ಡಾ. ಬಾಬು ಜಗಜೀವನರಾಮ್

ಲೇಖನ

ಡಾ.ಬಾಬು ಜಗಜೀವನ್ ರಾಮ್ ಜನ್ಮದಿನಕ್ಕೆ ವಿಶೇಷ ಲೇಖನ ಡಾ.ಸುಜಾತಾ ಸಿ.

ಡಾ. ಬಾಬು ಜಗಜೀವನರಾಮ್

                ಈ ನೆಲ ಕಂಡ ಮಹಾನ ವ್ಯಕ್ತಿಗಳಾದ ಬುದ್ದ, ಬಸವಣ್ಣ, ಶಾಹುಮಹಾರಾಜ, ಜ್ಯೋತಿಬಾ ಫುಲೆ, ಸಾವಿತ್ರಾ ಫುಲೆ, ಡಾ.ಬಾಬಾ ಸಾಹೇಬ ಅಂಬೇಡ್ಕರ, ಮಹಾತ್ಮ ಗಾಂಧಿಜೀಯಂಥವರು ಬಾಳಿ ಬದುಕಿದ ನಾಡಿದು. ಇನ್ನೂ ಅನೇಕ ಮಹನೀಯರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಡಾ. ಬಾಬಾ ಸಾಹೇಬ ಅಂಬೇಡ್ಕರ ಶ್ರೇಷ್ಠ ಸಮಾಜ ಸುಧಾರಕರು. ಮಹಾನ್ ಬುದ್ದಿ ಜೀವಿ, ಮಹಾ ಮಾನವತಾವಾದಿ. ಮನುಷ್ಯ ಮನುಷ್ಯನನ್ನು ಇಬ್ಭಾಗವಾಗಿ ನೋಡುವ ಅಸಮಾನತೆಯ ದೃಷ್ಟಿಕೋನ, ಮಾನವನನ್ನು ಶೋಷಿಸುವುದನ್ನು ತುಂಬಾ ಕಟುವಾಗಿ ಟೀಕಿಸುವದರ ಮೂಲಕ ಬಾಬಾಸಾಹೇಬರು ಮಾನವತಾವಾದದ ಹಲವು ಮುಖಗಳನ್ನು ಬಯಲಿಗೆಳೆದರು. ಸಾಮಾಜಿಕ ಪ್ರಜ್ಞೆ ಮತ್ತು ಕಳಕಳಿ ಮೌಲ್ಯಗಳಲ್ಲಿ ಅಖಂಡ ನಂಬಿಕೆ ವಿಶ್ವಾಸವನ್ನು ತಮ್ಮ ಈಡೀ ಜೀವನದಲ್ಲಿ ಅಳವಡಿಸಿಕೊಂಡು ಬಂದ ಮಹಾನ ಚೇತನ. ಇವರ ಸಾಲಿನಲ್ಲಿಅ ತಮ್ಮೊಬ್ಬ ಮಹನೀಯ ಡಾ.ಬಾಬು ಜನಜೀವನರಾಮ್.

ಬಿಹಾರ ರಾಜ್ಯದ ಆರಾ ಜಿಲ್ಲೆಯ ಚಾಂದ್ವಾ ಎಂಬ ಗ್ರಾಮದಲ್ಲಿ ಎಪ್ರೀಲ್ ೫, ೧೯೦೮ ರಂದು ಶೋಭಿರಾಮ್ ಮತ್ತು ವಾಸಂತಿ ದೇವಿಯರ ಮಗನಾಗಿ ಜಗಜೀವನರಾಮ್ ಜನಿಸಿದರು. ನಾಲ್ಕು ಜನ ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳು. ಹಿರಿಯ ಅಣ್ಣ ಸಂತಲಾಲನು ಕಲ್ಕತ್ತೆಯಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದನು. ಎರಡನೇ ಮಗನು ಕ್ಷಯರೊಗದ ಕಾರಣದಿಂದ ತೀರಿಹೋಗುತ್ತಾನೆ. ಮೂರನೇ ಮಗನೇ ಜಗಜೀವನರಾಮ್. ಶೋಭಿರಾಮರಿಗೆ ಒಟ್ಟು ಏಳು ಜನ ಮಕ್ಕಳು. ಜಗಜೀವನರಾಮ ಹುಟ್ಟಿದಾಗ ಶೋಭಿರಾಮರಿಗೆ ಆರೋಗ್ಯ ಹದಗೆಟ್ಟಿರುತ್ತದೆ. ಕಿತ್ತು ತಿನ್ನುವ ಬಡತನದಲ್ಲಿ ಮಕ್ಕಳ ಹೊಟ್ಟೆ ತುಂಬಿಸುವುದು ದುಸ್ತರವಾಗಿತ್ತು. ತಮ್ಮ ಕಡು ಬಡತನದಲ್ಲೆ ಜಗಜೀವನರಾಮನನ್ನು ಓದಿಸಬೇಕೆಂಬ ಹೆಬ್ಬಯಕೆ ತಂದೆಯದಾಗಿತ್ತು.

