ಮನಸು ದಾರಿಗುಂಟ-ಶಿವಲೀಲಾ ಹುಣಸಗಿ

ಕಾವ್ಯಸಂಗಾತಿ

ಶಿವಲೀಲಾ ಹುಣಸಗಿ

ಮನಸು ದಾರಿಗುಂಟ

ರಸ್ತೆ ಕಾದ ಹಂಚಿನಂತೆ ಹೊಳೆದಾಗ
ಡಾಂಬರ್ಗೊಂದು ಹೊಸ ಹುರುಪು
ಎಷ್ಟೋ ಟೈರಗಳು ತಿಕ್ಕಿ ಸ್ಪೋಟಗೊಂಡು
ರಸ್ತೆ ಅಂಚಿಗೆ ಸಿಲುಕಿ ಒಗ್ಗಾಲಾಗಿ ನಿಂತಾಗ
ಪ್ರಪಂಚದ ಎಲ್ಲ ಸುಖವೂ ಮೌನವಾಗ

ಅದ್ಯಾವಾಗ ಊರದಾರಿಗೆ ಕಾಲುದಾರಿಯೋ
ಹಗಲು ರಾತ್ರಿ ಅಬ್ಬರದ ಕಾರ್ಮೋಡಗಳು
ನನಗೂ ಒಮ್ಮೊಮ್ಮೆ ಡಾಂಬರ್ ನೆನೆದು
ಬಿಸಿಲು ಮಳೆ ಚಳಿಗೆ ಅಂಜದೇ ಅಳುಕದೇ
ನಟ್ಟ ನಡು ಬೀದಿಯಲಿ ಅಂಗಾತ ಒರಗಿದೆಂದು

ನೂರಾರು ಹೊಂಗನಸುಗಳು ಹೂವಚೆಲ್ಲಿದಂತೆ
ಋತುಮಾನಗಳಿಗೆ ಮೈಯೊಡ್ಡಿ ಕುಳಿತಂತೆ
ಆಗಾಗ ಹದತಪ್ಪಿ ಸುರಿವ ಮಳೆಗುಂಟ ಜಾರಿದಂತೆ
ಸ್ವಿಮಿಂಗ್ ಪೂಲ್ ಅಲ್ಲಲ್ಲಿ ಸಿದ್ದವಾದಂತೆಲ್ಲಾ
ಎಡರು ತೊಡರುಗಳು ಚಕ್ರದಡಿ ಸಿಲುಕಿದಂತೆ

ಯಮನ ತೋಳಿನ ಬಲೆಗೆ ಸಿಕ್ಕು ಸುಖಿಸಿದಂತೆ
ನಮಗಾಗಿಯೇ ರಸ್ತೆತುಂಬ ನೀರಿನ ಆಮಂತ್ರಣ
ಮೇಲೆ ಕೆಳಗೆ ಹರಿಹಾಯುವ ಗೇರಿಗೆ ನಲುಗಿದಂತೆ
ಸರಾಗವಾಗಿ ಸಾಗುವಾಗೆಲ್ಲ ಅವನೆದೆಗೊರಗಿದಂತೆ
ಮಂಪರು ಕಣ್ತುಂಬ.ನೀಳಾಕಾಯದ ಆಲಿಂಗನದಂತೆ

ಮತ್ತೇರುವ ಹೊತ್ತಲ್ಲಿ ಪಂಚರಾದ ಚಕ್ರಗಳು
ಅವು ನಮ್ಮಂತೆ ವಿರಹಗೀತೆ ಹಾಡಿದಂತೆನಿಸಿದ್ದವು
ದಾರಿ ಸಾಗಿದಷ್ಟು ಬರಲೊಲ್ಲದು ಊರ ಬಾಗಿಲು
ಬಯಲುದಾರಿಯಲಿ ಗಿಡಗಂಟಿಗಳಿಲ್ಲದ ತೇರು
ಸುತ್ತಲೂ ಬಿರುಗಾಳಿ ಸುಳಿಯತ್ತ ಕೈ ಚಾಚಿದ್ದು

ಭಯಕಾಡಿತ್ತು ನನ್ನೊಳಗೆ ಎಂಥ ವಿರ್ಪಯಾಸ
ಊರದಾರಿಯ ಅಂಚು ತಲುಪಿಲ್ಲದ ದುಗುಡ
ಅವ್ವನ ಕೈತುತ್ತು ನೆನಪಾಗಿ ಕಣ್ಣಂಚಲಿ ಕಣ್ಣೀರು
ಅಪ್ಪನ ಹೆಗಲ ಕೂಸು ಮರಿಯಾಗಿದ್ದು
ಅವರ ನೆನಪಾದಂತೆಲ್ಲಾ ಎದೆತುಂಬ ಕಣ್ಣೀರು

