ಪ್ರೇಮದಲೆಗಳು (ರಾಜ್ಯ ಮಟ್ಟದ ಪ್ರೇಮ ಕವಿತೆಗಳ ಸಂಕಲನ)

ಪುಸ್ತಕ ಸಂಗಾತಿ

ಪ್ರೇಮದಲೆಗಳು

(ರಾಜ್ಯ ಮಟ್ಟದ ಪ್ರೇಮ ಕವಿತೆಗಳ ಸಂಕಲನ)

[ಪುಸ್ತಕ ದ ಹೆಸರು……..ಪ್ರೇಮದಲೆಗಳು (ರಾಜ್ಯ ಮಟ್ಟದ ಪ್ರೇಮ ಕವಿತೆಗಳ ಸಂಕಲನ)

ಸಂಪಾದಕರು….   ಪ್ರಕಾಶ ಜಹಾಗೀರದಾರ ವಿಜಯಪುರ

ಪ್ರಕಾಶಕರು………..ಕುಲಕಣಿ೯ ಪ್ರಕಾಶಕನ.ವಿಜಯಪುರ

ಪ್ರಥಮ ಮುದ್ರಣ               ೨೦೨೨.         ಬೆಲೆ ೧೦೦

ಪುಸ್ತಕ ಕ್ಕಾಗಿ ಸಂಪಕಿ೯ಸುವ ಮೊಬೈಲ್ ನಂಬರ  ೯೫೩೫೪೦೫೫೫೦,೯೮೪೫೮೪೫೬೧೮

“ಪ್ರೀತಿ ಇಲ್ಲದ ಮೇಲೆ ಹೂ ಅರಳೀತು ಹೇಗೆ,ಮೋಡ ಕಟ್ಟೀತು ಹೇಗೆ” ಎಂಬ ಜಿ.ಎಸ್. ಶಿವರುದ್ರಪ್ಪ ಅವರ ಕವಿ ವಾಣಿಯಂತೆ ಪ್ರೀತಿ ಇಲ್ಲದೆ ಯಾವ ಕ್ರಿಯೆ ನಡೆಯುವುದಿಲ,ಮೋಡ ಕಟ್ಟುವುದಿಲ್ಲ,ಕಟ್ಟಿದ ಮೋಡಕ್ಕೆ ತಂಗಾಳಿ ಮುತ್ತಿಟ್ಟಾಗ ಕರಗಿ ಮುತ್ತಿನ ಮಳೆಯಾಗಿ ಧಾರಿಣಿಯನು ಅಪ್ಪಿದಾಗ ಅವಳು ಸಂತಸದಲಿ ಹಿಗ್ಗಿದಾಗ ಜಗದಲಿ ಹಸಿರು ಹುಟ್ಟುತ್ತದೆ.ಪ್ರಕೃತಿ ನಳ ನಳಿಸುತ್ತದೆ.ಹಸಿರು ಚಿಗುರು ಒಡೆದು ಮೊಗ್ಗಾಗುವುದು,ಬಿರಿದ ಮೊಗ್ಗನ್ನು ದುಂಬಿ ಪ್ರೀತಿಯಿಂದ ಚುಂಬಿಸಿದಾಗ ಮೊಗ್ಗು ಅರಳಿ ಹೂವಾಗಿ ಪರಿಸರದಲಿ ಕಂಪು ಬೀರಿ ಪ್ರಫುಲ್ ಗೊಳಿಸುತ್ತದೆ.ಪರಾಗಸ್ಪರ್ಶ ದಿಂದ ಬೀಜ್ಯೋತ್ಪತ್ತಿಯಾಗಿ ಪ್ರಕೃತಿ ಸೃಷ್ಟಿಗೆ ಕಾರಣ ವಾಗುವುದು ಪ್ರೀತಿ.  ” ನಿನ್ನ ಪ್ರೀತಿಯ ಪರಿ ನಾ ಅರಿಯೆ ಕನಕಾಂಗಿ ನಿನ್ನೊಳಿರೆ ನನ್ನ ಮನಸು” ಎಂದು ಕೆ ಎಸ್ ನರಸಿಂಹಸ್ವಾಮಿ ಅವರು ಹೇಳಿದಂತೆ ಪ್ರೀತಿಯ ಪರಿಯನು ಯಾರೂ ಅರಿಯಲಾಗುವುದಿಲ್ಲ.ಅದು ಹೇಗೆ ಹುಟ್ಟುವುದು,ಹೇಗೆ ಬೆಳೆಯುವದೆಂದು ಯಾರು ವ್ಯಾಖ್ಯಾನ ಮಾಡಲು ಆಗುವುದಿಲ್ಲ.ಪ್ರೀತಿ ಎಲ್ಲರ ಬದುಕಿಗೂ ಸ್ಪೂತಿ೯ಕೊಡುವ ಅದ್ಭುತ ವಾದ ಶಕ್ತಿ ,ಯಾರ ಜೊತೆ ಹಂಚಿಕೊಳ್ಳುವೆವು ಆ ರೂಪವಪಡೆದು ಕೊಳ್ಳುತ್ತದೆ.ಪ್ರೀತಿ ಎಂಬ ಎರಡು ಅಕ್ಷರದ ಶಬ್ಧ ಸಾಗರದಷ್ಟು  ವಿಶಾಲವಾಗಿರುವುದು.ನಮ್ಮ ಬದುಕಿನಲ್ಲಿ ಹುಟ್ಟಿ ನಿಂದ ಸಾಯುವವರಿಗೂ ಹಾಸು ಹೊಕ್ಕಾಗಿ ಜೊತೆಯಾಗಿ ನಮ್ಮನ್ನು ವಿವಿಧ ರೀತಿಯಾಗಿ ಸಲಹುತ್ತದೆ.ಇಂಥಹ ಪ್ರೀತಿಯ ಬಗ್ಗೆ ಅನೇಕ ಕವಿಗಳು ಸುಂದರವಾಗಿ ಹೇಳಿದ್ದಾರೆ.

