ಅಂಕಣ ಸಂಗಾತಿ

ಚಾಂದಿನಿ

ತುರಿಮಣೆಗೊಂದು ಸೈಲೆನ್ಸರ್ ಬೇಕಾಗಿದೆ!

ನನ್ನ ತುರಿಮಣೆಗೊಂದು ಸೈಲೆನ್ಸರ್ ಹಾಕಿಸಬೇಕೆಂದು ನನಗೆ ಆಗಾಗ ಅನಿಸುವುದುಂಟು. ಏಕಂದರೆ ನನ್ನ ಮನೆಯಲ್ಲಿ ಇದು ಸೌಂಡ್ ಮಾಡುವುದು ಹೊತ್ತಲ್ಲದ ಹೊತ್ತಿನಲ್ಲಿ. ಮಾಮೂಲಿ ಎಲ್ಲರೂ ಊಟಮಾಡಿ ಅದು ಕರಗುವ ಹೊತ್ತಿಗೆ ನನ್ನ ಅಡುಗೆ ಮನೆಯಲ್ಲಿ ಪಾತ್ರೆಗಳು, ಮಿಕ್ಸಿ, ತುರಿಮಣೆ ಎಲ್ಲವೂ ಎದ್ದೆದ್ದು ಕುಣಿಯಲಾರಂಭಿಸುತ್ತವೆ.

ಯಾರಿಗೂ ಕೇಳಬಾರದೆಂದು ಮೆಲ್ಲನೆ ಹಗೂರಕ್ಕೆ ನಿಧಾನವಾಗಿ ತೆಂಗಿನಕಾಯಿ ತುರಿದರೂ 90% ಕೆಳಗಡೆ ಮನೆಯಿಂದ ನಮ್ಮ ಮನೆ ಓನರ್ ಚಿಕ್ಕಮ್ಮನ ಫೋನ್ ಬಂದೇ ಬರುತ್ತದೆ. ಹೀಗಿರುತ್ತದೆ ನಮ್ಮ ಸಂಭಾಷಣೆ.

ಅತ್ತಲಿಂದಏನು ಚಂದ್ರಕ್ಕ ಭಾರೀ ಕಾರಿ ತುರಿತಾ ಇದ್ದೀರಿ. ಗಮ್ಮತ್ ಇದೆಯಾ

ಇತ್ತಲಿಂದ: ಎಂತ ಗಮ್ಮತ್ ಚಿಕ್ಕಮ್ಮಾ, ಎಲ್ಲರೂ ಕಾಯಿ ತುರಿವಾಗ ನಾನು ಚಿಪ್ಪನ್ನಾದರೂ ತುರಿಯಬೇಕಲ್ಲಾ. ಏನಾದರೂ ತಿನ್ನದಿದ್ದರೆ ಹೊಟ್ಟೆ ಕೇಳುದಿಲ್ಲವಲ್ಲಾ

ಅತ್ತಲಿಂದ: ಸಾರೆಂತ

ಇತ್ತಲಿಂದ: ಬೀನ್ಸ್ ಪಲ್ಯ (ಹೆಚ್ಚಾಗಿ. ಕೆಲವೊಮ್ಮೆ ಏನಾದರೂ ಸುಲಭದಲ್ಲಿ ಮಾಡುವಂತದ್ದು)

ಅತ್ತಲಿಂದ: ಏನು ಇಷ್ಟು ಲೇಟ್

ಇತ್ತಲಿಂದ: ಕೆಲ್ಸ ಇತ್ತು. ಕಂಪ್ಯೂಟರೊಳಗೆ ಬಿದ್ದು ಹೋಗಿದ್ದೆ

ಅತ್ತಲಿಂದ: ಇನ್ನು ಯಾವಾಗ ನೀವು ಪಲ್ಯ ಮಾಡಿ ಊಟ ಮಾಡೋದು. ಅಲ್ಲಿ ಏಣಿ ಬಳಿ ಬನ್ನಿ ನಾನು ಸಾರು ಕೊಡ್ತೇನೆ