ದಾರಿದೂರೆಂದು ಕೂಗಳತೆ ಹಾದಿ ಹುಡುಕಿದ್ದು
ಗೇಣು ಉದರಕೆ ತುಂಬಿದಷ್ಟು ಬರಿದು
ಒಳ ಸುಳಿವ ಹುಡುಕುತ ರಸ್ತೆಗುಂಟ ಹೊರಟವರು
ನೆಲೆ ಸಿಗುವಾ ಭರವಸೆಯಲಿ ದಾರಿ ಹತ್ತಿರವೆ
ಮನಸು ದಾರಿಗುಂಟ ಹೆಣೆದ ಕಲ್ಪನೆಗಳಿವು

ಕಚ್ಚಾರೋಡಲಿ ಬೆಚ್ಚಗೆ ಹೆಜ್ಹೆಯನಿಟ್ಟು
ಆನೆ ನಡೆದಿದ್ದೆ ದಾರಿ ಎಂಬಂತೆ ಮುನ್ನಡೆಸಿದ್ದು
ಊರುಯಾವುದಾದರೂ ಬದುಕು ಕಟ್ಟಿದ್ದು
ರಸ್ತೆಯಂಚಿನ ಬೇವಿನ ಮರಕೆ ಒರಗಿದ್ದು
ಉಸಿರನಿತ್ತ ನಿನಗೆ ಶರಣೆಂದು ಕನಸ ಕಂಡಿದ್ದು

ಎಲ್ಲವು ಸತ್ಯ.ನಿತ್ಯ ಆಸುಪಾಸು ನೆರಳನೀವ
ಮರಗಳ ರೆಕ್ಕೆ ಬಲಿಯದ ಪಕ್ಷಿಗಳಿಗೆ ಆಶ್ರಯವಿತ್ತು
ಬಳಲಿದವಗೆ ನೆರಳನಿತ್ತು ಪೊರೆವ ದೈವಗುಣ
ಕಿಟಕಿಯಾಚೆ ಕತ್ತ ಹೊರಳಿಸಿ ಇಣುಕಿದಾಗೆಲ್ಲ
ವೇಗವಾಗಿ ಸಾಗುವ ದಾರಿಗೆ ರೆಕ್ಕೆ ಕಟ್ಟಿದಂತಾಗಿತ್ತು

ಆ ಹೊಲ ಈ ಹೊಲದ ಬದುಗಳಲ್ಲಿ ಕುಂಟುತ್ತ
ಕಿರುದಾರಿಯ ಹೆದ್ದಾರಿ ಮಾಡಿದಾಗೆಲ್ಲ ಸಂತಸ
ಓಣಿ ಓಣಿ ತಿರುಗುವಾಗೆಲ್ಲ ನೀನು ಮೌನವಾಗುತ್ತಿ
ಯಾವತ್ತು ನೀ ಮಾತಾಡಿಲ್ಲ ಬೋರೊಲಾಗಿರ್ತಿ
ಮನಿಸೇರ ಬೇಕೆಂದವಗೆ ಆಧಾರವಾಗಿರ್ತಿ..


6 thoughts on “ಮನಸು ದಾರಿಗುಂಟ-ಶಿವಲೀಲಾ ಹುಣಸಗಿ

  1. ರಸ್ತೆಯ ವಾಸ್ಥವವ ಹೇಳುತ್ತಾ,ಜೀವನದ ಮಗ್ಗುಲನ್ನು ನೆನಪಿಸುವ ರೀತಿ ಎಲ್ಲರನ್ನೂ ನೆನಪಿನಾಳಕ್ಕೆ ಕರೆದೊಯ್ಯುತ್ತದೆ.

  2. ವಾಸ್ತವತೆಯ ದರ್ಶನ ಮಾಡಿಸಿದ ಕವನ ತುಂಬಾ ಚೆನ್ನಾಗಿದೆ ಮೇಡಂ

  3. ತುಂಬಾ ಸುಂದರ…..ಜೀವನದ ದಾರೀ. ಸಾಗುವ ದಾರೀ ಎರಡರ ವಾಸ್ತವದ ನೆಲೆಗಟ್ಟಿನಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ……

  4. ಬದುಕಿನ ಹಾದಿಯ ಏಳು ಬೀಳುಗಳು ರಸ್ತೆಯ ವಾಸ್ತವತೆಯೊಂದಿಗೆ ನೈಜವಾಗಿ ಮೂಡಿಬಂದಿದೆ…ಅಭಿನಂದನೆಗಳು ಮೇಡಮ್

Leave a Reply

Back To Top