ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ : ವಸುಮಿತ್ರೆ ಕೇಳು

.

ಕವಯಿತ್ರಿ ವಾಸಂತಿ ಅಂಬಲಪಾಡಿ ಅವರು ಸದಾ ಹೊಸತನಕ್ಕೆ ತುಡಿಯುವ ವ್ಯಕ್ತಿತ್ವದವರು. ಈಗಾಗಲೇ ಆರು ಪುಸ್ತಕಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದು ಇಂದೀಗ ಏಳನೇ ಕೃತಿ ಲೋಕಾರ್ಪಣೆಗೊಂಡಿದೆ.  ಆಧುನಿಕ ವಚನಗಳೆಂದರೆ ನಮಗೆ ಮೊದಲಿಗೆ ನೆನಪಾಗುವುದು ವಾಸಂತಿ ಅಂಬಲಪಾಡಿ ಅವರ ಹೆಸರು. ಮೀನು ನೀರಿನಲ್ಲಿ ಈಜುವಷ್ಟೇ ಸರಾಗವಾಗಿ, ಸರಳವಾಗಿ, ಸುಂದರವಾಗಿ ಆಧುನಿಕ ವಚನಗಳನ್ನು ಬರೆದವರು. ಕನ್ನಡ ಹಾಗೂ ತುಳು ಸಾಹಿತ್ಯಗಳೆರಡರಲ್ಲೂ ತಮ್ಮನ್ನು ತೊಡಗಿಸಿಕೊಂಡ ಇವರ “ನನ್ನಮ್ಮ ನಿಮ್ಮಮ್ಮನಂತಲ್ಲ” ಎಂಬ ಕವನ ಸಂಕಲನದ ‘ಮೊಂಬತ್ತಿ ಉರಿಸಿ ಕಾಯುತ್ತಿದ್ದೇನೆ’ ಎಂಬ ಕವನ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿ. ಎ, ಬಿ. ಎಸ್. ಡಬ್ಲ್ಯೂ ನ ಕನ್ನಡ ಪಠ್ಯಪುಸ್ತಕದಲ್ಲಿ ಸೇರಿದೆ ಎಂಬುದು ನಮ್ಮ ಉಡುಪಿ ಜಿಲ್ಲೆಗೇ ಹೆಮ್ಮೆ ತರುವಂತಹ ವಿಷಯ.

ಇನ್ನು ಪ್ರಸ್ತುತ “ವಸುಮಿತ್ರೆ ಕೇಳು” ಎಂಬ ಇಂದು ಲೋಕಾರ್ಪಣೆಗೊಂಡ ಅಬಾಬಿ ಸಂಕಲನಕ್ಕೆ ನಾವು ಬಂದರೆ… ಅಬಾಬಿ ಸಂಕಲನದ ಹೆಸರೇ ಒಂದು ರೀತಿಯಲ್ಲಿ ಓದುಗರನ್ನು ಆಕರ್ಷಿಸುವಂತಿದೆ.  ವಸುಮಿತ್ರೆ ಎಂಬ ಹೆಸರೇ ಗೆಳೆತನದ, ಆತ್ಮೀಯತೆಯ ಭಾವವನ್ನು ಓದುಗರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ.  ಮುನ್ನುಡಿಯನ್ನು ಬರೆದಿರುವಂತಹ ಶ್ರೀಮತಿ ಶೋಭಾ ಹರಿಪ್ರಸಾದ್ ಅವರು ಅಬಾಬಿಗಳ ಉಗಮದ ಜೊತೆಗೆ ಅಬಾಬಿಗಳ ರಚನೆಯ ರೀತಿಯನ್ನೂ ಸೂಕ್ಷ್ಮವಾಗಿ ಹೇಳಿ, ಪುಸ್ತಕದೊಳಗಿರುವ ಅಬಾಬಿಗಳ ಸೌಂದರ್ಯವನ್ನು ತಮ್ಮ ಮಾತುಗಳ ಮೂಲಕ ಹೊರತೆಗೆದಿದ್ದಾರೆ.  ತಮ್ಮ ಮನದ ಮಾತುಗಳಲ್ಲಿ ವಾಸಂತಿ ಅಂಬಲಪಾಡಿ ಯವರು ಅಬಾಬಿಗಳನ್ನು ಬರೆಯಲು ಪ್ರಾರಂಭಿಸಿದ ಹಿನ್ನೆಲೆಯ ಜೊತೆಗೆ ಸಹಕಾರವಿತ್ತ ಮನೆಯವರು, ಬಂಧುಗಳು, ಮಿತ್ರರು ಮತ್ತು ಸಹೋದ್ಯೋಗಿಗಳನ್ನೂ ಪ್ರೀತಿಯಿಂದ ಸ್ಮರಿಸಿದ್ದಾರೆ.

