ಕಾವ್ಯಸಂಗಾತಿ
ಶಾಲಿನಿ ಆರ್
ಶಾರು ಗಜಲ್
ಬಿಸಿಲಧಗೆ ಹೆಚ್ವಿದೆ ಮರದ ನೆರಳಿಗಾಗಿ ಮನವು ಹುಡುಕುತಿದೆ ದೊರೆ
ನಂಬಿಕೆಯ ದಾಹ ತಣಿಸುವ ಒಲವಿಗಾಗಿ ಮನವು ಹುಡುಕುತಿದೆ ದೊರೆ
ಕಮರಿದ ಆಸೆಗಳು ಕರುಬುತಿವೆ ನಭದಿ ಮಳೆಬಿಲ್ಲು ಕಾಣದಾಗಿದೆ
ಕರಿಮಾಡವಿದ್ದರು ಸುಳಿಯದ ಮಳೆಗಾಗಿ ಮನವು ಹುಡುಕುತಿದೆ ದೊರೆ
ಕೇಳುವ ಕಿವಿಗಳು ಕುಣಿಯುತ ಒಳದನಿ ಬಾಯಿಗೆ ಬೀಗ ಜಡಿದಿದೆ
ಜೀವನ ಮೌಲ್ಯಗಳ ಹಸಿರ ಉಸಿರಿಗಾಗಿ ಮನವು ಹುಡುಕುತಿದೆ ದೊರೆ
ತುತ್ತು ಉಣಿಸುವ ಅವನಿಯೊಡಲು ಹಸಿವಿನಿಂದ ಪರಿತಪಿಸಿದೆ
ಸಂಜೆ ಅರಳುವ ಮಲ್ಲೆ ಕಂಪಿನಾಸೆಗಾಗಿ ಮನವು ಹುಡುಕುತಿದೆ ದೊರೆ
ಗೋರಿಯೊಳಗೆ ಮಗ್ಗುಲಾದ ಶವ ಮತ್ತೆ ಅಸ್ಮಿತೆಯ ಅರಸುತಿದೆ
ಶಾರು ದನಿಪದದಲಿರದ ಭಾವಗಳಿಗಾಗಿ ಮನವು ಹುಡುಕುತಿದೆ ದೊರೆ.
ಶಾಲಿನಿ.ಆರ್
ರಾಜ ಪ್ರಭುತ್ವ ವಾಸಿ ಎನ್ನುವ ತಮ್ಮ ಗಜಲ್ ಹೊಸತನ, ಹೊಸ ಚಿಂತನೆ ಮನಸ್ಸಿನಲ್ಲಿ ಹುಟ್ಟು ಹಾಕಿತು.
ಜೀವನ ಮೌಲ್ಯಗಳ ಹಸಿರ ಉಸಿರಿಗಾಗಿ ಮನವು ಹುಡುಕುತಿದೆ ದೊರೆ….
ಹೌದು ಶಾಲಿನಿಯವರೆ ಮೌಲ್ಯರಹಿತರ ಮಧ್ಯೆ ಸಿಲುಕಿರುವ ಜನಸಾಮಾನ್ಯರು ನೊಜ್ಜುಗೊಜ್ಜಾಗುತ್ತಿದ್ದಾರೆ. ಈ ಹುಡುಕಾಟಕ್ಕೆ ಕೊನೆ ಎಲ್ಲೋ ಕಾಣದಾಗಿದೆ! ಬದುಕಿನ ವಾಸ್ತವವನ್ನು ತುಂಬಾ ಚೆನ್ನಾಗಿ ಹೆಣೆದಿದ್ದೀರ.ಧನ್ಯವಾದಗಳು ತಮಗೆ.