ಸಂತ ಪರಂಪರೆಯನ್ನು ಮೈಗೂಡಿಸಿಕೊಂಡು ಬಂದ ಇವರ ಕುಟುಂಬ ಶಿವನಾರಾಯಣೀ ಪಂಥದ ಆ ಸಂತ ಭಜನೆ ಮಾಡುತ್ತಿದ್ದರು. ಜಗಜೀವನರಾಮ ಹುಟ್ಟಿದ ಊರಲ್ಲಿ ಬ್ರಾಹ್ಮಣರೇ ಅಧಿಕ ಸಂಖ್ಯೆಯಲ್ಲಿ ಇದ್ದರು. ಶೋಭಿರಾಮರು ಭಜನೆ ಮಾಡುತ್ತಿದ್ದರೆ ಎಲ್ಲರೂ ಭಕ್ತಿ ಗೌರವದಿಂದ ಕೇಳುತ್ತಿದ್ದರು. ಶಿವನಾರಾಯಣಿ ಪಂಥದ ಗುರುವಾಗಿದ್ದ ಶೋಭಿರಾಮರು ಸುಂದರ ಸಾಹಿತ್ಯ ಕೂಡಾ ರಚಿಸಬಲ್ಲವರಾಗಿದ್ದರು. ಅಲ್ಲದೆ ಕುಸುರಿ ಚಿತ್ರ ಕಲೆಯಲ್ಲಿಯೂ ಪರಿಣಿತಿಯನ್ನು ಪಡೆದಿದ್ದರು. ಅವರ ಈ ಹವ್ಯಾಸ ಅವರನ್ನು ಕೈ ಬಿಡಲಿಲ್ಲ. ಅದೇ ಅವರ ಜೀವನಕ್ಕೆ ದಾರಿ ತೋರಿಸಿತ್ತು. ಶಿವನಾರಾಯಣರ ಬೋಧ ಗ್ರಂಥಗಳನ್ನು ಚಿತ್ರ ಸಮೇತ ಬರೆದು ಅವುಗಳನ್ನು ಮಾರಿ ಕುಟುಂಬವನ್ನು ಮತ್ತು ಮಗನ ಓದನ್ನು ನಿರ್ವಹಿಸುತ್ತಿದ್ದರು.

೧೯೧೪ ರಲ್ಲಿ ಜಗಜೀವನರಾಮ ಆರು ವರ್ಷದವನಾಗಿದ್ದಾಗ ಅವರ ತಂದೆ ಶಾಲೆಗೆ ದಾಖಲಿಸಿದರು. ಗ್ರಾಮದ ಹಿರಿಯ ಬ್ರಾಹ್ಮಣರೊಬ್ಬರಾದ ಪಂಡಿತ ಕಪಿಲ ಮುನಿ ತಿವಾರಿಯವರ ಮನೆಯೇ ಪಾಠಶಾಲೆಯಾಗಿತ್ತು. ಪಂಡಿತ ಕಪಿಲ ಮುನಿ ತಿವಾರಿಯವರು ಯಾವದೇ ಧರ್ಮ ಮತ್ತು ಜಾತಿಗೆ ಅಂಟಿಕೊಂಡ ವ್ಯಕ್ತಿಯಾಗಿರಲಿಲ್ಲ. ಎಲ್ಲರನ್ನು ಸಮವಾಗಿ ಕಾಣುವ ವ್ಯಕ್ತಿತ್ವ ಅವರದ್ದಾಗಿತ್ತು. ಹೀಗಾಗಿ ಜಗಜೀವನರಾಮ ಅವರು ಓದುವದಕ್ಕೆ ಮುನ್ನುಡಿಯಾಯಿತು. ಗುರುವಿನ ಮತ್ತು ತಂದೆಯ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಮೊದಲ ಹೆಜ್ಜೆಯಲ್ಲಿಯೇ ಜಗಜೀವನರಾಮ ಯಶಸ್ಸನ್ನು ಸಾಧಿಸಿದ್ದನು.

                ಶೋಭಿರಾಮರ ಆರೋಗ್ಯ ಮತ್ತಷ್ಟು ಹದಗೆಡುತ್ತದೆ ತಾನು ಉಳಿಯುವದಿಲ್ಲವೆಂಬ ಸತ್ಯ ಗೊತ್ತಾಗಿ ಹೆಂಡತಿ ವಾಸಂತಿದೇವಿಗೆ ತನ್ನ ಮನದಾಳದ ಮಾತನ್ನು ಹೇಳುತ್ತಾನೆ. ಜಗಜೀವನರಾಮನನ್ನು ಚನ್ನಾಗಿ ಓದಿಸುವ ಕರ್ತವ್ಯ ನಿನ್ನದು ಏನೇ ಕಷ್ಟ ಬಂದರು ಇದನ್ನು ಮಾತ್ರ ಬಿಡಬೇಡಾ ಎಂದು ಮಾತನ್ನು ತೆಗೆದುಕೊಳ್ಳುತ್ತಾನೆ. ಅವನನ್ನು “ಚನ್ನಾಗಿ ಓದಿಸುತ್ತೇನೆ ಅದಕ್ಕಾಗಿ ಯಾವ ತ್ಯಾಗಕ್ಕಾದರೂ ಸಿದ್ದ” ಎಂದು ಗಂಡನಿಗೆ ಮಾತನ್ನು ಕೊಡುತ್ತಾಳೆ. ಶೋಭಿರಾಮ ತೀರಿಹೋಗುತ್ತಾನೆ. ಚಿಕ್ಕ ಬಾಲಕನಿಗೆ ಇದರ ಯಾವ ಪರಿವೆ ಇರುವದಿಲ್ಲ. ವಾಸಂತಿದೇವಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾಳೆ. ಚಿಕ್ಕ ಮಕ್ಕಳೊಂದಿಗೆ ವಾಸಂತಿದೇವಿ ತುಂಬ ಕಷ್ಟವನ್ನು ಅನುಭವಿಸುತ್ತಾಳೆ.

