ಯಾನ ತಾಣ

ಲೇಖನ

ಯಾನ ತಾಣ

ಚಂದ್ರಮತಿ ಪುರುಷೋತ್ತಮ್ ಭಟ್

ಇತ್ತೀಚೆಗಿನ ಪಯಣ ಎಂದರೆ ನಮ್ಮದು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೊಸದಾಗಿ ಬಿಟ್ಟಿರುವ ‘ ವಿಸ್ಟಾಡೋಮ್ ‘ ರೈಲು ಪ್ರಯಾಣ.  ಪ್ರಕೃತಿ ಯ ಮಡಿಲಲ್ಲಿ ೫೭ ಸುರಂಗ ಮಾರ್ಗ ವಾಗಿ ಅಲ್ಲಿಗೆ  ಹೋಗುವ ಅನುಭವವೇ ರೋಚಕ ಹಾಗೂ ಅತ್ಯದ್ಭುತ. ಪ್ರಕೃತಿ ಪ್ರಿಯರಿಗೆ ರಸದೌತಣ.

   ಅಲ್ಲಿಂದ ಅನತಿ ದೂರದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ ಇದೆ ತುಂಬಾ ಚೆನ್ನಾಗಿದೆ ಎಂದು ನಮ್ಮ ಜೊತೆಗೆ ಬಂದ ಆ ಸ್ಥಳದ  ವಾಹನ ಚಾಲಕರು ಹೇಳಿದ ಮೇಲೆ ನಾವು ಅಲ್ಲಿಗೆ ಹೊರೆಟೆವು.  ಮಾರ್ಗವಾಗಿ ಅಲ್ಲಿಗೆ  ಹೋಗುವ ಮೊದಲು ಕಾಡಿನ ಮಧ್ಯೆ  ನೀರು ಧುಮುಕುತ್ತಾ ಭೋರ್ಗರೆಯುವ ಶಬ್ಧವನ್ನು ಆಲಿಸುತ್ತಾ ಹೋಗಲೇ ಬೇಕೆಂಬ ಕುತೂಹಲದಿಂದ ಆ ಊರಿನವರ ಸಹಾಯ ತೆಗೆದು ಕೊಂಡು ದುಸ್ಸಾಹಸಕ್ಕೆ ಕೈ ಹಾಕಿ ಆ  ಉರುಂಬಿ ಜಲಪಾತದ ಮನಮೋಹಕ ದೃಶ್ಯವನ್ನು ನೋಡಿಕೊಂಡು  ಆನಂದಿಸಿ ನಂತರ ನಮ್ಮ ಪಯಣ ಮರಕತ ಕಡೆಗೆ ಹೊರಟಿತು.

    ಅಲ್ಲಿಗೆ ಹೋಗುವ ಕಿರುದಾದ ದಾರಿಯಂತೂ ಅದ್ಭುತವಾಗಿತ್ತು. ಸುತ್ತಲೂ  ಹಸಿರು ಪರಿಸರ, ಶುದ್ಧಗಾಳಿ , ಹಕ್ಕಿಗಳ ಕಲರವ ಮತ್ತು ಒಂದು ರೀತಿಯ ವನಸ್ಪತಿಯ ಸುವಾಸನೆ ಹೀಗೆ ಪ್ರಕೃತಿ ನಮ್ಮನ್ನು ಕೈಬೀಸಿ ಕರೆದು ಮಾನವ ನೀನೆಷ್ಟು ಅಲ್ಪ ಎನ್ನುವ ರೀತಿಯಲ್ಲಿ ತನ್ನ ಹಿರಿಮೆಯನ್ನು ಎತ್ತಿ ತೋರಿಸುತ್ತಿತ್ತು.

