ಸವಿತಾ ಇನಾಮದಾರ್-ಜೀವನಜೋಕಾಲಿ

ಕಾವ್ಯ ಸಂಗಾತಿ

ಜೀವನಜೋಕಾಲಿ

ಸವಿತಾ ಇನಾಮದಾರ್

ಜೀವನಜೋಕಾಲಿ

ಕಟ್ಟಿರುವೆ ಪುಟ್ಟದಾದ ಜೋಕಾಲಿ
ಪ್ರೀತಿಯಿಂದ ಪೋಶಿಸಿ
ಅಪ್ಪಾಜಿಯ ದೃಢಮನಸಿನಂತೆ ಬೆಳೆದು ನಿಂತ
ಮನೆಯಂಬ ಮಾಮರದಲ್ಲಿ.

ಕಟ್ಟಿದ್ದ ಹಗ್ಗ ಗಟ್ಟಿಯಾಗಿರಬೇಕು,
ತೂಗಿದಾಗ ಹೋಯ್ದಾಡದೇ ಎತ್ತರಕ್ಕೇರಬೇಕು
ಅಮ್ಮನ ಮಮತೆಯ ಚಕ್ಕುಲಿಯ ಸವಿಯುತ್ತ
ಅವಳ ಕಿವಿಮಾತಿನ ಉಡುಗೊರೆಯ ಧರಿಸುತ್ತ
ಗೆಳತಿಯರ ಕಿಲಕಿಲ ನಗೆಯಲಿ ಮೀಯುತ್ತ
ಬಾಲ್ಯದ ಆ ಓಣಿಯಲ್ಲಿ ಮತ್ತೊಮ್ಮೆ ಓಡಾಡ ಬೇಕು.

ಸಹನೆಯಿಂದ ಸಾಗಿದರೆ ಜೀವನ ಸಾರ್ಥಕ
ಅಸೂಯೆಯ ಪಾಶದಲ್ಲಿ ಸಿಲುಕಿದಲ್ಲಿ ಕಾಣುವುದು ನರಕ.
ಅಲ್ಪತೃಪ್ತಿಯ ಜೀವನ ಸುಖದ ಸೋಪಾನ
ಕೇಳುವಿ ನೀ ಆಗ ಎಲ್ಲೆಡೆಗೂ ಮಧುರ ಗಾನ.

ಮಗಳೇ
ನನ್ನ ಹಾಗೇ ತೂಗು ನೀ ಉಯ್ಯಾಲೆ ಪ್ರೀತಿ –ಪ್ರೇಮದಿಂದ
ಬೆಳೆಯುವುದು ಎಲ್ಲರೊಡನೆ ಅನನ್ಯ ಅನುಬಂಧ.
ತೂಗುತ್ತಿರಲಿ ನಿನ್ನ ಜೀವನದ ಜೋಕಾಲಿ
ಉಬ್ಬರಿಳಿತಗಳ ತುಳಿತಕ್ಕೆ ಸಿಲುಕದೇ ದೀರ್ಘಕಾಲ ಬಾಳಲಿ.


Leave a Reply

Back To Top