How Morarji Desai outwitted Jagjivan Ram and Charan Singh - Open The  Magazine

ಅಸ್ಪೃಷ್ಯರಿಗೆ ಶಿಕ್ಷಣವೆಂಬುದು ಗಗನ ಕುಸುಮವೇ ಆಗಿತ್ತು. ಶಾಲೆಯಲ್ಲಿ ಕುಳಿತುಕೊಂಡು ಶಿಕ್ಷಣವನ್ನು ಪಡೆಯುವಂತೆ ಇರಲಿಲ್ಲ. ಒಬ್ಬರಿಗೊಬ್ಬರು ಮಾತನಾಡಿದರೂ ಕೂಡಾ ಮೈಲಿಗೆ ಆಗುವಂಥಹ ಕಾಲಘಟ್ಟವದು. ಒಬ್ಬರಿಗೊಬ್ಬರು ಮುಟ್ಟುವ ಹಾಗೆ ಇರಲಿಲ್ಲ. ಇತಂಹ ಸಂದರ್ಭದದಲ್ಲಿ ಶಿಕ್ಷಣ ಕಲಿಯುವುದು ಹೇಗೆ? ಅಂತಹ ಪರಿಸ್ಥಿತಿಯಲ್ಲಿ ವಾಸಂತಿಬಾಯಿ ದೈರ್ಯ ಮಾಡಿ ಮಗನನ್ನು ಶಿಕ್ಷಣದ ಕಡೆಗೆ ಕರೆದೊಯ್ಯದದ್ದು ಸಾಹಸವೇ ಸರಿ. ಮೇಲ್ವರ್ಗದವರ ಶೋಷಣಿಗೆ ಗುರಿಯಾಗಿ ಎಲ್ಲ ಸವಲತ್ತುಗಳಿಂದ ವಂಚಿತರಾಗಿ ಬದುಕು ಕಟ್ಟಿಕೊಳ್ಳಲು ಹೆಣಗುವುದು  ಸಾಹಸವೇ ಆಗಿತ್ತು. ಅಂತಲೇ ಜಗಜೀವನರಾಮ ತಮ್ಮ ಜೀವನದ ಉದ್ದಕ್ಕೂ ತಮ್ಮ ಶಿಕ್ಷಣ, ರಾಜಕೀಯದಲ್ಲಿ ಮುಖಂಡನಾಗಲೂ ನನ್ನ ತಾಯಿಯೇ ಕಾರಣವೆಂದು ಪದೇ ಪದೇ ನೆನೆಯುತ್ತಾರೆ. ಅಂತೇಯೇ ತಮ್ಮ ದಿನನಿತ್ಯದ ಬೆಳಗಿನಲ್ಲಿ ತಾಯಿಯ ದರ್ಶನವಾಗಲೆಂದೇ ತಮ್ಮ ಮನೆಯ ಆವರಣದಲ್ಲಿ ತಮ್ಮ ತಾಯಿ ವಾಸಂತಿದೇವಿಯ ಪ್ರತಿಮೆಯನ್ನು ಇಟ್ಟುಕೊಂಡಿದ್ದರು. ಇಂತಹ ತಾಯಿ ಕೊಟ್ಟ ಶಿಕ್ಷಣವನ್ನು ಮುಂದುವರೆಸಿ ೧೯೧೯ ರಲ್ಲಿ ೧೧ನೇ ವರ್ಷದವನಿರುವಾಗ ಪ್ರಾಥಮಿಕ ವಿದ್ಯಾಬ್ಯಾಸವನ್ನು ಪೂರ್ಣಗೊಳಿಸಿದರು. ೧೯೨೦ ರಲ್ಲಿ ಮಾಧ್ಯಮಿಕ ಶಾಲೆಗೆ ಸೇರಿದರು. ಅವರ ಓದಿನ ಹಂತದಲ್ಲಿ ಹಿಂದಿ ಅವರ ಅಚ್ಚುಮೆಚ್ಚಿನ ವಿಷಯವಾಗಿತ್ತು. ಆದರೆ ಇಂಗ್ಲೀಷ ಮಾತ್ರ ಕಠಿಣವಾಗಿತ್ತು. ಇಂಗ್ಲೀಷನ್ನು ಕಲಿಯಲೇ ಬೇಕೆಂಬ ಹಠದಿಂದ ಇಂಗ್ಲೀಷ ಪದಗಳನ್ನು ಹಿಂದಿಯಲ್ಲಿ ಬರೆದು ಓದುವದನ್ನು ರೂಢಿಸಿಕೊಂಡರು. ಹಾಗೇ ಬರೆದ ಹಿಂದಿ ಪದಗಳನ್ನು ಮತ್ತೇ ಇಂಗ್ಲೀಷಿನಲ್ಲಿ ಬರೆಯುವದನ್ನು ಕಲಿತುಕೊಂಡರು. ಓದಿನ ಹಪಹಪಿಯನ್ನು ಕಲಿಯಲೇ ಬೇಕೆಂಬ ಅವರ ಉತ್ಸಾಹ ಇಮ್ಮಡಿಗೊಂಡಿತು. ಓದನ್ನು ಸವಾಲಾಗಿ ಸ್ವೀಕರಿಸಿ ಮುಂದುವರೆದರು. ಅಂತೇಲೇ ಅವರ ಪರಿಶ್ರಮಕ್ಕೆ ತಕ್ಕ ಹಾಗೇ ತರಗತಿ ಪರೀಕ್ಷೆಯಲ್ಲಿ ಶೇಕಡಾ ೭೨ ಪ್ರತಿಶತ ಅಂಕಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾದರು.