ನಡುಗಲ್ಲು ಅಂಚೆ, ನಾಲ್ಕೂರು ಗ್ರಾಮ, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯ ಈ ದೇವಾಲಯವು ಕುಕ್ಕೆ ಸುಬ್ರಮಣ್ಯದಿಂದ ಸುಮಾರು ಹದಿನೈದು ಮೈಲು ದೂರದಲ್ಲಿ ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಹರಿಯುತ್ತಿರುವ ಕಲ್ಲಾಜೆ ಎಂಬ  ಹೊಳೆಯ ‘ ಗಯ ‘  ಸಮೀಪದಲ್ಲಿ ಈ ದೇವಿಯು ದುರ್ಗಾ ಪರಮೇಶ್ವರಿಯಾಗಿ  ನೆಲೆಸಿರುತ್ತಾಳೆ. ಈ ದೇವಸ್ಥಾನವು ಸಾವಿರಾರು ವರ್ಷಗಳ ಹಿಂದೆ ಮಾರ್ಖಾಂಡೇಯ ಮುನಿ ವಂಶಸ್ಥರಿಂದ ಪ್ರತಿಷ್ಠಾಪನೆಗೊಂಡಿತೆಂದು ಅಷ್ಟ ಮಂಗಲ ಪ್ರಶ್ನೆಯಿಂದ ತಿಳಿದು ಬಂದಿದೆ ಎಂದು ಅಲ್ಲಿಯ ಗ್ರಾಮದವರು ಹೇಳುತ್ತಾರೆ. ಪುರಾತನ ಇತಿಹಾಸದ ಪ್ರಕಾರ ಬಾಳುಗೋಡಿನ ರತ್ನಪುರ ಎಂಬ ತನ್ನ ಮೂಲ ನೆಲೆಯನ್ನು ಬಿಟ್ಟು ನೆಲೆಗಾಗಿ ಅರಸುತ್ತಾ ಬಂದಾಗ ಕಲ್ಲಾಜೆ ನದೀ ತೀರದಲ್ಲಿ ನೆಲೆಸಿದಳೆಂದೂ  ಅಲ್ಲಿಯೇ ತಪಸ್ಸನ್ನಾಚರಿಸುತ್ತಿದ್ದ ಮಾರ್ಖಾಂಡೇಯ ಮುನಿಯೋರ್ವನಿಗೆ ಅಶರೀರವಾಣಿಯಾಗಿ, ಆತನು ವಿಷ್ಣು ಸಾನ್ನಿಧ್ಯ ದೊಂದಿಗೆ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿದನೆಂದು ಪ್ರತೀತಿ ಇದೆ. ಆಗ್ನೇಯ ದಿಕ್ಕಿನಲ್ಲಿರುವ ರತ್ನಪುರದಿಂದ ಬಂದು, ದೇವಿಯು ಕುಕ್ಕೆ ಸುಬ್ರಮಣ್ಯ ದೇವರಿಗೆ ಪಶ್ಚಿಮಾಭಿ ಮುಖವಾಗಿ ನೆಲೆಸಿರುವುದು ಇಲ್ಲಿಯ ವಿಶೇಷತೆ. ಈ ಪ್ರದೇಶಗಳಲ್ಲಿ ರತ್ನಗಳಲ್ಲಿ ಒಂದಾದ ಮರಕತ ಕಲ್ಲು ಕಂಡು ಬಂದಿರುವುದು ಈ ಸ್ಥಳದ ಮಹತ್ವವಾಗಿರುತ್ತದೆ. ತನ್ಮೂಲಕ ಈ ಸ್ಥಳವು ಮರಕತ ಎಂದು ಕರೆಯಲ್ಪಟ್ಟಿರ ಬೇಕು.

     ಇಲ್ಲಿಯ ‘ ಗಯ ‘ದಲ್ಲಿ ಮಕರ ಸಂಕ್ರಮಣದ ದಿವಸ ತೀರ್ಥ ಉದ್ಭವವಾಗುವುದೆಂದೂ, ಅಂದು ಇಲ್ಲಿ ಸ್ನಾನ ಮಾಡಿದರೆ ಸಕಲ ಪಾಪ ಪರಿಹಾರವಾಗಿ , ರೋಗ ರುಜಿನಗಳ ಉಪಶಮನ ಹಾಗೂ ಇಷ್ಟಾರ್ಥ ಸಿದ್ಧಿಸುವುದೆಂದೂ ಪ್ರತೀತಿ ಇದೆ.

