ಅಂಕಣ ಸಂಗಾತಿ

ಸಕಾಲ

ಅಂಕಣ ಸಂಗಾತಿ

ತ್ಯಾಗ ಎಂಬುದು ಸುಲಭದ ಮಾತಲ್ಲ

ಮನುಷ್ಯನ ಬದುಕು ನೀರ ಮೇಲಿನ ಗುಳ್ಳೆಯೆಂದು ಎಲ್ಲರಿಗೂ ಗೊತ್ತಿರುವ ಸಂಗತಿ.ಆದರೂ ಗಳಿಸುವುದು, ಕೂಡಿಡುವುದು,ಮೂರು,ನಾಲ್ಕು ತಲೆಮಾರು ಕೂತು ತಿಂದರೂ ತೀರದಂತ ಆಸ್ತಿ ಮಾಡಿ, ಮೂರಡಿ ಆರಡಿ ಜಾಗದಲಿ ಮಲಗಿದಾಗ ಗಳಿಸುವಾಗಿನ ಅತೀ ಆಸೆ ಸ್ವರ್ಗದಲ್ಲಿ ಸೀಟು ಕೊಡಿಸಿತಾ? ದೀನದುರ್ಬಲರಿಗೆ  ಒಂದಾಣೆಯೂ ಎತ್ತಿಕೊಡದವನ ಹೆಸರು ಸುವರ್ಣಾಕ್ಷರದಿ ಕೆತ್ತಿಟ್ಟರಾ? ಅದಕ್ಕೆಲ್ಲ ಉತ್ತರ ನೀಡುವ ಮೂಲಭಾವವೆಂದರೆ  “ಭಗವದ್ಗೀತೆ” ಗೀತೆಯ ಸಾರಾಂಶವೇ ತ್ಯಾಗವೆಂದರೆ ತಪ್ಪಾಗದು. ಹತ್ತಾರು ಬಾರಿ ‘ಗೀತಾ, ಗೀತಾ’ ಎನ್ನುತ್ತಿದ್ದರೆ ಅದು ತ್ಯಾಗಿ ತ್ಯಾಗಿ ಎಂದು ಕೇಳಲಾರಂಭಿಸುತ್ತದೆ” ಎಂದಿದ್ದಾರೆ ಶ್ರೀರಾಮಕೃಷ್ಣ ಪರಮಹಂಸರು. ತ್ಯಾಗ ಎಂಬ ಮೌಲ್ಯವನ್ನು ಗೀತೆಯೊಂದೇ ಅಲ್ಲದೆ ಬಹುತೇಕ ಎಲ್ಲ ಶಾಸ್ತ್ರಗ್ರಂಥಗಳು ಎತ್ತಿಹಿಡಿದಿವೆ. ಅದು ನಿಜದ ಮನುಷ್ಯರ ಲಕ್ಷಣವು ಕೂಡ.

ತ್ಯಾಗ ಲೇಪವಿಲ್ಲದ ವ್ಯಕ್ತಿತ್ವ ಪಶು ಸಮಾನ. ಪಶುಗಳಲ್ಲಿ ಡಾರ್ವಿನ್ ಹೇಳುವಂತೆ ಬಲಾಢ್ಯರು ಮಾತ್ರ ಬದುಕುತ್ತಾರೆ. ಆದರೆ ಮನುಷ್ಯರಲ್ಲಿ ಬಲವನ್ನು ಶಾರೀರಿಕ ಮಟ್ಟಕ್ಕಿಂತ ಹೃನ್ಮನಗಳ, ಭಾವನೆಗಳ ಎತ್ತರದ ಮೂಲಕ ಅಳೆಯಲಾಗುವುದು. ಹೀಗಾಗಿ ಒಂದು ಪಾರಿವಾಳವನ್ನು ಉಳಿಸಲು ತನ್ನ ಮೈಯನ್ನೇ ತ್ಯಾಗ ಮಾಡಲು ಸಿದ್ಧನಾದ ಶಿಬಿ ಚಕ್ರವರ್ತಿ ನಮಗೆ ಮಾದರಿ.ಸ್ವತಃ ಸಾವಿನ ಅಂಚಿನಲ್ಲೂ ನೀರಿನ ತತ್ತಿಯನ್ನು ಗಾಯಗೊಂಡ ಯೋಧನಿಗೆ ನೀಡಿ ಪ್ರಾಣ ಬಿಡುವ ಸರ್ ಫಿಲಿಪ್ ಸಿಡ್ನಿ ನಮಗೆ ಮಾದರಿ. ಕೊಲ್ಲುವನಿಗಿಂತ ಕಾಯುವನೇ ಹೆಚ್ಚು ಎಂಬ ಬುದ್ಧ ನಮಗೆ ಮಾದರಿ. ಸ್ವಂತಕ್ಕಾಗಲೀ ಜಗತ್ತಿನ ಹಿತಕ್ಕಾಗಲೀ ಸಂಕುಚಿತತೆಯನ್ನು ಮೀರಿ ವೈಶಾಲ್ಯದತ್ತ ನಡೆವ ಹೆಜ್ಜೆಯೇ ತ್ಯಾಗ.