                ಇತ್ತ ಓದು ಸಾಂಗವಾಗಿ ನಡೆಯುತ್ತಿರುವಾಗಲೇ ವೈವಾಹಿಕ ಜೀವನಕ್ಕೆ ಸೇರಬೇಕಾಯಿತು. ಜಗಜೀವನರಾಮ ಎಂಟು ವರ್ಷದವನಿರುವಾಗಲೇ ಮದುವೆಯಾಗುತ್ತದೆ. ಸಂಸಾರಿಕ ಜೀವನದ ಜೊತೆಗೆ ತಂದೆಯಿಂದ ಬಳುವಳಿಯಾಗಿ ಬಂದ ಸಂತರ ಹಾಡುಗಳಿಗೆ ಮನಸೋತಿದ್ದನು ಬಾಲಕ ಜಗಜೀವನರಾಮ. ರಾಮಾಯಣ ಗ್ರಂಥವು ಜಗಜೀವನ ರಾಮ ಅವರಿಗೆ ಅಚ್ಚು ಮೆಚ್ಚಾಗಿತ್ತು. ಪತ್ರಿ ರವಿವಾರ ಹಳ್ಳಿಯ ಜನರಿಗೆ ರಾಮಾಯಣವನ್ನು ಓದಿ ಹೇಳುತ್ತಿದ್ದ. ಅನಕ್ಷರಸ್ಥರಿಗೆ ಬಂದ ಪತ್ರಗಳನ್ನು ಓದುವದು ಮತ್ತು ಬರೆಯುವದನ್ನು ಮಾಡಿತ್ತಿದ್ದನು. ಹೀಗಾಗಿ ಹಳ್ಳಿಯ ಜನಕ್ಕೆ ರಾಮ್ ಅಚ್ಚುಮೆಚ್ಚಾಗಿದ್ದನು. ಚಿಕ್ಕ ವಯಸ್ಸಿನಲ್ಲಿಯೇ ಪ್ರೇಮ ಸಾಗರ್ ಮತ್ತು ಸುಖಸಾಗರ, ಚಂದ್ರಕಾಂತ ಮುಂತಾದವರ ಪುಸ್ತಕಗಳನ್ನು ಓದುವ ಗೀಳನ್ನು ರೂಢಿಸಿಕೊಂಡನು. ಮಹಾತ್ಮಾ ಗಾಂಧಿಯವರ ‘ಯಂಗ್ ಇಂಡಿಯಾ ನಿಯತ ಕಾಲಿಕೆ ಪತ್ರಿಕೆ’ ಓದಿ ತುಂಬಾ ಪ್ರಭಾವಿತನಾದನು. ಗಾಂಧಿಜೀಯವರ ತತ್ವ ಸಿದ್ದಾಂತಗಳು ಇವರ ಮೇಲೆ ಎಷ್ಟು ಪರಿಣಾಮ ಬೀರಿತೆಂದರೆ ತಾವು ಶಾಲೆಗೆ ಹೋಗುವಾಗ ಗಾಂಧಿ ಟೋಪಿಯನ್ನು ಧರಿಸಿಯೇ ಹೋಗಲು ಪ್ರಾರಂಭಿಸಿದರು.   

