ಕಾವ್ಯ ಸಂಗಾತಿ
ಗಜಲ್
ಅನಸೂಯ ಜಹಗೀರದಾರ
ನನ್ನ ನೆನಪು ನಿನ್ನ ಜೀವ ಹಿಂಡುವುದಾದರೆ ಅದೇಕೆ ಬಿಡು
ಬಾರದ ನಗು ಅಧರದಿ ಎಳೆತರುವುದಾದರೆ ಅದೇಕೆ ಬಿಡು
ಪ್ರತಿಯೊಂದು ಮಾತಿಗೆ ಅರ್ಧ ಗಿರ್ಧ ಪ್ರತಿಕ್ರಿಯೆ ಈಗ ಗೊತ್ತಾಗಿದೆ
ಮಾತ ಸೆಲೆ ತುಟಿ ಅಂಚಲಿ ಒಣಗುವುದಾದರೆ ಅದೇಕೆ ಬಿಡು
ನಿಜ ಹೇಳು ಕಣ್ಣ ನೋಟವೇ ಸತ್ಯ ಮಾತಿನ ಬಾಯಿ ಅದು
ನೇತ್ರ ಸನ್ನೆ ಇಲ್ಲ ದಿಟ್ಟಿ ಹೊರಳಿಸುವುದಾದರೆ ಅದೇಕೆ ಬಿಡು
ನೆಪದ ನಟನೆ ನೈಜತೆಯ ಮೀರಿಸಿದೆ ಆದಾಗ್ಯೂ ನನಗೆ ತಿಳಿಯದೆ
ಗಿಲೀಟು ಚಿನ್ನ ಹೊಳಪು ನಿಲ್ಲಿಸುವುದಾದರೆ ಅದೇಕೆ ಬಿಡು
ಜೀವನ ಪರ್ಯಂತ ಯಾರು ಸಾಥಿ ಆದಾರು ಹುಚ್ಚು ಮಾತದು ಅನು
ಬಾಡಿಗೆ ಮನೆಯಾಸೆ ಮಾಲೀಕ ಹೋಗೆನ್ನುವುದಾದರೆ ಅದೇಕೆ ಬಿಡು
ಮನ ತುಂಬಿ ಪ್ರೀತಿ ಕಣ್ ತುಂಬಿ ಸಂತಸ ಇಲ್ಲದಿದ್ದರೆ ಅದು ಏಕೆ ಅಲ್ಲವೇ? ಚೆನ್ನಾಗಿ ಬರೆದಿದ್ದೀರಿ ಮೇಡಂ, ಧನ್ಯವಾದಗಳು ತಮಗೆ.
ಚೆನ್ನಾಗಿದೆ
ಧನ್ಯವಾದಗಳು ನಿಮ್ಮ ಸ್ಪಂದನೆಗೆ ಖುಶಿಯಾಯ್ತು.