ಗಜಲ್

ಕಾವ್ಯ ಸಂಗಾತಿ

ಗಜಲ್

ಅರುಣಾ ನರೇಂದ್ರ

ಮುಸ್ಸಂಜೆ ದೀಪ ಹಚ್ಚುವಾಗಲೆಲ್ಲ ನಿನ್ನ ನೆನೆಯುತ್ತಾಳೆ
ಎಣ್ಣೆ ತೀರುವ ಮುನ್ನ ನೀ ಬರಬಹುದೆಂದು ಕಾಯುತ್ತಾಳೆ

ಇರುಳ ಮಾದಕತೆಗೆ ಮೌನ ಮತ್ತೇರಿ ಸಾಥ್ ನೀಡುತ್ತಿದೆ
ಬರುವ ಬಿಕ್ಕುಗಳ ತಡೆ ತಡೆದು ಕಣ್ಣೀರಲ್ಲಿ ತೋಯುತ್ತಾಳೆ

ರಾತ್ರಿ ಎತ್ತಿಟ್ಟ ಅರಳು ಮಲ್ಲಿಗೆಯ ಕಣ್ಣಲ್ಲಿ ನೂರು ಕನಸಿತ್ತು
ಮುಡಿಗೇರದೆ ಮಾಲೆ ಮತ್ತೆ ಕಸವಾದಾಗ ನೋಯುತ್ತಾಳೆ

ಅಂಗಳದಿ ರಂಗವಲ್ಲಿಯ ಕೆನ್ನೆ ಇಂದಾದರೂ ರಂಗಾಗಬಹುದೇನೋ
ಬರೆದ ಭಾವಗಳಿಗೆ ಕಣ್ಣ ಸ್ಪಶ೯ವಿರದೆ ಸೊರಗಿ ಸವೆಯುತ್ತಾಳೆ

ನಿತ್ಯವೂ ಕಣ್ಣೀರ ಕುಡಿದು ಬರೆಯುವ ಲೇಖನಿಗೆ ಬಿಳಿಹಾಳೆ ಮೈ ಚಾಚುತ್ತದೆ
ಒಲುಮೆ ಗೀತೆ ಬರೆಯಲಾಗದ ಮೇಲೆ ಅರುಣಾ ಬದುಕಿಯೂ ಸಾಯುತ್ತಾಳೆ


One thought on “ಗಜಲ್

Leave a Reply

Back To Top