                ಬಾಲ್ಯದಿಂದಲೇ ಬಾಲಕ ಜಗಜೀವನರಾಮ ಶಾಲೆಯಲ್ಲಿ ಅಸ್ಪೃಷ್ಯನೆಂಬ ಕಾರಣಕ್ಕೆ ತೀರಾ ಅವಮಾನಿಸಲ್ಪಟ್ಟನು. ಬಾಲಕ ಜಗಜೀವನ ರಾಮನನ್ನು ಶಾಲಾ ತರಗತಿಗಳಲ್ಲಿ ಪ್ರತ್ಯೇಕವಾಗಿ ಕೂಡಿಸಲಾಗುತ್ತಿತ್ತು. ಇತರೆ ಕೆಳವರ್ಗದ ಮಕ್ಕಳು ಸಹ ಕುಳಿತುಕೊಳ್ಳುತ್ತಿದ್ದರು. ಜಗಜೀವನ ರಾಮ ಹಿಂದೂ ಹಾಗೂ ಮುಸ್ಲೀಮ ಮಕ್ಕಳೊಂದಿಗೆ ಕೂಡುವ ಹಾಗಿರಲಿಲ್ಲ. ಅವರೊಟ್ಟಿಗೆ ಆಟ, ಪಾಠಗಳಿರಲಿಲ್ಲ. ಅವರೊದುವ ಶಾಲೆಯಲ್ಲಿ ಹಿಂದೂ ಮತ್ತು ಮುಸ್ಲೀಮ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಇದ್ದ ಶಾಲೆಯದು. ಶಾಲೆಯಲ್ಲಿ ಸವರ್ಣಿಯ ಸ್ನೇಹಿತರೊಂದಿಗೆ ಬೇರೆಯುವ ಹಾಗಿರಲಿಲ್ಲ. ತಾವು ಕುಳಿತುಕೊಳ್ಳುವ ಸ್ಥಳ ಬೇರೆ, ಕಲಿಯುವ ವಿಧಾನ ಬೇರೆಯೇ ಆಗಿತ್ತು. ಹಾಗೇ ಕುಡಿಯುವ ನೀರಿನ ವ್ಯವಸ್ಥೆ ಕೂಡಾ ಪ್ರತ್ಯೇಕವಾಗಿತ್ತು. ಹಿಂದೂ ವಿದ್ಯಾರ್ಥಿಗಳಿಗೆ ಒಂದು ನೀರಿನ ಮಡಕೆ ಬೇರೆ ಮುಸ್ಲೀಮ ವಿದ್ಯಾರ್ಥಿಗಳಿಗೆ ಒಂದು ಮಡಿಕೆ ನೀರನ್ನು ಇರಿಸಲಾಗಿತ್ತು. ಹಿಂದೂ ಮಕ್ಕಳಿಗಾಗಿ ಇರಿಸಿದ ಮಡಕೆ ನೀರನ್ನೇ ಇವರು ಸಹ ಕುಡಿಯುತ್ತಿದ್ದರು. ಇದನ್ನು ಗಮನಿಸಿದ ಹಿಂದೂ ವಿದ್ಯಾರ್ಥಿಗಳು ಸಾಕಷ್ಟು ವಿರೋಧವನ್ನು ವ್ಯಕ್ತ ಪಡಿಸಿದರು. ಇದರಿಂದ ಕುಡಿಯುವ ನೀರಿಗಾಗಿ ಕೆಳವರ್ಗದ ಮಕ್ಕಳು ಸಾಕಷ್ಟು ಸಂಕಷ್ಟಕ್ಕೆ ಇಡಾಗಿದ್ದರು. ಬಾಲಕ ಇದನ್ನೇಲ್ಲವನ್ನೂ ಗಮನಿಸಿ ಒಂದು ಉಪಾಯವೆಂಬಂತೆ ಮುಸ್ಲೀಮ ಮಕ್ಕಳಿಗಾಗಿ ಇರಿಸಿದ ನೀರಿನ ಮಡಕೆಯನ್ನು ಯಾರಿಗೂ ಗೊತ್ತಾಗದ ಹಾಗೇ ಒಡೆದು ಹಾಕುತ್ತಾನೆ. ಪ್ರಾಧ್ಯಾಪಕರ ಮುಂದೆ ಹಿಂದೂ ವಿದ್ಯಾರ್ಥಿಗಳು ಒಡೆದು ಹಾಕಿದ್ದಾರೆಂದು ದೂರು ಕೊಡುತ್ತಾನೆ. ಸ್ವಲ್ಪ ದಿನಗಳ ನಂತರ ಹಿಂದೂ ವಿದ್ಯಾರ್ಥಿಗಳ ಮಡಕೆಯನ್ನು ಒಡೆದು ಹಾಕುತ್ತಾನೆ. ಪ್ರಾಧ್ಯಾಪಕರುಗಳಿಗೆ ಈ ಜಗಳ ಕಗ್ಗಂಟಾಗಿ ಪರಿಣಮಿಸುತ್ತದೆ. ಹಿಂದೂ ಮತ್ತು ಮುಸ್ಲೀಮರಿಬ್ಬರಿಗೂ ಒಂದೇ ಮಡಕೆಯ ನೀರಿನ ವ್ಯವಸ್ಥೆಯನ್ನು ಮಾಡುತ್ತಾರೆ. ಹಾಗೇ ಕೆಳವರ್ಗದ ಮಕ್ಕಳು ಅದೇ ಮಡಿಕೆ ನೀರನ್ನೇ ಕುಡಿಯುವಂತೆ ಹೇಳುತ್ತಾರೆ, ಆದರೆ ಹಿಂದೂ ವಿದ್ಯಾರ್ಥಿಗಳು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಪ್ರಾಧ್ಯಾಪಕರು ಯಾರ ಮಾತನ್ನು ಕೇಳದೆ ಬೇಕಾದವರು ಕುಡಿಯಬಹುದು ಬೇಡವಾದವರು ನಿಮ್ಮ ನೀರಿನ ವ್ಯವಸ್ಥೆ ನೀವೇ ಮಾಡಿಕೊಳ್ಳಿ ಎಂದು ಖಡಕ್ಕಾಗಿ ಹೇಳಿದ್ದಕ್ಕೆ ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾರೆ. ಬಾಲಕ ಜಗಜೀವನರಾಮ ತನ್ನ ಮೊದಲ ಕಾರ್ಯದಲ್ಲಿ ಜಯವನ್ನು ಸಾಧಿಸುತ್ತಾನೆ. ಆದರೆ ಪ್ರಾಧ್ಯಾಪಕರಿಗೆ ಸುಳ್ಳು ಹೇಳಿದ್ದಕ್ಕೆ ಒಳಗೊಳಗೆ ಪಶ್ಚಾತಾಪ ಪಟ್ಟುಕೊಳ್ಳುತ್ತಾನೆ. ಸುಳ್ಳು ಹೇಳಿದ್ದಕ್ಕೂ ಎಲ್ಲರಿಗೂ ಕುಡಿಯುವ ನೀರು ಸಿಕ್ಕಂತಾಯಿತಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಾನೆ.      

