ಅಂಕಣ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಗೋಕುಲ ನಿರ್ಗಮನ ಗೀತ ರೂಪಕ 

ಪುತಿ ನರಸಿಂಹಾಚಾರ್ 

ಕೃತಿ ; ಗೋಕುಲ ನಿರ್ಗಮನ ಗೀತ ರೂಪಕ 

ಕವಿ  : ಪುತಿ ನರಸಿಂಹಾಚಾರ್ 

ಪು ತಿ ನರಸಿಂಹಾಚಾರ್ ಅವರು ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಮಹಾನ್ ಚೇತನ.  ಬಿಎಂಶ್ರೀ ಬೇಂದ್ರೆ ಕುವೆಂಪು ಕೆಎಸ್ ನ ಅವರಂತಹ ಹಿರಿಯ ಕವಿಗಳ ಗುಂಪಿನಲ್ಲಿ ಇದ್ದವರು. ಪು ತಿ ನರಸಿಂಹಾಚಾರ್ ಜಿಜ್ಞಾಸೆಯ ಕವಿ ಎಂದೇ ಪ್ರಖ್ಯಾತಿ.  ಪುರೋಹಿತ  ತಿರುನಾರಾಯಣಚಾರ್ಯ ನರಸಿಂಹಾಚಾರ್ ಇವರ ಪೂರ್ತಿ ಹೆಸರು.( ೧೯೦೫ ಮಾರ್ಚ್ ೧೭ _ ೧೯೯೮ ಅಕ್ಟೋಬರ್ ೨೩ ). ಹನ್ನೊಂದು ಕವನಸಂಕಲನಗಳು ಶ್ರೀಹರಿಚರಿತೆ ಎಂಬ ಮಹಾಕಾವ್ಯ 1 ನಾಟಕ ಹಾಗೂ ಹದಿಮೂರು ಗೀತನಾಟಕಗಳನ್ನು ರಚಿಸಿರುವ ಇವರು 2 ಸಣ್ಣಕಥೆಗಳ ಸಂಕಲನಗಳು ಹಾಗೂ ಲಲಿತ ಪ್ರಬಂಧಗಳ 7 ಗದ್ಯ ಚಿತ್ರಗಳ ಸಂಕಲನಗಳನ್ನು ಬರೆದಿದ್ದಾರೆ.  7 ಅನುವಾದ ಕೃತಿಗಳು ,3 ಕಾವ್ಯ ಮೀಮಾಂಸೆ/ವಿಮರ್ಶೆ ಕೃತಿಗಳು 5 ಆಯ್ದ ಸಂಗ್ರಹಗಳು ಹಾಗೂ 1 ಸಂಪಾದನಾ ಗ್ರಂಥ ಸಾಹಿತ್ಯ ಇವರ ಕೃಷಿಯ ಫಸಲುಗಳಲ್ಲಿ ಸೇರಿಕೊಂಡಿದೆ . ಪ್ರಥಮ ಸಂಕಲನ ಹಣತೆ ಯಿಂದ ಆರಂಭವಾಗಿ ಕಡೆಯ ಸಂಕಲನ ಹಣತೆಯಹಾಡು ನಿಂದ ಮುಕ್ತಾಯವಾಗಿರುವುದು ಗಮನಿಸಬೇಕಾದ ಸಂಗತಿ . ಇವರ ಹಂಸ ದಮಯಂತಿ ಮತ್ತು ಇತರ ರೂಪಕಗಳು ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರಕಿದೆ.  ಪದ್ಮಶ್ರೀ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಮೈಸೂರು ವಿಶ್ವ ವಿದ್ಯಾನಿಲಯದ ಡಿಲಿಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇವರ ಮಡಿಲಿಗೆ ಸಂದಿವೆ.  ಚಿಕ್ಕಮಗಳೂರಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷ ರಾಗುದ್ದುದು  ಮತ್ತೊಂದು ವಿಶೇಷ.  ಕವಿ ಪುತಿನ ಅವರ ಶತಮಾನದ ಮನೆಯನ್ನು ಅವರ ಅಭಿಲಾಷೆಯಂತೆಯೇ ಕರ್ನಾಟಕ ಸರ್ಕಾರ ಸ್ಮಾರಕವನ್ನಾಗಿ ಪರಿವರ್ತಿಸಿದೆ.