      ಪ್ರಕಾಶ ಜಹಗೀರದಾರ ಅವರು ವೃತ್ತಿಯಿಂದ ಶುಶ್ರೂಕರಾಗಿ ಆರೋಗ್ಯ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ ನಿಡಗುಂದಿ ಯಲ್ಲಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರು ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ಸಂಘಟಕರಾಗಿ ” ಪ್ರಗತಿ ಸಾಹಿತ್ಯ ವೇದಿಕೆ ” ವಿಜಯಪುರ ಎಂಬ ಒಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯನ್ನು ವಿಜಯಪುರ ದಲ್ಲಿ ಸ್ಥಾಪಿಸಿ ಅದರ ಮೂಲಕ ಕನ್ನಡಾಂಬೆಯ ಸೇವೆಯನ್ನು ಮಾಡುತ್ತಿದ್ದಾರೆ.ಈಗಾಗಲೆ ತಮ್ಮದೇ ಆದ ಮೂರು ಕವನ ಸಂಕಲನಗಳನ್ನು ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ಚಿರ ಪರಿಚಿತರಾಗಿದ್ದಾರೆ.ಈಗ ಅವರು “ಪ್ರೇಮದಲೆಗಳು” ಎಂಬ ರಾಜ್ಯಮಟ್ಟದ ಪ್ರೇಮ ಕವಿತೆಗಳ ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.ಇದು ಅಖಿಲ ಕನಾ೯ಟಕದ ಪ್ರಾತಿನಿಧಿಕ ಕವನ ಸಂಕಲನವಾಗಿದ್ದು ಎಲ್ಲಾ ಜಿಲ್ಲೆಯ  ೭೫ ಕವಿಗಳು ಪ್ರೀತಿಯ ಬಗ್ಗೆ ಕವಿತೆಗಳನ್ನು ಬರೆದಿದ್ದಾರೆ.”ಪ್ರೇಮದಲೆಗಳು “ಕವನ ಸಂಕಲನದಲ್ಲಿದ್ದ ೭೫ ಕವಿತೆಗಳಲ್ಲಿ ಉತ್ತಮ ಕವಿತೆಗಳನ್ನು ಆರಿಸಿ ಪ್ರಥಮ ದ್ವಿತೀಯ, ತೃತೀಯ ಎಂದು ಆಯ್ಕೆ ಮಾಡಿ ಕವಿಗಳಿಗೆ ಪ್ರಶಸ್ತಿ ಕೊಟ್ಟು ಸನ್ಮಾನಿಸಿದ್ದಾರೆ. ಜಹಾಗೀರದಾರ ಅವರು ಈ ಕೃತಿಯ ಲೋಕಾರ್ಪಣೆ ಯ ಕಾರ್ಯಕ್ರಮ ವನ್ನು ಅದ್ಧೂರಿಯಾಗಿ ನೆರೆವೇರಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ಪ್ರೇಮದಲೆಗಳು ರಾಜ್ಯಮಟ್ಟದ ಪ್ರೇಮಕವಿತೆಗಳ ಸಂಕಲನದಲ್ಲಿ ೭೫  ಕವಿತೆಗಳಿದ್ದು  ಡಾ.ಪಂಚಯ್ಯ ರಾಚಯ್ಯ ಹಿರೇಮಠ ಸಾಹಿತಿ ಶಿಕ್ಷಕರು ,ಹೊಳೆ ಹಡಗಲಿ ,ತಾ ರೋಣ  ಇವರ ಕವಿತೆಗೆ ಪ್ರಥಮ ಬಹುಮಾನ ಬಂದಿದೆ.