                 

                ಪ್ರತಿ ವರ್ಷದಂತೆ ಶಾಲಾ ವಾರ್ಷಿಕೊತ್ಸವದ ಒಂದು ಸಂಧರ್ಭದಲ್ಲಿ ವಿದ್ಯಾರ್ಧಿಗಳಿಗೆ ಬಹುಮಾನ ವಿತರಿಸಲಾಗುತ್ತಿತ್ತು. ಸವರ್ಣಿಯ ಮಕ್ಕಳು ಸಿಹಿ ಹಂಚಿ ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿದ್ದರು. ಅಸ್ಪೃಷ್ಯರಾದ ಹರಿಜನ ಮಕ್ಕಳು ಅವರು ಕೊಟ್ಟ ಸಿಹಿಯನ್ನು ತೆಗೆದುಕೊಳ್ಳುತ್ತಿದ್ದರು. ಜಗಜೀವನ ರಾಮ ಕೂಡಾ ದೂರದಲ್ಲೇ ನಿಂತು ಇದನ್ನು ನೋಡುತ್ತಿದ್ದನು. ಶಾಲೆಯ  ಪ್ರಾಧ್ಯಾಪಕ ‘ಬನ್ಸಿಧರ್ ಪ್ರಸಾದ್’ ಜಗಜೀವನರಾಮನನ್ನು ಗಮನಿಸಿ ನೀನು ಸಿಹಿ ಹಂಚು ಹೋಗು ಯಾಕೆ ನಿಂತಿರುವೆ ಎಂದು ಕೇಳುತ್ತಾರೆ. ಅದಕ್ಕೆ ಬಾಲಕ ಜಗಜೀವನರಾಮ ಏನನ್ನೂ ಮಾತನಾಡದೇ ಸುಮ್ಮನೇ ನಿಂತು ಕೊಳ್ಳುತ್ತಾನೆ. ಅಸ್ಷೃಷ್ಯತೆಯ ಬಗೆಗೆ ಬಸ್ಸಿಧರ ಪ್ರಸಾದರಿಗೆ ತಿಳಿದ ವಿಷಯವೇ ಆಗಿತ್ತು ಆದರೆ ಬಾಲಕನನ್ನು ಮುಂದೆ ಬರುವಂತೆ ಅವರ ಪ್ರೋತ್ಸಾಹದ ಕಾರುಣ್ಯ ಅವರಲ್ಲಡಗಿದ್ದ ಕಾರಣ ಅವನನ್ನು ಸಿಹಿ ಹಂಚಲು ಒತ್ತಾಯ ಮಾಡುತ್ತಾರೆ. ನೀನು ಸಿಹಿ ಹಂಚು ಬೇಕಾದವರು ತೆಗೆದುಕೊಳ್ಳುತ್ತಾರೆ ಬೇಡವಾದವರು ಬೀಡುತ್ತಾರೆ ಎಂದು ಹುರಿದುಂಬಿಸಿದಾಗ ಓಡುತ್ತ ಹೋದ ಜಗಜೀವನರಾಮ ಎಲ್ಲ ಮಕ್ಕಳಿಗೆ ಸಿಹಿ ಹಂಚುತ್ತಾನೆ. ಇದರಿಂದ ಬಾಲಕನಿಗೆ ಅತೀವ ಸಂತೋಷದ ಜೊತೆಗೆ ಹೊಸ ಅನುಭವವಾಗುತ್ತದೆ. ಈ ಘಟನೆಯಿಂದ ಅವನ ಮನಸ್ಸಿನಲ್ಲಿ ತುಂಬಾ ಗಾಢವಾದ ಪರಿಣಾಮ ಬೀರುತ್ತದೆ. ಅದರಿಂದ ದೊಡ್ಡ ದೊಡ್ಡ ವ್ಯಕ್ತಿಗಳ ಬಗೆಗೆ ಚಿಂತನೆಗೆ ತೊಡಗುತ್ತಾನೆ. ಸಮಾಜ ಸುಧಾರಣಿಯ ಬಗೆಗೆ ಆಗಲೇ ಅವನ ಮನಸ್ಸು ಹಾತೋರಿಯ ತೊಡಗುತ್ತದೆ ತನ್ನ ಮುಂದಿನ ಹೆಜ್ಜೆ ಗುರುತುಗಳನ್ನು ಬದಲಾಗುವಂತೆ ಮಾಡಬೇಕು ಎಂದು ನಿರ್ಧರಿಸುತ್ತಾನೆ.

