ಸಮ್ಮಿಶ್ರ ಸಂಸ್ಕೃತಿಯ ಹರಿಕಾರ ಯೂಸುಫ್ ಆದಿಲ್ ಖಾನ್…

ಲೇಖನ

ಸಮ್ಮಿಶ್ರ ಸಂಸ್ಕೃತಿಯ ಹರಿಕಾರ

ಯೂಸುಫ್ ಆದಿಲ್ ಖಾನ್

ದೇವಿಕಾ ಮ್ಯಾಕಲ್

ನೂತನ ಶಿಲಾಯುಗದ ಪಳೆಯುಳಿಕೆಗಳು ಒಳಗೊಂಡಿರುವ ಗೋಗಿ ವಿವಿಧ ಧರ್ಮಗಳ ಸಂಸ್ಕೃತಿಗಳ ಸಮ್ಮಿಶ್ರ ಸಂಗಮವಾಗಿ ವೈವಿಧ್ಯತೆಯ ಇತಿಹಾಸವನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡ ವಿಶೇಷ ತಾಣ.ಇದು ಶಹಾಪುರದಿಂದ ಪಶ್ಚಿಮಕ್ಕೆ 12 ಕಿ.ಮೀ ದೂರದಲ್ಲಿದೆ .೧೨ ನೇ ಶತಮಾನದ ಕಲ್ಯಾಣಿ ಚಾಲುಕ್ಯರ ಶಾಸನಗಳು ಪರ್ಶಿಯನ್ ಭಾಷೆಯ 4 ಶಾಸನಗಳ ಜೊತೆಗೆ ಚಂದಾಹುಸೇನಿ ದರ್ಗಾ ಸೇರಿದಂತೆ ವೈವಿಧ್ಯಮಯ ಇತಿಹಾಸ ಹೊಂದಿದೆ.ವಿಜಯಾಪುರದ ಆದಿಲ್ ಶಾಹಿ ಅರಸು ಮನೆತನಗಳಿಗೆ ಗುರುಗಳೂ.ಪ್ರಸಿದ್ದ ಸೂಫಿ ಸಂತರು ಆಗಿದ್ದ ಚಂದಾ ಹುಸೇನಿ ( 1374- 1438) ದರ್ಗಾ 1745 ರಲ್ಲಿ ಈ ದರ್ಗಾವನ್ನು ಸುಂದರವಾದ ಪರ್ಶಿಯನ್ ವಾಸ್ತು ಶಿಲ್ಪದ ಆಧಾರದ ಮೇಲೆ ಕಟ್ಟಲಾಯಿತು.

ಆದಿಲ್ ಶಾಹಿಗಳ ಕಾಲದಲ್ಲಿ ವಿಜಾಪುರಕ್ಕೆ ‘ ದಕ್ಷಿಣದ ರಾಣಿ ‘ ಎಂದು ಕರೆಯುತ್ತಿದ್ದರು.ಈ ವೈಭವವೆಲ್ಲ ಆರಂಭವಾದುದು ಹಿಂದೂಸ್ಥಾನಕ್ಕೆ ಬಂದ ವ್ಯಕ್ತಿಯೊಬ್ಬನಿಂದ ಎಂಬುದು ಆಶ್ಚರ್ಯ ಹುಟ್ಟಿಸುವಂಥದ್ದು.ಆದಿಲ್ ಶಾಹಿ ರಾಜವಂಶದ ಮೂಲಪುರುಷ ಯೂಸೂಫ್ ಆದಿಲ್ ಖಾನ್ ಜನಿಸಿದ್ದು ಟರ್ಕಿಯ ಇಸ್ತಾಂಬೂಲ್ ನಲ್ಲಿ ರಾಜ್ಯವಾಳಿದ್ದು ವಿಜಾಪುರದಲ್ಲಿ ಆತನ ಗೋರಿ ಇರುವುದು ಈಗಿನ ಯಾದಗಿರಿ ಜಿಲ್ಲೆಯ ಶಹಾಪುರದ ಬಳಿಯ ಗೋಗಿಯಲ್ಲಿ.