                 ಭಾವ ಸಂವಾದಿ

ಏಕೋ ಇಂದು ಭಾರವಾಯಿತು ಈ ಭವದಲಿ ನನ್ನ ಭಾವವು

ಏಕೋ ಮೂಕವಾಯಿತು ಇಂದು ಈ ಹಾಡು ಹಕ್ಕಿಯ ಸವಿಗಾನವು

ಮಾತುಗಳೆಲ್ಲಾ ಮರೆಯಾಗಿ ಮನದಲ್ಲಿ ನೀರಾಗಿ ಹಣೆಯ ಮೇಲೆ

ಬೆವರಾಗಿ ಆ ನಾಲ್ಕು ಹನಿಯು ನಿನ್ನ ನೆನಪಲ್ಲಿ ಮರು- ಮರುಗಿ

ನನ್ನೆದೆಯಲ್ಲಿ ಇಂಗಿ ಹಗಲಿರುಳು ಉಲಿದುಲಿದುಂಹಂಗಿಸುತಿವೆ

 ಕವಿ ಪಂಚಯ್ಯ ಹಿರೇಮಠ ಅವರು ನನ್ನ ಪ್ರಿಯಸಿಯನ್ನು ನೆನೆಯುತಾ ನನ್ನ ಅರಮನೆಯ ಬೆಳಕು ನೀನು ,ನಿನ್ನ ಸವಿಗಾನ ತೇಲಿ ಬರುತ್ತದೆ ಸದಾ ನೆನಪಲಿ ಎಂದು ಹೇಳುತಾ ಕವಿತೆ ಮುಂದು ವರೆಯುವುದು.

ದ್ವಿತೀಯ ಬಹುಮಾನವನ್ನು ಇಬ್ಬರಿಗೆ ಕೊಟ್ಟಿದ್ದಾರೆ ೧. ಶ್ರೀಮತಿ ವೇದಾ ಅವಿನಾಶ್ ದಾವಣಗೆರೆ ಮತ್ತು ೨.ರುಜುವಾನ್ ಕೆ ದಾವಣಗೆರೆ .

        ಕಾದೇನಿ ನಿನಗ ….

ಹಚ್ಚನ ಸೀರಿ ಉಟ್ಟು

ಅಂಚಿನ ಕುಪ್ಪಸ ತೊಟ್ಟು

ಕೆಂಪಿನ ಚಿಕ್ಕಿ ಬಳೆ

ಕೊರಳಾಗ ಕರಿಮಣಿ

ಹಣಿಮ್ಯಾಲ ಕಾಸಿನಗಲ ಕುಂಕುಮ ಇಟ್ಟು

ಬಾರೋ ನನರಾಯ ಕಾದೇನಿ ನಿನಗ.