                ೧೯೨೫ ರಲ್ಲಿ ಮೇ ತಿಂಗಳಲ್ಲಿ ವಾರಣಾಸಿಯಲ್ಲಿ ವಿದ್ಯಾರ್ಥಿ ಸಮ್ಮೇಳನಕ್ಕೆ ಬಿಹಾರದ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಆರಾಃದಿಂದ ಜಗಜೀವನರಾಮ ಆಯ್ಕೆಯಾಗುತ್ತಾನೆ.  ಆತನಲ್ಲಿ ಇರುವ ವಾಕಚಾತುರ್ಯ, ದೇಶ ಮತ್ತು ಸಮಾಜದ ಬಗೆಗೆ ಆತನಿಗಿದ್ದ ಪರಿಜ್ಞಾನವೇ ಇದಕ್ಕೆ ಆಯ್ಕೆಯಾಗಲು ಕಾರಣವಾಗಿತ್ತು. ಈ ಸಮ್ಮೇಳನದಲ್ಲಿ “ರಾಮ್ ಮಾಳವೀ”ಯರು ಕೂಡಾ ಉಪಸ್ಥಿತರಿದ್ದರು. ಜಗಜೀವನ ರಾಮ ಮಾಳವೀಯರ ವ್ಯಕ್ತಿತ್ವದಿಂದ ತುಂಬಾ ಪ್ರಭಾವಿತನಾಗುತ್ತಾನೆ. ಹಾಗೇ ಅಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದುಕೊಳ್ಳುತ್ತಾನೆ. ಜಗಜೀವನರಾಮನ ಸಂಘಟನೆ, ಚಾತುರ್ಯ, ಓದುವ ಶೈಲಿಯನ್ನು ಕಂಡ ಮಾಳವೀಯ ಅವರು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಜಗಜೀವನ ರಾಮ್ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಇಂಟರ್ ಮೀಡಿಯಟ್ ವ್ಯಾಸಂಗಕ್ಕೆ ಸೇರುವಂತೆ ಮಾಳವಿಯವರು ಹೇಳುತ್ತಾರೆ. ಅವರ ಅಣತಿಯಂತೆ ಮುಂದುವರೆಯುತ್ತಾರೆ. ಜಗಜೀವನರಾಮ್ ಅವರು ೧೯೨೬ ರಲ್ಲಿ ಪ್ರಥಮ ದರ್ಜೆಯಲ್ಲಿ ಮೆಟ್ರಿಕ್ಯೂಲೇಷನ್ ಪರಿಕ್ಷೇಯನ್ನು ನೂರಕ್ಕೆ ನೂರು ಅಂಕವನ್ನು ಪಡೆದು ತೆರ್ಗಡೆಯಾಗುತ್ತಾನೆ. ಜಗಜೀವನರಮ್‌ನ ಪ್ರತಿಭೆಯನ್ನು ಕಂಡ ಕೈಸ್ತ ಮಿಷನರಿಯವರು ವಾಸಂತಿದೇವಿಯನ್ನು ಬೇಟಿಯಾಗಿ ಕೈಸ್ತ ಧರ್ಮಕ್ಕೆ ಮತಾಂತರವಾಗುವದಾಗಿ ಕೇಳುತ್ತಾರೆ. ಆದರೆ ವಾಸಂತಿದೇವಿ ಹಾಗೂ ಜಗಜೀವನರಾಮ್ ಇದಕ್ಕೆ ಸುತಾರ ಒಪ್ಪಿಕೊಳ್ಳುವದಿಲ್ಲ. ತಮ್ಮ ಧರ್ಮದಲ್ಲೇ ತಾವು ಇರುವದಾಗಿ ತಿಳಿಸುತ್ತಾರೆ. ಬಂದ ದಾರಿಗೆ ಸುಖವಿಲ್ಲವೆಂಬಂತೆ ಕ್ರೈಸ್ತರು ಮರಳಿಹೋಗುತ್ತಾರೆ. “ನಾನು ಹಿಂದೂವಾಗಿಯೇ ಉಳಿದು ಜಗತ್ತಿನ ಅತೀ ಪ್ರಾಚೀನವಾದ ಈ ಧರ್ಮದಿಂದ ಮುಂದುವರೆಯುವದಾಗಿ ಹೇಳಿ ಮತಾಂತರಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಾರೆ ಅಷ್ಪೃಶ್ಯತೆಯೆಂಬ ಕಳಂಕವನ್ನು ಅಳಿಸಲು ಸದಾ ಪ್ರಯತ್ನಿಸುವೆ”ಎಂದು ಹೇಳುತ್ತಾರೆ. ಮುಂದೆ “ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಇಂಟರ್ ಸೈನ್ಶ ತರಗತಿಗೆ ೧೯೨೬ ರಲ್ಲಿ ಸೇರುತ್ತಾರೆ. ಆಗ ಬಿರ್ಲಾ ವಿದ್ಯಾರ್ಥಿವೇತನ ಕೂಡಾ ಅವರಿಗೆ ಸಿಕ್ಕುತ್ತದೆ. ಓದಿನಲ್ಲಿ ಮುಂದುವರೆದು ಬಂಗಾಲಿ ಭಾಷೆಯನ್ನು ಕಲಿತುಕೊಳ್ಳುತ್ತಾರೆ. ೧೯೨೮ ರಲ್ಲಿ ಜಗಜೀವನರಾಮ್ ಕಲ್ಕತ್ತಾ ನಗರದ ವಿದ್ಯಾನಗರ ಕಾಲೇಜಿನಲ್ಲಿ ಸೇರಿ ಬಿ.ಎಸ್ಸಿ. ಪದವಿಗಾಗಿ ಓದುನ್ನು ಮುಂದುವರೆಸುತ್ತಾರೆ. ಹೀಗೆ ಓದಿನ ಹಂತದಲ್ಲೇ ಸಂಘಟನೆಯಲ್ಲಿ ತೊಡಗಿಕೊಂಡು ಸಮಾಜ ಮುಖಿ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ. ಪ್ರಬಂಧದ ದೃಷ್ಟಿಯಿಂದ ಇಲ್ಲಿ ಕೆಲವನ್ನು ಮಾತ್ರ ದಾಖಲಿಸಿದ್ದೇನೆ ಅವರ ಜೀವನ ಮತ್ತು ಶಿಕ್ಷಣದ ಬಗ್ಗೆ ಇನ್ನೂ ಹತ್ತು ಹಲವು ಮಾಹಿತಿಗಳು ಇದೆ. ಈ ಕೆಳಗೆ ಕೆಲವು ಮುಖ್ಯವಾದ ಸಂಗತಿಗಳನ್ನು ಹೇಳಲು ಪ್ರತ್ನಿಸಿರುವೆ.

