶಿಶುವೈದ್ಯ ನಿಪುಣರ ರೂಪದಲ್ಲಿ…

ಆಗ ನಾನು
ಅವರಿಗೆ ಅನೇಕ ನಿದ್ರೆಗಳಿರದ ರಾತ್ರಿಗಳನ್ನು ಕೊಟ್ಟೆ
ನಿಲ್ಲಿಸಿ ನಿಲ್ಲಿಸಿ ಅವರ ಬೆನ್ನುಮೂಳೆಗಳ ಮುರಿದೆ
ವಾಲುತ್ತಿದ್ದ ಕಣ್ಣುರೆಪ್ಪೆಗಳಿಗೆ ಕರ್ತವ್ಯವನ್ನು ಹೇರಿದೆ
ನಾನು ಅಳುವ ಸಲುವಾಗಿ ಅವರನ್ನು ಅಳಿಸಿದೆ
ನಾನು ಬಣ್ಣಗಳಿಂದ ಬೆಳಗಲು
ಅವರ ಬಣ್ಣಗಳನ್ನು ಕಸಿದುಕೊಂಡೆ
ರೇಡಿಯಂಟ್ ವಾರ್ಮರ್ ಕೆಳಗೆ
ಅವರ ಸೆಕೆ ನೀರಿನ ಸಮುದ್ರವನ್ನು ಹರಿಸಿದೆ
ನನ್ನ ನಾಡಿ ತಪ್ಪುತ್ತಿರುವಾಗ
ಅವರು ಹೃದಯಗಳು ಹೊಡೆದುಕೊಳ್ಳುವಂತೆ ಮಾಡಿದೆ
ನಿಜ ಹೇಳಬೇಕೆಂದರೆ…
ನಮ್ಮ ಅಮ್ಮನಿಗಿಂತ ದುಪ್ಪಟ್ಟು
ಅವರನ್ನು ಹುರಿದು ಮುಕ್ಕಿದೆ

ಆದರೂ ಅವರು
ನನ್ನನ್ನು ಪ್ರೀತಿಸಿದರು-ಹರಿಸಿದರು
ಸೇವೆ ಮಾಡಿದರು-ಜೀವ ನೀಡಿದರು
NICU ನನ್ನ ಎರಡನೇ ಗರ್ಭವಾಯಿತು
ಬದುಕಲು ನನಗೆ ಇನ್ನೊಂದು ಅವಕಾಶ ನೀಡಿತು
ಒಂದು ಕಿರುನಗೆಯೊಂದಿಗೆ
ಆನಂದವಾಗಿ ಬಿಳ್ಗೊಳ್ಳುತ್ತಿರುವೆ
ನನ್ನ ನವಜಾತ ಶಿಶುವೈದ್ಯ ನಿಪುಣರ ತಂಡಕ್ಕೆ

ಆಂಗ್ಲ ಮೂಲ : ಡಾ|| ಅಕ್ಚಯ ನಟರಾಜನ್
(MD PAEDIATRICS PG ವಿದ್ಯಾರ್ಥಿ, ಅಂತರರಾಷ್ಟ್ರೀಯ ಪ್ರಿಟರ್ಮ್ ಬೇಬಿ ಡೇ ಸಂದರ್ಭದಲ್ಲಿ ಬರೆದ ಕವಿತೆ)
ತೆಲುಗು ಅನುವಾದ : ಡಾ|| ಕಾಸುಲ ಲಿಂಗಾರೆಡ್ಡಿ MBBS, DCH, DNB, DM (NEONATOLOGY)
ಕನ್ನಡಾನುವಾದ : ಧನಪಾಲ ನಾಗರಾಜಪ್ಪ


3 thoughts on “ಆಂಗ್ಲ ಮೂಲ : ಡಾ|| ಅಕ್ಚಯ ನಟರಾಜನ್-ಅಕಾಲಿಕ ಶಿಶುವಿನ ಆತ್ಮಕತೆ

Leave a Reply

Back To Top