ಅನಸೂಯ ಜಹಗೀರದಾರ-ಗಜಲ್

ಕಾವ್ಯ ಸಂಗಾತಿ

ಗಜಲ್

ಅನಸೂಯ ಜಹಗೀರದಾರ

ನೀನಂದು ಹೊರಟು ಹೋದೆ ಗಳಿಗೆ ಎಣಿಸುವ ಖಾಲಿತನವ ಉಳಿಸಿ
ಬಳ್ಳಿ ಮರದಿ ಎಲೆ ಉದುರಿದವು ಪತಝಡದಲಿ ಬೋಳುತನವ ಉಳಿಸಿ

ನಾವೆ ನಿಂತಲ್ಲಿಯೇ ಇದ್ದರೂ ಅಲೆಯ ಹೊಯ್ದಾಟಕೆ ಮುಲುಕಾಡುತಲಿತ್ತು
ಎರಗಿದ ತೂಫಾನಿಗೆ ದೋಣಿ ಜರ್ಝರಿತವಾಯಿತು ಶೇಷತನವ ಉಳಿಸಿ

ಪಡುವಣದಿ ದಗಂತದಿ ರವಿಯು ಸಮುದ್ರಕೆ ಇಳಿದನೆ ಕೆಂಪು ತೊಳೆಯಲು
ಕಾಳ ಕರಾಳ ಕಾವಳ ನಿಶೆ ಅಂಜನ ಹೊಗೆ ಆವರಿಸಿತು ಕಪ್ಪುತನವ ಉಳಿಸಿ

ಹೊರಳಿ ನರಳಿ ಕಳೆದ ಇರುಳು ಬದಲಿಸಿದ ಮಗ್ಗುಲು ಲೆಕ್ಕವಿಲ್ಲ ತಪ್ತ ಮನಕೆ
ಕಾಂತಿಹೀನ ಕರಿ ಗೆರೆಯ ನಯನ ಎವೆ ಮುಚ್ಚಿದವು ಅಳಲುತನವ ಉಳಿಸಿ

ಒಂದು ಮಾತು ಹೀಗೆ ಗಡಿ ರೇಖೆ ಎಳೆದುಕೊಂಡಿತು ಕಲ್ಪನೆಯೂ ಇರಲಿಲ್ಲ ಅನು
ಒಂದೊಂದು ನುಡಿಯಲೂ ವ್ಯಕ್ತಿತ್ವ ಬಣ್ಣ ಕಳಚಿದವು ವಾಸ್ತವತನವ ಉಳಿಸಿ


2 thoughts on “ಅನಸೂಯ ಜಹಗೀರದಾರ-ಗಜಲ್

Leave a Reply

Back To Top