ರುಕ್ಮಿಣಿ ನಾಗಣ್ಣವರ ಹೊಸ ಕವಿತೆ

ಎಷ್ಟೊಂದು ಕಾಳಜಿ..!?

Sita and Rama: The Ramayana in Indian Painting | The Metropolitan Museum of  Art

ಹರವಾದ ಎದೆಯ
ನೀಳ ತೋಳುಗಳ
ಬರಿ ಮೈಯ ಮಹಾಭುಜನೇ
ಬಾಣ ಹೆದೆಗೇರಿಸಿ
ಸಂಚು ಹೂಡಿದ
ನಿನ್ನ ಕಣ್ಣೋಟದ ಮೊನಚಿಗೆ
ನಾನೆಂದೂ ಒಳಿದವಳಲ್ಲ

ರದ್ದಿ ಸಾಲದೆ
ಕಿಂಗುಸೈಜು ಪುಸ್ತಕಗಳೆದೆ ತುಂಬ
ಅದೆಷ್ಟು ಕೈಗಳು
ಎಷ್ಟೋ ನಮೂನೆಯ
ನಿನ್ನ ಹೆಸರು ಬರೆದು
ಜೈಕಾರ ಗೈದು
ಉಸಿರ ಹಿಡಿದು ಜಪಿಸಿದರೂ
ನೀನು ಒಲಿದವನಲ್ಲ

ಕಾಡಿನಲಿ ಆಡಿಕೊಂಡಿದ್ದ
ಮೊಲದ ಮರಿಗಳು
ನಿನ್ನವೇ ಬೀಜಗಳು ಎಂಬ
ಸಬೂಬು ದೊರೆತು
ಲೋಕವನು
ಗೆದ್ದೆನೆಂದು ಬೀಗಿದವ ನೀನು

ಮರ್ಯಾದೆ ಪುರುಷೋತ್ತಮನೇ
ನಿನ್ನ ಅಸಲಿತನದ
ಖಾತರಿ ಮಾಡಿಕೊಂಡೇ
ಮತ್ತೆಂದೂ ನಿನ್ನ ಬಯಸದೆ
ಮೂಲ ನೆಲೆಗೆ ಮರಳಿದವಳಿಗೆ
ತನ್ನತನದ ಹುಡುಕಾಟವಿತ್ತು

ತನ್ನನ್ನು ಮಾತ್ರ ಭಜಿಸಿ
ನನ್ನನ್ನು ನನ್ನಜ್ಜಿ, ಮುತ್ತಜ್ಜಿಯರನ್ನು
ಹೀನರೆಂದು ಬಗೆದ
ತರತಮಗಳನು ತೂಗುವ
ನಿನ್ನವರ ಕಣ್ಣೋಟ
ಮೊದಲು ಸರಿಪಡಿಸು

ನನಗೆ ನಂಬಿಕೆ
ಸಮತೆಯನು
ಯೋಗವೆಂದು ಸಾಧಿಸುವ
ರಕ್ತ ಮಾಂಸ ತುಂಬಿರುವ
ದೇಹಗಳ ಮೇಲೆ
ಯಾವೊಂದರಲೂ
ಆದರ್ಶವಾಗದವರ
ಆರಾಧಿಸುವ ಮೂಢತನ
ನನ್ನಲ್ಲಿಲ್ಲ ಕ್ಷಮಿಸು

ಇಲ್ಲೀಗ
ಯಕಶ್ಚಿತ ಕ್ಷುದ್ರ ಜೀವಿಯೊಂದು
ಶ್ವಾಸಕೋಶಗಳಲಿ ಮನೆಮಾಡಿ
ಅಟ್ಟಹಾಸ ಮೆರೆದಿದೆ
ಸಂಬಂಧಿ ಇಲ್ಲದ ಶವಗಳ ಮೇಲೆ
ಅನಾಥತೆ ಹೊದ್ದು ಮಲಗಿ
ಮನುಷ್ಯತ್ವದ ಪರೀಕ್ಷೆ ನಡೆಸಿದೆ

ದುಡಿಯುವ ಕೈಗಳ ಕಟ್ಟಿ
ಹಸಿವುಗಳದೇ ರಣಕೇಕೆ
ಮಾಮೂಲಿಯಾಗಿದೆ ಕೇಳಿಸಿಕೊಳ್ಳುವುದು
ಈ ನಡುವೆ
ಬಂಡವಾಳ ಬಡಾವಣೆ ಜನರಿಗೆ ಹಬ್ಬವಂತೆ

ಮನೆಮನೆಯಿಂದ ಹೊರಟುನಿಂತಿವೆ
ಕೆಜಿಗಟ್ಟಲೇ ತೂಗುವ
ಅರಿಷಿಣ, ಬಿಳಿ ಲೋಹಗಳು
ಹಸಿದೊಡಲಗಳ ಕೂಗು ಕೇಳದ ಇವರಿಗೆ
ಉಣ್ಣದ ಲಿಂಗದ ಮೇಲೆ
ಎಷ್ಟೊಂದು ಭಕುತಿ
ಎಷ್ಟೊಂದು ಕಾಳಜಿ!?


Leave a Reply

Back To Top