ತನ್ನ ಪ್ರಿಯಕರ ಅಥವಾ ಆತ್ಮ ಸಂಗಾತಿಯ ಬರುವನ್ನು ಕಾಯುವ ಪ್ರಿಯೆತಮೆಯ ಮನದ ಭಾವಗಳನ್ನು  ಹೇಳುತ್ತಾ,ಅವನ ಬರುವಿಗಾಗಿ ಯಾವರೀತಿಯಾಗಿ ಸಿಂಗಾರ ಗೊಂಡಿರುವೆನೆಂದು ಹೇಳುವ ಕವಿತೆ,ಮುಂದು ಮರೆದು ಅವನಿಗಾಗಿ ಹೋಳಿಗೆ ಮಾಡಿ ಹಪ್ಪಳ ಸಂಡಿಗೆ ಕರದಿಟ್ಟು ಕಾಯುತ್ತಿರುವೆ ಸಂಜೆ ಆಯಿತು  ದನಕರುಗಳು ಮನೆಗೆ ಬಂದಿವೆ ಸಂಜೆ ಮಲ್ಲಿಗೆ ಬಾಡುವ ಮೊದಲು  ಬಾ ಎಂದು ಹಲಬುವ ಕವಿತೆ ಸೊಗಸಾಗಿ ಶ್ರೀ ಮತಿ ವೇದಾ ಅವಿನಾಶ್ ದಾವಣಗೆರೆ ಬರೆದಿದ್ದಾರೆ.

             ಇದು ಸಾಕು

ನನ್ನೋಳ ಮಾತು

ಭರವಸೆ ತಂದ ಹೊಂಬೆಳಕಂತೆ

ನನ್ನೋಳ ನೋಟ

ಆಗಸ ಕರಗಿ ಹನಿ ಸುರಿದಂತೆ

ನನ್ನೋಳ ಸ್ನೇಹ

ನೆನೆದರೆ ಸಾಕು ಸ್ವರ್ಗದಂತೆ

ನನ್ನೋಳ ನಗುವು…..ಹೂ ಬಿರಿದಂತೆ

ಪ್ರಿಯಕರ ತನ್ನ ಪ್ರಿಯಸಿಯ ಮಾತು ,ನೋಟ, ಸ್ನೇಹ, ನಗು ,ಅವಳ ಅಂಗಾಂಗಳ ಬಗ್ಗೆ ಅವಳ ಉಡುಗೆ, ಎಲ್ಲವೂ ಅವನಿಗೆ ಮೋಹಕವಾಗಿ  ಸುಂದರವಾಗಿ ಕಾಣುವವೆಂದು ವಣಿ೯ಸುವ ಪರಿ ಚನ್ನಾಗಿದೆ.ಇದನ್ನು ರುಜುವಾನ್ ಕೆ ದಾವಣಗೆರೆ ಬರೆದಿದ್ದಾರೆ.

ಇನ್ನು ತೃತೀಯ ಬಹುಮಾನವನ್ನು ಮೂರು ಜನರಿಗೆ ಹಂಚಿದ್ದಾರೆ  ೧ ಡಾ.ಶಿಲ್ಪಾ ಎಸ್ ಹುಬ್ಬಳ್ಳಿ ೨ ಶ್ರೀಮತಿ .ರತ್ನಾ ಜಾಲಿಗಿಡ ಕೊಡೇಕಲ್ಲ.೩ ಪ್ರಜ್ವಲ್ ದೀಕ್ಷಿತ್ ಎನ್ ಸಿ  ನಾಗಸಂದ್ರ( ತುಮಕೂರ) .