ತ್ಯಾಗ ಅಷ್ಟು ಸುಲಭವಾ? ಪ್ರಾಪಂಚಿಕ ಜೀವನದ ಸುಖದುಃಖದಲಿ ಸಮ್ಮಿಳಿತವಾದ ಬದುಕಿಗೆ ಒಮ್ಮೆಲೇ ಬರಸಿಡಿಲು ಬಡಿದಂತೆನಿಸುವುದಿಲ್ಲವೇ ಎಂಬ ಆತಂಕ ಮೂಡುವುದು ಸಹಜ.ಆದರೆ ತ್ಯಾಗಿಯಾಗಬೇಕು ಎಂದ ಕೂಡಲೇ ನಮ್ಮ ಬಳಿ ತ್ಯಾಗ ಮಾಡಲು ದೊಡ್ಡ ಸಂಪತ್ತು, ರಾಜ್ಯ, ಆಸ್ತಿ ಇರಬೇಕು ಎಂದಲ್ಲ. ತನ್ನ ಬಳಿ ಏನಿದೆಯೋ ಅದನ್ನೇ ಸಂತೋಷದಿಂದ ಮತ್ತೊಬ್ಬರ ಹಿತಕ್ಕಾಗಿ ನೀಡಬಲ್ಲವನೇ ತ್ಯಾಗಿಯೆಂಬುದನು ಅರಿತಷ್ಟು ಮನಸ್ಸು ಸಂತಸಗೊಳ್ಳುವುದು.

ರಾಮಕೃಷ್ಣಾಶ್ರಮದ ಎದುರು ಒಬ್ಬ ಭಿಕ್ಷುಕಿ. ಆಶ್ರಮಕ್ಕೆ ಬರುವ ಭಕ್ತರಿಂದ ಬೇಡುವ ಕಾಯಕ. ಸಂಜೆ ಭಜನೆ ಮುಗಿದು ಭಕ್ತರೆಲ್ಲ ತೆರಳಿದ ಮೇಲೆ ಇನ್ನೇನು ದೇವಸ್ಥಾನದ ಬಾಗಿಲು ಮುಚ್ಚಲಿದೆ, ಅರ್ಧ ಮುಚ್ಚಿದೆ ಎಂದಾಗ ಆಕೆ ಓಡುತ್ತಾಳೆ, ಅಂದಿನ ಭಿಕ್ಷೆಯಲ್ಲಿ ತನ್ನ ಅಂದಿನ ಖರ್ಚಿಗೆ ಬೇಕಾದಷ್ಟನ್ನು ಮಾತ್ರ ಉಳಿಸಿಕೊಂಡು ಉಳಿದುದನ್ನು ಹುಂಡಿಗೆ ಸುರಿದು ಆತುರಾತುರವಾಗಿ ಕೈ ಮುಗಿದು ಬಂದಷ್ಟೇ ವೇಗವಾಗಿ ಹಿಂದಿರುಗಿ ಓಡಿಬಿಡುತ್ತಾಳೆ. ಈ ದೃಶ್ಯವನ್ನು ಒಂದು ದಿನವಲ್ಲ, ಒಂದು ತಿಂಗಳಲ್ಲ, ಇದನ್ನು ವರ್ಷಗಟ್ಟಲೆ ಗಮನಿಸಿದ ಸ್ವಯಂಸೇವಕರಿದ್ದಾರೆ.ಅವಶ್ಯಕತೆಗೂ ಮೀರಿದ್ದನ್ನು ಕೊಡುವ ಮನಸ್ಸು ಮೂಡುವುದು ಸುಲಭವಲ್ಲ. ತಾನು ಗಳಿಸಿದ್ದನ್ನು ಅನಾಯಾಸವಾಗಿ ದಾನ ಮಾಡಲು ಸಾಧ್ಯವಾ? ತ್ಯಾಗದ ಭಾಗವಾಗಿ ಬೆರೆಯಲು ಬಯಸುವವರ ಸಂಖ್ಯೆ ವಿರಳ.