ಕೆಲವು ಮುಖ್ಯ ಅಂಶಗಳು:

•             ೧೯೩೭ ರಲ್ಲಿ ಜಗಜೀವನರಾಮ್ “ಕೃಷಿ ಕಾರ್ಮಿಕರ ಸಭೆ(ಖೇತಿ ಹಾರ್ ಮಜದೂರ ಸಭಾ) ಸ್ಥಾಪಿಸುತ್ತಾರೆ.

•             ೧೯೪೬ ರಲ್ಲಿ ಜವಾಹರಲಾಲ್ ನೆಹರು ಅವರ ಮಧ್ಯಂತರ ಸರ್ಕಾರದಲ್ಲಿ ಅತ್ಯಂತ ಕಿರಿಯ ಸಚಿವರಾಗಿದ್ದರು

•             ಕಾರ್ಮಿಕ ಸಚಿವ, ಭಾರತದ ಮೊದಲ ಕ್ಯಾಬಿನೆಟ್ ಮತ್ತು ಭಾರತದ ಸಂವಿಧಾನ ಸಭೆಯ ಸದಸ್ಯರಾದರು.

•             ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿ ಮುಂದಿನ ಮೂವತ್ತು ವರ್ಷಗಳ ಕಾಲ ವಿವಿಧ ಖಾತೆಗಳೊಂದಿಗೆ ಸಚಿವರಾಗಿ ಸೇವೆಯನ್ನು ಸಲ್ಲಿಸುತ್ತಾರೆ.

•             ಭಾರತದ ಉಪ ಪ್ರಧಾನ ಮಂತ್ರಿಯಾಗಿ ಸೇವೆಯನ್ನು ಸಲ್ಲಿಸುತ್ತಾರೆ. ಕೇಂದ್ರ ಕಾರ್ಮಿಕ ಮಂತ್ರಿ, ಕೇಂದ್ರ ರಕ್ಷಣಾ ಸಚಿವ, ಕೇಂದ್ರ ಕೃಷಿ ನೀರಾವರಿ ಸಚಿವ, ಹೀಗೆ ಇನ್ನೂ ಅನೇಕ ಹುದ್ದೆಗಳನ್ನು ಅಲಂಕರಿಸುತ್ತಾರೆ. ಬಾಬೂ ಜಗಜೀವನ ರಾಮ್ ಹಸಿರು ಕ್ರಾಂತಿಯ ಹರಿಕಾರರರೇಂದೆ ಪ್ರಸಿದ್ದರು. ಆಹಾರ ಕ್ಷೇತ್ರದಲ್ಲಿ ತಮ್ಮ ವಿದ್ವತ್ತಿನಿಂದ ದೇಶ ಸ್ವಾವಲಂಬನೆ ಹೊಂದಲು ಮಾರ್ಗದರ್ಶನ ಮಾಡಿದ ಕೀರ್ತಿ ಇವರದ್ದು. ಬಾಬೂ ಜಗಜೀವನರಾಮ್ ತಮ್ಮ ಇಡೀ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಲೇ ತಮ್ಮ ಓದನ್ನು ಮುಂದುವರೆಸಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದು ಸಾಮಾನ್ಯವಾದ ಮಾತಲ್ಲ ಇದರ ಹಿಂದೆ ಅವರ ಶ್ರಮ ಅತ್ಯಂತ ಶ್ಲಾಘನೀಯವಾದದ್ದು.


ಡಾ.ಸುಜಾತಾ.ಸಿ

One thought on “ಡಾ. ಬಾಬು ಜಗಜೀವನರಾಮ್

Leave a Reply

Back To Top