ಶಕುನಿ ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕೃತಿ:—ಶಕುನಿ


ಲೇಖಕರು:—ಶ್ರೀಮತಿ ಸುಮಾ ಕಿರಣ್

ಪ್ರಗತಿಶೀಲ ಸಾಹಿತ್ಯದ ನೆಲೆಗಟ್ಟಿನಲ್ಲಿ ಆಲೋಚಿಸುವ ಇವರ ಸಾಹಿತ್ಯ ನಿತ್ಯ ನಿರತ ಸುಮಗಳಂತೆಯೆ ನಳನಳಿಸುತ್ತಿರುವಂತೆ ಚಲನಶೀಲವಾಗಿರಬೇಕೆಂಬುದೆ ಇವರ ಆಶಯವಾಗಿದೆ. ಸಾಹಿತ್ಯವೆಂಬುದು ನಿಂತ ನೀರಲ್ಲ.ದಿವ್ಯತಥ್ಯವಾದ ಪ್ರಬುದ್ಧತೆಯ ಬೇರು ಸದಾ ಸಾಗುತಿರುವ ತೇರು. ನಮ್ಮ ಸಾಹಿತ್ಯವು ಮಾನವನ ಬಾಳಿನಲ್ಲಿ ಬೆಳಕು ಚೆಲ್ಲುವಂತಿರಬೇಕು.
                ಹಾಗೆಯೆ ಜನತೆಯ ಜ್ಞಾನವನ್ನು ವೃದ್ಧಿಗೊಳಿಸುತ್ತ ನಾವಿನ್ಯತೆಯುಳ್ಳ  ವಿಚಾರಧಾರೆಗಳಿಗೆ ಹೆಚ್ಚು ಮಹತ್ವ ಕೊಟ್ಟು ಕನ್ನಡ ಸಾಹಿತ್ಯ ಪರಂಪರೆಯನ್ನು ಮತ್ತಷ್ಟು ಪರಿಪುಷ್ಠಿಗೊಳಿಸಿ ನಮ್ಮೆಲ್ಲರ ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಉನ್ನತ್ತೀಕರಿಸುತ್ತ ವಿಚಾರಧಾರೆಯನ್ನು ಪ್ರತಿಯೊಬ್ಬ ಸಾಹಿತಿಯು ಮೈಗೂಡಿಸಿಕೊಳ್ಳಬೇಕು ಆಗ ಮಾತ್ರ  ಸಾಮಾನ್ಯ ಮನುಷ್ಯನ ಭಾವನೆಗಳಿಗೆ ನಾವು ಸ್ಪಂದಿಸಬಹುದು.ಈ ಒಂದು ನಿಟ್ಟಿನಲ್ಲಿ ಲೇಖಕಿಯವರಾದ ಶ್ರೀಮತಿ ಸುಮಾ ಕಿರಣ್ ರವರು ಶಕುನಿಯ ಜೀವನ ವೃತ್ತಾಂತವನ್ನು ತಮ್ಮ ಕೃತಿಯೊಳಗೆ ಸುಂದರವಾಗಿ ವಿವರಿಸಿದ್ದಾರೆ.

             ಮಹಾಭಾರತವನ್ನು ಹಲವಾರು ದೃಷ್ಟಿಕೋನದಿಂದ ಗ್ರಹಿಸಿ ಕುರುಕ್ಷೇತ್ರಯುದ್ಧಕ್ಕೆ ಮೂಲ ಕಾರಣಕರ್ತ ಶಕುನಿ ಹಾಗು ಶಕುನಿಯು ಖಳನಾಯಕ ,ಕುತಂತ್ರಿ ,ದುಷ್ಟ ,ನೀಚ ,ಸಮಯಕ್ಕೆ ಸರಿಯಾಗಿ ಪ್ರತಿತಂತ್ರಗಳನ್ನು ರೂಪಿಸೊ ಚತುರ ಹಾಗೆಯೆ ಶಕುನಿ ಬುದ್ಧಿವಂತನು ಹೌದು ಸದ್ಗುಣ ಸದ್ಭಾವದವನು ಕೂಡ ಆಗಿದ್ದನೆಂದು ನಿರೂಪಿಸಿದ ರೀತಿ ಈ ಕೃತಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ…