     ಕನಸು ಮಾರುವವ

ನನ್ನವ….ನಾ….ಮೆಚ್ಚಿದವ ಮನದಲ್ಲಿ

ಪ್ರೀತಿಯ ಹುಚ್ಚು ಎಬ್ಬಿಸಿದವ

ಕಣ್ಣಿದುರಲ್ಲಿ ಎಂದಿಗೂ ಬಾರದವ

ಹೃದಯದಲಿ ಪ್ರೀತಿಯ ಕುಸುಮ ಅರಳಿಸಿದವ

ಗುಂಗು ತಲೆಗೇರಿಸಿದವ

ಕೈಗೆ  ಸೋಕದೆ ಕಣ್ಮರೆಯಾದವ…

ಈ ಕವಿತೆಯಲ್ಲಿ ಪ್ರಿಯೆತಮೆ ತಾ ಮೆಚ್ಚಿದ ಹುಡುಗ ಕಣ್ಣಿಗೆ ಕಾಣದಿದ್ದವ,ಕೈಗೆ ಸಿಗದವ ಆದರೂ ನನಗೆ ಅವನ ಹುಚ್ಚು ಹಿಡಿದಿದೆಂದು ಅವನಿಗಾಗಿ ಹಂಬಲಿಸುವ ,ಕನಸು ಕಾಣುವೆನೆಂದು ,ತನ್ನ ಬಯಕೆಯನ್ನು ಕವಿತೆ ಯಲ್ಲಿ  ಡಾ.ಶಿಲ್ಪಾ ಎಸ್ ಹುಬ್ಬಳ್ಳಿ ಯವರು ಸುಂದರವಾಗಿ ಹಿಡಿದಿಟ್ಟಿದ್ದಾರೆ.

            ೨.ಪ್ರೀತಿ

ಚಳಿಯಲ್ಲಿ ಬೆವರುವ ಬೇಸಿಗೆಯಲ್ಲಿ ನಡಗುವ

ನೋವಲ್ಲಿ ಸುಖಿಸುವ ,ಸುಖದಲ್ಲಿ ನೋಯುವ

ಕಷ್ಟದಲ್ಲಿಯೂ ನಗುವ ,ನಗುವಿನಲ್ಲಿ ಕಷ್ಟಪಡುವ

ಈ ಕವಿತೆಯಲ್ಲಿ ಕವಿಯತ್ರಿ ಯು ಪ್ರೀತಿ ಅಂದರೇನು,ಎಂದು ಹೇಳಲು ಪ್ರಯತ್ನ ಮಾಡಿದ್ದಾರೆ ಪ್ರೇಮರೋಗಕ್ಕೆ ಬಲಿಯಾದವರಿಗೆ ಯಾವಯಾವ ರೀತಿಯಲ್ಲಿ ಜಗವು ಕಾಣುವುದು,ಬೇಸಿಗೆಯಲ್ಲಿ ಚಳಿಯಾಗುವುದು ,ಚಳಿಯಲ್ಲಿ ಬೆವರುವುದು ,ವಿರಹದ ನೋವಲ್ಲಿಯೂ ಏನೋ ಒಂದು ತರಹದ ಮಧುರ ಯಾತನೆಯಾಗುವುದೆಂದು ಹೇಳುತ್ತಾರೆ.

         ೩ ಕಲ್ಪನೆಯ ಕನ್ಯೆ

ಕಣ್ಣೆದುರಲ್ಲೇ ಅಂದವು ಮೂಡಿ

ಮನದಲಿ ಏನೋ ಮಾಡಿದೆ ಮೋಡಿ

ದೇವತೆಯಂತೆ ಚೆಲುವೆ ಕಂಡಳು

ಮಾತಿಗೆ ಮೌನದ ರೂಪ ತಂದಳು

ಅವಳೇನು ನನ್ನ ಪ್ರೇಯಸಿಯಲ್ಲ

ಕಲ್ಪನೆಯ ಕನ್ಯೆಅವಳು

ಎದುರಿಗೆ ಕಾಣದೆ ಕಾಯಿಸುತಿಹಳು.

ಈ ಕವಿತೆಯ ಹೆಸರೇ ಸೂಚಿಸುವಂತೆ  ಕವಿ ತನ್ನ ಕಲ್ಪನೆಯ ಕನ್ಯೆಯು ಹೇಗಿರ  ಬೇಕೆಂದು ವಣಿ೯ಸುತ್ತಾ ಹೋಗುತ್ತಾನೆ.