ಇತ್ತಲಿಂದ: ಆಯ್ತು ಚಿಕ್ಕಮ್ಮಾ. ಬರ್ತೇನೆ. ಸ್ವಲ್ಪ ಸಾಕು. (ಇತ್ಲಾಗೆ ನಾನು ಕತ್ತರಿಸಿಟ್ಟ ತರಕಾರಿ, ಅರ್ಧ ಹೆರೆದ ತೆಂಗಿನಕಾಯಿ ಎಲ್ಲ ಮರಳಿ ವಾಪಾಸ್ ಫ್ರಿಜ್ಜೊಳಕ್ಕೆ)

ಇದು ಸಾಮಾನ್ಯಕ್ಕೆ ನಾನು ಹೊತ್ತಲ್ಲದ ಹೊತ್ತಲ್ಲಿ ಸಾರು ಮಾಡಲು ಹೊರಟಾಗ ನಡಿವ ಪ್ರಸಂಗ. ನಮ್ಮ ಓನರ್ ಚಿಕ್ಕಮ್ಮ-ಚಿಕ್ಕಪ್ಪಂದು ತುಂಬ ಶಿಸ್ತಿನ ಜೀವನ ಶೈಲಿ. ಮುಂಜಾನೆ ಎದ್ದು ಐದು ಗಂಟೆಗೆಲ್ಲಾ ವಾಕಿಂಗ್ ಹೊರಡುವುದರಿಂದ ಹಿಡಿದು ರಾತ್ರಿ ಹತ್ತಕ್ಕೆ ನಿದ್ರಿಸುವ ತನಕ ಎಲ್ಲವೂ ಸಮಯಕ್ಕೆ ತಕ್ಕಂತೆ ಕ್ರಮಪ್ರಕಾರವೇ ಜರುಗುತ್ತದೆ. ಹಾಗಾಗಿ ನನ್ನ ಈ ಕಾಯಿ ಹೆರೆಯುವ ಸಮಯ ಮಧ್ಯಾಹ್ನ ಊಟದ ಬಳಿಕದ ಅವರ ಸಣ್ಣದೊಂದು ಕೋಳಿ ನಿದ್ರೆಯ ಸಮಯ. ಹಾಗಾಗಿ ಎಷ್ಟೇ ಜಾಗ್ರತೆಯಿಂದ ಶಬ್ದ ಆಗದಂತೆ ನಾನು ತುಂಬಾ ಕಾನ್ಶಿಯಸ್‌ನಿಂದ ಏನಾದರೂ ಮಾಡಲು ಹೋದರೆ ಕೈಯಿಂದ ಪಾತ್ರೆಪಡಗ ಜಾರಿಬಿದ್ದು ಊರಿಡೀ ಶಬ್ದ ಆಗುತ್ತದೆ. ಕೆಲವೊಮ್ಮೆ ಪಾತ್ರೆಗಳು ಉರುಳುವ ಅಥವಾ ಕಾಯಿ ಹೆರೆಯುವ ಸೌಂಡಿಗೇ ಅವರಿಗೆ ಎಚ್ಚರ ಆಗುತ್ತದೆಯೋ ಏನೋ. ಆದರೆ ನನಗೆ ಮುಜುಗರವಾಗಬಾರದೆಂದು ಅದು-ಇದೂ ತಮಾಷೆ ಮಾತನಾಡಿ ಕರ್ದು ಸಾರು ಕೊಡೋದು ಅವರ ದೊಡ್ಡ ಮನಸ್ಸು. ಇದು ಬರೀ ಸಾರಿಗೇ ಸೀಮಿತ ಅಲ್ಲ. ಏನಾದರೂ ವಿಶೇಷ ಇದ್ದರೆ ನಂಗೆ ಅದರಲ್ಲಿ ಒಂದು ಪಾಲು ಗ್ಯಾರಂಟಿಯಾಗಿ ಉಂಟು ಎಂದೇ ಲೆಕ್ಕ. ರಾತ್ರಿ ವೇಳೆ ಮರುದಿನದ ತಿಂಡಿಗೆ ಅಕ್ಕಿ ನೆನೆಹಾಕುವಾಗಲೂ ನನ್ನ ಲೆಕ್ಕ ಇರುತ್ತದೆ.