          ಸಾಕಷ್ಟು ಜನರಿಗೆ ಶಕುನಿಯ ಋಣಾತ್ಮಕ ನೆರಳೆ ಬಿದ್ದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದು ಆಶ್ಚರ್ಯವೇನಿಲ್ಲ.ಯಾಕೆಂದರೆ ಶಕುನಿಯೆ ಖಳನಾಯಕ ಕುರುಕ್ಷೇತ್ರ ಯುದ್ಧಕ್ಕೆ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೆ ಸರಿ.!ಆದರೆ ಲೇಖಕಿ ಇಲ್ಲಿ ಶಕುನಿಯ ಅಂತರಾಳದ ನೋವು ಹಾಗು ಅವನ ಅಸಹಾಯಕ ಸ್ಥಿತಿಗೆ ಕಾರಣವಾದ ವಿಷಯವಸ್ತುಗಳ ಬಗ್ಗೆ ತಿಳಿಸಿರುವ ಮಹತ್ವದ ಅಂಶಗಳು ಓದುಗರಲ್ಲಿ ಆಸಕ್ತಿಯನ್ನು ಹೆಚ್ಚಿಸುತಿದೆ..

ಯಾವುದೇ ಒಂದು ಕಥೆಗೂ ಅದರದ್ದೆ ಆದ ಹಿನ್ನೆಲೆ ಅಥವ ಪ್ರಮುಖ ಅಂಶಗಳಿರುತ್ತವೆ.ಹಾಗೆಯೆ ಶಕುನಿಯ ಪಾತ್ರಕ್ಕೆ ಲೇಖಕಿ ನಿಜಕ್ಕೂ ಜೀವ ತುಂಬಿ ಬರೆದಿರುವುದು ಓದಿ ಖುಷಿಯಾಯಿತು. ಅವನೊಳಗಿನ ದ್ವೇಷ, ನೋವು, ಅಸಹಾಯಕತೆ ,ಆಸೆ ,ದುರಾಸೆಗಳು ಹಾಗೆಯೆ ವಿರೋಧಿಯನ್ನು ಯಾವ ರೀತಿ ಸೋಲಿಸಬೇಕು ಎಂಬುದಕ್ಕೆ ಹೂಡುವ ಪ್ರತಿತಂತ್ರಗಳು, ಕುಟಿಲತೆಗಳು, ಅದಕ್ಕಾಗಿ ಯೋಚನೆಯ ಪರಿಯ ಬಗ್ಗೆ ಸೊಗಸಾಗಿ ಮನಮಿಡಿಯುವಂತೆ ಹೆಣೆದಿರುವುದು ಸೊಗಸಾಗಿದೆ.

   ಪೌರಾಣಿಕತೆ ಕಥೆಯಾದರೂ ಕೂಡ ಬಹಳ ಅಚ್ಚುಕಟ್ಟಾಗಿ ಎಲ್ಲಿಯೂ ಕಥೆಗೆ ಚ್ಯುತಿ ಬರದಂತೆ ಶಕುನಿಯ ಪಾತ್ರೆಕ್ಕೆ ಧಕ್ಕೆಯಾಗದಂತೆ ಪದಗಳನ್ನು ಪೋಣಿಸಿರುವುದು ನಿಜಕ್ಕೂ ಖುಷಿಯ ವಿಷಯ.ಇದೊಂದು ಸಹೋದರತೆಯ ಪ್ರೀತಿ ,ವಾತ್ಸಲ್ಯ ತುಂಬಿದ ಹಾಗು ತಂದೆಯ ಅಂತಃಕರಣ ಮಿಲನದ ಅದ್ಭುತ  ಕಥಾನಕವಾಗಿದ್ದರು ಕೂಡ ವಿರೋಧಿಗಳನ್ನು ಅವರಿಗೆ ಗೊತ್ತಾಗದಂತೆ ನಾಶಮಾಡಿ, ತಂದೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೃತಜ್ಞತಾ ಮನೋಭಾವವನ್ನು ಎತ್ತಿ ತೋರಿ ತೊಂಬತೊಂಭತ್ತು ಮಂದಿ ಸೋದರರ ಅತಿಯಾದ ಭ್ರಾತೃಪ್ರೇಮದ ಲೀಲೆ,ತಂದೆಯ ತ್ಯಾಗಮನೋಭಾವದ ಕರುಳು ಹಿಂಡುವ ಕಥಾವಸ್ತುವಾಗಿದ್ದು ನಿಜಕ್ಕೂ ಮಸ್ತ್ ಇದೆ..