ಕೃಷ್ಣನ ಅವತಾರವೇ ಲೋಕ ಕಲ್ಯಾಣಕ್ಕಾಗಿ. ಬಾಲ್ಯದ ಬಾಲಲೀಲೆಯ, ಮುಗ್ಧತೆಯ ಶೃಂಗಾರದ ಹದಿಹರೆಯದ ಲೀಲೆಗಳನ್ನು ಲೋಕಕ್ಕೆ ತೋರಿಸಿಕೊಟ್ಟು ಅವತಾರ ನಿಮಿತ್ತದ ರಾಜಕಾರಣಕ್ಕೆ ಹೊರಡಲು ನಾಂದಿಯಾದದ್ದು ಮಧುರೆಯಿಂದ ಬಂದ ಅಕ್ರೂರನ ಮೂಲಕದ ಕಂಸನ ಕರೆ. ಅಲ್ಲಿಂದ ಮುಂದೆ ಅವನು ಗೋಕುಲಕ್ಕೆ ಹಿಂದಿರುಗಿ ಬರುವುದೇ ಇಲ್ಲ.  ಆ ಹಿಂದಿನ ದಿನದ ಹುಣ್ಣಿಮೆಯಲ್ಲಿನ ಗೋಕುಲದ ಲೀಲಾ ವಿನೋದಗಳು ಒಂದು ಅಂಕದ ಅಂತ್ಯಕ್ಕೆ ಪ್ರಸ್ತಾವನೆಯಾಗುತ್ತದೆ . ಇದು ಹೀಗೇ ಎಂದು ಭವಿಷ್ಯದ ಸುಳಿವು ಯಾರಿಗೂ ಇರದಿದ್ದರೂ ಅತ್ಯಂತ ಮಹತ್ವದ್ದೇನೂ ಘಟಿಸುತ್ತಿದೆ ಹಾಗೂ ಘೋರ ದುಃಖಕ್ಕೆ ಭಾಷ್ಯ ಬರೆಯುತ್ತಿದೆ ಎಂಬ ಭಾವನೆಯನ್ನು ಗೋಕುಲದ ನಾಡಿಗರಲ್ಲೂ ನಾಟಕದ ನೋಡುಗರಲ್ಲೂ ಮೂಡಿಸುತ್ತದೆ ಅದು.  ಈ ನಾಟಕದ ಉದ್ದೇಶ.  ಕೃಷ್ಣ ಬಲರಾಮರು ,ಅವರ ಗೆಳೆಯ ಶ್ರೀಧಾಮ ಅಕ್ರೂರ ಹಾಗೂ ರಾಧೆ ಅವಳ ಗೆಳತಿ ನಾಗವೇಣಿ ಮತ್ತು ಅವರಿಬ್ಬರ ತಂದೆ ಸುಹಾಸ ಮತ್ತು ಸುಬಲ ಇಲ್ಲಿನ ಮುಖ್ಯ ಪಾತ್ರಧಾರಿಗಳು . ಗೋಪಿಕೆಯರು ಗೋಪಾಲಕರು ಊರ ಹಿರಿಯರು ಮತ್ತು ಋಷಿಗಳು ಸಹ ಭೂಮಿಕೆಯಲ್ಲಿ ಇರುತ್ತಾರೆ . ಕವಿ ಮತ್ತು ಗೊಲ್ಲರ ಹುಡುಗ ಕಥೆ ಹೇಳುತ್ತಾರೆ.  ಆದರೆ ಅಶರೀರವಾಗಿ ಇಡೀ ನಾಟಕದುದ್ದಕ್ಕೂ ಮುಖ್ಯ ಪಾತ್ರ ವಹಿಸುವುದು ಕೊಳಲು ಮತ್ತು ಅದರ ನಾದ . ಗೋಕುಲಕ್ಕೂ ರಾಧಾಕೃಷ್ಣರ ಪ್ರೀತಿಗೂ ಕೊಳಲಿಗೂ ಅವಿನಾಭಾವ .  ಮುಕುಂದ ಮೂರನ್ನೂ ಒಟ್ಟಿಗೇ ತ್ಯಜಿಸಿ ಬೇರೆಯೇ ಪ್ರಪಂಚಕ್ಕೆ ನಡೆದು ಬಿಡುತ್ತಾನೆ ಅವರನ್ನು ಅನಾಥರನ್ನಾಗಿಸಿ.  