ನಾನು ಸ್ವಲ್ಪ ಸೂರ್ಯವಂಶದವಳು. ಎಲ್ಲರೂ ಎದ್ದು ಕಾಫಿ-ತಿಂಡಿ ಆಗಿ ಅವರವರ ಕೆಲಸದಲ್ಲಿ ತೊಡಗುವ ವೇಳೆಗೆ ನನಗೆ ಮೆಲ್ಲನೆ ಬೆಳಗಾಗುತ್ತದೆ. ಉದಾಸೀನದಲ್ಲೇ ನಿದ್ದೆಗಣ್ಣಲ್ಲೇ ಎದ್ದು ನಿತ್ಯಾ ಕರ್ಮಾದಿಗಳನ್ನು ಮುಗಿಸಿ ಅಡುಗೆ ಮನೆಗೆ ಹೋಗಿ ಪಾತ್ರೆಗಳು ಕಣಕಣವಾಗುವ ವೇಳೆಗೆ ಸೂರ್ಯ ಸುಮಾರು ದೂರ ಕ್ರಮಿಸಿರುತ್ತಾನೆ. ಹೆಚ್ಚಾಗಿ (ವಾರಕ್ಕೆ ಕನಿಷ್ಠ ನಾಲ್ಕುದಿನವಾದರು) ಬೆಳಿಗ್ಗೆ ಚಿಕ್ಕಮ್ಮನ ಫೋನ್ ಬಂದೇ ಬರುತ್ತದೆ. ಎದ್ದಿದ್ದೀರಾ, ಕೆಲಸ ಇದೆಯಾ, ಕಾಫಿ ಆಯ್ತಾ, ಏನು ತಿಂಡಿ ಎಂಬೆಲ್ಲ ಉಪಚಾರದ ಮಾತುಗಳಾದ ಬಳಿಕ ಎರಡು ರೊಟ್ಟಿ ಇದೆ, ಎರಡು ಪುಂಡಿ ಇದೆ, ಎರಡು ದೋಸೆ ಇದೆ…. ಹೀಗೆ ಆ ದಿನದ ತಿಂಡಿ ಏನೆಂದು ಹೇಳಿ, ಅಲ್ಲಿ ಏಣಿ ಬಳಿ ಬನ್ನಿ ಅಂತ ಕರೆದು ಪಾರ್ಸೆಲ್ ಕೊಡ್ತಾರೆ. ಅವರ ಮಾತಲ್ಲಿ ಬರೀ ಎರಡೇ ಆಗಿದ್ದರೂ ಟಿಫನ್ ಬಾಕ್ಸ್ ಮುಚ್ಚಳ ತೆರೆದು ನೋಡಿದರೆ ಅದರಲ್ಲಿ ಇಬ್ಬರಿಗಾಗುವಷ್ಟು ಇರುತ್ತದೆ. ನಾನು ಕೆಲವೊಮ್ಮೆ ಈ ಚಿಕ್ಕಮ್ಮನಿಗೆ (ನಿವೃತ್ತ ಶಿಕ್ಷಕಿ) ಲೆಕ್ಕ ಬರುದಿಲ್ಲ ಅಂತ ಸೊಕ್ಕಿನ ತಮಾಷೆ ಮಾಡುವುದುಂಟು. ಈ ಸ್ಟಾರ್ ಹೋಟೇಲ್‌ಗಳಲ್ಲೆಲ್ಲ ಕಾಂಪ್ಲಿಮೆಂಟರಿ ಬ್ರೇಕ್‌ಫಾಸ್ಟ್ ಇದ್ದಂತೆ, ನನಗೆ ಬಾಡಿಗೆ ಮನೆಯಲ್ಲಿರುವುದಕ್ಕೆ ಕಾಂಪ್ಲಿಮೆಂಟರಿ, ತಿಂಡಿ, ಸಾರು, ಕೆಲವೊಮ್ಮೆ ಊಟ ಎಲ್ಲ.