ಯೂಸುಫ್ ಆದಿಲ್ ಖಾನ್ ಬದುಕು ರೋಮಾಂಚನಕಾರಿಯಾಗಿದೆ.ಕಪ್ಪು ಸಮುದ್ರದ ಕರಾವಳಿ ನಗರ ಇಸ್ತಾಂಬೂಲ್ ಟರ್ಕಿಯ ಬೃಹತ್ ನಗರವಾಗಿದ್ದು ಐರೋಪ್ಯ ಮತ್ತು ಏಷ್ಯಾ ಖಂಡಗಳಿಗೆ ಕೊಂಡಿಯಂತಿದೆ.ಇಸ್ತಾಂಬೂಲ್ ಗೆ ಕಾನ್ ಸ್ಟಂಟಿ ನೋಪಲ್ ಎಂದು ಕರೆಯಲಾಗುತ್ತಿತ್ತು.ಒಟ್ಟೋಮನ್ ರಾಜವಂಶದ ಎರಡನೇ ಆಘಾಮುರಾದ್ 1421-1451 ರವರೆಗೆ ಈ ಪ್ರದೇಶವನ್ನು ಆಳಿದ ಈತನ ಎರಡನೇ ಮಗನೇ ಯೂಸುಫ್ ಆದಿಲ್ ಖಾನ್.ಈತನ ಅಣ್ಣ ಯುವರಾಜ ಮಹಮೂದ್ ಇರುವಾಗ ರಾಜಕುಮಾರ ಯೂಸುಫ್ ಹುಟ್ಟಿದ್ದು ಸಮಸ್ಯೆಯಾಯಿತು ರಾಜನ ಹಿರಿಯ ಮಗ ಮತ್ತು ಕಿರಿಯ ಮಗನ ಮಧ್ಯೆ ಅಧಿಕಾರಕ್ಕಾಗಿ ಕಚ್ಚಾಟವಾದರೆ ಆಡಳಿತ ಸುಗಮವಾಗಿ ಸಾಗುವುದಿಲ್ಲ.ಎಂದು ಕಿರಿಯ ಮಗನ ಹತ್ಯೆ ಮಾಡುವುದರ ಮೂಲಕ ಈ ಸಮಸ್ಯೆ ಬಗೆಹರಿಸಲು ಸಾಧ್ಯವೆಂದು ಯೂಸುಫ್ ಶಿಶುವಾಗಿದ್ದಾಗಲೇ ಕೊಲ್ಲುವ ನಿರ್ಧಾರ ಮಾಡಿದರು.ಆಗ ಮಗುವನ್ನು ಉಳಿಸಿಕೊಳ್ಳಲು ತಾಯಿ ಇರಾನಿನ್ ಸಾವಾ ನಗರದಿಂದ ಬಂದ ವ್ಯಾಪಾರಿ ಖಾಜಾ ಇಮಾದುದ್ದೀನಗೆ ಸಾಕಷ್ಟು ಹಣಗಳನ್ನು ನೀಡಿ ಶಿಶು ಯೂಸೂಫ್ ನನ್ನು ನೋಡಿಕೊಳ್ಳಲು ಕೊಟ್ಟಳು.