  ಪ್ರೀತಿಯನ್ನು ಪ್ರೀತಿಯಿಂದ ಪಡೆಯುವ ವಿಧಾನ ಹಾಗೆಯೆ ದ್ವೇಷವನ್ನು ದ್ವೇಷದಿಂದಲೆ ನಾಶಮಾಡುವ ಮನೋಭಾವ ಶಕುನಿಯದು.ಶಕುನಿ ಮೂಲತಃ ಹೇಡಿಯಲ್ಲ ಬದಲಾಗಿ ಅತ್ಯದ್ಭುತ ತಂತ್ರಗಾರ,ಶತ್ರುಗಳನ್ನು ಸದೆಬಡಿಯುವ ಚಾಣಾಕ್ಯತನ ಶಕುನಿಯಲ್ಲಿತ್ತೆಂಬುದಕ್ಕೆ ಅವನ ಯುಕ್ತಿ ಸಾಮರ್ಥ್ಯವನ್ನು  ಕೃತಿಯುದ್ದಕ್ಕೂ ಬಿತ್ತರಿಸಿರುವ ಲೇಖಕಿಯ ಚಾಕಚಕ್ಯತೆಯ ಮಟ್ಟ ಅದ್ಭುತ…

   ಧೃತರಾಷ್ರ್ಟನ ವಂಶವನ್ನೆ ಮುಗಿಸುವ ಹುನ್ನಾರ ಅವನ ದೇಹದ ಕಣಕಣದಲ್ಲೂ ಪುಟಿದೇಳುವ ಭಾವದಲೆಗಳ ಆರ್ಭಟದ ಮುನ್ನೋಟವನ್ನು ಬಹಳ ಸೂಕ್ಷ್ಮವಾಗಿ ಹೇಳಿರುವುದು ಚಂದವಿದೆ.ಶಕುನಿಯ ಮನದ ತೊಳಲಾಟ ದುಃಖದ ಮಡುಗಟ್ಟುವಿಕೆ ದ್ವೇಷದ ಆರ್ಭಟದಿಂದ ಲಾವರಸದಂತೆ ಕುದಿಯುವ ಬಗ್ಗೆಯನ್ನು ಅಭಿವ್ಯಕ್ತ ಪಡಿಸಿರುವ ರೀತಿಯೂ ಕೂಡ ಚಂದವಿದೆ.

             ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸಹೋದರಿ ಗಾಂಧಾರಿಯು ತನ್ನ ಒಡಹುಟ್ಟಿದವರನ್ನು ಹಾಗು ತಂದೆಯನ್ನು ಉಳಿಸಿಕೊಳ್ಳಲು ಯಾವುದೆ ಪ್ರಯತ್ನ ಮಾಡದ ಅವಳ ನಿಲುವನ್ನು ಕಂಡು ಅವಳ ವಿರುದ್ಧ ತಿರುಗಿ ನಿಂತಿದ್ದರ ಪರಿಣಾಮವಾಗಿ ಹಗೆಯು ಹೆಚ್ಚಾಗಿ ಸಿಟ್ಟಿಗೆ ಸೇಡು ತೀರಿಸಿಕೊಳ್ಳುವ
ಹಠ ಮೋಸಮಾಡುವುದು ,ಕುತುಂತ್ರಗಳಂತಹ ಉಪಾಯಗಳನ್ನು ರೂಪಿಸುವ ದಿಟ್ಟ ನಿಲುವಿನ ಪ್ರಸ್ತುತಿ ಚನ್ನಾಗಿ ಮೂಡಿಬಂದಿದೆ.

