ಕಾವ್ಯಸಂಗಾತಿ
ಗಜಲ್
ಅರುಣಾ ನರೇಂದ್ರ


ನನ್ನೆದೆಯ ಪಿಸುಮಾತುಗಳಿಗೆ ಒಂದಷ್ಟು ಸಮಯ ಕೊಡು
ದವಾ ಇಲ್ಲದ ದದ್೯ಗಳಿಗೆ ಒಂದಷ್ಟು ಸಮಯ ಕೊಡು
ಝಗಮಗಿಸುವ ಗುಳಾಪುಗಳು ಕಣ್ಣು ಕೋರೈಸುತ್ತವೆ
ನಿಗಿನಿಗಿಸುವ ತಲ್ಲಣಗಳಿಗೆ ಒಂದಷ್ಟು ಸಮಯ ಕೊಡು
ಮುಳ್ಳುಗಳ ಬಳಿದು ಚೆಲ್ಲಿ ಮುತ್ತುಗಳ ಹಾಸಿರುವೆ ಸಖಾ
ಸೋತ ಹೆಜ್ಜೆಯ ಗೆಜ್ಜೆಗಳಿಗೆ ಒಂದಷ್ಟು ಸಮಯ ಕೊಡು
ಕರುಳ ಬಂಧದ ಹಾಡು ಕೇಳಿಸಿಕೊಳ್ಳುದ ಕಿವುಡು ಏಕೊ
ಮಧುರ ಭಾವದ ರಾಗಗಳಿಗೆ ಒಂದಷ್ಟು ಸಮಯ ಕೊಡು
ಕ್ಷಣಗಣನೆ ಕತ್ತಿ ತೂಗುತಿದೆ ಅರುಣಾಳ ತಲೆಯ ಮೇಲೆ
ಗುಟುಕು ನೀರು ಬಿಡಲು ಕೈಗಳಿಗೆ ಒಂದಷ್ಟು ಸಮಯ ಕೊಡು