ತ್ಯಾಗದಿಂದ ಅಮೃತತ್ವವನ್ನು ಪಡೆಯಬಹುದೆನ್ನುತ್ತದೆ ಉಪನಿಷತ್ತು “ನ ಕರ್ಮಣಾ, ನ ಪ್ರಜಯಾ, ನ ಧನೇನ, ತ್ಯಾಗೇನೈಕೇ ಅಮೃತತ್ವ ಮಾನಷುಃ”

ನಾವು ಮಾಡುವ ಕೆಲಸದಿಂದಲ್ಲ,ನಮ್ಮ ಹಿಂದೆ ಬರುವ ಜನರ ಗುಂಪಿನಿಂದಲ್ಲ ಅಥವಾ ನಾವು ಅರ್ಜಿಸಿದ ಸಂಪತ್ತಿನಿಂದಲ್ಲ, ತ್ಯಾಗದಿಂದ ಮಾತ್ರ ಅಮೃತತ್ವ ದೊರೆಯುತ್ತದೆ”. ಮಹಾತ್ಯಾಗಗಳಿಂದ ಮಾತ್ರ ಮಹಾಕಾರ್ಯಗಳು ಸಾಧ್ಯ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. 

ದಧೀಚಿಯ ತ್ಯಾಗ ಇಂದ್ರನ ವಜ್ರಾಯುಧವಾಯಿತು, ಶ್ರೀರಾಮನ ರಾಜ್ಯತ್ಯಾಗ ಪಿತೃವಾಕ್ಯ ಪರಿಪಾಲನೆಗೆ ಲೋಕೋತ್ತರವಾಯಿತು. ಸಿದ್ಧಾರ್ಥನತ್ಯಾಗದಿಂದ ಬುದ್ಧನ ನಿರ್ಮಾಣವಾಯಿತು. ತ್ಯಾಗ ಸಾರ್ವಜನಿಕ ಬದುಕಿನ ಸೌರಭವಾಗಿ ಅರಳಲು ಇದು ಸಕಾಲ. 

