ಹೋಗುವುದು!

ಕಾವ್ಯ ಸಂಗಾತಿ

ಹೋಗುವುದು!

ಡಾ. ಅರಕಲಗೂಡು ನೀಲಕಂಠ ಮೂರ್ತಿ

Famous Abstract Paintings - The 10 Best Abstract Art of all Time

ಬರುವುದು ಹೋಗುವುದು
ಮತ್ತೆ ಮತ್ತೆ ಬಂದು
ಹೋಗುವ ಕ್ರಿಯಾಚಕ್ರ
ಇಲ್ಲಿಯ ಅತಿಶಯ!

ಸಮಯ ಬಂದಾಗಿದೆ
ಹಾಗೂ ಈಗ ಹೋಗುವುದಿದೆ
ಆದರೆ ಎಲ್ಲಿಗೆ
ಮತ್ತು ಹೇಗೆ…?
ಕೈಮರವೂ ಇಲ್ಲಿಲ್ಲ
ಒಂದೇ ಒಂದಾದರೂ
ಮಾರ್ಗದರ್ಶಕ ದಾರಿಹೋಕ
ಸಹ ಇಲ್ಲ ಒಬ್ಬನಾದರೂ!

ಬರೀ ದಾರಿಗಳು
ಎಲ್ಲ ಒಂದೇ ದಿಕ್ಕಿನ ಕಡೆ
ಹೋಗುವ ದಾರಿಗಳು
ಒಂದಲ್ಲ ಎರಡಲ್ಲ
ನೂರಾರು ಸಾವಿರಾರು
ಲೆಕ್ಕ ಹರಿಯದ
ಜಟಿಲ ಜಾಲ…!
ಇಷ್ಟಿದ್ದೂ
ಒಬ್ಬೊಬ್ಬರಿಗೊಂದೊಂದೆ ಒಳ ದಾರಿ
ಹಾಗೂ ಆಯ್ಕೆಯೂ
ಅರಿವಾಗದ ಮೋಡಿ…!

ಆದರೂ ನುಸುಳಿ ಹೋಗುವುದಿದೆ
ಈ ಘೋರ ದಿಗ್ಭ್ರಮೆಯೊಳಗೆ….!
ದಿಢೀರಂತ ಅರಿವೇ ಇಲ್ಲದ ಹಾಗೆ
ಹೋಗೇ ಹೋಗುವುದಂತು ದಿಟ್ಟ ದಿಟ!

ದಾರಿಗಳ ಥರ
ಹೋಗುವುದೂ ವೈವಿಧ್ಯಮಯ ಜಾಲ!
ಭಸ್ಮಾಸುರನೆ ಬೆಂದು ಬೂದಿಯಾದ ಬೆಂಕಿಯೊಳಗೆ
ನೀರ ಮಡುವಿನಾಳದೊಳಗೆ
ಮಣ್ಣ ಗಭೀರ ಕುಳಿಯ ಕೆಳಗೆ
ಇಂಥ ಅನೇಕ
ದಿಕ್ಕು ದಿಕ್ಕಿಗೊಂದೊಂದು ಥರದ ನಡತೆ ಹೀಗೆ ಹೋಗುವಾಗಲು
ಬಣ್ಣಬಣ್ಣಕೊಂದೊಂದು
ಬಣ್ಣಬಣ್ಣದ ಉಡುಗೆ ನಡಿಗೆ!

ಹೇಗೋ ಏನೋ ಅಂತು
ಗಾಳಿ ಅಳಿದು ತಟಸ್ಥ
ಇನ್ನೇನು ನಿರ್ಗಮನ
ಕೆಲಕಾಲದಲಿ ಮಣ್ಣೊಳಗೆ
ಮಣ್ಣ ಕಣಕಣ
ಈ ಬ್ರಹ್ಮಾಂಡದಲಿ
ಎಲ್ಲೆಲ್ಲೂ ಹಂಗುಹರಿದು ಹರಡಿ
ಖಾಸಾತನ ಕಳೆದು
ಎಲ್ಲ ಸಮೂಹ ಸಮೃದ್ಧ!

ಈಗ ಹೆಕ್ಕುವುದಾದರೂ ಹೇಗೆ
ನಮ್ಮ ನಿಮ್ಮ ವ್ಯಕ್ತಿಗತ ಕಣ
ಅಣುಅಣುವಿನ ಈ ಅನಂತ
ರುದ್ರರಾಶಿಯಲಿ…?

ಹೀಗೆ ಹೋಗುವುದು
ಹೋಗಿ ರಾಶಿಯಲೊಂದು
ಕಣವಾಗಿ
ಇಲ್ಲವಾಗುವುದಲ್ಲದೆ
ದಿಟ ಇನ್ನಾವುದಿದೆ…?


One thought on “ಹೋಗುವುದು!

Leave a Reply

Back To Top