ಕಾವ್ಯ ಸಂಗಾತಿ
ಮನದ ಮಾತು
ವೈ.ಜಿ.ಅಶೋಕ್ ಕುಮಾರ್
ನನ್ನ ಅಂಗಿಯ ಕಿಸೆ
ಹರಿದು ಹೋಗಿದೆ
ಹಳೆಯ ಸಾಸಿವೆ
ಡಬ್ಬದ ಮುಚ್ಚಳ
ತೆರೆದೇ ಇದೆ
ಮಾಲ್ ಗೆ ಹೋಗಲು ಮಡದಿ ಒತ್ತಾಯಿಸುತ್ತಿಲ್ಲ
ಸುಖಾಸುಮ್ಮನೆ
ಸುತ್ತಾಡುತ್ತಿದ್ದ
ಮಗನ ಬೈಕು ಪೆಟ್ರೋಲ್ ಕುಡಿಯುತ್ತಿಲ್ಲ
ನಗರದಲ್ಲಿ ನವಿಲುಗಳು ನರ್ತಿಸುತ್ತಿವೆ
ಕೋಗಿಲೆಗೆ ಗಂಟಲು ಕಟ್ಟಿಲ್ಲ
ಹವಾಮಾನ ಇಲಾಖೆ ಸರಾಗವಾಗಿ
ಉಸಿರಾಡುತ್ತಿದೆ
ಮಲಗಿರುವ ರಸ್ತೆಗಳು
ರಿಪೇರಿ ಕೇಳುತ್ತಿಲ್ಲ
ಹೋಟೆಲುಗಳು ಮುಚ್ಚಿವೆ; ದವಾಖಾನೆಗಳು ಹೆಚ್ಚಿವೆ
ಏನೇ ಆದರೂ
ನನ್ನ
ಹರಿದ ಅಂಗಿಯ
ಕಿಸೆ ಸದ್ಯಕ್ಕೆ ಹೊಲಿಯಲಾಗುವುದಿಲ್ಲ