ಭಗವಾನ್ ಶ್ರೀ ಮಹಾವೀರ ಜೀವನಚರಿತ್ರೆಯನ್ನು ನಾವುಗಳು ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಆದರ್ಶಮಯವಾಗಿ ರೂಡಿಸಿಕೊಳ್ಳಬೇಕು ತ್ಯಾಗ ಮಾಡುವುದು ಸುಲಭವಲ್ಲ.ಯುದ್ಧ ಕಥೆಗಳು ಮನಸ್ಸು ಹಾಗೂ ಬುದ್ಧಿಯನ್ನು ಚುರುಕುಗೊಳಿಸುತ್ತವೆ, ಆದರೆ ಮಹಾತ್ಮರ ಚರಿತ್ರೆಗಳು ಹೃದಯವನ್ನು ಅರಳಿಸುತ್ತವೆ. ಹಾಗಾಗಿ ಇಂತಹ ಮಹಾತ್ಮರ ಚರಿತ್ರೆಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕು ಶ್ರೀ ಭಗವಾನ್ ಮಹಾವೀರರ ಪಂಚಶೀಲ ತತ್ವಗಳು ಮತ್ತು ಹಸ್ತ ಸ್ವಭಾವಗಳು ಇವುಗಳನ್ನು ಅವಲೋಕಿಸುತ್ತ ಅಳವಡಿಸಿಕೊಂಡರೆ ನಿಜವಾಗಿಯೂ ಕೂಡ ನಮ್ಮ ಬದುಕು ಪಾವನವಾಗುತ್ತದೆ.ಭಗವಾನ್ ಶ್ರೀ ಮಹಾವೀರರು ತ್ಯಾಗಕ್ಕೆ ಹೆಸರಾದವರು ಅಹಿಂಸೆಯನ್ನು ಸಾರಿದಂತವರು ತ್ಯಾಗಕ್ಕೆ ಪ್ರಾತಿನಿಧ್ಯ ನೀಡಿದ್ದಾರೆ ರಾಜವಂಶದಲ್ಲಿ ಹುಟ್ಟಿದರು ಕೂಡ ಒತ್ತಡಗಳಿಂದ ಮುಕ್ತವಾಗಿ ತ್ಯಾಗಕ್ಕೆ ಶರಣಾಗಬೇಕೆಂದು ಸಂದೇಶ ನೀಡಿರುತ್ತಾರೆ. ಈ ಜಗತ್ತಿನಲ್ಲಿ ಏನಾದರೂ ಬದಲಾವಣೆ ಮಾಡುವ ಶಕ್ತಿ ಇದ್ದರೆ ಅದು ತ್ಯಾಗ ಮತ್ತು ಪ್ರೀತಿಗೆ ಮಾತ್ರ ಸಾಧ್ಯ. ಮಹಾವೀರರ ಬೋಧನೆಗಳನ್ನು ಕಿವಿಯಿಂದ ಕೇಳದೆ ಅದನ್ನು ಹೃದಯಕ್ಕೆ ತಲುಪಿಸಿ ಕೊಂಡರೆ ಅದು ಬದುಕಿನಲ್ಲಿ ಹೂವಾಗಿ ಅರಳುತ್ತದೆ ಪಂಚಶೀಲ ತತ್ವಗಳಲ್ಲಿ ಒಂದನ್ನಾದರೂ ಕೂಡ ಅಳವಡಿಸಿಕೊಂಡರೆ ಈ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದಲಾಗಬಹುದು.

ಸತ್ಯವು ಒಂದೇ ಆದ್ರು ಋಗ್ವೇದದ ಅನುಸಾರ ಅದನ್ನು ನಡೆಯುವ ದಾರಿಗಳು ಹಲವು.ಕೊಟ್ಟ ಮಾತಿಗೆ ಬದ್ಧನಾಗಿರುವುದು ಹರಿಶ್ಚಂದ್ರನಿಗೆ ಸತ್ಯ ಮಾರ್ಗವಾಯಿತು. ದಾನಮಾಡುವುದೇ ಕರ್ಣನಿಗೆ ಸತ್ಯದೆಡೆಗೆ ಹಾದಿಯಾಯಿತು ಸೀತೆಯಂಥ ಸತಿಯರಿ‌ಗೆ ಪಾತಿವ್ರತ್ಯವೇ ಸತ್ಯದ ಸಾಧನೆಯಾಯಿತು. ಹೀಗೆ ಮಹಾ ವ್ಯಕ್ತಿಗಳ ಒಬ್ಬೊಬ್ಬರ ಜೀವನವೂ ಪರಮಸತ್ಯದ ವ್ಯಾಖ್ಯಾನದಂತಿದೆ. ಸತ್ಯವಂತರ ಹಾದಿ ಸ್ವಯಂ ಮೋಕ್ಷದ ಹಾದಿ.ಸವಾಲುಗಳ ಹಾದಿ. ಸತ್ಯ ಸಾಧಕರ ಯಾತ್ರೆ ಮೊದಲಾಗುವುದು ತ್ಯಾಗದಿಂದ. ಈ ಹೆಬ್ಬಾಗಿಲಿನ ಮೂಲಕವೇ ಅವರು ಸತ್ಯದ ಗುರಿ ತಲುಪುತ್ತಾರೆ. ಹಿಂದೂ ಧರ್ಮದ ಪ್ರಾಚೀನ ಜ್ಞಾನದ ಹೊಳಹು.