ಜಗದೀ ಮಾಯೆಯು ಹೊಳಲಿಡುತಿರುವ 

ಮರೆದೈವದ ಕೊಳಲು 

ನಮ್ಮೆದೆ ಅರೆಚಣವಾದರೂ ಲಾಲಿಸಿ 

ನೀಗಲಿ ಭವದಳಲು 

ಎನ್ನುತ್ತಾ ನಾಂದಿಯಾಗುವ ನಾಟಕದಲ್ಲಿ ಅಕ್ರೂರ ಮರೆಯಲ್ಲಿ ನಿಂತೇ ಕೃಷ್ಣ ಬಲರಾಮರ ಚೆಲುವಿನ ಸೊಂಪಿನ,  ಕೊಳಲ ಗಾನದ ಇಂಪಿನ ಬಗ್ಗೆ ಗೋಪಿಕೆ ಗೋಪಾಲಕರ ಹಿರಿಯರ ಹೊಗಳಿಕೆಗಳನ್ನು ಕೇಳುತ್ತಾನೆ .  “ಕೃಷ್ಣನ ಕೊಳಲ ಕರೆ ತೊಟ್ಟಿಲ ಕೈಗೂಸನ್ನು ಮರೆಸುವ” ಪರಿ ಅರಿಯುತ್ತಾನೆ. ನಂತರ ಊರಲ್ಲೆಲ್ಲ ಚರ್ಚಿತವಾಗುತ್ತಿರುವ ಅಕ್ರೂರನ ಆಗಮನ, ಬಿಲ್ವಿದ್ಯೆ ಪ್ರದರ್ಶನಕ್ಕೆ ಕಂಸನ ಆಹ್ವಾನದ ಪ್ರಸ್ತಾಪವಾಗುತ್ತದೆ . ರಾಧಾ ಮಾಧವರ ಪ್ರೇಮ ಸಮಾಗಮದ ದೃಶ್ಯಗಳು ನೃತ್ಯಗಳು ನಡೆಯುತ್ತವೆ ..ಯಾರು ಹೇಳಿದರೂ ತನ್ನ ಮಗಳು ರಾಧೆ ಕೃಷ್ಣ ನೊಂದಿಗಿರುವಳು ಎಂದು ನಂಬದ ಅವಳ ತಂದೆಯ ಪಾತ್ರ ನಾವು ಪಾಮರರ ಅಜ್ಞಾನದ ದ್ಯೋತಕದಂತೆ ಭಾಸವಾಗುತ್ತದೆ.   ಈ ಮಧ್ಯೆ ಋಷಿಗಳ ಆಗಮನ, ಭರತ ವಾಕ್ಯ, ಹಿರಿಯರನ್ನು ಮೋಡಿ ಮಾಡಿ ಕುಣಿಸುವ ಮಾಧವನ ಕೊಳಲಗಾನ ಕೃಷ್ಣ ರಾಧೆಯರ ಯುಗಳ ಗಾನ ಮನ ಮುಟ್ಟುತ್ತದೆ.  ಗೋಕುಲದ ಸಂಭ್ರಮವನ್ನು ಕಣ್ಣಿಗೆ ಕಟ್ಟಿಕೊಡುತ್ತದೆ .  ಹಿಂದೆಲ್ಲಾ  ಹೊರನಾಡಿನ ಕರೆ ಬಂದಾಗಲೆಲ್ಲ ಕೇಡಿನ ಕರೆಯಾಗಿತ್ತು ಎಂದು ಪೂತನಿ ಧೇನುಕ ಇತರ ಪ್ರಸಂಗಗಳನ್ನು ಹೇಳಿ ಕೃಷ್ಣ ಮಧುರೆಗೆ ಬರಲಾರೆ ಎಂದಾಗ ಕುಪಿತಗೊಂಡ ಬಲರಾಮ ಹೆಣ್ಣುಮಕ್ಕಳ ಜೊತೆಯಲ್ಲಿದ್ದು ಹಾಡು ಕುಣಿತಗಳಲ್ಲಿ ಮೈಮರೆತು ವೀರತ್ವ ಮರೆತೆಯಾ ಎನ್ನುತ್ತಾ ಅವನ ಕೈಯ ಕೊಳಲನ್ನು ಎತ್ತಿ ಬಿಸುಟುತ್ತಾನೆ .ಆದರೆ ಅದೇ ಬಲರಾಮ ಈ ಮೊದಲು “ಮೂ ಲೋಕವ  ಗೆಲೆ  ಸಾಕೀ ಸಾಧನ ಎನ್ನಿಪುದೆನಗೀ ವೇಣುವಾದನ” ಎಂದು ಹೇಳಿರುತ್ತಾನೆ . ಆಗ ಕೃಷ್ಣ” ನನ್ನಂಗವೊಂದ ನೀ ಚಿವುಟಿ ತೆಗೆದಂದದೊಳು ಕೊಳಲ ಕಿತ್ತೊಗೆದೆಯಣ್ಣಾ” ಎಂದು ದುಃಖಿಸುತ್ತಾನೆ . ನಂತರ ಕೊಳಲನ್ನು ತ್ಯಜಿಸುವ ನಿರ್ಧಾರ ಮಾಡಿ “ಹೊಳಲಿಗೆ  ಕೊಳಲದು ತರವಲ್ಲ ಮಧುರೆಗಿದರ ಸವಿ ಸಲ್ಲ” ಎನ್ನುತ್ತಾನೆ . (ಇಲ್ಲಿ ಹೊಳಲು ಪದದ ಎರಡು ಅರ್ಥ ಉಪಯೋಗಿಸಿರುವ ಕವಿಯ ಜಾಣ್ಮೆಯ ಬಗ್ಗೆ ಹೇಳಲೇಬೇಕು . ಹಿಂದೆ ನಾಂದಿ ವಾಕ್ಯದಲ್ಲಿ ಹೊಳಲು ಎಂಬ ಪದಕ್ಕೆ ಪ್ರತಿಧ್ವನಿಸುವ ಶಬ್ದ ಮಾಡುವ ಎಂಬ ಅರ್ಥ ಇದೆ . ಇಲ್ಲಿ ಅದೇ ಹೊಳಲು ಪದಕ್ಕೆ ಪಟ್ಟಣ ನಗರ ಎಂಬ ಅರ್ಥ ಕೊಡುತ್ತದೆ ) ನಂತರ ತಾನು ಹೊರಡುವೆನೆಂದು ದುಃಖಿಸುತ್ತಿದ್ದ ಗೋಕುಲವಾಸಿಗಳಿಗೆ ನನ್ನ ಕೊಳಲನ್ನು ಇಲ್ಲೇ ಬಿಟ್ಟಿರುವೆ ” ನ್ಯಾಸವಿಟ್ಟ ಮುರಳಿಯಾಣೆ ಮರಳಿ ಬರುವೆನು”  ಎಂಬ ಆಶ್ವಾಸನೆ ಕೊಡುತ್ತಾನೆ. ಕಡೆಯಲ್ಲಿ ಎಲ್ಲಾ ದುಃಖಿತರಾಗಿ ಮೂಕರಾಗಿ ನಿಂತಿರುವಾಗ ಮತ್ತೆ ರಾಧೆಯ ಪ್ರವೇಶವಾಗುತ್ತದೆ . ಹೋಗುತ್ತಿರುವ ಕೃಷ್ಣನನ್ನು ನೋಡುತ್ತಾ ಶೋಕವೇ ಮೂರ್ತಿ ರೂಪವಾಗಿ ನಿಲ್ಲುತ್ತಾಳೆ .