ಯೂಸೂಫ್ ನನ್ನು   ಸಾವಾ ನಗರಕ್ಕೆ ಕರೆದುಕೊಂಡು ಬಂದು ಇಮಾದುದ್ಧಿನ ರಾಜಕುಮಾರನಿಗೆ ಸಿಗಬೇಕಾದ ಎಲ್ಲಾ ಶಿಕ್ಷಣ ನೀಡಿದ.ಸ್ಪುರದ್ರೂಪಿಯಾದ ಯೂಸುಫ್ ನೋಡುಗರ ಗಮನ ಸೆಳೆಯುತ್ತಿದ್ದ.ಯೂಸುಫ್ ನ ಪಾಲನೆ ಮಾಡುತ್ತಿದ್ದ ದಾದಿ ಆತನ ಜನ್ಮರಹಸ್ಯದ ಕುರಿತು ಕೆಲವರ ಮುಂದೆ ಮಾತನಾಡಿದ್ದು ಎಲ್ಲೆಡೆ ಹಬ್ಬಿತು ಹೀಗಾಗಿ ಯೂಸುಫ್ ಸಾವಾ ನಗರವನ್ನು ಬಿಡುವುದು ಅನಿವಾರ್ಯವಾಯಿತು 16 ವರ್ಷದ ಯೂಸುಫ್ ಕೆಲ ದಿನ ಇರಾನಿನ್ ಇಸ್ಪಹಾನ್ ಮತ್ತು ಶಿರಾಜ್ ನಗರಗಳಲ್ಲಿ ವಾಸಿಸಿದ.ಅದನಂತರ ಬಹುಮನಿ ರಾಜಧಾನಿಯಾದ ಬೀದರ್ ಗೆ ಬಂದ.ಕುದುರೆ ಲಾಯದ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ.ಮಾಳ್ವಾದ ರಾಜನ ಅಧೀನದಲ್ಲಿದ್ದ ಕೇರಳ ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ಯೂಸುಫ್ ತೋರಿದ ಸಹಾಸಕ್ಕೆ ಮೂರನೇ ಮೊಹಮ್ಮದ್ ಶಹಾ ಮೆಚ್ಚಿದ ಆತನನ್ನು ಸಾವಿರ ಕುದುರೆಗಳ ಸೇನಾಪತಿ ಮಾಡಿ ಜಹಗೀರ್ ನೀಡಿದ.ಷಿಯಾ ಪಂಥದ ಸಂಪ್ರದಾಯದ ಪ್ರಕಾರ ರಾಜ್ಯಧಿಕಾರವನ್ನು ವಹಿಸಿಕೊಂಡ ಮೊದಲ ದಕ್ಷಿಣ ಭಾರತದ ರಾಜ ಎಂಬ ಹೆಗ್ಗಳಿಕೆಗೆ ಯೂಸುಫ್ ಪಾತ್ರನಾಗಿದ್ದಾನೆ.ಹಿಂದೂಸ್ತಾನದಲ್ಲಿ ಆಳ್ವಿಕೆ ಮಾಡುವಾಗ ಇಲ್ಲಿನ ಜನಸಮುದಾಯಕ್ಕೆ.ಸಂಸ್ಕತಿಗೆ ಮತ್ತು ಬದುಕಿಗೆ ಬೆಲೆ ಕೊಡಬೇಕು ಇಲ್ಲಿಯೇ ಸಾಧಿಸಿ ಇಲ್ಲಿಯ ಜನತೆಗೆ ಬಿಟ್ಟುಕೊಟ್ಟು ಇಲ್ಲಿಯ ಮಣ್ಣಿನಲ್ಲೇ ಲೀನವಾಗಬೇಕು ಎಂಬುದು ಆತನ ವಿಚಾರವಾಗಿತ್ತು.15 ನೇ ಶತಮಾನದಲ್ಲಿ ವಿಜಾಪುರದಲ್ಲಿ ಸ್ಥಳೀಯ ಕನ್ನಡ ಮಿಶ್ರಿತ ಮರಾಠಾ ಸಂಸ್ಕೃತಿಯ ಪ್ರಭಾವ ಬಹಳ ಇತ್ತು.ಯೂಸುಫ್ ಸ್ಥಳೀಯ ಮರಾಠಾ ಸರ್ದಾರ್ ಮುಕುಂದರಾವ್ನ ಸಹೋದರಿ ಬಪುಜಿಖಾನಂಳನ್ನು ಮದುವೆಯಾದ.

ವಿಜಾಪುರವನ್ನು ಸುಂದರ ನಗರವಾಗಿ ನಿರ್ಮಿಸಿದ ಕೀರ್ತಿ ಯೂಸುಫ್ ಗೆ ಸಲ್ಲುತ್ತದೆ.ಅರಕಿಲ್ಲಾ ಕೋಟೆ.ಬೃಹತ್ ಇಮಾರತುಗಳಿಂದ ನಗರವು ಕಂಗೊಳಿಸುತ್ತಿತ್ತು.ಯೂಸುಫ್ ನ ಅರಮನೆ 44 ಕೋಣೆಗಳಿಂದ ಕೂಡಿತ್ತು ಗೋವಾದಲ್ಲಿ ಆತ ನೌಕಾ ಪಡೆಯನ್ನು ಹೊಂದಿದ್ದ ವಿದೇಶಿಯರನ್ನು ಸೈನ್ಯದಲ್ಲಿ ಸೇರಿಸಿಕೊಂಡಿದ್ದ ಆತನ ಸೈನಿಕರು ಸಾಹಸಕ್ಕೆ ಪ್ರಸಿದ್ದರಾಗಿದ್ದರು.ಕೃಷಿಯ ಬಗ್ಗೆ ಯೂಸುಫ್ ಪ್ರತಿಭಾವಂತ ರಾಜನಾಗಿದ್ದ.ಆತ ಸಾಹಿತಿಯೂ ಆಗಿದ್ದ.ಕಾವ್ಯ ರಚನೆ ಮಾಡಿದ್ದ.ಜ್ಞಾನಿಗಳ ಒಡನಾಟವೆಂದರೆ ಆತನಿಗೆ ಪಂಚಪ್ರಾಣವಾಗಿತ್ತು.