ಇಸ್ಲಾಮಿನ ಇತಿಹಾಸದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆ ನಡೆದಿದ್ದ ಘಟನೆಯೊಂದರ ಜತೆ ಬೆಸೆದುಕೊಂಡಿರುವ ‘ಈದ್‌ ಉಲ್‌ ಅದ್‌ಹಾ’ ಹಬ್ಬ ಮತ್ತೆ ಬಂದಿದೆ. ತ್ಯಾಗ-ಬಲಿದಾನದ ಈ ಹಬ್ಬ ಭಾರತದಲ್ಲಿ ‘ಬಕ್ರೀದ್‌’ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ.ಪ್ರತಿ ಹಬ್ಬ ಹರಿದಿನಗಳು ತಮ್ಮದೇ ಆದ ಮಹತ್ವ ಪಡೆದಿವೆ.ಅವುಗಳ ಹಿಂದಿನ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಳ್ಳುವುದು ಒಂದು ಪ್ರತೀಕವಷ್ಟೇ…ಮುಂದಿನ ದಿನಗಳಲ್ಲಿ ಬಾಳಿಬದುಕಬೇಕಾದರೆ ಅನುಸರಿಸಬೇಕಾದ ಮಾರ್ಗವನ್ನು ಅರಿತಷ್ಟು ಸಮಾಜದಲ್ಲಿ ತ್ಯಾಗದ ಬೆಲೆ ಬರುವುದು.

ತ್ಯಾಗವಿಲ್ಲದೆ ಯಾವುದೂ ಸಾಧ್ಯವಿಲ್ಲ. ಇತರರಿಗೆ ನೀವು ಸಹಾಯ ಮಾಡಬೇಕೆಂದಿದ್ದರೆ,ನಮ್ಮೊಳಗಿನ

 ಹೋಗಬೇಕು.ಧೂಳು, ಕಸ, ಸಗಣಿ, ಕೆಸರು, ಗುಳು,ಬೆವರು,ರಕ್ತಗಳಲ್ಲಿ ಮಿಂದು ಬಿಸಿಲಲ್ಲಿ ಬೆಂದ ಶೂಲದ ಪ್ರತೀಕವಾಗಿ ಸಾಧುಸಜ್ಜನರು ಕಲ್ಪಿಸಿಕೊಳ್ಳಲು ಹೇಸುತ್ತಿದ್ದ ಒರಟು ಮರದ ಶಿಲುಬೆಯು ಬಂಗಾರದ ತಗಡು ಹೊದ್ದು ಜೆರುಸಲೇಮ್ ನಗರದಲ್ಲಿ ವಿಶ್ವದಲ್ಲೆಡೆಯ ಜನರಿಂದ ಪೂಜೆಗೊಳ್ಳುತ್ತಿದೆ. ಮರಣದ ಸಂಕೇತವಾಗಿದ್ದ ಶಿಲುಬೆಯು ಕ್ರಿಸ್ತನ ತ್ಯಾಗಬಲಿದಾನದ ನಂತರ ಪ್ರೀತಿಯ ಮತ್ತು ಜೀವದ ಸಂಕೇತವಾಗಿದೆ. ಅಮೃತಫಲದ ದೆಸೆಯಿಂದ ಮರಣವೃಕ್ಷವು ಚಿಗುರಿ ನಳನಳಿಸುತ್ತಿದೆ.ಹೌದು. ಕ್ರಿಸ್ತನು ಹೇಳುವಂತೆ ನೀವು ದೇವರನ್ನೂ ಸಂಪತ್ತನ್ನೂ ಒಟ್ಟಿಗೆ ಒಲಿಸಿಕೊಳ್ಳಲಾರಿರಿ. ಒಟ್ಟಿಗೆ ಪೂಜಿಸಲಾರಿರಿ. ಜನರು ತಮ್ಮ ಸ್ವಂತ ಮೋಕ್ಷಕ್ಕಾಗಿ ಮಾತ್ರ ಐಹಿಕ ಬಿಡುತ್ತಾರೆ. ಎಲ್ಲವನ್ನೂ ತ್ಯಜಿಸಿಬಿಡಿ. ನಿಮ್ಮ ಸ್ವಂತ ಮೋಕ್ಷವನ್ನೂ ಬಿಸಾಡಿ ಹೋಗಿ, ಇತರರ ಸೇವೆ ಮಾಡಿ.

