ವಿಶೇಷ ಲೇಖನ
ಜ್ಞಾನೋದಯ
ಸುಮಾ ಕಿರಣ್

ಮಿತ್ರರೇ.. ಯಾರಿಗೆ, ಯಾವಾಗ, ಎಲ್ಲಿ, ಹೇಗೆ, ಯಾವ, ವಿಷಯಕ್ಕೆ ಜ್ಞಾನೋದಯ ಆಗುತ್ತದೆ ಎಂಬುದು ತಿಳಿಯುವುದು ಅಸಾಧ್ಯ. ಜ್ಞಾನದ ಉದಯ ಆಗಾಗ ಆಯಾ ಸಂದರ್ಭದಲ್ಲಿ ವಿಷಯಕ್ಕೆ ತಕ್ಕಂತೆ ಆಗುತ್ತಲೇ ಇರುತ್ತದೆ ಎನ್ನಿ. ಅಯ್ಯೋ! ಇವಳಿಗೆ ಇವತ್ತು ಯಾವ ವಿಷಯಕ್ಕೆ ಜ್ಞಾನೋದಯ ಆಯಿತು ಎಂಬ ಪ್ರಶ್ನೆಯೇ? ಖಂಡಿತ! ನನಗಾದ ಜ್ಞಾನೋದಯದ ಬಗ್ಗೆ ಹೇಳುವೆ ಕೇಳಿ..
ಮೊನ್ನೆ ನಮ್ಮ ಮನೆಗೊಂದು ಹೊಸ ವಾಷಿಂಗ್ ಮಿಷಿನ್ ಬಂತು ; ಅಯ್ಯೋ! ಬಂತು ಅಂದರೆ ನಿಮ್ಮಿಂದ ಬರುತ್ತದೆ ಪ್ರಶ್ನೆ.. ಬರೋದಕ್ಕೆ ಅದಕ್ಕೇನು ಕಾಲು ಇದೆಯಾ! ಅಂತ. ಇಲ್ಲ ಬಿಡಿ, ಬಂದದ್ದಲ್ಲ.. ತಂದದ್ದು. ಸರಿ ಇನ್ನು ಇವಳು ವಾಷಿಂಗ್ ಮಿಷಿನ್ ಅಂದ ಚಂದ ಹೊಗಳಿ ಕಂಪನಿಯ ಜಾಹೀರಾತು ನಡೆಸುತ್ತಾಳೆ ಎಂದುಕೊಂಡಿರಾ? ಖಂಡಿತ ಇಲ್ಲ. ಯಾವ ಕಂಪನಿ ಮಿಷಿನ್ ಆದರೆ ಏನು? ಮಾಡೋದು ಬಟ್ಟೆ ಒಗೆಯುವ ಕೆಲಸ, ಅದನ್ನು ಅಚ್ಚುಕಟ್ಟಾಗಿ ಮಾಡಿ ದೀರ್ಘಕಾಲ ಬಾಳಿಕೆ ಬಂದರಾಯಿತು ಅಲ್ಲವೇ? ಸರಿ ವಿಷಯಕ್ಕೆ ಹೋಗೋಣ.. ಬರೀ ವಿಷಯಾಂತರವೆ ಆಗುತ್ತಿರುತ್ತದೆ.
ನಿನ್ನೆ ದಿನ ವಾಷಿಂಗ್ ಮೆಷಿನ್ ಕಂಪನಿ ಅವನೊಬ್ಬ ನಮ್ಮ ಮನೆ ಲ್ಯಾಂಡ್ಲೈನ್ ಗೆ ಕರೆ ಮಾಡಿದ. ಹೆಚ್ಚಾಗಿ ಲ್ಯಾಂಡ್ಲೈನ್ ನನ್ನ ಮಗ ಅಥವಾ ಅತ್ತೆಯವರಿಗೆ ಬರುವುದರಿಂದ ನಾನದರ ಗೊಡವೆಗೆ ಹೋಗುವುದಿಲ್ಲ. ಆದರೆ, ನಿನ್ನೆ ಮಧ್ಯಾಹ್ನ ಎಲ್ಲರೂ ಮಲಗಿದ್ದ ಕಾರಣ ನಾನೇ ಕರೆ ಸ್ವೀಕರಿಸಬೇಕಾಗಿ ಬಂತು.