        ಶಕುನಿ ಭೀಷ್ಮ ಪಿತಾಮಹಾನ ಬದ್ಧ ವೈರಿ. ಅವನ ವಂಶವನ್ನು ನಾಶಮಾಡುವ ದ್ವೇಷˌ ಮೇಲ್ನೋಟಕ್ಕೆ ಶಕುನಿಯು ಧೃತರಾಷ್ರ್ಟನಿಗೆ ಹಿತೈಷಿಯಂತೆ ಮುಖವಾಡ ಧರಿಸಿ ಅಂತರಂಗದಲ್ಲಿ ದ್ವೇಷದ ಕಿಡಿಯನ್ನು ಅಚ್ಚುವುದರ ಮೂಲಕ ಹಾಗು ವಿರೋಧಿಯಾಗಿರುವುದರ ರಹಸ್ಯವನ್ನು ಭೇದಿಸಿರುವ ರೀತಿ, ಪಗಡೆಯೊಳಗಿನ ಶಕುನಿಯ ನಂಟು ಅಂದರೆ ಅದರ ಪಂಟ ಹೇಗೆ ಎಂಬುದನ್ನು ಸುಂದರವಾಗಿ ಎಳೆ ಎಳೆಯಾಗಿ ವಿವರಿಸಿರುವರು…

      ಒಂದೊಂದು ಭಾಗವನ್ನು ಓದುವಾಗಲೂ ಅದೆಷ್ಟು ಭೀಭತ್ಸವಾಗಿ ಕಾಡುತ್ತಿತ್ತು.ಶಕುನಿ ಹಾಗು ಅವನ ಸಹೋದರರು ಹಾಗು ತಂದೆಯವರ ಕಾರಾಗೃಹ ವಾಸದಲ್ಲಿ ಅಂಕೆಗಳ ಲೆಕ್ಕದಲ್ಲಿ ಅಗುಳಗಳ ತಿಂದು ಜೀವ ಉಳಿಸಿಕೊಳ್ಳುವ ಆ ಕರಾಳ ದಿನಗಳು ಭಯಂಕರ.! ಆ ಕಾರ್ಗತ್ತಲ ಗುಹೆಯೊಳಗೆ ಸಹೋದರರ ಹೊಟ್ಟೆ ಹಸಿವಿನಿಂದಾಗಿ ಸತ್ತು ನರಳುವ ಭಯಾನಕ ಸನ್ನಿವೇಷ. ಸತ್ತ ಹೆಣಗಳ ವಾಸನೆ ,ದಿನಕ್ಕೊಬ್ಬರು ನರಳಿ ನರಳಿ ಸಾಯುವ ದೃಶ್ಯಾವಳಿಗಳ ಚೀತ್ಕಾರಗಳು ಹಾಗು ಮತ್ತೊಂದೆಡೆ ಶಕುನಿಯ ಸಹೋದರರ 
ತನುಮನಗಳು ಅಗುಳು ಅನ್ನ ಬೇಡವೆಂದು ಸಂಪು ಹೂಡಿದ ಪರಿ ನಿಜಕ್ಕೂ ಅದೆಂತವರ ಕಣ್ಣಾಲಿಗಳನ್ನು ಒದ್ದೆ ಮಾಡುವಂತಿದ್ದವು. ತಂದೆಯ ಬೃಹತ್ ಬುದ್ಧಿವಾದ ಹಾಗು ತ್ಯಾಗ ಮನೋಭಾವ, ಸಹೋದರ ವಾತ್ಸಲ್ಯ ಅವರ ಒಗ್ಗಟ್ಟಿನ ಗುಣ, ಸಾಮರಸ್ಯ, ಸದ್ಗುಣ, ಸದ್ಭಕ್ತಿ, ನಿರ್ಭಾವ, ನಿರ್ಮುಕ್ತಮನ, ನಿಮ್ಮಳ ಮನಸ್ಸು ಎಲ್ಲವೂ ಮೆಚ್ಚುವಂತಹವು…