       ಆದರೆ ಇಲ್ಲಿಗೆ ಬರುವ ಭಕ್ತಾದಿಗಳು ಮೊದಲು ಅಕ್ಕಿಯನ್ನು ಕಲ್ಲಾಜೆ ನದಿಯಲ್ಲಿನ ಮೀನುಗಳಿಗೆ ಉಣಬಡಿಸಿ ನಂತರ ದುರ್ಗಾಪರಮೇಶ್ವರಿ ಯ ದರ್ಶನಕ್ಕೆ ಹೋಗ ಬೇಕಾಗುತ್ತದೆ. ಎಷ್ಟು ಒಳ್ಳೆಯ ಸಂಸ್ಕೃತಿ ಅಂದರೆ ಪ್ರಾಣಿದಯೆ ಎದ್ದು ಕಾಣುತ್ತದೆ. ಅಲ್ಲಿ ಸುಮ್ಮನೆ ಹೋಗಿ ನೋಡಿದರೆ ನಮಗೆ ಸ್ವಚ್ಛಂದ ಜಲವಿದ್ದರೂ ಮೀನುಗಳು ಕಾಣಿಸುವುದೇ ಇಲ್ಲ. ನಾವು ಅವುಕ್ಕೆ ಪ್ರೀತಿಯಿಂದ ಅಕ್ಕಿ ಹಾಕಿದಾಗ ಮಾತ್ರ ಅವು ಆಸೆಯಿಂದ ಎಷ್ಟೊಂದು ದೊಡ್ಡ ಗಾತ್ರದಲ್ಲಿ ಗುಂಪಾಗಿ ತಿನ್ನಲು ಬರುತ್ತವೆ. ಎಷ್ಟು ಆರೋಗ್ಯಕರ ವಾದ ಹಾಗೂ ಅದ್ಭುತವಾದ  ಮೀನುಗಳನ್ನು ನಾವು ಅಲ್ಲಿ ನೋಡ ಬಹುದು.

ಮುಸ್ಸಂಜೆಯ ಪ್ರಶಾಂತತೆಯ ಸಮಯದಲ್ಲಿ ಆ ಪರಿಶುದ್ಧ ನೀರಿನ ಜುಳುಜುಳು ನಿನಾದ,  ಯಾರನ್ನಾದರೂ ಮೂಕವಿಸ್ಮಕಗೊಳಿಸದೇ ಇರದು.  ಆ ಮೀನುಗಳೂ ಸಹ ನಮ್ಮೆಲ್ಲರನ್ನು ಪ್ರೀತಿಯಿಂದ ಮೌನವಾಗಿಯೇ ಮಾತನಾಡಿಸಿ ಸಂತಸಪಡಿಸಿ ನಮ್ಮನ್ನು ಬೀಳ್ಕೊಟ್ಟಿತು.

ಇದೊಂದು ಶಕ್ತಿ ಸ್ಥಳವೂ ಹೌದು . ಪ್ರಶಾಂತ ಮತ್ತು ಪರಿಶುದ್ಧ ತಾಣವೂ ಹೌದು. ದಯವಿಟ್ಟು ಈ ಪವಿತ್ರ ಸ್ಥಳಗಳನ್ನು ಮಲಿನಗೊಳಿಸದೆ ಹಾಗೇ ಪವಿತ್ರ ವಾಗಿ ಉಳಿಸಿ ಕೊಳ್ಳುವ ಜವಾಬ್ದಾರಿ ನಮ್ಮದಾಗಿರಲಿ.


2 thoughts on “ಯಾನ ತಾಣ

  1. ಸುಂದರ ಸ್ಥಳದ ಸುಂದರ ನಿರೂಪಣೆ ಓದುಗರನ್ನು ಕಲವು ಕ್ಷಣ ಅಲ್ಲಿಗೇ ಕರೆದೊಯ್ದಿರಿ. ಧನ್ಯವಾದಗಳು ಮೇಡಂ.

Leave a Reply

Back To Top