ಇನ್ನು ನಾವು ನೇರವಾಗಿ ಅಬಾಬಿಗಳತ್ತ ಕಣ್ಣು ಹೊರಳಿಸಿದರೆ… ಇಲ್ಲಿರುವ ಅಬಾಬಿಗಳಲ್ಲಿ ಬದುಕಿನ ಹಲವು ಮಗ್ಗಲುಗಳು ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಗುತ್ತವೆ.

ಪಡುವಣದತ್ತ ಹೊರಟಿದೆ ದಿಬ್ಬಣ

ಸಂಧ್ಯೆಯ ಬೊಗಸೆಯಲ್ಲಿ  ಚೆಲ್ಲಿದ ಬಣ್ಣ

ಶರಧಿಗೋ ಸೂರ್ಯನ ಸೆಳೆತ

ವಸುಮಿತ್ರೆ

ತವರ ಬಂಧವ ತೊರೆದಿರುವಳೇ ಮದುಮಗಳು

ಇಲ್ಲಿ ಬರುವ ಕವಯಿತ್ರಿಯ ಕಾವ್ಯನಾಮ ವಸುಮಿತ್ರೆ ಎಂಬುದು ಒಂದು ರೀತಿಯಲ್ಲಿ ಜೇನುತುಪ್ಪವನ್ನು ಪದೇ ಪದೇ ಚಪ್ಪರಿಸಿದಂತೆ ಭಾಸವಾಗುತ್ತದೆ.  “ವಸುಮಿತ್ರೆ” ಅನ್ನುವ ಮಾತೇ ಹೃದಯವನ್ನು ಮೃದುವಾಗಿ ತಟ್ಟಿ ಓದುಗನ ಮನಸ್ಸಿನ ಕದವನ್ನು ತೆರೆಯುವಲ್ಲಿ ಸಫಲವಾಗುತ್ತದೆ.

ಅವನು ಹುಟ್ಟಿದ್ದು ಇರುಳಿನ ಹೊತ್ತು

ಇವನು ಹುಟ್ಟಿದ್ದು ಇರುಳಿನ ಹೊತ್ತು

ಹುಟ್ಟಿದ ಉದ್ದೇಶ ಜಗದ ಅಂಧಕಾರದ ನಿವಾರಣೆ

ವಸುಮಿತ್ರೆ

ಧರ್ಮ ಬೇರೆಯಾದರೂ ತಿರುಳು ಒಂದೇ

ಕವಯತ್ರಿಗೆ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕಲಹಗಳನ್ನು ಕಂಡು ಮೂಡಿದ ಬೇಸರ ಮತ್ತು ನೋವನ್ನು ಈ ಅಬಾಬಿಯಲ್ಲಿ ಕಾಣಬಹುದು.  ಎಲ್ಲಾ ಧರ್ಮಗಳ ತಿರುಳು ಒಂದೇ ಆಗಿರುವಾಗ ನಾವೇಕೆ ಧರ್ಮಕ್ಕಾಗಿ ಹೋರಾಡಬೇಕೆಂದು ವಸುಮಿತ್ರೆಯಲ್ಲಿ ಕೇಳುವ ಕವಯಿತ್ರಿಯವರದ್ದು ದಿಟ್ಟನಿಲುವು, ಯಾರಿಗೂ ಯಾವುದಕ್ಕೂ ಅಂಜದ ಮನೋಭಾವ.

ಗಿಡಮರಗಳ ಕಡಿದರು

ಶುದ್ಧ ಗಾಳಿಯ ಕೊರತೆ

ಮೈಯೆಲ್ಲ ಉರಿ ಉರಿ

ವಸುಮಿತ್ರೆ

ಅದಕ್ಕೆ ಈಗಿನ ಮಕ್ಕಳ ಬಟ್ಟೆಗಳೆಲ್ಲ ಅಲ್ಲಲ್ಲಿ ತೂತು

ಈ ಅಬಾಬಿಯಲ್ಲಿ ಕವಯಿತ್ರಿ ಗೆಳತಿ ವಸುಮಿತ್ರೆಯೊಂದಿಗೆ ಇಂದಿನ ಆಧುನಿಕ ಉಡುಪಿನ ಬಗ್ಗೆ ವಿಡಂಬನಾತ್ಮಕವಾಗಿ ಹೇಳುತ್ತಿದ್ದಾರೆ.  ಇಂದಿನ ಮಕ್ಕಳು ಆಧುನಿಕತೆಯ ಬೆಡಗಿಗೆ ಬಿದ್ದು ಹೊಸ ಬಟ್ಟೆಯನ್ನೂ ಹರಿದು ಹಾಕಿಕೊಳ್ಳುವ  ಹರಕು ಬಟ್ಟೆಗೆ ತಾನು ಕಾರಣವನ್ನು ಕಂಡುಹುಡುಕಿ ಅದನ್ನು ವಸುಮಿತ್ರೆಯೊಂದಿಗೆ ಹಂಚಿಕೊಳ್ಳುತ್ತಿರುವ ಪರಿ ಅದ್ಭುತವಾದದ್ದು. ಇಲ್ಲಿ ಕವಿಯಿತ್ರಿ ಈ ಕಾರಣಕ್ಕಾಗಿ ವ್ಯಕ್ತಪಡಿಸುತ್ತಿರುವ ವಿಷಾದ ಮನೋಭಾವನೆಯನ್ನೂ ಸೂಕ್ಷಮನದ ಓದುಗರು ಗಮನಿಸಬಹುದು.