ಶಕುನಿಯ ಪಾತ್ರಧಾರಿಯ ಕಥಾವಿಷಯ ನಿಜಕ್ಕೂ ಓದುತ್ತಿದ್ದರೂ ಮತ್ತೊಮ್ಮೆ ಓದಬೇಕೆನಿಸುತಿದೆ.ಅಷ್ಟು ಅಚ್ಚುಕಟ್ಟಾಗಿ ಎಲ್ಲಿಯೂ ಶಕುನಿಯ ಪಾತ್ರಕ್ಕೆ ಹಾನಿಯಾಗದಂತೆ ಹೆಣೆದಿರುವುದು ಹಾಗು  ಕಥಾವಿಷಯವನ್ನು ಯಾವುದೆ ರೀತಿಯಲ್ಲೂ ವೈಭವೀಕರಿಸದೆ ಸಾಗುತ ಬಹಳ ಆಕರ್ಷಕವಾಗಿದೆ..

ದುರ್ಯೋಧನನ ಅಟ್ಟಹಾಸವನ್ನು ಬಗ್ಗುಬಡಿಯಲು ಅವನ ಮನದೊಳಗೆ ಪಾಂಡುವರ ವಿರುದ್ಧ ಮತ್ಸರದ ವಿಷಬೀಜ ಬಿತ್ತಿ. ಪಗಡೆಯ ಆಟದಲ್ಲಿ ಪಂಟನಾಗಿ ತನ್ನ ಕುತಂತ್ರದಿಂದ ಸೋಲಿಸುವುದರ ಮೂಲಕ ಯುದ್ಧ ಮಾಡಲು ಪ್ರಚೋದಿಸುತ ,ಧೃತರಾಷ್ರ್ಟನ ಅಹಂಕಾರ ಹಾಗು ಅವನ ಮೇಲಿನ ಸೇಡನ್ನು ಕುರುಕ್ಷೇತ್ರ ಯುದ್ಧದಲ್ಲಿ ತೀರಿಸಿಕೊಂಡ ಬಗ್ಗೆ. ಮುಯ್ಯಿಗೆ ಮುಯ್ಯಿ ,ತಂತ್ರಕ್ಕೆ ಪ್ರತಿತಂತ್ರ ,ಸೇಡಿಗೆ ಸೇಡು ಎಂಬ ತಂತ್ರವನ್ನು ಇಲ್ಲಿ ತುಂಬ ಚನ್ನಾಗಿ ಬಳಸಿಕೊಂಡು ಶಕುನಿಯ ಪಾತ್ರಕ್ಕೆ ನೈಜತೆಯನ್ನು ತುಂಬಿರುವ ಲೇಖಕಿಯ ಪರಿಶ್ರಮಕ್ಕೆ ಶರಣು..ರಣರಂಗದಲ್ಲಿ ಸಾಲು ಸಾಲು ಹೆಣಗಳುರುವುದನ್ನು ನೋಡಿ ಗೆಲುವಿನ ಕಿರುನಗೆ ಹಾಗು ತನ್ನ ಸಹೋದರರ ಹಾಗೂ ತಂದೆಯ ಸಾವನ್ನು ನೆನೆದು ದುಃಖಿಸುವ ಪ್ರಸಂಗ ಅಬ್ಬಾ.! ಎಂತವರನ್ನು ಕಾಡದೆ ಬಿಡದು….ಸೇಡಿಗೆ ಪ್ರತಿ ಸೇಡನ್ನು ತೀರಿಸಿಕೊಳ್ಳುವ ಪ್ರಸಂಗ ಅದ್ಭುತವಾಗಿ ಮೂಡಿಬಂದಿದೆ.