ಕಣ್ಣಿಗೆ ಅಂದವಾಗಿ ಕಾಣುತ್ತಾ ಮನದಲ್ಲಿ ಮೋಡಿ ಮಾಡಿ,ಮಾತಿಲ್ಲದೆ ಮೌನ ಸುಂದರಿಯಾದವಳು,ಅವಳು ಅಪರಿಚಿತೆ ಆದರೂ ಹೊಸಬಳಲ್ಲ,ಹೃದಯದ ಒಡತಿ ,ಈ ಬಡಪಾಯಿಯನು ಸತಾಯಿಸುವಳು,ಅವಳಿಗೆ ಒಲವ  ಓಲೆ ಬರೆದೆನು,ನನ್ನ ಹೃದಯದ ರಾಣಿ ಆಗಿ ಮಾಡಿದೆ ,ಅವಳು ಎಂದು ಸಿಗುವಳೋ ಇಲ್ಲವೋ ಗೊತ್ತಿಲ್ಲ,ಯಾಕೆಂದರೆ ಅವಳು ನನ್ನ ಕಲ್ಪನೆಯ ಕನ್ಯೆ ಎಂದು ಕವಿ ತನ್ನನು ತಾನೇ ಸಮಾಧಾನ ಮಾಡಿಕೊಳ್ಳುವ ಕವಿ ಪ್ರಜ್ವಲ್ ದೀಕ್ಷಿತ ಎನ್ ಸಿ  ನಾದಸಂದ್ರ ತುಮಕೂರ

ಹೀಗೆ ಈ ಸಂಕಲನದ ಕವಿತೆ ಗಳಲ್ಲಿ ಕವಿಯಾದವರು ಪ್ರೀತಿಯ ಬಗ್ಗೆ ಪ್ರೇಮದ ಬಗ್ಗೆ ಬರೆದಕವಿತೆಗಳಿದ್ದು ,ಓದಿಸಿಕೊಂಡು ಹೋಗುತ್ತವೆ .ಓದುಗರಿಗೆ ನಿರಾಶೆ ಮಾಡುವುದಿಲ್ಲ,ಬೆರಳೆಣಿಕೆ ಅಷ್ಟು ಕೆಲವು ಕವಿತೆಗಳು ಸ್ವಲ್ಪ ವಾಚ್ಯ ವೆನಿಸುತ್ತವೆ.

ಈ ಸಂಕಲನಕ್ಕೆ ಪ್ರೊ.ಪ್ರವೀಣ ವಿ ಕುಲಕರ್ಣಿ ಬಿದಿಗಿ ಚಂದ್ರ ಜಮಖಂಡಿ ಅವರು ಮೌಲ್ಯಿಕವಾದ ಮುನ್ನುಡಿ ಬರೆದಿದ್ದಾರೆ.ಶ್ರೀ ಹಾಸೀಂ ಪೀರ ವಾಲೀಕಾರ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಇವರು ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ.ಸಂಕಲನದ ಮುಖ ಪುಟ ಚಿತ್ರ ಅಂದವಾಗಿದ್ದು ಓದುಗರನ್ನು ಆಕಷಿ೯ಸುತ್ತದೆ.,ದಿ.ಶ್ರೀ ಬಸಪ್ಪ ಮಲ್ಲಪ್ಪ ಬ್ಯಾಲಾಳ  ನಿಡಗುಂದಿ ಜಿಲ್ಲಾ ವಿಜಯಪುರ ಇವರಿಗೆ ಅಪಿ೯ಸಿದ್ದಾರೆ.ಕುಲಕರ್ಣಿ ಪ್ರಕಾಶನ ವಿಜಯಪುರ ಇವರು ಈ ಕೃತಿಯನ್ನು ಪ್ರಕಟಿಸಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ” ಪ್ರೇಮದಲೆಗಳು”ಸಂಕಲನವು ಓದಿಸಿಕೊಂಡು ಹೋಗುತ್ತದಗೆ,ಓದುಗರಿಗೆ ತೃಪ್ತಿಕೊಡುತ್ತದೆ.ಪ್ರಕಾಶ ಜಹಾಗೀರದಾರ ಇವರ ಈ ಕಾರ್ಯ ಮೆಚ್ಚುವಂತಹದು ಈವರಿಂದ ಇನ್ನೂ ಅನೇಕ ಕೃತಿಗಳು ಕನ್ನಡಾಂಬೆಯ ಉಡಿ ತುಂಬಲೆಂದು ಶುಭ ಹಾರೈಸುವೆ.

———————————-

  ಪ್ರಭಾವತಿ ಎಸ್ ದೇಸಾಯಿ

Leave a Reply

Back To Top