Gallery - House in Kiyone / Tomoyuki Uchida - 11 | Exterior stairs, Staircase  outdoor, Outdoor stairs

ಸತ್ಯ ಹೇಳೋದಾದರೆ ಅಲ್ಲಿ ಏಣಿ ಎಂಬುದು ಇಲ್ಲವೇ ಇಲ್ಲ. ಮೇಲೆ ಮಹಡಿಗೆ ಹೋಗಲು ಮೆಟ್ಟಿಲುಗಳಿವೆ. ಎಡ ಬಲ – ಹೀಗೆ ಎರಡೂ ಬದಿಯಿಂದಲೂ ಮೆಟ್ಟಿಲುಗಳಿವೆ. ಒಂದು ಕಾರ್ ಶೆಡ್ಡ್ ಬಳಿ. ಇನ್ನೊಂದು ಆ ಬದಿಯಲ್ಲಿ ಬಟ್ಟೆ ಒಗೆಯುವ ಕಲ್ಲಿನ ಬಳಿ. ಅದು ನಮ್ಮಿಬ್ಬರಿಗೆ ಯಾವ ಗಳಿಗೆಯಲ್ಲಿ, ಯಾವ ಲೆಕ್ಕದಲ್ಲಿ ಏಣಿ ಆಗಿದೆಯೋ, ಮೆಟ್ಟಿಲುಗಳಿಗೇ ಗೊತ್ತು! ಸಮಯ ಸಂದರ್ಭ ನೋಡಿ ಯಾವ ಏಣಿ ಬಳಿ ಹೋಗಬೇಕೆಂದು ಚಿಕ್ಕಮ್ಮ ಕೊಡುವ ಸೂಚನೆ ಮೇರೆಗೆ, ಅಲ್ಲಿಗೆ ಹೋಗಿ ತಂದು – ಗಡದ್ದಾಗಿ ತಿಂದು ನನ್ನ ಕೆಲಸ ಶುರುವಿಕ್ಕಿಕೊಳ್ಳುತ್ತೇನೆ. ನನಗೆ ಅರ್ಜೆಂಟ್ ಡೆಡ್‌ಲೈನ್ ಇದ್ದರೆ (ನಾನು ಫ್ರೀಲಾನ್ಸ್ ಟ್ರಾನ್ಸ್‌ಲೇಟರ್. ಹಾಗಾಗಿ ನನ್ನ ಕೆಲಸಕ್ಕೆ ಹೊತ್ತುಗೊತ್ತುಗಳು ಇರುವುದಿಲ್ಲ) ಮಧ್ಯಾಹ್ನದ ಸಾರಿಗೂ ಬೆಳಗ್ಗೆಯೇ ಸ್ಕೆಚ್ ಹಾಕಿರುತ್ತೇನೆ. ಇವತ್ತು ತುಂಬ ಕೆಲ್ಸ ಇದೆ ಚಿಕ್ಕಮ್ಮಾ, ಅರ್ಜೆಂಟ್ ಡೆಡ್‌ಲೈನ್ ಅಂತ ಹೇಳಿದ್ರೆ ಮಧ್ಯಾಹ್ನದ ಸಾರೂ ಸಹ ಬೇಕೂಂತ ಲೆಕ್ಕ. ಕೊಟ್ಟದ್ದನ್ನು ತಂದು ಬಾಯ್ಮುಚ್ಚಿ ತಿನ್ನುವುದು ಮಾತ್ರ ಅಲ್ಲ; ಒಮ್ಮೊಮ್ಮೆ ಅದರ ಫೋಟೋ ಕ್ಲಿಕ್ ಮಾಡುವುದೂ ಇದೆ. ಫೋಟೋ ತೆಗೆದ ಮೇಲೆ ಸ್ಟೇಟಸ್ ಹಾಕ್ಕೊಳ್ಳೋದು ಬೇಡವಾ? ಒಟ್ಟಿಗೆ ಕ್ಯಾಪ್ಷನ್ – ಎ ಹೋಮ್ ಅವೇ ಫ್ರಂ ಹೋಮ್; ಎ ಮೋಮ್ ಅವೇ ಫ್ರಂ ಮೋಮ್!