ಹೀಗೆ ಇವರ ಅಬಾಬಿಗಳು ನಾಲ್ಕೇ ಸಾಲುಗಳಲ್ಲಿ ಚಿಕ್ಕದಾಗಿ ಕಂಡರೂ ಅದರೊಳಗೆ ಅಡಗಿರುವ ವಿಷಯ ವಿಸ್ತಾರವಾದದ್ದು.  “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬುದು ಇವರ ಅಬಾಬಿಗಳಿಗೆ ಹೊಂದುವಂತಹ ಮಾತು. ದೇಶಭಕ್ತಿ; ಆಧುನಿಕತೆಯ ಅವಾಂತರ; ಕರೋನಾದ ಆರ್ಭಟ; ಹಬ್ಬಗಳು; ಸರಕಾರದ ಯೋಜನೆಗಳು; ಇಂದಿನ ಯುವ ಜನಾಂಗ; ದಂಪತಿಗಳ ನಡುವಿನ ಪ್ರೀತಿ; ತಾಯಿ-ಮಕ್ಕಳ ಸಂಭಾಷಣೆ; ಹೆಣ್ಣಿನ ಬಗ್ಗೆ ಕಾಳಜಿ… ಹೀಗೆ ಹತ್ತಾರು ವಿಷಯಗಳನ್ನು ಒಳಗೊಂಡ ಅಬಾಬಿಗಳು ಈ ಕೃತಿಯಲ್ಲಿ ನಮಗೆ ಕಾಣಸಿಗುತ್ತದೆ. ಎಲ್ಲವನ್ನೂ ನಿಧಾನವಾಗಿ ಕುಳಿತು ನೀವೇ ಓದಿ ಆಸ್ವಾದಿಸಿ.

ಕೊನೆಯದಾಗಿ:

ಹಾಳು ಹರಟೆ ಹೊಡೆದರು

ಮನವನೆಲ್ಲೋ ಹರಿಯಬಿಟ್ಟರು

ಪಾಠ ತಲೆಗಿಳಿಯಲ್ಲ

 ವಸುಮಿತ್ರೆ

ಉತ್ತರ ಪತ್ರಿಕೆಯಲ್ಲಿ ಶೂನ್ಯ ಸಿಕ್ಕಲು ಶಿಕ್ಷಕರಿಗೆ ಬೈದರು

ನಿಜ!  ಕವಯಿತ್ರಿ ಒಬ್ಬ ಉತ್ತಮ ಶಿಕ್ಷಕಿ ಎಂಬುದನ್ನು ಈ ಅಬಾಬಿ ನಮಗೆ ತಿಳಿಸುತ್ತದೆ.  ವೃತ್ತಿಜೀವನದ ತನ್ನ ಎಲ್ಲಾ ಮಾತುಗಳನ್ನು ಗೆಳತಿ ವಸುಮಿತ್ರೆ ಬಳಿ ಕೇವಲ ನಾಲ್ಕೇ ನಾಲ್ಕು ಸಾಲಿನ ಬರಹದಲ್ಲಿ ತೋಡಿಕೊಳ್ಳುವ ಪರಿ ಬಹಳ ಸೊಗಸಾಗಿ ಮೂಡಿ ಬಂದಿದೆ.  ಈ ರೀತಿಯ ಪುಟ್ಟ ಪುಟ್ಟ ಅಬಾಬಿಗಳು ತಿಳಿಹಾಸ್ಯದ ಜೊತೆಗೆ ವಿಡಂಬನಾತ್ಮಕವಾಗಿಯೂ ಮೂಡಿಬಂದು ಕವಯಿತ್ರಿಯ ಭಾಷಾ ಪ್ರೌಢಿಮೆಯನ್ನು ಸಾರುತ್ತಿವೆ.