ಸರಿ, ಕರೆ ಸ್ವೀಕರಿಸಿ ‘ಹಲೋ’ ಎಂದೆ. ಅತ್ತ ಕಡೆಯಿಂದ ಬಂತೊಂದು ಮೃದು ಮಧುರ ಧ್ವನಿ ‘ಮೇಡಂ, ಇದು ಗೊಡ್ರೆಜ್ ವಾಷಿಂಗ್ ಮೆಷಿನ್ ಕಂಪನಿ ಇಂದ. ನಿಮ್ಮ ಮನೆ ಎಲ್ಲಿ ಬರುತ್ತದೆ?’ ಎಂದು. ನನಗೊಂದಿಷ್ಟು ಗೊಂದಲವಾಯಿತು. ನಿನ್ನೆ ವಾಷಿಂಗ್ ಮಿಷಿನ್ ಡೆಲಿವರಿ ಆಗಿದೆ ಮತ್ತೇಕೆ ಇವನಿಗೆ ವಿಳಾಸ ಎನ್ನಿಸಿ ‘ನಮ್ಮ ಮನೆ ಎಲ್ಲಿಗೂ ಬರಲ್ಲಪ್ಪ! ನೀನೇ ಬರಬೇಕು. ಆದರೆ.. ನಿನ್ನೆಯ ದಿನವೇ ವಾಷಿಂಗ್ ಮಿಷಿನ್ ಡೆಲಿವರಿ ಆಗಿದೆಯಲ್ಲ’ ಎಂದೆ. ನನ್ನ ಉತ್ತರ ಅತ್ತ ಕಡೆಯವನಿಗೆ ಸ್ವಲ್ಪ ವಿಚಿತ್ರ ಎನಿಸಿ ಕ್ಷಣ ಸುಮ್ಮನಿದ್ದ ನಂತರ ‘ಇಲ್ಲ ಮೇಡಂ, ಅದು “ಡೆಮೋ” ಕೊಡಬೇಕು.. ಅದಕ್ಕೆ ನೀವು ಮನೆಗೆ ಬರುವ ದಾರಿ ತಿಳಿಸಿದರೆ ಒಳ್ಳೆಯದಿತ್ತು. ಬಿಗ್ ಬಾಸ್ (ಇದೊಂದು ನಮ್ಮ ಏರಿಯಾದ ಸುಪ್ರಸಿದ್ಧ ಬಾರ್) ರೋಡ?’ ಎಂಬ ಪ್ರಶ್ನೆ ಬಂತು.
ಅವನು ಡೆಮೋ ಎಂದಾಗಲೇ ನನ್ನ ಮನಸ್ಸು ನಕ್ಕಿತು! ನಿನ್ನೆಯಿಂದ ನಮ್ಮ ಮನೆಯವರ ಎರಡು ಬಾರಿ ಡೆಮೋ ಆಗಿದೆ. ಇನ್ನು ಇವನದು ಬೇರೆ ಅಂದುಕೊಳ್ಳುತ್ತಲೇ.. ‘ಅಲ್ಲಪ್ಪ! ಬಿಗ್ ಬಾಸ್ ರಸ್ತೆ ಅಲ್ಲ. ಉಮಾಮಹೇಶ್ವರಿ ದೇವಸ್ಥಾನಕ್ಕೆ ಹೋಗುವ ದಾರಿ’ ಎಂದೆ. ‘ಅಯ್ಯೋ! ಅದೆಲ್ಲಿ ಬರುತ್ತೆ ಮೇಡಂ?’ ಎಂದು ಪ್ರಶ್ನಿಸಿದ. ಇವನು ಎಲ್ಲಿಗೂ ಹೋಗುವುದಿಲ್ಲ. ಇವನು ಇರೋ ಅಲ್ಲಿಗೆ ಎಲ್ಲಾ ಬರಬೇಕೇನೋ ಅಂದುಕೊಂಡು, ‘ಇಲ್ಲಪ್ಪ! ಶಿವಪಾಡಿ ಟೆಂಪಲ್ (ನಮ್ಮ ಏರಿಯಾದ ಪ್ರಸಿದ್ಧ ದೇವಸ್ಥಾನ) ರೋಡಲ್ಲಿ ಬರಬೇಕು’ ಎಂದೆ.
‘ಅಯ್ಯೋ! ಮೇಡಂ ನನಗೆ ಗೊತ್ತಿಲ್ಲವಲ್ಲ’ ಅಂದ. ಕೂಡಲೇ ತಲೆಗೆ ಹೊಳೆಯಿತು.. ಇವನಿಗೆ ಬಾರ್ ಬಿಟ್ಟು ಬೇರೆ ಹೇಳಿದರೆ ಇವನು ಬರುವುದಿಲ್ಲ! ಹಾಗಾದಲ್ಲಿ, ನಾನೇ ವಾಷಿಂಗ್ ಮಿಷಿನ್ ಹೊತ್ತುಕೊಂಡು ಹೋಗಬೇಕಾಗುತ್ತದೆ ಎಂದುಕೊಂಡು… ಕೂಡಲೇ ಉತ್ತರಿಸಿದೆ ‘ನೋಡಪ್ಪ! ನಿಂಗೆ ಲಿಕ್ಕರ್ ಹೌಸ್ ಗೊತ್ತಾ?’. ಪ್ರಶ್ನೆ ಮುಗಿಯುವ ಮುನ್ನವೇ ಉತ್ತರ ಬಂದೇ ಬಿಟ್ಟಿತು ‘ಗೊತ್ತು ಮೇಡಂ’. ನಾನು ಯೋಚಿಸಿದೆ.. ಗೊತ್ತಿಲ್ಲದಿರುವ ಸಾಧ್ಯತೆ ಇದೆಯಾ? ನನ್ನ ಈ ಯೋಚನೆ ಸಾಗುತ್ತಿರುವಾಗಲೇ ಅತ್ತ ಕಡೆಯಿಂದ ಬಂತು ಧ್ವನಿ.. ‘ಮೇಡಂ, ಅದರ ಪಕ್ಕದ ಚಿಕ್ಕ ರಸ್ತೆಯಲ್ಲಿ ಬರಬೇಕಾ?’ ಎಂದು. ಕೂಡಲೇ ಎಚ್ಚೆತ್ತೆ.. ‘ಇಲ್ಲಪ್ಪ.. ಅದರ ಪಕ್ಕದ ಚಿಕ್ಕ ರಸ್ತೆ ಅಲ್ಲ. ಅದರ ನಂತರದ ದೊಡ್ಡ ರಸ್ತೆ ಇದೆಯಲ್ಲ ಅದರಲ್ಲಿ ಬಂದು’… ಎಂದು ಮುಂದಿನ ವಿಳಾಸ ತಿಳಿಸಿದೆ. ಹುಡುಗ ಸರಿಯಾಗಿ ಹುಡುಕಿಕೊಂಡು ಸೀದಾ ನಮ್ಮ ಮನೆಗೇ ಬಂದ.