ಮೊದಮೊದಲಿಗೆ ಫೋನ್ ಮಾಡಿದಾಗೆಲ್ಲ ಒಂದೇ ಏಟಿಗೆ ಹಾರಿ ಹೋಗಿ ತಿಂಡಿ ತರಲು ಮುಜುಗರವಾಗುತ್ತಿತ್ತು. ಅವರಿಗ್ಯಾಕೆ ತೊಂದರೇಂತ ಒಂತರಾ ಅನಿಸುತ್ತಿತ್ತು. ಹಾಗಾಗಿ “ಛೇ… ನಿಮಗೆ ತೊಂದರೆ, ಅಲ್ಲ…… ನಾನೂ ಅಡುಗೆ ಮಾಡುತ್ತೇನೆ, ಸ್ವಲ್ಪ ಲೇಟು, ……. ಅದೂ ಇದೂ ಅಂತೆಲ್ಲ ತೊದಲುತ್ತಿದ್ದೆ. ಆಗೆಲ್ಲ, ಅದರಲ್ಲಿ ಏನುಂಟು, ಇರೋದನ್ನು ಕೊಡೋದಲ್ವಾ, ನಿನಗಾಗಿ ಏನು ಸ್ಪೆಷಲ್ ಮಾಡೋದಲ್ವಲ್ಲಾ ಅಂತ ಚಿಕ್ಕಪ್ಪನೂ ಒಗ್ಗರಣೆ ಹಾಕುತ್ತಿದ್ದರು. ನಂತರದಲ್ಲಿ ಕ್ರಮೇಣ ಅವರ ಟೈಮು ಎನರ್ಜಿ ಎಲ್ಲ ವೇಸ್ಟಾಗೋದು ಬೇಡಾ ಅಂತ ಡೈರೆಕ್ಟಾಗಿ ವಿಷಯಕ್ಕೇ ಬಂದು, ಯಾವ ಏಣಿ ಬಳಿ ಬರಬೇಕು ಅಂತ ಕೇಳುವಲ್ಲಿಗೆ ಬಂದು ತಲುಪಿದೆ. ನನ್ನನ್ನು ಕಾಣುವಾಗ ಅವರೇನಾದರೂ ನನ್ನ ಹೆಸರೇಳಿದರೆ, ಗುಡಿಸುತ್ತಾ ಇದ್ದರೂ ಪೊರಕೆಯನ್ನು ಅಲ್ಲೇ ಹಾಕಿ “ಏಣಿ ಬಳಿ ಬರಬೇಕಾಂತ” ಕೇಳುವಷ್ಟರ ಮಟ್ಟಿಗೆ ಲಜ್ಜಾಹೀನಳಾಗಿದ್ದೇನೆ. ಅವರು ಸುಮ್ಮನೆ ಮಾತನಾಡಿಸುವ ಕ್ರಮವೂ ಇದೆ. ನನ್ನನ್ನು ಮಾತ್ರವಲ್ಲ ಕಾಂಪೌಂಡಿನಲ್ಲಿರುವ ಎಲ್ಲರನ್ನೂ. ಅದರೆ ನನ್ನ ತಲೆಯೊಳಗೆ ಸ್ಟ್ರಾಂಗಾಗಿ ಇರೋದು ಮಾತ್ರ ‘ಏಣಿಬಳಿ’. ಅದೊಂದು ದಿನ ನಾನು ಮುಂಜಾನೆ ಕಂಪ್ಯೂಟರ್ ಓಪನ್ ಮಾಡಿ ಯಾವುದೋ ಇಮೇಲ್‌ಗೆ ಸೀರಿಯಸ್ಸಾಗಿ ರಿಪ್ಲೈ ಮಾಡ್ತಾ ಇದ್ದೆ. ಅಷ್ಟರಲ್ಲಿ ನನ್ನ ಫೋನ್ ರಿಂಗಣಿಸಿ ಅವರ ಹೆಸರು ತೋರಿಸಿತು. ಯಾವುದೋ ದ್ಯಾಸದಲ್ಲಿ ಫೋನ್ ಕಿವಿಗಿರಿಸಿಕೊಂಡೇ ಏಣಿ ಬುಡದಲ್ಲಿ ಹೋಗಿ ನಿಂತೆ. ಮತ್ತೆ ನೋಡಿದ್ರೆ ಅವರಿಗೆ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಲ್ಲಿ ನನ್ನ ಅಕ್ಕಭಾವ ಸಿಕ್ಕಿದ್ರಂತೆ. ಅದನ್ನು ಹೇಳಲು ಅವರು ಫೋನ್ ಮಾಡಿದ್ದು!