ಕನ್ನಡ ಸಾಹಿತ್ಯದ ಹೊಸ ಪ್ರಕಾರದಲ್ಲಿ ಒಂದಾದ ಅಬಾಬಿಯನ್ನು ಸಮರ್ಥವಾಗಿ ಬರೆದು…  ಇದೀಗ ಅವುಗಳನ್ನು ಒಗ್ಗೂಡಿಸಿ ಕೃತಿ ಬಿಡುಗಡೆ ಮಾಡುವ ಧೈರ್ಯ ತೋರುವ ಮೂಲಕ ವಾಸಂತಿ ಅಂಬಲಪಾಡಿಯವರು ಅಬಾಬಿ ಬರೆಯುವಂತಹ ಹಲವಾರು ಕವಿಗಳಿಗೆ ಸ್ಫೂರ್ತಿಯಾಗಿದ್ದಾರೆ.  ಇನ್ನಷ್ಟು, ಮತ್ತಷ್ಟು ಉತ್ತಮ ಕೃತಿಗಳು ಶ್ರೀ ಕೃಷ್ಣನ ಅನುಗ್ರಹದಿಂದ ಇವರ ಲೇಖನಿಯಿಂದ ಮೂಡಿ ಬಂದು ಯುವ ಬರಹಗಾರರಿಗೆ  ತನ್ಮೂಲಕ ಪ್ರೇರಣೆ ದೊರಕಲಿ… ಎಂದು ಹಾರೈಸುತ್ತೇನೆ.


ಸುಮಾ ಕಿರಣ್

About The Author

6 thoughts on “”

  1. ವಾಸಂತಿ ಅಂಬಲಪಾಡಿರವರ ಅಬಾಬಿ ಕವನ ಸಂಕಲನದ ಉತ್ತಮ ಪರಿಚಯ ಮಾಡಿದ್ದೀಯ ಸುಮಾ. ಕವನಗಳನ್ನು ಓದಿ ಅದರ ಗೂಡಾರ್ಥಗಳನ್ನು ತಿಳಿದು, ಜೊತೆಗೆ ಅದರ ಹಿಂದಿನ ಕವಿಯತ್ರಿಯ ಮನೋಭಾವನೆ ಏನು… ಎಂಬುದನ್ನೂ ತಿಳಿಸಿದ್ದೀಯ. ತನ್ಮೂಲಕ ಕವಿತಾಸಕ್ತರಿಗೆ ಕವಿತೆಯ ಈ ಹೊಸ ಪ್ರಕಾರವನ್ನು ಓದುವ ಕುತೂಹಲ ಮೂಡುವಂತೆ ಮಾಡಿದ್ದೀಯಾ.

    ನಿನ್ನಿಂದ ಮತ್ತಷ್ಟು ಇಂತಹ ಉತ್ತಮ ಕೃತಿಗಳ ಪರಿಚಯ ಓದುಗರಿಗೆ ಆಗಲಿ… ಎಂಬುದೇ ನನ್ನ ಶುಭ ಹಾರೈಕೆ .

  2. ಹರಿನರಸಿಂಹ ಉಪಾಧ್ಯಾಯ

    ಕೃತಿ ಪರಿಚಯ ಸುಂದರವಾಗಿ ಮೂಡಿ ಬಂದಿದೆ… ಅಬಾಬಿಗಳ ಮುಖೇನ ಕೆಲವೇ ಪದಗಳಲ್ಲಿ ಒಂದು ಒಳ್ಳೆಯ ವಿಷಯ ಯಾ ಸಂದೇಶವನ್ನು ಓದುಗರಿಗೆ ತಲುಪಿಸಲು ಸಾಧ್ಯ ಎಂದು ಇದರಿಂದ ತಿಳಿದು ಬರುತ್ತದೆ

  3. ಹೆಚ್. ಮಂಜುಳಾ.

    ಅಬಾಬಿ ಗಳ ಪರಿಚಯ ಮಾಡಿಸಿದ ವಿಮರ್ಶಕಿಯವರಿಗೆ ಧನ್ಯವಾದಗಳು. ಪುಟ್ಟ. ಪುಟ್ಟ ಒಂದೊಂದು ಸಾಲಿನಲ್ಲಿ ಹೇಳುವ ಕಲೆ ಚೆನ್ನಾಗಿ ಮೂಡಿ ಬಂದಿದೆ. ಅಬಾಬಿಗಳ ಹುಟ್ಟಿನ ಮತ್ತು ಬೆಳವಣಿಗೆಯ ಬಗ್ಗೆ ಮಾಹಿತಿ ತಿಳಿಸಿದ್ದರೆ ಚೆನ್ನಾಗಿತ್ತು.ತಾವು ಹೇಳಿರುವಂತೆ ವಸುಮಿತ್ರೆ ಎಂಬ ಹೆಸರು ಮನಸನ್ನಾಕರ್ಷಿಸುತ್ಥದೆ.

Leave a Reply

You cannot copy content of this page

Scroll to Top