ಗಜಲ್

ಗಜಲ್

ರತ್ನರಾಯಮಲ್ಲ

ಅವನಿಯ ಮಡಿಲಲಿ ಮಧುಮಂಚವ ಸಿಂಗರಿಸುತಿರುವೆ
ಗುಲಾಬಿ ದಳಗಳಲಿ ನಿನ್ನ ಅಂದವನು ಆಸ್ವಾದಿಸುತಿರುವೆ

ಶಶಿ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತಿರುವನು
ಬೆಳದಿಂಗಳ ಮತ್ತಲಿ ಮುತ್ತುಗಳನು ಉದುರಿಸುತಿರುವೆ

ಬೆವರಿದ ಅಂಗಗಳಿಗೆ ಗಿಡ ಮರಗಳು ಚಾಮರ ಬೀಸುತಿವೆ
ಅದರದ ಜೇನಿನಲಿ ದೇಹದ ಭೂಪಟವನ್ನೆ ನೆನೆಸುತಿರುವೆ

ತಾರೆಗಳು ಕಿಲ ಕಿಲ ನಗುತಿವೆ ಜೋಡಿಗಳ ಮಿಲನ ಕಂಡು
ನಿನ್ನಯ ಮಡಿಲಲ್ಲಿ ಪ್ರೀತಿಯ ಹೊಳೆಯನ್ನೆ ಹರಿಸುತಿರುವೆ

‘ಮಲ್ಲಿ’ ಮೈಮಾಟದಲಿ ರವಿ ಮರೆತಿರುವನು ಉದಯಿಸಲು
ಬಾಹುಗಳ ಪಲ್ಲಕ್ಕಿಯಲ್ಲಿ ಪ್ರೇಮ ಕಾವ್ಯವನ್ನೆ ರಚಿಸುತಿರುವೆ


Leave a Reply

Back To Top