ಈ ನನ್ನ ಚಿಕ್ಕಮ್ಮ ನನ್ನನ್ನು ಹೀಗೆ ಸಾಕುವ ಪುಣ್ಯದ ಸಂಗತಿ ನನ್ನ ಕುಟುಂಬಿಕರು, ಸ್ನೇಹಿತರು, ಕೆಲವು ಸಂಬಂಧಿಗಳು ಎಲ್ಲರಿಗೂ ಗೊತ್ತು. ನನ್ನ ಕ್ಷೇಮ ಸಮಾಚಾರಕ್ಕಾಗಿ ಅಥವಾ ಇನ್ನೆನಕ್ಕಾದರೂ ಯಾರಾದರೂ ಫೋನ್ ಮಾಡಿ ಮಾತಾಡುತ್ತಾ, ಊಟ ಆಯ್ತೋ, ಕಾಫಿ ಆಯ್ತೋ ಅಂತೆಲ್ಲ ವಿಚಾರಿಸಿದರೆ, ನಾನು ಇತ್ತಲಿಂದ ಸತ್ಯವನ್ನೇ ಹೇಳುತ್ತೇನೆ. ಹೌದು, ಚಿಕ್ಕಮ್ಮ ಪುಂಡಿ ಕೊಟ್ರು, ಕಣಿಲೆ ಸಾರು ಕೊಟ್ರು, ಹಲಸಿನ ಕಡುಬು ಕೊಟ್ರು ಎಂದೆಲ್ಲ ಹೇಳಿದರೆ, “ನಿಂಗೇನು ಮಾರಾಯ್ತಿ, ನಿನ್ನ ಛಾನ್ಸ್” ಅಂತ ಪ್ರತಿಕ್ರಿಯಿಸುತ್ತಾರೆ. ಇದು ಪ್ರಶಂಸೆಯೋ ಅಥವಾ ವ್ಯಂಗ್ಯವೋ ಎಂಬುದು ಅವರ ಧ್ವನಿಯಲ್ಲೇ ತಿಳಿಯುತ್ತದೆ. ಹಿತೈಷಿಗಳು, ‘ಏನಾದರಾಗಲಿ ಒಳ್ಳೆಯ ಕಡೆಗೆ ಹೋಗಿ ಬಿದ್ದಿದ್ಯಾ’ ಅಂದರೆ, ಪಿಸಾಚಿಗಳು ‘ಬೇಕಾದ್ದು ಮಾಡಿ ತಿನ್ನಲೂ ಆಗದ ಉದಾಸೀನದ ಮಾರಿ’ ಅಂತ ಕನ್‌‌ಕ್ಲೂಡ್ ಮಾಡುತ್ತಾರೆ. ನೀವು ಹುಬ್ಬೇರಿಸಬೇಡಿ.


ಚಂದ್ರಾವತಿ‌ ಬಡ್ಡಡ್ಕ

ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ

Leave a Reply

Back To Top