ವ್ಯಾಲಂಟೈನ್ಸ್ ಡೇ ಸ್ಪೆಶಲ್

ಅಧರಂ-ಮಧುರಂ

Image result for photos of krishnain paintings

ತುಟಿ ಜೇನು, ಮೊಗ ಜೇನು, ಸಕಲವೂ ಸವಿ ಜೇನು!

(ವಲ್ಲಭಾಚಾರ್ಯರ “ಅಧರಂ ಮಧುರಂ” ಕನ್ನಡ ಭಾವಾನುವಾದದ ಪ್ರಯತ್ನ. ಪರಂಪರೆ ಕೂಡ ಹೇಗೆ ಪ್ರಿಯತಮನನ್ನು ಆರಾಧಿಸಿ ಭಜಿಸುತ್ತಿತ್ತು ಎನ್ನುವುದಕ್ಕೊಂದು ಪುರಾವೆ. )

ರಾಮಸ್ವಾಮಿ ಡಿ.ಎಸ್.

ತುಟಿ ಜೇನು ಮೊಗ ಜೇನು
ಕಣ್ಣ ನೋಟವೆ ಜೇನು, ನಗೆ ಜೇನು
ಎದೆಯೊಳಗೆ ಸುರಿವ ಜೇನು, ನಡಿಗೆಗೆ ಸೋತೆ
ಸವಿಯರಸನೇ ನೀನು, ಸಕಲವೂ ಸಿಹಿ ಜೇನು.

ಮಾತಲ್ಲಿ ಜೇನು,ಚರಿತೆ ಚಪ್ಪರಿಸಿದರೆ ಜೇನು,
(ಉಟ್ಟ) ಬಟ್ಟೆ ಸವಿ ಜೇನು, ಸಂಕೇತದೊಳಗೆ ಜೇನು
ನೀನಿತ್ತ ಬರುವುದು ನನ್ನ ಸುತ್ತುವುದಂತೂ ತಿಳಿಜೇನು
ಸವಿಯರಸನೇ ನೀನು, ಸಕಲವೂ ಸಿಹಿ ಜೇನು.

ಕೊಳಲುಲಿಯಲಿ ಜೇನು, ಪಾದಧೂಳಿಯಲಿ ಜೇನು
ಕೈ ಕಾಲುಗಳಲ್ಲೆಲ್ಲ ಎನಿತು ಸಿಹಿಯು
ನಾಟ್ಯದಲಿ ಸಿಹಿ ನೀನು, ನಿನ್ನ ಸಖ್ಯವೇ ಸಿಹಿ ಜೇನು
ಸವಿಯರಸನೇ ನೀನು, ಸಕಲವೂ ಸಿಹಿ ಜೇನು.

ಹಾಡಲ್ಲಿ ಮಾಧುರ್ಯ, ಕುಡಿವಲ್ಲಿ ಚಾತುರ್ಯ
ಉಣುವುದು ರಸಗವಳ, ಮಲಗಿದರೆ ತಿಳಿನಿದ್ರೆ
ಕಾಯಕ್ಕೆ ತಕ್ಕ ಪರಿವೇಷ ನಿನ್ನೊಲವು
ಸವಿಯರಸನೇ ನೀನು, ಸಕಲವೂ ಸಿಹಿ ಜೇನು.

ನಿನ್ನ ಕಾರ್ಯಗಳೇಸು, ನಿನ್ನ ಭಾದ್ಯತೆಗಳೇಸು
ಕಾಯ್ದು ಕೊಲ್ಲುವ ಹಾಗೇ ನೆನಪು ಅಧಿಕ
ನೀನಿತ್ತ ಉಡುಗೊರೆಯು, ನಿನ್ನ ಹೊಳಪಿನ ಹಾಗೆ
ಸವಿಯರಸನೇ ನೀನು, ಸಕಲವೂ ಸಿಹಿ ಜೇನು.

ನಿನ್ನ ಕುತ್ತಿಗೆಯ ಸುತ್ತ ನನ್ನ ಬಾಹುವಿನ ಹಾರ
ಯಮುನಾ ತಟದಲೆಗಳಲ್ಲೆಲ್ಲ ಮಧು ರಾಶಿ
ಹರಿವ ನೀರಲ್ಲೂ ಅರಳಿರುವ ಹೂವಲ್ಲೂ ನೀನೆ
ಸವಿಯರಸನೇ ನೀನು, ಸಕಲವೂ ಸಿಹಿ ಜೇನು.

ಗೋಪಿಕೆಯರೆಲ್ಲ (ನಿನ್ನ) ಲೀಲೆಗೆ ಮಣಿದು
ಕೂಡಿದ್ದು ಏನು ಬಿಟ್ಟದ್ದು ಏನು
ಕಂಡದ್ದು ಏನು, ವಿನೀತನಾಗಿ ಬೇಡಿದ್ದು ಏನು
ಸವಿಯರಸನೇ ನೀನು, ಸಕಲವೂ ಸಿಹಿ ಜೇನು.

ಗೆಳೆಯರೊಡಗೂಡಿ ರಾಸುಗಳನೊಟ್ಟಿದ್ದು
ಬೆತ್ತ ಬೀಸದೆಯೂ ಜಾನುವಾರು ಹೆಚ್ಚಿದ್ದು
ಕಾಯುವಿಕೆಗೊಳಗಾಗಿ ಪರಿಪಕ್ವವಾದದ್ದು
ಸವಿಯರಸನೇ ನೀನು, ಸಕಲವೂ ಸಿಹಿ ಜೇನು.

*********************************

Leave a Reply

Back To Top