“ಗುರು ಲಘುವೆನ್ನದೆ ಜಗವೆಲ್ಲ ಕುಣಿಸಿದ ಬಲುಮೆಯ ಕೊಳಲೆ” ಎಂದು ಮುಕ್ತಾಯವಾಗುವ ಈ ಗೀತನಾಟಕ 

ಓದುಗರಲ್ಲಿ ಧನ್ಯತಾ ಭಾವ ಮೂಡಿಸುತ್ತದೆ.

ಇಡೀ ನಾಟಕ ಗೀತ ರೂಪದಲ್ಲಿದ್ದು ನೃತ್ಯ ರೂಪಕವಾಗಿದೆ.  ಸ್ವತಃ ಸಂಗೀತಜ್ಞರಾಗಿದ್ದ ಕವಿ ರಾಗಗಳನ್ನು(ಸುಮಾರು ೫೫) ಪ್ರಸ್ತಾಪಿಸಿ ಗೀತರಚನೆ ಮಾಡಿದ್ದಾರೆ . ಎಷ್ಟೊಂದು ಪ್ರಸಿದ್ಧ ಭಾವಗೀತೆಗಳು ಈ ನಾಟಕದ್ದು ಎಂದು ತಿಳಿದಿದ್ದು ಇದನ್ನು ಓದಿದ ನಂತರವೇ.  ಕೆಲವನ್ನು ಮಾತ್ರ ಈ ಕೆಳಗೆ ಪಟ್ಟಿ ಮಾಡಿದ್ದೇನೆ .

೧. ಕೃಷ್ಣನ ಕೊಳಲಿನ ಕರೆ ಆಲಿಸು ಕೃಷ್ಣನ ಕೊಳಲಿನ ಕರೆ ೨. ತೆರೆಯಿತೆನ್ನ ಮನವು ಕೊಳಲೊಳು 

     ಹರಿಯೇ ಗೋಪಾಲನೊಲವು 

೩. ಬರುತಿಹನೇ ನೋಡೆ ವಾರಿಜ ಲೋಚನ 

     ಬರುವನೆ ಇತ್ತಡೆ ಪೇಳು ನನ್ನಾಣೆ 

೪. ನನ್ನೊಳು ನೀ ನಿನ್ನೊಳು ನಾ 

     ಒಲವ ಮುಂದಂತೆ ನಾನೀ 

     ನಿನ್ನೊಳು ನನ್ನೊಳು ನೀ 

      ಒಲಿದ ಮೇಲೆಂತೂ ನಾನನೀ 

      ಇದೇ ಒಲವಿನ ಸರಿಗಮಪದನೀ.