      ಶಕುನಿ ತನ್ನ ಸಹೋದರರಿಗೆ ಹಾಗು ತಂದೆಗೆ ಕೊಟ್ಟ ಮಾತಿನಂತೆ ಕುರುಕುಲವನ್ನು ನಾಶ ಮಾಡಿಯೇ ತೀರುತ್ತೇನೆ ಎಂದು ಅಂದುಕೊಂಡಂತೆ ಮಾಡಿಯೆ ತೀರಿದ ಧೀರ ಚತುರನ ಕೌಶಲ್ಯ  ನಿಜಕ್ಕೂ ಸೋಜಿಗವೆ.!ಕುರುಕುಲ ನಾಶಮಾಡುವುದರೊಂದಿಗೆ ತನ್ನ ಪ್ರಾಣ ಬಿಟ್ಟ ದಾರುಣ ಕಥಾನಕ ಇದಾಗಿದೆ. ಹಾಗೆಯೆ ಈ ಒಂದು ಕೃತಿಗೆ ಮುನ್ನುಡಿಯನ್ನು ಬರೆದಿರುವ ರಾಮಶೇಷ ಸರ್ ಎಸ್. ಎ. ಬೆಂಗಳೂರು ಹಾಗು ಬೆನ್ನುಡಿ ಬರೆದಿರುವ ಹರಿನರಸಿಂಹ ಉಪಾಧ್ಯಾಯ ಸರ್ ವರರು ಕೂಡ ಈ ಕೃತಿಯ ಬಗ್ಗೆ ಸುಂದರವಾಗಿ ಹಾಗು ಚೊಕ್ಕವಾಗಿ ತಮ್ಮನೆ ಆದ ಭಾವದೊಂದಿಗೆ ಪ್ರಸ್ತುತ ಪಡಿಸಿರುವರು..

ಪೌರಾಣಿಕ ಕಥೆಯೊಂದರ ಪಾತ್ರವನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿರುವ ಲೇಖಕಿಯವರಾದ ಸುಮಾ ಕಿರಣ್ ರವರ ಬರಹಗಳು ಮತ್ತಷ್ಟು ಮಗದಷ್ಟು ಹೊರಬರುತಿರಲಿ ಈ ಮೂಲಕ ಅವರೊಳಗಿನ ಕನ್ನಡ ಸಾಹಿತ್ಯ ಕೃಷಿ ಪ್ರಜ್ವಲಿಸುತ್ತಿರಲಿ.ಸಾರಸ್ವತ ಲೋಕದಲ್ಲಿ ಮತ್ತಷ್ಟು ಎತ್ತರಕ್ಕೇರಲೆಂದು ಶುಭ ಹಾರೈಕೆಗಳೊಂದಿಗೆ…


ಅಭಿಜ್ಞಾ ಪಿ ಎಮ್ ಗೌಡ

13 thoughts on “ಶಕುನಿ ಪುಸ್ತಕ ಸಂಗಾತಿ

  1. ಕೃತಿ ಪರಿಚಯ ಬಹಳ ಸುಂದರವಾಗಿ ಮೂಡಿ ಬಂದಿದೆ ಮೇಡಂ

  2. ನಾನೂ ಓದಿರುವೆ.. ಶಕುನಿ ಪಾತ್ರ ಚಿತ್ರಣ ಅದ್ಭುತ

  3. ಪುಸ್ತಕವನ್ನು ಅಮೂಲಗ್ರವಾಗಿ ಓದಿ, ಪುಸ್ತಕದ ಪರಿಚಯ ಬಹಳ ಚೆನ್ನಾಗಿ ಮಾಡಿ ಕೊಟ್ಟಿದ್ದೀರ..

  4. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಶಕುನಿ ಪಾತ್ರ ಸುಮಾ ನನ್ನ ಕುತೂಹಲಕ್ಕೆ ಉತ್ತರ ಸಿಕ್ಕಿತು

  5. ಸುಂದರವಾಗಿ ಪುಸ್ತಕ ವಿಮರ್ಶೆ ಮಾಡಿದ ಅಭಿಜ್ಞಾ ಅವರಿಗೂ ಹಾಗೂ ಸಂಗಾತಿ ಬಳಗಕ್ಕೂ ಧನ್ಯವಾದಗಳು

Leave a Reply

Back To Top