ಪೋರ್ಚುಗಲ್ ನ ಅಲ್ಬುಕರ್ಕ್ ಗೋವಾ ಮೇಲೆ ಹಿಡಿತ ಸಾಧಿಸಿದಾಗ ಇಳಿವಯಸ್ಸಿನ ಯೂಸುಫ್ ಸೈನ್ಯದೊಂದಿಗೆ ಗೋವಾಗೆ ಹೋಗಿ ಪೋರ್ತುಗೀಜರನ್ನು ಸೋಲಿಸಿ ವಿಜಾಪುರ ರಾಜ್ಯದ ಭಾಗವಾಗಿದ್ದ ಗೋವಾ ಪ್ರದೇಶವನ್ನು ಉಳಿಸಿಕೊಂಡ ಯೂಸುಫ್ ನಿಧನದ ಬಳಿಕವೇ ಪೋರ್ತುಗೀಜರಿಗೆ ಗೋವಾ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು ” ದೇಶದಲ್ಲಿ ವಸಾಹತುಶಾಹಿಯ ವಿರುದ್ಧ ಹೋರಾಡಿದ ಮೊದಲ ವೀರ ಎಂಬ ಕೀರ್ತೀಗೆ ಯೂಸುಫ್ ಭಾಜನನಾಗಿದ್ದಾನೆ.

21 ವರ್ಷಗಳ ಆಳ್ವಿಕೆಯ ನಂತರ ಯುಸೂಫ್ ನಿಧನವಾದಾಗ ಆತನ ಉಯಿಲಿನ ಪ್ರಕಾರ ಪಾರ್ಥಿವ ಶರೀರವನ್ನು ಗೋಗಿಗೆ ತಂದು ಆತನ ನೆಚ್ಚಿನ ಸೂಫಿ ಸಂತ ಚಂದಾ ಹುಸೇನಿಯ ಪಕ್ಕದಲ್ಲಿ ಹೂಳಲಾಯಿತು.ಸೂಫಿ ಗುರುವಿನ ಬಗ್ಗೆ ಆತನಿಗೆ ಎಷ್ಟೊಂದು ಗೌರವವಿತ್ತೆಂದರೆ.ಆತನ ಗೋರಿಯ ಮೇಲಿನ ಕಟ್ಟಡದ ನೆರಳು ಪಕ್ಕದಲ್ಲೇ ಇರುವ ಆತನ ಗುರುವಿನ ಸಮಾಧಿಯ ನೆರಳು ಯೂಸುಫ್ ನ ಗೋರಿಯ ಕಟ್ಟಡದ ಮೇಲೆ ಬೀಳುವುದು.ಇಂಥ ನ್ಯಾಯವಂತ.ಪ್ರತಿಭಾವಂತ ಮತ್ತು ವಿನಮ್ರ ದೊರೆಯ ಗೋರಿ ವಿನಾಶದ ಅಂಚಿನಲ್ಲಿದೆ ಚಂದಾ ಹುಸೇನಿ ದರ್ಗಾದ ಪಕ್ಕದಲ್ಲಿಯೇ ಇರುವ ಚೌಖಂಡಿಯಲ್ಲಿ ಯೂಸುಫ್ ಗೋರಿಯ ಪಕ್ಕದಲ್ಲೇ ಆತನ ಪತ್ನಿ ಬಪೂಜಿಖಾನಂಳ ಗೋರಿಯೂ ಇದೆ.

ಸೂಫಿ ತತ್ವಜ್ಞಾನ ಮತ್ತು ಪ್ರಜೆಗಳ ಸಮೃದ್ಧ ಬದುಕಿನ ಬಗ್ಗೆ ಸದಾ ಕ್ರಿಯಾಶೀಲನಾಗಿದ್ದ ಯೂಸುಫ್ ಆದಿಲ್ ಖಾನ್ ನ ಗೋರಿ ಗೋಗಿಯಲ್ಲಿ ಹೀನಾಯ ಸ್ಥಿತಿಯಲ್ಲಿದ್ದು.ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಇತಿಹಾಸದ ಬಗೆಗೆ ಇರುವ ನಮ್ಮ ಅವಜ್ಞೆಗೆ ಸಾಕ್ಷಿಯಾಗಿದೆ..


ದೇವಿಕಾ ಮ್ಯಾಕಲ್

One thought on “ಸಮ್ಮಿಶ್ರ ಸಂಸ್ಕೃತಿಯ ಹರಿಕಾರ ಯೂಸುಫ್ ಆದಿಲ್ ಖಾನ್…

  1. ತಮ್ಮ ಬರಹ ಓದಿದ ಮೇಲೆ ಯಾದಗಿರಿ ಹತ್ತಿರದ ಗೋಗಿಗೆ ಹೋಗಿ ಬರಬೇಕು ಅನಿಸಿತು

Leave a Reply

Back To Top