೫.  ಅಕೋ ಶ್ಯಾಮ ಅವಳೇ ರಾಧೆ 

     ನಲೆಯುತಿಹರು ಕಾಣಿರೇ 

೬.  ನಿಲ್ಲಿಸದಿರು ವನಮಾಲಿ ಕೊಳಲಗಾನವ 

ಕವಿ ಮುನ್ನುಡಿಯಲ್ಲಿ ಬರೆಯುತ್ತಾರೆ “ಹಿಂದೆ “ಮಳೆಯು ನಾಡ ತೊಯ್ಯುತ್ತಿದೆ ”  ಮತ್ತು  “ನವೋದಯಂ” ಪದ್ಯಗಳನ್ನು ಬರೆದಾಗ ನಾನು ಹಿಂದೆ ಗೋಕುಲದ ಗೊಲ್ಲತಿಯಾಗಿದ್ದಿರಬೇಕು ಎಂಬ ಭಾವ ಮೊಳೆಯಿತು.  ಅದು ಈ ಗೋಕುಲ ನಿರ್ಗಮನ ಬರೆದಾಗ ಪೂರ್ಣ ರೂಪ ತಳೆಯಿತು ” ಎಂದು.ಆ ಭಾವನೆ ನಿಜವೆನಿಸುತ್ತದೆ.  ರಾಧೆಯ ಉತ್ಕಂಠತೆ , ಕೃಷ್ಣನ ಪ್ರೇಮ,  ಗೋಪಿ ಗೋಪಾಲಕರ ವಿಶ್ವಾಸ ಸ್ನೇಹ, ಗೋಕುಲದ ಆ ವೈಭವ ಕಣ್ಣಿಗೆ ಕಟ್ಟಿದಂತೆ ಬರೆಯಲು ಪೂರ್ವ ಜನ್ಮದ ಸುಕೃತ ಸ್ಮರಣೆ ಇರದೆ ಸಾಧ್ಯವಿಲ್ಲ . 

ಇದೆಲ್ಲಾ ನನ್ನ ಒಂದು ಗುಕ್ಕಿನ ಓದಿಗೆ ದಕ್ಕಿದ ಅಲ್ಪ ಅರಿವು ಗ್ರಹಿಕೆ ಮಾತ್ರ . ವಿಸ್ತೃತ ಓದು ಮತ್ತೂ ಹೊಸ ಹೊಳವುಗಳನ್ನು ಆಯಾಮಗಳನ್ನು ಕೊಡಬಹುದು . ನನ್ನ ಈ ಪ್ರಯತ್ನ ಕುರುಡರು ಆನೆಯನ್ನು ವರ್ಣಿಸಿದಂತೆ . 

ಓದುಗರನ್ನು ದ್ವಾಪರಯುಗಕ್ಕೆ ಕರೆದೊಯ್ಯುವ ಮೋಡಿ ಮಾಡುವ ಕಾವ್ಯ. ಆಧ್ಯಾತ್ಮಿಕತೆಯ ಅಂತರ್ಗತ ಸಲಿಲ ಸರಿತೆಯೊಂದು ಗುಪ್ತಗಾಮಿನಿಯಾಗಿ ನಾಟಕದುದ್ದಕ್ಕೂ ಪ್ರವಹಿಸುತ್ತಲೇ ಇರುತ್ತದೆ. ಓದಿ ಮುಗಿಸಿದ ಮೇಲೆ ಕಿವಿಯಲ್ಲಿ ಕೊಳಲ ಗಾನದ ಅನುರಣನ ,  ಕಣ್ಣಲ್ಲಿ ಮೂಕರಾಗಿ ನಿಂತ ರಾಧೆ ಗೋಕುಲ ವಾಸಿಗಳ ಚಿತ್ರ, ಎದೆಯಲ್ಲಿ ಒಂದು ಶಕೆ  ಕಳೆದ ಗಾಢ ವಿಷಾದದ ಮೌನ . ಮತ್ತೆ ಬೇರೇನೂ ಇಲ್ಲ.  ಧನ್ಯ ಧನ್ಯೋಸ್ಮಿ . 

ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top