ಸೈನಿಕರು ಹಗಲು ರಾತ್ರಿ ದೇಶದ ಗಡಿಕಾಯ್ವರು ಆಕ್ಷಣದಲ್ಲಿ ಜೀವಹೋದರು ಚಿಂತಿಸಲಾರರು. ದೇಶಕ್ಕಾಗಿ ವೀರಮರಣ ಅಪ್ಪಲು ಸಜ್ಜಾಗಿ ಎಲ್ಲವನ್ನು ತ್ಯಾಗ ಮಾಡಿ ದೇಶಸೇವೆಗೆ ಬಲಿಯಾದರ ತ್ಯಾಗಕೆ ಬೆಲೆ ಕಟ್ಟಲಾದಿತೆ? ಭಗತ್ ಸಿಂಗ್ ರಂತಹ ವೀರಯೋಧರ ತ್ಯಾಗಕೆ ಸರಿಸಮಯಾವುದು?…..ಇದ್ದುದರಲ್ಲೆ ಸಮರ್ಪಣಾ ಮನೋಭಾವದಿಂದ ಬದುಕುವುದನ್ನು ಕಲಿತಷ್ಟು ಒಳಿತು…


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ…

5 thoughts on “

  1. ವೆರಿ ಗ್ರೇಟ್.ಸರ್ವಕಾಲಿಕ ಸತ್ಯವಾದ ತ್ಯಾಗ ದ ಮೌಲ್ಯವನ್ನ ಅಕ್ಷರ ಗಳ ರೂಪದಲ್ಲಿ ತುಂಬಾ ಚೆನ್ನಾಗಿ ಬರೆದಿದ್ದೀರಿ.ಎಲ್ಲಾ ದೃಷ್ಟಾಂತ ಗಳು ಕಣ್ಣಮುಂದೆ ಬಂದು ಮನಸಿಗೆ ಬೆಲೆ ಕಟ್ಟಲಾಗದ ಆನಂದ ದ ಅನುಭವ ಆಯಿತು ತಮ್ಮ ಲೇಖನ ಓದಿ.ಅಭಿನಂದನೆಗಳು

  2. ತ್ಯಾಗದ ವಿಶಾಲವಾದ ಅರ್ಥ,ಮಹತ್ವ,ಅವಶ್ಯಕತೆಯ ಬಗ್ಗೆ ವಿವರಿಸಿರುವದು ತುಂಬಾ ಅದ್ಭುತವಾಗಿದೆ.

  3. ತ್ಯಾಗದ ಮಹಿಮೆಯನ್ನು ತಿಳಿಸುವ ಮೌಲ್ಯಯುತ ಬರಹ

  4. ನಿರಂತರ ಯೋಚನೆಗೊಳಗಾದಾಗ ಅದ್ಬುತ ಶಬ್ದಗಳು ಹೊರಹೊಮ್ಮುವವು, ಯೋಧನ ತ್ಯಾಗ ಹೃದಯದಿಂದ ಯೋಚಿಸುವವರಿಗೆ ತಿಳಿಯುತ್ತದೆ, ತ್ಯಾಗ ಪ್ರೀತಿಗಳಿಂದ ಎಲ್ಲವನ್ನು ಗೆಲ್ಲುವ ನಿಮ್ಮ ಬರಹ ಚೆನ್ನಾಗಿದೆ ಮೇಡಂ.

Leave a Reply

Back To Top