ಇಷ್ಟಾದಾಗಲೇ ಹೊಸದೊಂದು ಜ್ಞಾನದ ಉದಯ ಆಯಿತು. ಬಹುತೇಕ ಗಂಡಸರಿಗೆ ವಿಳಾಸ ತಿಳಿಸಬೇಕಾದರೆ… ಬಾರ್ ಗಳನ್ನೊ, ಹಾರ್ಡ್ವೇರ್ ಶಾಪ್ ಗಳನ್ನೊ, ಹೋಟೆಲುಗಳನ್ನೊ (ಹೆಂಡತಿ ಮೇಲೆ ಸಿಟ್ಟುಗೊಂಡ ಇವರನ್ನು ಸಲಹುವ ‘ಎರಡನೇ ಮಾವನ ಮನೆ’) ಹೆಸರಿಸಬೇಕು. ಇನ್ನು ಬಹುತೇಕ ಮಹಿಳಾಮಣಿಗಳಿಗೆ ವಿಳಾಸ ಹೇಳಬೇಕಿದ್ದರೆ.. ಬ್ಯೂಟಿಪಾರ್ಲರ್, ಜವಳಿ ಮಳಿಗೆ, ಟೈಲರಿಂಗ್ ಅಂಗಡಿ ಯಾ ದೇವಸ್ಥಾನಗಳನ್ನು ಹೆಸರಿಸಬೇಕು. ಕೊನೆಗೆ ಈ ಮಕ್ಕಳಿಗಾದರೆ.. ಗೇಮಿಂಗ್ ಸೆಂಟರ್, ಸಿನಿಮಾ ಮಂದಿರ, ಐಸ್ಕ್ರೀಮ್ ಶಾಪ್ ಗಳನ್ನು ಹೆಸರಿಸಬೇಕು. ಆಗ ನಮ್ಮ ಕೆಲಸ ಸುಲಭ. ನೀವೇನಂತೀರಾ??
ಸರ್ವೇ ಜನಾಃ ಸುಖಿನೋ ಭವಂತು…
ಸಂಗಾತಿ ಸಂಪಾದಕರಿಗೆ ಧನ್ಯವಾದಗಳು
ಹ..ಹಾ..! ಅಂತೂ ಅಂದಿನ ದಿನ ಮುಗಿಯುವುದರ ಒಳಗಡೆ ನಿಮಗೆ ಜ್ಞಾನೋದಯವಾಗಿ, ವಾಷಿಂಗ್ ಮಿಷನ್ ಡೆಮೋ ಕೊಡುವವನಿಗೆ ನಿಮ್ಮ ಮನೆಯ ವಿಳಾಸ ಸರಿಯಾಗಿ ತಿಳಿಸಿದಿರಿ ಎನ್ನಿ, ಸುಮಾ
ಚಿಕ್ಕ-ಚೊಕ್ಕ ಹಾಸ್ಯ ಲೇಖನ
ಹೌದೂ ಗುರುಗಳೇ
ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಸಣ್ಣ ಸಣ್ಣ ವಿಷಯಗಳೂ ಎಷ್ಟೊಂದು ಹಾಸ್ಯ ಪ್ರಸಂಗಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದು ತಮ್ಮ ಬರವಣಿಗೆಯಿಂದ ತಿಳಿಯಿತು ಜೊತೆಗೆ ಯಾರಿಗೆ ಯಾವ ಯಾವ ಗುರುತುಗಳಿಂದ ವಿಳಾಸ ಹೇಳಬೇಕೆಂಬ ಜ್ಞಾನೋದಯವೂ ಆಯಿತು. ಧನ್ಯವಾದಗಳು ಮೇಡಂ.
ಧನ್ಯವಾದಗಳು
ಸರಳ ಸುಂದರ ಬರಹ
ಧನ್ಯವಾದಗಳು